ಗುರುನಾಥ ಗಾನಾಮೃತ
ಮುಂಜಾನೆದ್ದು ಮಂಗಳಕರ ಗುರು ಮೂರುತಿ ಕಾಣೀರೊ
ರಚನೆ: ಅಂಬಾಸುತ
ಮುಂಜಾನೆದ್ದು ಮಂಗಳಕರ ಗುರು ಮೂರುತಿ ಕಾಣೀರೊ
ಹಾಡುತ ಪಾಡುತ ಆರತಿ ಮಾಡುತ ಅವನ ಭಜಿಸಿರೊ ||ಪ||
ಯೋಗನಿದಿರೆಯಿಂದೇಳಯ್ಯ ಗುರುವೇ ಎನುತ ಸುಪ್ರಭಾತವ ಹಾಡಿರೊ
ವೇದಮಂತ್ರ ಘೋಷವ ಮಾಡುತಲಿ ಸ್ನಾನವ ಮಾಡಿಸಿರೊ ||೧||
ರೇಶಿಮೆ ವಸ್ತ್ರ ಗಂಧಾಕ್ಷತೆ ವಿಧವಿಧದಾ ಪುಷ್ಪವ ಅರ್ಪಿಸಿರೊ
ಧೂಪ ದೀಪ ಫಲ ನೈವೇದ್ಯದ ಒಡನೆ ಆತ್ಮವ ನಿವೇದಿಸಿರೊ ||೨||
ಏಕಾರತಿ ಪಂಚಾರತಿ ಮುಂದೆ ಕರ್ಪೂರದಾರತಿ ಮಾಡಿರೊ
ತಪ್ಪನು ಮನ್ನಿಸಿ ಒಪ್ಪವಾಗಿರಿಸೆನುತ ತುಪ್ಪದಾರತಿಯ ಮಾಡಿರೊ ||೩||
ಧನ್ಯವಿದು ಪ್ರದಕ್ಷಿಣೆ ಎನುತಾ ಅವನಡಿಯಲಿ ಶಿರವನ್ನಿಡಿರೊ
ಜ್ಞಾನ ಭಕ್ತಿ ವೈರಾಗ್ಯ ನೀಡಿ ಎಮ್ಮನು ಪೊರೆ ಎನುತಾ ಬೇಡಿರೋ ||೪||
ಈ ವಿಧದಿ ಸದ್ಗುರು ಸೇವೆಯನು ವಿಧವಿಧದಿ ಮಾಡಿರೋ
ನಿಶ್ಚಲನಾಗಿ ಕುಳಿತು ಅವನನು ಧ್ಯಾನಿಸಿ ನಲಿಯಿರೊ ||೫||
ಸಖರಾಯಪುರಾಧೀಶ ಸದ್ಗುರುನಾಥ ಭಕ್ತೋದ್ಧಾರಕನೋ
ಅಂಬಾಸುತನ ಅಂತರಂಗವಾಸ ಭಕ್ತಜನ ಪ್ರಿಯನೋ ||೬||
No comments:
Post a Comment