ಒಟ್ಟು ನೋಟಗಳು

Thursday, May 17, 2018

ಗುರುನಾಥ ಲೀಲಾಮೃತ 
ಮಕ್ಕಳ ಮುಗ್ಧತೆಗೂ ಒಲಿವವನು ಎಮ್ಮ ಗುರುನಾಥನು
ರಚನೆ: ಅಂಬಾಸುತ 


ಈಗ್ಗೆ ೪ ವರ್ಷಗಳ ಹಿಂದೆ ನೆಡೆದ ಘಟನೆ. ಅಂದು ನಾಗರಪಂಚಮಿ. ನಮ್ಮ ಮನೆಯಲ್ಲಿ ಪೂಜೆ ಬೇಗನೇ ಮುಗಿದಿತ್ತು. ಸಖರಾಯಪಟ್ಟಣಕ್ಕೆ ಹೋಗಿ ಸದ್ಗುರುನಾಥನ ದರ್ಶನ ಮಾಡಿಬರೋಣವೆಂದು ನಿಶ್ಚಯಿಸಿ, ನಾನು ನನ್ನ ತಂಗಿ ಹಾಗು ಮಾವನೊಂದಿಗೆ ಹೊರಟು, ಸಖರಾಯಪಟ್ಟಣ ತಲುಪಿ ಗುರುಗಳ ಅಧಿಷ್ಠಾನಕ್ಕೆ ನಮಸ್ಕರಿಸಿ ಎಂದೆರಡು ಭಜನೆಗಳನ್ನು ಹೇಳಿದೆವು‌ . ಹಾಗೆಯೇ ಮನೆಯಿಂದ ತಂದಿದ್ದ ಪ್ರಸಾದವನ್ನು ಅಲ್ಲಿದ್ದವರಿಗೆ ಹಂಚಿ ನಾವೂ ತಿಂದು ಹೊರಡೋಣವೆಂದು ಸಖರಾಯಪಟ್ಟಣದ ಬಸ್ ನಿಲ್ದಾಣದೆಡೆ ಹೆಜ್ಜೆ ಹಾಕುತಿದ್ದೆವು.

ನೆಡೆಯಲು ಪ್ರಾರಂಭಿಸಿ ಇನ್ನೂ ೫ ನಿಮಿಷವಾಗಿತ್ತು, ಅಷ್ಟರಲ್ಲಿ ನನ್ನ ತಂಗಿ ,"ಅಯ್ಯೋ ಕಾಲು ನೋವು ಇನ್ನೂ ಅಷ್ಟು ದೂರ ನೆಡೆಬೇಕು, ಬಸ್ ಸ್ಟಾಂಡ್ ನಲ್ಲಿ ಕಾಯ್ಬೇಕು, ಚಿಕ್ಕಮಗಳೂರಿನಲ್ಲಿ ಇಳಿದು ಮತ್ತೆ ಹಾಸನ ಬಸ್ ಹತ್ಬೇಕಲ್ಲಪ್ಪಾ.  ಗುರುಗಳೇ, ಇಲ್ಲೇ ಒಂದು ಸುವಿಹಾರಿ ಬಸ್ ಬರ್ಬಾರ್ದಾ, ಅದು ಸೀದಾ ಹಾಸನಕ್ಕೇ ಹೋಗ್ಬಾರ್ದಾ" ಎಂದಳು. ನಾನು ನಮ್ ಮಾವ ನಕ್ಕು ಸುಮ್ನೆ ನಡಿಯಮ್ಮಾ ಎಂದೆವು. ನಾವು ಇನ್ನೇನು ಗುರುನಾಥರ ತೋಟ ಬಿಟ್ಟು ಮುಖ್ಯರಸ್ತೆ ಬಳಿ ಬರುತ್ತಿದ್ದಂತೆ, ಚಿಕ್ಕಮಗಳೂರು ಕಡೆ ಹೋಗುತಿದ್ದ ಸುವಿಹಾರಿ  ಬಸ್ ಕಾಣಿಸಿತು. ಇಲ್ಲಿ ದಾರಿ ಮಧ್ಯೆ ನಿಲ್ಲಿಸುತ್ತಾನೋ ಇಲ್ಲವೋ ಎಂದು ಅನುಮಾನದಿಂದ ಕೈ ತೋರಿಸಿದ ತಕ್ಷಣ ಬಸ್ ನಿಲ್ಲಿಸಿ ನಮ್ಮನ್ನು ಹತ್ತಿಸಿಕೊಂಡು ಬಸ್ ಹೊರಟಿತು. ಬಸ್ ನ ಒಳಗೆ ಕಂಡಕ್ಟರ್ ಡ್ರೈವರ್ ಬಿಟ್ಟರೆ ಯಾರೂ ಇಲ್ಲ,  ಟಿಕೇಟ್ ಪಡೆಯುವಾಗ ಕಂಡಕ್ಟರ್ "ನಮ್ದು ಕಡೂರು ಡಿಪೊ ಬಸ್ ಸಾರ್, ಚಿಕ್ಕಮಗಳೂರು ಡಿಪೊ ಇಂದ ಕೇಳಿ ಕರೆಸ್ಕೊಳ್ತಿದಾರೆ, ಈ ಬಸ್ ಹಾಸನ ಮಾರ್ಗವಾಗಿ ಮೈಸೂರು ಹೋಗುತ್ತೆ, ನೀವೆಲ್ಲಿ ಇಳೀತೀರಾ" ಎಂದಾಗ ಒಂದು ಕ್ಷಣ ಅವಕ್ಕಾಗಿ ನಂತರ ಹಾಸನ ಎಂದು ಹೇಳಿ ಟಿಕೇಟ್ ಪಡೆದು, ಹಾಸನದ ವರೆಗೂ ಆರಾಮವಾಗಿ ನನ್ನ ತಂಗಿ ಹಾಗು ಮಾವ ನಿದ್ರಿಸಿಕೊಂಡು ಬಂದರು. ಆದರೆ ನನಗೆ ನಿದ್ರೆ ಬರಲಿಲ್ಲ.  ಬದಲಾಗಿ ಗುರುನಾಥ ಎಂಥಾ ಕರುಣಾಳು, ಮಕ್ಕಳ ಈ ಚಿಕ್ಕ ಪುಟ್ಟ ಬೇಡಿಕೆಗಳನ್ನೂ ಈ ರೀತಿಯಾಗಿ ಪೂರೈಸಿದನಲ್ಲಾ ಎಂದು ಅವನ ಮಹಿಮೆಗಳನ್ನು ನನ್ನೊಳಗೇ ನಾನೇ ಕೊಂಡಾಡುತ್ತಾ ಬಂದೆ. ಹಾಸನ ತಲುಪಿದ್ದೇ ತಿಳಿಯಲಿಲ್ಲ.

"ಗುರುರಾಯನಂಥಾ ಕರುಣಾಳು ಕಾಣೆ ನಾನೀ ಜಗದೊಳೂ "

ಸದ್ಗುರು ಚರಣಾರವಿಂದಾರ್ಪಣಮಸ್ತು

No comments:

Post a Comment