ಗುರುನಾಥ ಗಾನಾಮೃತ
ನೀನಾಡಿಸಿದಂತೇ ನಾನಾಡುವೇ ಗುರುವೇ
ರಚನೆ: ಅಂಬಾಸುತ
ನೀನಾಡಿಸಿದಂತೇ ನಾನಾಡುವೇ ಗುರುವೇ
ಕುಣಿಯೆಂದರೆ ಕುಣಿವೇ ಹಾಡೆಂದರೆ ಹಾಡುವೇ ||ಪ||
ಮೂಕನಿಗೆ ಮಾತಾನಿತ್ತವನು ನೀನಲ್ಲವೇ
ಹೆಳವನನೂ ಗಿರಿತುದಿಗೊಯ್ದವ ನೀನೇ
ಬಂಜೆಗೆ ಪುತ್ರರತ್ನವ ನೀನಿತ್ತೇ
ನಿನ್ನಿಚ್ಚೆ ನೆಡೆದಿಹುದೀ ಜಗದೊಳು ಪ್ರಭುವೇ ||೧||
ಕುರುಡನಿಗೇ ದೇವದರ್ಶನ ಮಾಡಿಸಿದೇ
ಮೂಢನಿಂದಾ ಮುತ್ತಿನಾ ಮಾತಿನ ಮಳೆಗರಿಸಿದೇ
ಕರವಿಲ್ಲವನಿಂ ಕಾವ್ಯವ ಬರೆಸಿದೇ
ಅಸಾಧ್ಯವಾವುದೋ ನಿನಗಿಲ್ಲಿ ದೊರೆಯೇ ||೨||
ಬೇಡಿದ ಸತಿಗೆ ಸೌಭಾಗ್ಯವನಿತ್ತೇ
ಇರುಳೊಂದರಲೇ ಬಿಲ್ವ ಮರವನೇ ಚಿಗುರಿಸಿದೇ
ಧೇಹಿ ಎಂದವರಿಗೇ ಕಾಮಧೇನು ನೀನಾದೇ
ನೀನಿಜ ಸಾಹುಕಾರನೋ ನಾನಿನ್ನ ಆಳೋ ||೩||
ಎನ್ನದೆಂಬುದೇನಿಲ್ಲ ನಿನ್ನದಹುದಿಹುದೆಲ್ಲಾ
ಈ ಭಾಗ್ಯಗಳೆಲ್ಲಾ ನೀನಿತ್ತ ಭಿಕ್ಷೆಯೋ
ಅರಮನೆಯೋ ಇಲ್ಲಾ ಹುಲ್ಲುಮಾಳಿಗೆಯೋ
ನಿನ್ನ ನಾಮ ಜಪಿಸುತಾ ಆನಂದಿಸುವೆನೋ ||೪||
ಇಟ್ಟರೆ ಉಣುವೇ ನೀ ಕೊಟ್ಟರೆ ಉಡುವೇ
ನಿಲ್ಲೆಂದರೆ ನಿಲ್ಲುವೇ ಕೂಡೆಂದರೆ ಕೂರುವೇ
ಇರು ಎಂದರೆ ಇರುವೇ ಬಾ ಎಂದರೆ ಬರುವೇ
ಬಿಡು ಎಂದರೂ ಬಿಡೆನೋ ನಿನ್ನ ಪಾದ ಗುರುವೇ ||೫||
ಸಖರಾಯಪುರವಾಸಾ ಸದ್ಗುರುನಾಥಾ
ಅಂಬಾಸುತನಿಗೆ ನೀನೇ ಧಾತಾ
ಆಡಿಸೊ ಅಳಿಸೊ ನಗಿಸೊ ಕುಣಿಸೊ
ನೀ ಪೇಳಿದಂತೆ ಕೇಳ್ವೇ ನಾನಿನ್ನ ದಾಸನೋ ||೬||
No comments:
Post a Comment