ಗುರುನಾಥ ಗಾನಾಮೃತ
ಅತಿಷಯ ಪ್ರೇಮದಿ ಆದರದಿಂದಲಿ ಕೂಗಿಹೆ ಬಾರೊ ಅವಧೂತ
ರಚನೆ: ಅಂಬಾಸುತ
ಅತಿಷಯ ಪ್ರೇಮದಿ ಆದರದಿಂದಲಿ ಕೂಗಿಹೆ ಬಾರೊ ಅವಧೂತ
ಆದ್ಯಂತರಹಿತ ಅಪ್ರಮೇಯ ಆನಂದ ರೂಪ ನೀ ಅವಧೂತ ||ಪ||
ಅಹಂಕಾರದ ಅಜ್ಞಾನವನು ಅಳಿಸಲು ಬಾರೋ ಅವಧೂತ
ಸೋಹಂ ಪದವಾ ಮನದೊಳು ನಿಲಿಸಿ ಉದ್ಧರಿಸೆಮ್ಮನು ಅವಧೂತ ||೧||
ಅಂತರಂಗದ ಅರಿಗಳನೆಲ್ಲಾ ದೂರ ಮಾಡೊ ನೀ ಅವಧೂತ
ಸಂಭ್ರಮದಿಂದಲಿ ಸಡಗರದಿಂದಲಿ ನೀನೆಲೆಸಲ್ಲಿ ಅವಧೂತ ||೨||
ಅಣು ಅಣುವಿನಲೂ ಕಣಕಣದಲ್ಲೂ ನೀ ಕಾಣೆನಗೆ ಅವಧೂತ
ಅಚ್ಯುತ ಅನಂತ ಅಜ ಹರ ನೀನೆಂದು ಭಜಿಸುವೆ ನಿತ್ಯ ಅವಧೂತ ||೩||
ಸತ್ಯ ಮಿಥ್ಯದಾ ಭೇಧವ ತೋರಿ ಸಲಹೋ ಎಮ್ಮನು ಅವಧೂತ
ಸಹನೆ ಸರಳತೆ ತುಂಬಿಹ ಬದುಕನು ಎಮಗೀಯೋ ನೀ ಅವಧೂತ ||೪||
ಸಂತ ಸಂಘ ಸಜ್ಜನರ ಸ್ನೇಹ ಗುರು ಹಿರಿಯರ ಸೇವೆಯ ಅವಧೂತ
ನಿರುತವು ನಿರ್ಮಲ ಮನದಲಿ ಮಾಡುವ ಭಕುತಿಯ ನೀಡೊ ಅವಧೂತ ||೫||
ನೀಡೊ ಮನವ ನೀ ನೀಡೊ ಕಾಡುತಾ ಬೇಡುವೆ ನಿನ್ನಲಿ ಅವಧೂತ
ಅಂಬಾಸುತನ ಅರಿವಿನದೊರೆ ಸಖರಾಯಪುರವಾಸಿ ಅವಧೂತ ||೬||
No comments:
Post a Comment