ಗುರುನಾಥ ಗಾನಾಮೃತ
ನೀ ಕಾಯಬೇಕೋ ಸಖರಾಯ
ರಚನೆ: ಅಂಬಾಸುತ
ನೀ ಕಾಯಬೇಕೋ ಸಖರಾಯ
ಎನ್ನ ಸರ್ವಸ್ವವು ನೀನೇ ಸಖರಾಯ ||ಪ||
ಮಾರ್ಗಶಿರ ಮಾಸದಿ ಸಖರಾಯ
ಕೃಷ್ಣ ಪಕ್ಷದ ಸಪ್ತಮಿ ಸಖರಾಯ
ಧರೆಯೊಳವತರಿಸಿದ ಸಖರಾಯ
ಶಿಷ್ಯೋದ್ಧಾರಕೀ ಅವತಾರ ಸಖರಾಯ ||೧||
ಶ್ರೀನಿವಾಸ ಶಾರದಾ ಸುತ ಸಖರಾಯ
ಶ್ರೀಶಂಕರ ರೂಪ ಸಖರಾಯ
ಗುರುಭಕ್ತಿ ಸಾರಿದ ಸಖರಾಯ
ಗುರುತರ ಭಾಗ್ಯ ನೀಡುವನು ಸಖರಾಯ ||೨||
ಪದ್ಮಾವತಿ ಕೈಹಿಡಿದ ಸಖರಾಯ
ಪರಮಹಂಸಾಶ್ರಮ ಮೀರಿದ ಸಖರಾಯ
ಸಂಸಾರದೊಳಗಿದ್ದು ಸಖರಾಯ
ಇಲ್ಲದಂತಿದ್ದನು ಸಖರಾಯ ||೩||
ನಕ್ಕಾಗ ಶ್ರೀರಾಮ ಸಖರಾಯ
ಸಿಟ್ಟಿನೊಳು ನಾರಸಿಂಹ ಸಖರಾಯ
ಪರಮಯೋಗಿಯು ನೀನೇ ಸಖರಾಯ
ಎಮಗೆಲ್ಲ ಪರಮಾತ್ಮ ನೀ ಸಖರಾಯ ||೪||
ಅವಧೂತನಾಗುತ ಸಖರಾಯ
ನಿಜ ಆನಂದ ರೂಪನಾದ ಸಖರಾಯ
ಆಶ್ರಮ ಕಟ್ಟಲಿಲ್ಲ ಸಖರಾಯ
ಆ ಶ್ರಮವೇತಕೆ ಎಂದನು ಸಖರಾಯ ||೫||
ಸ್ತ್ರೀಜನ್ಮ ಶ್ರೇಷ್ಠವೆಂದ ಸಖರಾಯ
ಸತಿಧರ್ಮ ಪಾಲಿಸಿರೆಂದ ಸಖರಾಯ
ಹೆತ್ತವರೇ ಹಿರಿದೈವ ಸಖರಾಯ
ಎಂಬುದ ಸಾರಿ ಸಾರಿ ಹೇಳಿದ ಸಖರಾಯ ||೬||
ಬಂದದ್ದು ಬಂದಂತೆ ಸಖರಾಯ
ಸ್ವೀಕರಿಸಿದರೇ ಸುಖವೆಂದ ಸಖರಾಯ
ಪಾತ್ರಧಾರಿ ನೀನೆಂದ ಸಖರಾಯ
ಸೂತ್ರಧಾರಿ ಶಿವನೆಂದ ಸಖರಾಯ ||೭||
ಮಾತು ಮುತ್ತಾಗಿರಲಿ ಎಂದ ಸಖರಾಯ
ಮನಸು ಕನ್ನಡಿಯಾಗಿರಲೆಂದ ಸಖರಾಯ
ಧರ್ಮಪಾಲನೆ ಮಾಡಿರೆಂದ ಸಖರಾಯ
ಅಧರ್ಮಕೆ ಅರಿಯಾದ ಸಖರಾಯ ||೮||
ಬಿರುದುಗಳ ಬಿಟ್ಟನು ಸಖರಾಯ
ದುಷ್ಟತನ ಸುಟ್ಟನು ಸಖರಾಯ
ಸಾತ್ವಿಕ ರೂಪನು ಸಖರಾಯ
ಸರ್ವಮಂಗಳ ಕಾರಕ ಸಖರಾಯ ||೯||
ನಿನ್ನಂಥ ಗುರುವುಂಟೇ ಸಖರಾಯ
ಸದ್ಭಕ್ತ ಪರಿಪಾಲಕ ಸಖರಾಯ
ಸಾನಿಧ್ಯ ಸುಖ ನೀಡೋ ಸಖರಾಯ
ಸಚ್ಚರಿತ ನಿಜಸಂತ ಸಖರಾಯ ||೧೦||
ಸ್ಥಿತಿ ಗತಿ ಕಾರಣ ಸಖರಾಯ
ಸ್ತುತಿಸುವೆ ಅನವರತ ಸಖರಾಯ
ಸ್ವಾನಂದ ಸಾಗರ ಸಖರಾಯ
ಆತ್ಮೋದ್ಧಾರಕ ನೀ ಸಖರಾಯ ||೧೧||
ಸತ್ಯಕ್ಕೆ ಸಗುಣ ನೀ ಸಖರಾಯ
ದುಷ್ಟರಿಗೆ ಬಹುಕಷ್ಟ ಸಖರಾಯ
ನಿಜಬೋಧ ರೂಪ ಸಖರಾಯ
ನಿಜ ಸುಖವನ್ನೇ ನೀಡಯ್ಯ ಸಖರಾಯ ||೧೨||
ಆಷಾಡ ಕೃಷ್ಣ ಪಕ್ಷದಿ ಸಖರಾಯ
ಶುಭ ಷಷ್ಠಿಯ ದಿನದೀ ಸಖರಾಯ
ನಿರ್ಗುಣ ರೂಪ ತಾಳಿದ ಸಖರಾಯ
ನಿತ್ಯ ನಿರ್ಮಲಾತ್ಮಕನು ಸಖರಾಯ ||೧೩||
ಸಖರಾಯ ಸಖರಾಯ ಸಖರಾಯ
ಅಂಬಾಸುತನಾ ನಿಜಸಖನು ಸಖರಾಯ
ಶ್ರೀವೇಂಕಟಾಚಲ ಸಖರಾಯ
ಶರಣು ಶರಣಯ್ಯ ಸಖರಾಯ ||೧೪||
No comments:
Post a Comment