ಗುರುನಾಥ ಗಾನಾಮೃತ
ಯಾರಿಹರೈ ಈ ಪ್ರಭುವಿನಂತವರು
ರಚನೆ: ಅಂಬಾಸುತ
ಯಾರಿಹರೈ ಈ ಪ್ರಭುವಿನಂತವರು
ಯಾರಿಹರೈ ಎನ್ನ ಗುರುವಿನಂಥವರು ||ಪ||
ತ್ರಿಜಗವಂದಿತರು ತ್ರಿಗುಣಾತೀತರು
ತ್ರಿಮೂರ್ತಿರೂಪರು ತ್ರಿಭುವನ ಪಾಲಕರು ||ಅ.ಪ||
ನೋಟದಲೇ ಮನ ಕಲ್ಮಷ ಕಳೆವರು
ನಾಟುವ ಮಾತನ್ನಾಡುವಂಥವರು
ನಾಟಕೀಯತೆಯ ನಡೆ ನಡೆ ಎನ್ನುವವರು
ದಿಟ್ಟ ಮೂರುತಿಯಾಗಿ ಕಂಡಂಥವರು ||೧||
ನಾಲ್ಕಾಶ್ರಮವಾ ಮೀರಿದಂಥವರು
ನಾಕವ ಇಳೆಯಲೇ ತೋರಿದಂಥವರು
ನಾಡಿ ಹಿಡಿಯದೆ ಭವ ರೋಗ ಕಳೆವವರು
ನೋಯಿಸದಾ ಹಾಗೆ ನನ್ನತನ ಕಿತ್ತವರು ||೨||
ನಕ್ಕಾಗ ಹರಿಯಂತೆ ಕಂಡವರು
ಸಿಟ್ಟುಗೊಂಡಾಗ ನರಹರಿ ಇವರು
ಗಟ್ಟಿಯಾಗಿ ಬಿಡದೆ ಪಾದವ ಹಿಡಿಯೇ
ಜಗದಾ ಗುಟ್ಟನು ಬಿಚ್ಚಿಡುವವರು ||೩||
ಸಖರಾಯಪುರದೊಳು ಸಖನಾಗಿರುವರು
ಆತ್ಮಸುಖವೀಯೇ ಕಾದಿರುವವರು
ಅಂಬಾಸುತನ ತಾಯಂತೆ ಕಾದಿರುವವರು
ಜಗದಂಬೆ ಪಾದವ ತೋರುವಂಥವರು ||೪||
No comments:
Post a Comment