ಗುರುನಾಥ ಗಾನಾಮೃತ
ಪಾಲಿಸಿ ಅವನಾ ಪದಗಳನು
ರಚನೆ: ಅಂಬಾಸುತ
ಪಾಲಿಸಿ ಅವನಾ ಪದಗಳನು
ಪೂಜಿಸಿರೆಮ್ಮ ಗುರುನಾಥನಾ ||ಪ||
ಪರಮಪಾವನ ಪುಣ್ಯ ಪುರುಷನಾ
ಪರಂಧಾಮ ಅವಧೂತನಾ ||ಅ.ಪ||
ಮಾತಾಪಿತರೆ ಮಹಾದೇವ ದೇವಿಯರು
ಗುರುಹಿರಿಯರೆ ಪರಬ್ರಹ್ಮ ಸ್ವರೂಪರು
ಗುರುತರ ಭಾಗ್ಯವಿದು ಸೇವಿಸೊ ಅವರನು
ಎನುತ ಎಮ್ಮನುದ್ಧರಿಸಿಹ ಗುರುವರನು ||೧||
ಬಯಸಬೇಡ ಭಾವ ಹೊರಹಾಕಬೇಡ
ಆಡಬೇಡ ಮೌನ ನೀ ಬಿಡಬೇಡ
ಹೇಳಬೇಡ ಕಲಿವುದ ನಿಲಿಸಬೇಡ
ಎನುತ ಎಮ್ಮನುದ್ಧರಿಸಿಹ ಗುರುವರನು ||೨||
ನುಡಿಯೊಳು ಮಡಿ ಇರಲಿ ಸದಾ
ಮನದೊಳು ದೈವದ ಗುಡಿ ಇರಲಿ
ದೇಹ ಗುರುವಲ್ಲ ದಾಹ ತರವಲ್ಲ
ಎನುತ ಎಮ್ಮನುದ್ಧರಿಸಿಹ ಗುರುವರನು ||೩||
ಇಚ್ಚೆ ಅವನದು ಚರ್ಚೆ ಅವನದು
ಸ್ವೇಚ್ಚೆಯಿಂದಲಿ ನೀನಿರಬೇಡ
ಕೂಡಿಡಬೇಡ ಅದ ಕೆಡಿಸಬೇಡ
ಎನುತ ಎಮ್ಮನುದ್ಧರಿಸಿಹ ಗುರುವರನು ||೪||
ಕರ್ಮದ ಮರ್ಮವ ನೀನರಿಯೊ
ಧರ್ಮದಿಂದಲೇ ನೀ ನೆಡೆಯೊ
ಶರ್ಮತನದ ಶಕ್ತಿಯ ಅನುಭವಿಸೋ
ಎನುತ ಎಮ್ಮನುದ್ಧರಿಸಿಹ ಗುರುವರನು ||೫||
ಸಖರಾಯಪಟ್ಟಣದ ಗುರುನಾಥ
ಅಂಬಾಸುತನ ಅನವರತ ಪೊರೆವಾತ
ನಿಜಧಾತ ಮುಕ್ತಿದಾತ ಈತ ಶಕ್ತಿಧಾತ
ಅವಧೂತ ಗುರುನಾಥ ಸದ್ಗುರುನಾಥ ||೬||
No comments:
Post a Comment