ಒಟ್ಟು ನೋಟಗಳು

Saturday, December 30, 2017

ಗುರುನಾಥ ಗಾನಾಮೃತ 
ಮಲ್ಲಿಗೆ ಹೂವು ಗುರುವಿನಡಿಗೆ
ರಚನೆ: ಅಂಬಾಸುತ 


ಮಲ್ಲಿಗೆ ಹೂವು ಗುರುವಿನಡಿಗೆ
ಎನ್ನ ಮನದ ಮಲ್ಲಿಗೆ ಹೂವು ಗುರು ನಿನ್ನಡಿಗೇ ||ಪ||

ಸದ್ದು ಮಾಡದ ನಾಲಿಗೆಯಿಂದ ಸಾಧನೆಯೂ
ಬಣ್ಣ ಕಾಣದ ಕಣ್ಣಿಂದ ಸಾಧನೆಯೋ
ಅನ್ಯ ವಾರ್ತೆ ಕೇಳದ ಕಿವಿಯಿಂದ ಸಾಧನೆಯೋ
ಈ ಸಾಧನೆಯಿಂದ ಮನ ಮಲ್ಲಿಗೆ ಬಿರಿಯುವುದೋ ||೧||

ನಿನ್ನ ಅರ್ಚಿಸುವಾ ಕರದಿಂದ ಸಾಧನೆಯೋ
ನಿನ್ನ ಕ್ಷೇತ್ರವಾ ಬಿಡದಾ ಪಾದದಿಂ ಸಾಧನೆಯೋ
ನಿನ್ನ ಪಾದಧೂಳಿರುವಾ ಶಿರದಿಂದ ಸಾಧನೆಯೋ
ಈ ಸಾಧನೆಯಿಂದಾ ಮನ ಮಲ್ಲಿಗೆ ಬಿರಿಯುವುದೋ ||೨||

ನಿನ್ನ ಸೇವೆಗೈವಾ ಜನ್ಮವೇ ಸಾಧನೆಯೋ
ಸಖರಾಯಧೀಶಾ ಎಂಬುದೂ ಸಾಧನೆಯೋ
ನಿನ್ನ ಸದ್ಗುರುವಾಗಿ ಪಡೆದುದೇ ಅಂಬಾಸುತನಾ ಸಾಧನೆಯೋ
ಈ ಸಾಧನೆಯಿಂದ ಮನ ಮಲ್ಲಿಗೆ ಬಿರಿಯುವುದೋ ||೩||
ಗುರುನಾಥ ಗಾನಾಮೃತ 
ಬಾರಯ್ಯ ಅವಧೂತನೇ ಎಮ್ಮಯ ಮನೆಗೇ
ರಚನೆ: ಅಂಬಾಸುತ 


ಬಾರಯ್ಯ ಅವಧೂತನೇ ಎಮ್ಮಯ ಮನೆಗೇ
ಬಾಗಿಲ ತೆರೆದೂ ಕಾದಿರುವೇ ||ಪ||

ಈ ಮನಮನೆಯನ್ನು ಶುಚಿಗೊಳಿಸಿಹೆನೋ ದೇವಾ
ಆರು ಅರಿಗಳನೂ ದೂರಕೆ ತಳ್ಳುತಾ||೧||

ದೇಹಭಾವವ ಬಿಡಿಸೀ ಆತ್ಮಭಾವದೋಳಿರಿಸೀ
ಎಮ್ಮನುದ್ಧರಿಸಲೂ ತಡ ಮಾಡದೇ ಇನ್ನೂ ||೨||

ಬೇಧಭಾವವ ಅಳಿಸೋ ನಿಜ ಬೋಧರೂಪನೇ
ಚಿತ್ತವ ಅಂಬರವಾಗಿಸಲು ನೀ ಬೇಗಾ ||೩||

ಗೂಢವ ಅರಿಯದವನೋ ಬಲು ಮೂಢ ನಾನೂ
ಗಾಢಾಂಧಕಾರ ಅಳಿಸಲು ನೀ ಬೇಗನೇ ||೪||

ಅನವರತ ಭಜಿಸುವ ಈ ಅಂಬಾಸುತನಾ
ಅಂತರಂಗದ ಮನೆಗೇ ಬಲು ಬೇಗನೇ ||೫||

Thursday, December 28, 2017

ಗುರುನಾಥ ಗಾನಾಮೃತ 
ಅನವರತ ನೆನೆಯೋ ಎಮ್ಮ ಅವಧೂತನಾ
ರಚನೆ: ಅಂಬಾಸುತ 


ಅನವರತ ನೆನೆಯೋ ಎಮ್ಮ ಅವಧೂತನಾ
ಅತಿಷಯದಿ ಜಗ ಪೊರೆವಾ ಸದ್ಗುರುನಾಥನಾ ||ಪ||

ಕಲ್ಪನೆಗೆ ಮೀರಿದವನಾ ನಿಜ ಕಾಮಧೇನುವಾ
ಒಳಿತಿನಾ ಕೋರಿಕೆಗಳ ಪೂರೈಸಿ ಸಲಹುವವನಾ
ಬೇಧಭಾವವ ಮಾಡದ ಭಗವಂತನಾ
ಭಾವಿಕರ ಮನದೊಳಗೆ ತಾ ಸದಾ ನಲಿಯುವವನಾ||೧||

ಯೋಗ ಭೋಗವ ಮೀರಿ ತ್ಯಾಗದೊಳಗಿದ್ದವನಾ
ರಾಗದ್ವೇಷದ ರಾಡಿ ತೊಳೆದು ನಿಂತವನಾ
ಭಕ್ತಿ ಬೀಜವ ಭಕುತರಾ ಹೃದಯದಲಿ ಬಿತ್ತವನಾ
ಗುರುತರ ಭಾಗ್ಯವ ನೀಡಿ ಗುರುವಾದವನಾ ||೨||

ಸಖರಾಯಪುರಾಧೀಶಾ ಎಂದೆನಿಸಿಕೊಂಡವನಾ
ಶ್ರೀವೇಂಕಟಾಚಲ ನಾಮಾಂಕಿತನಾ
ಅಂಬಾಸುತನ ಅಂತರಂಗದಾ ದೇವನಾ
ಆದ್ಯಂತರಹಿತಾ ನಿಗಮಾಗಮ ವೇದ್ಯನಾ ||೩||

Wednesday, December 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಮಮೇದಂ ತು ಮಯಾ ಕೃತಂ
ವದಂತಿ ಮಾನವಾಃ ನಿತ್ಯಂ |
ಪರಂ ಜೀವೋಪಾಧಿನಾ ಚ
ಕಾರ್ಯಂ ಕಾರಯತಿ ಗುರುಃ ||

ಈ‌ ಲೋಕದಲ್ಲಿ ನಾನು ನನ್ನದಿದು ..ನಾನು ಮಾಡಿದೆನೆಂದು ಮನುಷ್ಯರು ಹೇಳುತ್ತಾ ಜೀವಿಸುತ್ತಾರೆ..ಆದರೆ ಆ ಜೀವಿಯೆಂಬ ಉಪಾಧಿಯಿಂದ ಗುರುವೇ ಸಕಲ ಕಾರ್ಯಗಳನ್ನು ಅವನಿಂದ ಮಾಡಿಸುತ್ತಾನೆ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Tuesday, December 26, 2017

ಗುರುನಾಥ ಗಾನಾಮೃತ 
ಸಖರಾಯಪುರಾಧೀಶಾ ನಗುತಾ ನಿಂತಾನೇ
ರಚನೆ: ಅಂಬಾಸುತ 


ಸಖರಾಯಪುರಾಧೀಶಾ ನಗುತಾ ನಿಂತಾನೇ
ನಂಬಿಹ ಭಕುತರ ಸಲಹಲು ತಾನಿದ್ದೇನೆಂದಾನೇ ||ಪ||

ದಿಟ್ಟನಾಗಿ ತಾನಿದ್ದಾನೇ ದಟ್ಟಿ ಸುತ್ತಿಕೊಂಡಿದ್ದಾನೇ
ದೃಷ್ಟಿಯಿಂದಲೇ ದುಷ್ಟರ ದುಷ್ಟತನವಾ ಸುಟ್ಯಾನೇ ||೧||

ಹರಿಹರನಾಗಿ ಕಂಡಿದ್ದಾನೇ ಹೂಮನಸೊಳಗೆ ತಾನಿದ್ದಾನೇ
ಶರಣಾಗತ ಭಾವದಿ ಬಂದವರಿಗೆ ನೆರಳಾಗಿದ್ದಾನೇ ||೨||

ಕೊಟ್ಟರೆ ಗೆದ್ದೆ ಎಂದಿದ್ದಾನೆ ಇಟ್ಟರೆ ಸೋತೆ ಎಂದಿದ್ದಾನೇ
ಗಂಟುಕಳ್ಳರ ದೂರ ಇರಿಸೊ ದಾರಿ ತೋರ್ಯಾನೇ ||೩||

ಹೆತ್ತವರಂತೆ ಸಲಹುತ್ತಾನೆ ಭಕುತರ ಹೊತ್ತು ತಿರುಗುತ್ತಾನೇ
ಸತ್ಯದ ಸುಳಿವಾ ನೀಡುತ್ತಾನೇ ಉತ್ತಮನಾಗು ಎಂದಿದ್ದಾನೆ ||೪||

ಅಗಧೂತನಾಗಿ ತಾನಿದ್ದಾನೇ ಅಂಬಾಸುತನಾ ಗುರುವಾಗ್ಯಾನೇ
ಅರಿವಿನ ಮನೆಗೆ ತಾ ದೊರೆಯಾಗಿ ಮರೆಯುತ್ತಿದ್ದಾನೇ ||೫||
ಗುರುನಾಥ ಗಾನಾಮೃತ 
ತೊರೆಯಲಾಗುವುದೇ ಗುರು ನಿನ್ನ ಸೇವೆಯ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ತೊರೆಯಲಾಗುವುದೇ ಗುರು ನಿನ್ನ ಸೇವೆಯ
ಮರೆತು ಬಾಳಲು ಸಾಧ್ಯವೇ  ಗುರು ನಿನ್ನ ಜಪವ ।। ಪ ।।

ಹೃನ್ಮೂಲೆಯಲಿ ನೆಲೆಸಿಹೆ ನೀ ಭದ್ರವಾಗಿ
ಚಿತ್ತದೊಳೆಗರನ್ನ ಬೆರೆತಿಹೆ ನೀ ಶಾಂತವಾಗಿ |
ಮಾತಿನಲಿ ಬರುತಿಹೆ ನೀ ವ್ಯಕ್ತವಾಗಿ
ಉಸಿರುಸಿರಲಿ ತುಂಬಿಹೆ ನೀ ಚೇತನನಾಗಿ || ೧ ||

ಜನರೆಲ್ಲ ಮೂಢನೆಂದು ‌ನಿಂದಿಸಲಿ
ಭ್ರಾಂತಿಯು ನಿನದೇನೆಂದು ಜರಿಯಲಿ |
ಮಾತುಮಾತಿನಲೂ ಸುಮ್ಮನೆ ಹಂಗಿಸಲಿ
ಹೆಜ್ಜೆಹೆಜ್ಜೆಯಲೂ ಪ್ರಾಬಲ್ಯವವರ ಮೆರೆಯಲೀ || ೨ ||

ಬೇಕಿಲ್ಲ ಪ್ರಭುವೇ ಧನಕನಕಸ್ಥಾನಮಾನ
ಬೇಕಿಲ್ಲ ನಮಗೆ ಕ್ಷಣಿಕಭೋಗದಾ ಸಮ್ಮಾನ
ಕೇಳುವುದೊಂದೇ ನಿನ್ನ  ಇಹಪರದ ಉದ್ಧಾರ
ಕರುಣಿಸು ಗುರುವೇ ಮುಕ್ತಿಮಾರ್ಗದಾ ಶ್ರೀಕಾರ  || ೩ ||
ಗುರುನಾಥ ಗಾನಾಮೃತ 
ಕರ ಪಿಡಿದು ನೆಡೆಸೆನ್ನಾ ಸದ್ಗುರುರಾಯಾ
ರಚನೆ: ಅಂಬಾಸುತ 


ಕರ ಪಿಡಿದು ನೆಡೆಸೆನ್ನಾ ಸದ್ಗುರುರಾಯಾ
ನಾ ಬಾಲಕನು ನೀನೇ ಎನ್ನ ಪೋಷಕನೋ ||ಪ||

ಭಕ್ತಿ ಮಾರ್ಗದೊಳಿರಿಸೀ ಜ್ಞಾನದೂರನು ಸೇರಿಸೀ
ಕರ್ಮಗಳಿಂ ಎನ್ನ ಮುಕ್ತನಾಗಿಸೋ ತಂದೇ
ನಿನ್ನ ಬಿಟ್ಟರಿನ್ಯಾರೋ ಸ್ಥಿತಿಗತಿಗೇ ದೇವಾ
ಸಲಹುವವರು ಈ ಪಾಮರ ಶಿಶುವಾ ||೧||

ಅರಿತರಿಯದೇ ನಾನು ಮಾಡಿಹೆನು ತಪ್ಪುಗಳಾ
ಕಲಿತು ದುರ್ಜನೊರೊಡನೇ ಕುಬುದ್ದಿಯಿಂದಲೀ
ಮನ್ನಿಸೋ ಮಹನೀಯಾ ನೀನೆನ್ನ ಮಹಾದೇವಾ
ಮರಳಿ ಮರಳೀ ನಿನ್ನ ಪಾದವನ್ನಾಶ್ರಯಿಸುವೇ ||೨||

ನಾನೆಂಬುದಾ ಬಿಡಿಸೋ ನೀನೆಂಬುದಾ ಕಲಿಸೋ
ನಾವಿಕನು ನೀನಯ್ಯಾ ಭವಸಾಗರವ ದಾಟಿಸೋ
ಸಖರಾಯಪುರಾಧೀಶಾ ಹೇ ಅವಧೂತಾ
ಅಂಬಾಸುತನ ಈ ಮೊರೆ ಕೇಳೋ ಗುರುನಾಥಾ ||೩||