ಗುರುನಾಥ ಗಾನಾಮೃತ
ಸುಲಭಸಾಧ್ಯನು ಇವನು ಕಾಣಿರೊ
ರಚನೆ: ಅಂಬಾಸುತ
ಸುಲಭಸಾಧ್ಯನು ಇವನು ಕಾಣಿರೊ
ಸಲಹುವನು ಇವನಲ್ಲಿ ಬೇಡಿರೊ
ಗುರುವರನು ಗುರುತರದ ಭಾಗ್ಯವನ್ನೀಯುವನೋ ||ಪ||
ಜಪವ ಕೇಳನೊ ತಪವ ಕೇಳನೊ
ಪೂಜೆಪುನಸ್ಕಾರವ ತಾನೆಂದು ಕೇಳನೊ
ಸತ್ಯಮಾರ್ಗದಿ ನೆಡೆಯೆ ನಿತ್ಯ ನಿರುತವು ಗುರುವು
ನಿನ್ನೊಡನೆ ಇರುವನೊ ನಿನ್ನನುದ್ಧರಿಸುವನೊ ||೧||
ಮಡಿಯ ಬೇಡನೊ ಮಾಲೆ ಬೇಡನೊ
ಆರತಿ ಗಂಧಾಕ್ಷತೆ ಬೇಡನೊ
ಭಕ್ತಿಯಾಳಕ್ಕಿಳಿದು ಸ್ಮರಿಸೆ ಗುರುವಾ
ಶಕ್ತಿ ನೀಡುವನೊ ನಿನಗೆ ಮುಕ್ತಿಯನ್ನೀಯುವನೊ ||೨||
ಪಾದಪೂಜೆ ಬದಲು ಪದಗಳಾ
ಪಾಲಿಸಿರಿ ಎನ್ನುವನೊ
ಪರಮಪುರುಷನೊ ಇವನು ಪರಮಾತ್ಮನೇ ಆಗಿಹನೊ
ಭುವಿಯ ಭಾರ ಇಳಿಸಲೆಂದೆ ತಾನವತರಿಸಿಹನೊ ||೩||
ಸಖರಾಯಪುರದ ಈ ಸಂತ ಮಹಾಂತ
ಸದ್ಭಕ್ತ ಪಾಲಕ ಅನಂತಾ
ಅಂಬಾಸುತನ ಅನವರತ ಆನಂದನೀತ
ಶ್ರೀವೇಂಕಟಾಚಲ ನಾಮಾಂಕಿತಾ||೪||
No comments:
Post a Comment