ಗುರುನಾಥ ಗಾನಾಮೃತ
ಜಯ ಜಯ ಗುರುನಾಥ ಜಯ ಸದ್ಗುರುನಾಥ
ರಚನೆ: ಅಂಬಾಸುತ
ಜಯ ಜಯ ಗುರುನಾಥ ಜಯ ಸದ್ಗುರುನಾಥ
ಅಮಿತವರದಾತ ನಿಜ ಆನಂದ ನಿಲಯಾ ||ಪ||
ಮಾತಿನಲೇ ಮನಶುದ್ಧಗೊಳಿಸಿದೇ ಹರಸಿದೇ
ಮಾರಹರನಾ ರೂಪನಾಗಿ ನೀ ಕಂಡಿಹೇ
ಎನಿತು ಜನುಮದ ಪುಣ್ಯ ನೀನೆನಗೆ ದೊರಕಿಹೇ
ನಿನ್ನ ಸ್ತುತಿಸಲು ಪದ ಸಿಗದೆ ನಾ ಸೋತಿಹೇ ||೧||
ವರವೊಂದ ಬೇಡುವೆನು ನೀನೀಡಬೇಕಯ್ಯಾ
ಸಗುಣನಾಗೀ ಎನ್ನ ಮುಂದೆ ನೀ ಬಾರಯ್ಯಾ
ತಪ್ಪು ಒಪ್ಪುಗಳಾ ತಕ್ಕಡಿಯು ಈಗೇಕೋ
ಒಪ್ಪಮನದಲಿ ಕರೆವೆ ನೀನೋಡಿ ಬಾರಯ್ಯಾ ||೨||
ಕೊನೆಯುಸಿರೊಳೂ ನಿನ್ನ ನಾಮ ಹಸಿರಾಗಿರಲೀ
ಕಡೆ ನೋಟ ನಿನ್ನಾ ನಗುಮೊಗವೆ ಆಗಿರಲೀ
ನಿನ್ನ ಹಂಬಲದಿಂದ ಮತ್ತೆ ಹುಟ್ಟಿ ಬರುವೇ
ನಿನ್ನ ಪಾದದೊಳಿರೊ ಸುಖ ಮುಕ್ತಿಯೊಳಗೆಲ್ಲಯ್ಯಾ ||೩||
ಸಖರಾಯಪುರಾಧೀಶಾ ಶ್ರೀ ಅವಧೂತಾ
ಅಂಬಾಸುತನ ಸರ್ವಸ್ವವೂ ನೀನಯ್ಯಾ
ಕಾಡಿಬೇಡುವೆನಯ್ಯ ಕನಿಕರಿಸೊ ಮಹನೀಯಾ
ಈ ಆತ್ಮಫಲವ ಅರ್ಪಿಸಿಹೆ ಸ್ವೀಕರಿಸಯ್ಯಾ ||೪||
No comments:
Post a Comment