ಗುರುನಾಥ ಗಾನಾಮೃತ
ಬೃಂದಾವನದಿ ಜಗವಂದ್ಯನಾಗಿ ಕುಳಿತಿಹ ನೋಡೆ
ರಚನೆ: ಅಂಬಾಸುತ
ಬೃಂದಾವನದಿ ಜಗವಂದ್ಯನಾಗಿ ಕುಳಿತಿಹ ನೋಡೆ
ಅಲ್ಲಿ ಕಂಗೊಳಿಸುತಿಹ ಎಮ್ಮ ಗುರುಗಳಾ ನಾಮ ಪಾಡೆ ||ಪ||
ತುಳಸಿ ಬಿಲ್ವಪತ್ರೆ ಮಲ್ಲಿಗೆ ಸಂಪಿಗೆಯಾ ದಂಡೆಗಳಾ
ಸರಳವಾಗಿ ಸರಗಳಾಗಿ ಧರಿಸಿಹನು ನೋಡೆ ||೧||
ಶ್ವೇತವಸ್ತ್ರ ಉಟ್ಟು ಶಾಸ್ತ್ರರೀತಿ ಪೂಜೆ ಪಡೆಯುತಾ
ಶಿವನಾಗಿ ಶಾಮನಾಗಿ ಶಾರದಾಪತಿಯಾಗಿ ಕಾಣುತಾ ||೨||
ಶಾಂತನಾಗಿ ಶರಣಾಗತರಿಗೆ ರುದ್ರನಾಗಿ ಉಗ್ರರಿಗೆ
ಭದ್ರಾಸನದಿ ಕುಳಿತು ಭಾವದಂತೆ ಭಾಗ್ಯ ನೀಡುತಾ ||೩||
ಪ್ರೇಮ ತುಂಬಿದ ವದನದೊಳಗೆ ಕರುಣೆಯಾ ಕಂಗಳು
ಎಮ್ಮನುದ್ಧರಿಸುವಾ ಪದಗಳೇ ಅವನ ನಾಲಿಗೆಯೊಳು ||೪||
ಅಚಿಂತ್ಯನಿವನು ಅಮೋಘನಿವನು ಪೂರ್ಣನಿವ ಪರಬ್ರಹ್ಮನು
ಎಮ್ಮ ಪಾರುಗಾಣಿಸೇ ಅವತರಿಸಿಹ ಅವಧೂತನು ||೫||
ಸಖರಾಯಪುರದೊಳು ಸಾತ್ವಿಕ ಕಾನನದೊಳು
ಅಂಬಾಸುತನ ಮನದ ಒಡೆಯಾ ಅರಿವಿನಾಲಯದ ಹಿರಿಯಾ ||೬||
No comments:
Post a Comment