ಒಟ್ಟು ನೋಟಗಳು

Wednesday, August 29, 2018

ಗುರುನಾಥ ಗಾನಾಮೃತ 
ಬಹು ನೊಂದಿಹೆನು ಗುರುವೇ ಬಹು ನೊಂದಿಹೆನು
ರಚನೆ: ಆನಂದರಾಮ್, ಶೃಂಗೇರಿ  


ಬಹು ನೊಂದಿಹೆನು ಗುರುವೇ ಬಹು ನೊಂದಿಹೆನು
ನಿನ್ನ ಪ್ರೀತಿ ಗಳಿಸದೇ ನಿನ್ನ ಸೇವೆಯಾ ಮಾಡದೇ|

ನಾನು ನನದೆನುತ  ಎಲ್ಲಾ ಬಲ್ಲವ ನಾನೆನುತ ಗರ್ವದಲಿ
ನಿನ್ನರಿವು ಗಳಿಸದಲೆ  ಜಂಬದಲಿ ಬದುಕು ನಡೆಸುತಲಿ|

ಮೂರು ಹೊತ್ತಿನ ಕೂಳು ನಾನೇ ಪಡೆದೆನೆಂಬ ಹಂಬಿನಲಿ
ಒಂದು ತುತ್ತು ಪರರಿಗೆ ನೀಡದಲೆ ನಿನ್ನ ಮರೆತು ಮೆರೆಯುತಲಿ|

ಎಲ್ಲಾ ಬಲ್ಲವ ಮಹಾದೇವ ನೀನು ನಸುನಗುತ ಕುಳಿತಿರಲು
ನಿನ್ನ ಮುಂದೆಯೇ ಎಡವಿ ಬೀಳುವ ಹುಂಬನು ನಾನಲ್ಲವೇನು|

ಕೂಗಳತೆಯಾ ದೂರದಲಿ ಗುರು ನೀನಿರಲು ಕಾಣಲಿಲ್ಲ ನಾನು
ಇಂದು ಹಂಬಲಿಸಿ ಹಲುಬಿ ಮೊರೆಇಟ್ಟರೆ  ಸಿಗುವಿಯಾ ನೀನು|

ಎಲ್ಲರನ ಮನ್ನಿಸುವ ಗುರುದೇವ ಎನ್ನ ಮನ್ನಿಸಲಾರೆಯ
ನಿನ್ನ ಕರುಣೆಯ ನೋಟ ಒಮ್ಮೆ ನನ್ನೆಡೆಗೆ ತೋರಿ ಹರಸಲಾರೆಯ|

Tuesday, August 28, 2018

ಗುರುನಾಥ ಗಾನಾಮೃತ 
ತೋರುವ ಬಕುತಿಯು ನಿಜವೋ ನಾನರಿಯೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ತೋರುವ ಬಕುತಿಯು ನಿಜವೋ ನಾನರಿಯೆ ಗುರುವೇ
ನಿನ್ನ ನೆನೆಯದೆ ಸುಮ್ಮನೇ ಇರಲಾರೆ ನಾನೆಂದು ಗುರುವೇ|

ಕುಕರ್ಮ ಘಟಿಸಿ ಪರಿತಪಿಸಿ ನಿನ್ನ ಭೇಡುವೆನು ನಾನು
ಅದೆನ್ನ ಕರ್ಮದ ಫಲವೆನ್ನುವೆಯಾ  ಗುರುವೇ ನೀನು|

ಮನಸು ಮರಗುತಿದೆ ಮೌನವಾಗಿ ಮಾಡಿದ ಕರ್ಮಕೆ
ಅರಿವಿದ್ಡರೂ ತಡೆಯದಾದೆ ಆ ಆಮಿಷವ ಗುರುವೇ|

ಬಕುತಿಗಿಂತ ಬಲು ಚಂದವೆನಿಸಿ  ಅಲ್ಪ ಆಸೆಯ ಸುಳಿಗಳು
ಕಾಲ ಮೀರಿದೆ ಗುರುವೇ ನಿಜವ ಅರಿತು ಇನ್ನು ಹೊರಬರಲು  |

ಮುಸುಕು ತುಂಬಿಹುದು  ಕಾಣದೇ  ಬದುಕಿನ ನಿಜ ಸತ್ಯಗಳು
ತಿಳಿವು ಮೂಡಲು ಬೇಡಿ ಪಿಡಿಯುವೆ ಗುರುವೇ ನಿನ್ನ ಪಾದಾರವಿಂದಗಳು|

ಅಲ್ಪನ ಕೂಗು ಕೇಳದೇ ಗುರುವೇ  ಸಾಕುಮಾಡು ಈ  ಪರೀಕ್ಷೆಯನು
ಅಳಿದುಳಿದ ಬದುಕಿನಾ ದಿನಗಳಿಗೆ ಗುರುವೇ ಆಸರೆಯೇ ನೀನು|

Monday, August 27, 2018

ಗುರುನಾಥ ಗಾನಾಮೃತ 
ಸುಲಭಕೆ ಒಲಿಯನಲ್ಲ ಎನ್ನ ಸದ್ಗುರು ನರನಲ್ಲ
ರಚನೆ: ಅಂಬಾಸುತ 

ಸುಲಭಕೆ ಒಲಿಯನಲ್ಲ ಎನ್ನ ಸದ್ಗುರು ನರನಲ್ಲ
ಸಖರಾಯಪುರದೊಳು ನಿಂತಿಹನಲ್ಲಾ ನಿಜಸುಖವನ್ನೇ ನೀಡುವನಲ್ಲಾ ||ಪ||
ವೇದದ ಬೋಧನೆ ಮಾಡಿಹನಲ್ಲ 
ವಾದಿ ಭಯಂಕರ ಎನಿಸಿಹನಲ್ಲ ||ಅ.ಪ||

ಧರೆಯನ್ನುದ್ಧರಿಸೆ ಅವತರಿಸಿಹನಲ್ಲಾ
ಧರ್ಮದ ಹಾದಿಯ ತೋರಿಸಿಹನಲ್ಲಾ
ದೊರೆತನ ಸಿರಿತನಕೆ ಇವ ಸಿಗನಲ್ಲಾ
ಆರ್ದ್ರತೆಯಿಂದ ಕೂಗೇ ಓಡೋಡಿ ಬರುವನಲ್ಲಾ ||೧||

ಭೋಗಭಾಗ್ಯಗಳಾ ಬೇಡಿದರಿವನಿಲ್ಲಾ
ತ್ಯಾಗ ವಿರಾಗಕೆ ಎದುರಿಹನಲ್ಲಾ
ತೋರಿಕೆಯಾ ಭಕುತಿಯ ಎಂದೂ ಒಪ್ಪುವನಲ್ಲಾ
ತಾಳು ತಾಳೆನ್ನುತಾ ತೋಳಲ್ಲಪ್ಪಿಹನಲ್ಲಾ ||೨||

ಬೇಧ ಭಾವವ ಮಾಡುವವನಲ್ಲಾ
ಅನುರಾಗಕೆ ಅತೀ ಹತ್ತಿರವಾಗಿಹನಲ್ಲಾ
ಅಂಬಾಸುತನಾ ಪದದೊಳು ಮೆರದಿಹನಲ್ಲಾ
ಸಾವಿರ ಬಾರಿ ಹೇಳುವೆ ಇವನಂಥಿನ್ಯಾರಿಲ್ಲಾ ||೩||
ಗುರುನಾಥ ಗಾನಾಮೃತ 
ನಿನ್ನ ಚರಣ ಕಮಲ ಕಂಡು ಧನ್ಯವೀ ತನುಮನ
ರಚನೆ: ಅಂಬಾಸುತ 

ನಿನ್ನ ಚರಣ ಕಮಲ ಕಂಡು ಧನ್ಯವೀ ತನುಮನ
ಪುಣ್ಯಶೇಷ ಇದಕೆ ಕಾರಣ ನಾ ಪಾವನಾ ಪಾವನ ||ಪ||

ಸೋಗು  ನೀ ಸಾರಿದ ಪದವ ಪೋಣಿಸುತ್ತಿರಲು
ಪರಮಪುರುಷ  ಪರಂಧಾಮನ ಪಾದ ಕಾಣಬಯಸಿರಲು ||೧||

ರಾಶಿ ಹೆರಳ ನಡುವೆ ನಗುವ ಸೂಸಿದಾ ವದನ
ತೋರುತಾ ತನ್ಮಯದ ಭಕ್ತಿಯ ನೀಡಿದಾ ಪುಣ್ಯಕ್ಷಣ ||೨||

ಸಿಂಹನಂತೆ ಒಮ್ಮೆ ಕಂಡು ತಾಯಿಯಂತೆ ಒಮ್ಮೆ ಬಂದು
ತಿಳಿಯದವನ ಮನಕೆ ಅರಿವ ಹಸಿರು ತೋರಣ ಕಟ್ಟಿದಾ ||೩||

ಆತ್ಮಸಖನ ಆನಂದವೀವನ ಅಂಬಾಸುತನ ಪೊರೆದವನ
ಸಖರಾಯಪುರದೊಳಗೆ ನಿಜಸುಖವ ನೀಡಲು ನಿಂತವನ ||೪||

Thursday, August 23, 2018

ಗುರುನಾಥ ಗಾನಾಮೃತ 
ಅಚಲ ಭಕ್ತಿಯ ನೀಡೋ ಶ್ರೀವೇಂಕಟಾಚಲ
ರಚನೆ: ಅಂಬಾಸುತ 

ಅಚಲ ಭಕ್ತಿಯ ನೀಡೋ ಶ್ರೀವೇಂಕಟಾಚಲ
ವಿಚಲಿತಗೊಳ್ಳದೆ ನಿನ್ನದೆ ಸದಾ ಭಜಿಪೆ ||ಪ||

ಚಾರುಮತಿಯ ಬೇಡಿ ವಿಚಾರ ನಾ ಮಾಡಿ
ಆಚಾರ ಬಿಟ್ಟು ಸದ್ಗುರುಚರಣ ತೊರೆಯದಂಥ ||೧||

ಕರ್ಮಕ್ಕೆ ಕಟ್ಟುಬಿದ್ದು ಸ್ವಧರ್ಮ ಕಟ್ಟಿಟ್ಟು
ದುಷ್ಕರ್ಮ ಮಾಡಿ ನಿಜ ಅರಿವನ್ನೇ ಬಿಡದಂಥ ||೨||

ಕೇಳಿದ್ದು ಕಂಡಿದ್ದು ಮಾಡಿದ್ದು ಮುಟ್ಟಿದ್ದು
ಎಂಬ ಗೊಂದಲದಿಂದ ಗುರು ಮರೆಯದಂಥಾ ||೩||

ಮುಕ್ತಿ ಬಯಸಿ ಮುಕ್ತತನವಾ ಬಯಲಲ್ಲಿರಿಸಿ
ಶಕ್ತಿವಂತ ತಾನೆಂದೂ ಗುರುವ ದೂಡದಂಥಾ ||೪||

ಸಖರಾಯಪುರವಾಸಿ ಸದ್ಗುರುನಾಥನೇ
ಅಂಬಾಸುತನ ಅಂತರಂಗದ ಹಿರಿ ದೊರೆಯೇ ||೫||
ಗುರುನಾಥ ಗಾನಾಮೃತ 
ಎನಗೇತರದ ಭಯವೋ ನಿನ್ನಭಯ ಸದಾ ಇರಲು
ರಚನೆ: ಅಂಬಾಸುತ 

ಎನಗೇತರದ ಭಯವೋ ನಿನ್ನಭಯ ಸದಾ ಇರಲು
ಗುರುರಾಯ ಸಖರಾಯಪುರವರಾಧೀಶ್ವರಾ‌||ಪ||
ಆಡಿದವರಾಡಲೀ ದೂರಿದವರು ದೂಡಲೀ
ಕಾಡಿದವರು ಕಾಡಲಿ ಕಣ್ಮುಚ್ಚಿ ನಾನಿರುವೇ ||ಅ.ಪ||

ಹಿರಿಯವನು ನಾನಲ್ಲ ಹಿರಿತವು ಎನಗಿಲ್ಲ
ಕಿರಿತನದ ಮಾತುಗಳಿಂದ ಎನಗೆ ನೋವಿಲ್ಲ
ಪಟ್ಟಕಟ್ಟುತ ಪೆಟ್ಟು ಮಾಡಿದರೆ ಏನಂತೆ
ತಟ್ಟದಾ ಪೆಟ್ಟೆನಗೆ ಸದಾ ಗುರು ಸ್ಮರಿಸುತಿರಲು ||೧||

ಹೆಸರಿನಾಸೆ ಎಂದೂ ಇಲ್ಲ ಕೆಸರಿಗೆ ಮೈಚಾಚೋಲ್ಲ
ವಿತ್ತದಾ ಗಳಿಕೆಗಲ್ಲ ಪದ ವಿರೋಧ ಬೇಕಿಲ್ಲ
ಮನದ ಹಂಬಲವೊಂದೇ ಮುದದಿ ಗುರು ಗತಿ ಎಂದೇ
ಅತಿ ದೀನತನದೊಳಗೆ ಅವನಡಿಯ ಪಿಡಿದಿರಲು ||೨||

ನನ್ನತನ ಉಳಿಸೋಲ್ಲ ನಾನೆಂಬುದ ಮೆರೆಸೋಲ್ಲ
ನೀನೆಂಬುದ ಮರೆಯೋಲ್ಲ  ನೀನೆ ನನಗೆಲ್ಲ
ಅಂಬಾಸುತನ ಈ ಮೊರೆಯನೀ ಆಲಿಸುತಿರಲು
ಅವನ ಅಕ್ಷರ ಪುಷ್ಪ ನಿನ್ನಡಿಯ ಸೇರಿರಲು ||೩||

Monday, August 20, 2018

ಗುರುನಾಥ ಗಾನಾಮೃತ 
ಗುರುನಾಥ ಪಾಹಿಮಾಂ ಅವಧೂತ ರಕ್ಷಮಾಂ
ರಚನೆ: ಅಂಬಾಸುತ 

ಗುರುನಾಥ ಪಾಹಿಮಾಂ ಅವಧೂತ ರಕ್ಷಮಾಂ
ಗುರುನಾಥ ಪಾಹಿಮಾಂ ಅವಧೂತ ರಕ್ಷಮಾಂ ||ಪ||

ಅಪಾರ ಮಹಿಮಾ ಪಾಹಿಮಾಂ 
ಅಗಣಿತ ಗುಣಭೂಷಣ ರಕ್ಷಮಾಂ
ಅನಾಥ ನಾಥ ಪಾಹಿಮಾಂ
ಅಮಿತ ವರಧಾತ ರಕ್ಷಮಾಂ ||೧||

ಕಾರುಣ್ಯ ಸಿಂಧು ಪಾಹಿಮಾಂ
ಕಾಮಿತಾರ್ಥದಾಯಕ ರಕ್ಷಮಾಂ
ಕೃಷ್ಣಯೋಗೀಂದ್ರ ನೀ ಪಾಹಿಮಾಂ
ಕಾಮದಾಹ ಹರ ರಕ್ಷಮಾಂ ||೨||

ಘನಮೂರುತಿ ಗುರು ಪಾಹಿಮಾಂ
ಗಾನವಿಲೋಲ ರಕ್ಷಮಾಂ
ಪಾಪವಿಧೂರ ಪಾಹಿಮಾಂ
ಪುಣ್ಯಕಾರಣ ರಕ್ಷಮಾಂ ||೩||

ಶಾರದಾ ತನಯ ಪಾಹಿಮಾಂ
ಶ್ರೀನಿವಾಸ ಪ್ರಿಯ ರಕ್ಷಮಾಂ
ಶ್ರೀ ವೇಂಕಟಾಚಲ ಪಾಹಿಮಾಂ
ಶ್ರಿತಜನ ಪೋಷಕ ರಕ್ಷಮಾಂ ||೪||

ಸಖರಾಯಪುರವಾಸಿ ಪಾಹಿಮಾಂ
ಆತ್ಮಸಖ ನೀ ರಕ್ಷಮಾಂ
ಅಂಬಾಸುತ ನುತ ಪಾಹಿಮಾಂ
ಆತ್ಮೋದ್ಧಾರಕ ರಕ್ಷಮಾಂ ||೫||
ಗುರುನಾಥ ಗಾನಾಮೃತ 
ಕಳ್ಳತನ ಮಾಡ ಬೇಡವೋ ಭಕ್ತಿಯೊಳು ಎಲ್ಲಾ ಗುರು ಅರಿಯುವನೋ
ರಚನೆ: ಆನಂದರಾಮ್, ಶೃಂಗೇರಿ  


ಕಳ್ಳತನ ಮಾಡ ಬೇಡವೋ ಭಕ್ತಿಯೊಳು ಎಲ್ಲಾ ಗುರು ಅರಿಯುವನೋ
ಮಳ್ಳನಂತೆ ನಟಿಸಿ  ಮರುಳ ಮಾಡಬೇಡವೋ ಗುರುದೇವ ಎಲ್ಲಾ ಬಲ್ಲನೋ|

ಬರೀ ಪೊಳ್ಳು ಮಾತುಗಳ ಬಕುತಿಯ ಗುರು ಎಂದೂ ಒಲ್ಲನೋ
ಸುಳ್ಳು ಬಕುತಿಯ ಆಟವ ಆಡಿ ಗುರುವ ಬೇಡ ಬೇಡವೋ|

ಎಲ್ಲಾ ತಿಳಿದವನಂತೆ ಬದುಕಿ ಏಲ್ಲೂ ಸಲ್ಲದೆ ಇರಬೇಡವೋ
ಎಲ್ಲರೊಳ ಒಬ್ಬನಾಗಿ ಗುರುವಿನ ಪದ ಸೇವೆಯ ಪಡೆಯೋ|

ನಾನು ನಂದೆಂಬ ಭ್ರಮೆಯ ಅರಮನೆಯ ವಾಸ ಮಾಡ  ಬೇಡವೋ
ಎಲ್ಲಾ ನಿನ್ನದೆಂಬುವ ಬಾವದಲಿ ನಡೆದು ನೀ ಬಡವನಾಗಿರೋ|

ಹುಚ್ಚು ಮನಸಿನ ಕುದುರೆಗೆ ಮನವ ನೀಡ ಬೇಡವೋ
ಶುದ್ದ ಮನದ ಬಕುತಗೆ ಗುರು ಎಂದಾದರೂ ತಾ ಒಲಿಯುವನೋ|
ಗುರುನಾಥ ಗಾನಾಮೃತ 
ಲೋಕ ತಿಳಿಯಲಿ ಎಂದು ನಾ ಬರೆದು ಹಾಡಲಾರೆನು
ರಚನೆ: ಆನಂದರಾಮ್, ಶೃಂಗೇರಿ  


ಲೋಕ ತಿಳಿಯಲಿ ಎಂದು ನಾ ಬರೆದು ಹಾಡಲಾರೆನು
ಗುರುವೇ ನಿನ್ನ ಸೇರುವ ಪರಿ ಇದೆಂದು ಅರಿತಿಹೆನು |

ನನಗ್ಯಾಕೋ ಗುರುವೇ ಲೋಕದ ಚಿಂತೆ ನೀನಿರುವಾಗ
ನೀ ನೀಡಿದ ಬದುಕ ಬದುಕಿ ನಡೆದರೆ ಸಾಲದೆ ಗುರುವೇ|

ಬವರೋಗ ವೈದ್ಯ ನೀನಿರುವಾಗ ಇನ್ಯಾತರ ಚಿಂತೆಯೋ ಗುರುವೇ
ಮಾತಿನ ಚಾಟಿಯೊಳು ನಡೆ ನುಡಿಯ ತಿದ್ಡಿ ಎಚ್ಚರಿಸುವಿಯೋ|

ಎನಗರಿವಿಲ್ಲದ ಬವ ಬಂದನಗಳ ಚಿಂತೆ ಇಲ್ಲವೋ ಗುರುವೇ
ಬವಸಾಗರವ ದಾಟಿಸುವ ನೌಕೆಯ ಹರಿಕಾರ ನೀ ಅಲ್ಲವೇ ಗುರುವೇ|

ಬೇಕು ಬೇಡಗಳ ಸುಳಿಯಲ್ಲಿ ನೂಕಿ ನಿನ್ನ ಸೇರಲು ತಡಮಾಡ ಬೇಡವೋ
ಬರೀ ದೊಂಬರಾಟದ ಆಡಂಬರದ ಬದುಕು ಸಾಕಾಗಿದೆ ಗುರುವೇ|

ಪದ ಪುಷ್ಪ ಹೊರತು ಬೇರೇನೂ ನೀಡಲಾರೆನು ಗುರುವೇ
ಕಷ್ಟವಾದರೂ ದೂರ ಮಾಡದೆ ಇಷ್ಟಪಟ್ಟು ಎನ್ನ ಉದ್ದರಿಸೊ ಗುರುವೇ|

Tuesday, August 14, 2018

ಗುರುನಾಥ ಗಾನಾಮೃತ 
ಇಂದೇಕೆ ಮನಸು ಭಾರವಾಗಿದೆ ಏನೂ ಬೇಡವಾಗಿದೆ
ರಚನೆ: ಆನಂದರಾಮ್, ಶೃಂಗೇರಿ  


ಇಂದೇಕೆ ಮನಸು ಭಾರವಾಗಿದೆ ಏನೂ ಬೇಡವಾಗಿದೆ
ನಿನ್ನ ಸೇವೆಯ ಹಂಬಲ ಬಲು ಕಾಡುತಿದೆ ಗುರುವೇ|

ಪಾಪಿಯು ನಾನು ನಿನ್ನ ಬಜಿಸಲು ಅಮಾನ್ಯನೋ
ಅನ್ಯರ ಬದುಕ ಅಪಹಾಸ್ಯ ಮಾಡುವ ಮೂಡನೋ|

ನಿನ್ನ ಕೊಂಡಾಡಿ ಪಾಡುತ ಸೇವೆ ಮಾಡದವ ನಾನು
ಪದಗಳಲೇ ಆಟವಾಡುತ ಕಾಲ ಕಳೆದು ಸೋತೆನೋ|

ನಿಜಬಕುತರ ಸಂಗ ಪಡೆಯದೆ ಭಕ್ತಿಮಾಡದಾದೆನೋ
ಎನ್ನ ಬಕುತಿಯೇ ಮೇಲೆoದು ಗರ್ವ ಪಡುವವನೋ|

ಮನವೆಂಬ ಮಾಯಾ ಜಾಲದಲಿ  ಜಾರಿಹೋದೆನೋ
ಪರಿತಪಿಸಿ ವಿಧ ವಿಧದಿ ನಿನ್ನ ಬೇಡಿ ಕಾಡುತಿಹೆನೋ|

ಸತ್ಯವ ಅರಿಯದೆ  ಮಿಥ್ಯೆಯಾ ನಂಬಿ ನಡೆದಿಹಿನೋ
ಇನ್ನಾದರೂ ನನ್ನ ಮನ್ನಿಸಿ ಹರಸಿ ನಡೆಸೋ ಗುರುವೇ|
ಗುರುನಾಥ ಗಾನಾಮೃತ 
ನಿನ್ನ ನಾಮ ಮರೆಯಿತು ಮನವು ಮಲಿನವಾಯಿತು
ರಚನೆ: ಆನಂದರಾಮ್, ಶೃಂಗೇರಿ  


ನಿನ್ನ ನಾಮ ಮರೆಯಿತು ಮನವು ಮಲಿನವಾಯಿತು
ನಿಮ್ಮ ಸೇವೆಯ ತೊರೆಯಿತು ತನು ಬಾರವಾಯಿತು|

ನಿನ್ನ ಮಾತ ತೊರೆಯಿತು ಹೃದಯ ಕೇಳದಾಯಿತು
ನಯನ ಕಾಣದಾಯಿತು ದರುಶನ ಮಾಡದಾಯಿತು|

ನಿನ್ನ ಸ್ತುತಿಸದಾಯಿತು  ಮಾತು ಹೊರಡದಾಯಿತು
ನಾನು ಮೆರೆಯಿತು ನಿನ್ನ ತೊರೆದು ದೂರ ಮಾಡಿತು|

ತೋರಿಕೆಯ ಬರದಲಿ ನಿನ್ನ ಮರೆತು ಎಲ್ಲಾ ಬೇಡಿತು
ನಿಜ ಬಕುತಿಯ ಮರೆತು ಪದ ಪುಂಜ ಮೆರೆಯಿತು|

ಅರಿವಿಲ್ಲದೆ ನಡೆದಿದೆ ಇದು ಅರ್ಥವಿಲ್ಲದ  ಬದುಕಾಗಿದೆ
ನಿಜವನರಿಯದೆ ನಿನ್ನ ನಂಬದೆ ಬದುಕು ಬರಡಾಗಿದೆ|

ನೀನಿಲ್ಲದೆ ಬೇರೇನು ಬೇಡದು ಈ ಜೀವಕೆ ಸಾಕಾಗಿದೆ
ನಿನ್ನರಿವು ಮೂಡಿಸಿ ಎನ್ನನು ನೀ  ಕೈ ಹಿಡಿಯಬಾರದೆ|

ಗುರುನಾಥ ಗಾನಾಮೃತ 
ಉಪವಾಸ ಕುಳಿತು ನಾಮ ಜಪಿಸುವ ಪರಿ ಏನು
ರಚನೆ: ಆನಂದರಾಮ್, ಶೃಂಗೇರಿ  


ಉಪವಾಸ ಕುಳಿತು ನಾಮ ಜಪಿಸುವ ಪರಿ ಏನು
ಎಲ್ಲೆಲ್ಲೋ ಓಡುವ ಮನವ ಹಿಡಿದಿಡಿಲಾರೆ ನಾನು
ನಿನ್ನ ಪಡೆಯಲು ಸುಲಭದ ದಾರಿ ತೋರು ಗುರುವೇ ನೀನು|

ಮಧುರವಾಗಿಹ ಫಲವ ಅರ್ಪಿಸಿ ಸೇವೆ ಮಾಡಲೇನು
ಮದು ತುಂಬಿದ ಹಾಲಿನೊಡೆ ಅಭಿಷೆಕ ಮಾಡಲೇನು
ಎಳನೀರ ಜೊತೆಗೂಡಿ ಗಂಗೆಯಾ ಸಮರ್ಪಿಸಲೇನು
ಸುಗಂಧ ಪೂರಿತ ಪುಷ್ಪಮಾಲೆಯ ನೀಡಲೇ ನಾನು|

ತುಳಸೀ ಮಾಲೆಯ  ಮಾಡಿ ನಿನ್ನ ಸಿಂಗರಿಸಲೇ ನಾನು
ಪತ್ರೆಗಳ ತುಂಬಿದ ಮಂಟಪದಿ ನಿನ್ನ ಕೂರಿಸಲೇನು
ಧೂಪ ದೀಪಗಳ ನಡುವೆ ಇರಿಸಿ ಆರಾದಿಸಲೇ ನಾನು
ಮಂತ್ರ ತಂತ್ರದಲಿ  ನಿತ್ಯ  ಪೂಜಿಸಿ ಸಂಭ್ರಮಿಸಲೇನು|

ಕಾಮ ತುಂಬಿದ ಮನದೊಳು ಜಪಿಸಿ ಫಲವಿಲ್ಲವೇನು 
ಮದ ಮತ್ಸರದಿಂದ  ನಡೆದು ಹಾಡಿ ಹೊಗಳಿದರೇನು
ಕ್ರೋಧ ತುಂಬಿದ ಮನದಿ ಜಪಿಸಿ ಬೇಡಿದರೇನು
ನೀ ಒಲಿಯಲು ಶುದ್ದ ಮನವೊಂದು ಸಾಕಲ್ಲವೇನು|
ಗುರುನಾಥ ಗಾನಾಮೃತ 
ಎಲ್ಲರಂತಲ್ಲ ನನ್ನ ಗುರುವು ಮಹಾ ಮಹಿಮನೋ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲರಂತಲ್ಲ ನನ್ನ ಗುರುವು ಮಹಾ ಮಹಿಮನೋ
ಅವನಿಗೆ ಅರಿವಿಲ್ಲದ ವಿಷಯ ಜಗದಲಿ ಇಲ್ಲವೋ|

ಏನು ಮಾಡಿದರೇನು ಅದು ಗುರುವಿಗೆ ಸಾಲದೋ 
ಏನನೂ ಬೇಡನೋ ಅವ  ಎಲ್ಲವನೂ  ಬಿಟ್ಟವನೊ|

ನಲಿದಾನ ಗುರು ನಿಜಬಕುತಿಯ ಕಂಡು ಒಲಿದಾನೋ
ಎಲ್ಲರ ಮನ ಮನದಲೂ ಉಸಿರಲೂ  ಇದ್ಧಾನೋ |

ಕೊಡುವನೋ ನೀ ಬೇಡುವುದ ಗುರು ಹರಸುವನೋ
ಕೇಳುವ ಮೊದಲೇ ಅರಿತು  ನಿನ್ನನು ಸಲಹುವನೋ|

ನುಡಿವನೋ ಮನ ನೋಯದಂತೆ ನಿಜ ಸತ್ಯವನೋ
ಅರಿತು ನಡೆದರೆ ಎಂದೂ ಕೈ ಬಿಡದೇ ಪೊರೆವನೋ|

ಗುರು ಬಕುತಿಯ ಸಾರವ  ಅರುಹಿ  ತೋರಿಹನೋ
ಎಲ್ಲವೂ ಗುರುವೆಂದು ನಂಬಿ ನಡೆದು ತೋರಿಹನೋ|
ಗುರುನಾಥ ಗಾನಾಮೃತ 
ಸಖರಾಯಾಧೀಶನಿಗೆ ಲಾಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಸಖರಾಯಾಧೀಶನಿಗೆ ಲಾಲಿ
ಗಡ್ಡದ ಅಯ್ಯನಿಗೇ ಲಾಲಿ‌ |

ದತ್ತಸ್ವರೂಪನಿಗೆ ಲಾಲಿ
ನಿಗಮಾಗಮವೇದ್ಯನಿಗೆ ಲಾಲಿ |
ನರದೇಹದಿರುವ ಶಿವನಿಗೆ ಲಾಲಿ
ಸಕಲಜನವಂದಿತಗೇ ಲಾಲಿ || ೧ ||

ಮುಕ್ತಿಪಥತೋರುವಗೆ ಲಾಲಿ
ಬದುಕ ಗಮ್ಯತೋರಿಪಗೆ ಲಾಲಿ |
ಇಹದಲಿ ಕೈ ಹಿಡಿದವಗೆ ಲಾಲಿ
ಪರದ ಮಾರ್ಗಬಂಧುವಿಗೆ ಲಾಲಿ || ೨ ||

ಭಕ್ತರ ಕರ್ಮಕಳೆವಗೆ ಲಾಲಿ
ಸನ್ಮಾರ್ಗದರ್ಶಿಪಗೆ ಲಾಲಿ |
ಮೂರ್ಲೋಕ ಒಡೆಯಗೇ ಲಾಲಿ 
ನನ್ನಾತ್ಮಬಂಧುವಿಗೆ ಲಾಲಿ || ೩ ||
ಗುರುನಾಥ ಗಾನಾಮೃತ 
ಆಡಲು ಬಾರೊ ಎನ್ನೊಡನೆ ಸದ್ಗುರುರಾಯ
ರಚನೆ: ಅಂಬಾಸುತ 

ಆಡಲು ಬಾರೊ ಎನ್ನೊಡನೆ ಸದ್ಗುರುರಾಯ
ಬೇಡುತಿಹೆನೊ ಕಾಡದೆ ತಡಮಾಡದೆ ಬೇಗ ||ಪ||

ನೀನಿತ್ತ ಮತಿಯಿಂದ ಕಾಲಕಳೆಯಲಾಗದೆ
ಬೇಸರಗೊಂಡಿಹೆನೊ ಬಹು ತ್ರಾಸೊಳಗೆ ನಾನಿಹೆನೊ
ಲೋಕಜನರ ಒಡನೆ ಆಡಿದರೇನುಂಟು
ಕೇಕೆ ಹಾಕಿ ನಗುವರಯ್ಯ ಅವರು ||೧||

ಕಣ್ಣಾಮುಚ್ಚಾಲೆ  ಚೆಂಡು ಚಿನ್ನಿದಾಂಡಲ್ಲ
ಚಪ್ಪರಿಸೊ ಬಿಸಿಯೂಟ ಉಂಡ ಮೇಲಲ್ಲ
ದಂಡುದಾಳಿಯ ಕೂಡಿ ಸಂಘ ಮಾಡಲ್ಲ
ಗಂಡಾಂತರ ತರುವಾ ದಂಡ ಇಟ್ಟಲ್ಲ ||೨||

ಧರ್ಮವೆಂಬೋ ಮೈದಾನ ಸೇರಿ
ಸಾಧನೆಯೆಂಬೊ ದಾಳವ ಹಾಕಿ
ಅರಿಷಡ್ವರ್ಗವೆಂಭೊ ಕಾಯ ಉರುಳಿಸಿ
ಆನಂದವೆಂಬೊ ಮನೆಯ ಸೇರಲು ||೩||

ಸಖರಾಯಪುರದ ಎನ್ನಾತ್ಮ ಸಖನೇ
ಶ್ರೀವೇಂಕಟಾಚಲ ನಾಮಾಂಕಿತನೇ
ಅಂಬಾಸುತನೊಡಗೂಡಿ ಈಗಲೇ ಬೇಗನೆ
ಆಡೋ ನಲಿದಾಯುವಂತೆ ಮಾಡೋ ||೪||
ಗುರುನಾಥ ಗಾನಾಮೃತ 
ತೇಯ್ದ ಗಂಧ ತನ್ಮಯದಿ ಕುಯ್ದು ತಂದಾ
ರಚನೆ: ಅಂಬಾಸುತ 

ತೇಯ್ದ ಗಂಧ ತನ್ಮಯದಿ ಕುಯ್ದು ತಂದಾ
ಮಲ್ಲಿಗೆ ಹೂ ನಿನಗೇ ಗಡ್ಡದಯ್ಯ
ಮಲ್ಲಿಗೆ ಹೂ ನಿನಗೇ
ಒಪ್ಪಿಸಲು ಬಲು ಒಪ್ಪದಿಂದಲಿ ನಾವು
ಬಂದೇವೋ ಮುಖ ತೋರೋ ಗಡ್ಡದಯ್ಯ
ಬಂದೇವೋ ಮುಖ ತೋರೋ ||

ಸಂಪೀಗೆ ಮೂಗೊ ಬಲು ಕೆಂಪಾನೆ ಕಣ್ಣೋನೆ
ಕರುಣೆ ಕಂಪಾ ಚಲ್ಲೋನೆ ಗಡ್ಡದಯ್ಯ
ಕರುಣೆ ಕಂಪಾ ಚೆಲ್ಲೋನೆ
ದಟ್ಟಿ ಸುತ್ತಿಕೊಂಡ ದಿಟ್ಟ ಮೂರುತಿ ರೂಪ
ದಟ್ಟವಾದ ಹೆರಳೋನೆ ಗಡ್ಡದಯ್ಯ
ದಟ್ಟವಾದ ಹೆರಳೋನೇ ||

ಕೊಳೆ ಕಳೆಯೊ ಕರವೊಂದು ಕಳೆ ನೀಡೊ ಕರವೊಂದು
ಕನಿಕರದಿ ಎಮ್ಮ ಸಲಹಿದೆ ಗಡ್ಡದಯ್ಯ
ಕನಿಕರದಿ ಎಮ್ಮ ಸಲಹಿದೆ
ಪಟ್ಟೆ ಪೀಠಾದ ಮುದ್ದಾದೆರಡೂ ಪಾದ
ಮುತ್ತಿಟ್ಟು ನಮಿಸುವಂತಿದೆ ಗಡ್ಡದಯ್ಯ
ಮುತ್ತಿಟ್ಟು ನಮಿಸುವಂತಿದೆ ||

ಮುತ್ತಂಥ ಮಾತೊ ಮನಸಿಗೆ ನಾಟೋ
ಬಾಣದಂತಿಹುದಲ್ಲೋ ಗಡ್ಡದಯ್ಯ
ಬಾಣದಂತಿಹುದಲ್ಲೋ
ಬೇಕೆಂಬುದಾ ಬಿಡಿಸಿ ಸಾಕೆಂಬುದಾ ಕಲಿಸೋ
ಅರಿವಿನರಮನೆ ದೊರೆಯೋ ಗಡ್ಡದಯ್ಯ
ಅರಿವಿನರಮನೆ ದೊರೆಯೊ ||

ಸಖರಾಯಪಟ್ಟಣದ ಶ್ರೀವೇಂಕಟಾಚಲ
ನಿಜ ಸಖ ನೀನಯ್ಯ ಗಡ್ಡದಯ್ಯ
ನಿಜಸಖ ನೀನಯ್ಯ
ಅಂಬಾಸುತನ ಅಂತರಂಗದ ಹಿರಿದೈವ
ಗುರುನಾಥ ಅವಧೂತ ಗಡ್ಡದಯ್ಯ
ಗುರುನಾಥ ಅವಧೂತ ||

Wednesday, August 8, 2018

ಗುರುನಾಥ ಗಾನಾಮೃತ 
ಹೊಸಿಲ ಬಳಿ ಬಂದು ನಿಂತ ಗುರುವು ನೋಡಿರೊ
ರಚನೆ: ಅಂಬಾಸುತ 

ಹೊಸಿಲ ಬಳಿ ಬಂದು ನಿಂತ ಗುರುವು ನೋಡಿರೊ
ಹಸಿರು ತೋರಣದ ಕೆಳಗೆ ಅವನ ದಿವ್ಯ ರೂಪ ಕಾಣಿರೊ ||ಪ||

ಕಾಡಿ ಬೇಡಿ ಕರೆಯಲು ಮಾತು ಕೊಟ್ಟನೊ
ಮರೆಯದೆ ನಾ ಬರುವೆ ಮುತ್ತೈದೆ ಎಂದನೊ
ಒಮ್ಮೆ ಅಡಿಯನಿಡಲು ಮನೆಗೆ ಸ್ಥಿರವಾಗಿರುವೆ
ಮರಳಿ ಹೋಗೆಂದರೂ ಹೋಗಲಾರೆ ಎಂದನು ||೧||

ಎಲ್ಲರಂಥೆ ನಾನು ಬರುವೆ ಪೂರ್ಣಕುಂಭವೇತಕೆ
ಪಾದಪೂಜೆ ಒಲ್ಲೇ ಸರಿಯೇ ಒಳಗೆ ಬರಲೆ ಎನ್ನುತ್ತಾ
ಪಟ್ಟೆ ಸೀರೆಯುಟ್ಟು ಮಾಡಿದಡುಗೆ ಉಣ್ಣೆನು
ಪುಟ್ಟದಾಗಿ ಪ್ರೀತಿಯಿಂದ ಬಡಿಸು ಎಂದನು ||೨||

ಮೆರೆಯದವನು ಮರೆಯದವನು ಮೂರ್ತಿರೂಪನು
ಮುಕ್ತನಾಗಿ ಬಂದ ಸನ್ಮಂಗಳಕರನು
ಭಾವ ತುಂಬಿ ಬೇಡಲು ಇಂದು ಬಂದನು
ಸುಶೀಲೆಗಿತ್ತ ಮಾತನು ನೆಡೆಸಿ ನಿಂತನು ||೩||

ದಿಟ್ಟನಾಗಿ ದಟ್ಟಿಯೊಂದ ಉಟ್ಟುಕೊಂಡು
ಸಖರಾಯಪುರದಿಂದ ಸದ್ಗುರುನಾಥನು
ಎಲ್ಲರಂಥರಲ್ಲ ಇವನು ಸರಳ ಸುಂದರನು
ಅಂಬಾಸುತನಂತರಂಗದೊಳಗೆ ಮೆರೆವನು ||೪||