ಗುರುನಾಥ ಗಾನಾಮೃತ
ಎನ್ನ ಭಾಗ್ಯಕೆ ಎಣೆಯುಂಟೇ
ರಚನೆ: ಅಂಬಾಸುತ
ಎನ್ನ ಭಾಗ್ಯಕೆ ಎಣೆಯುಂಟೇ
ನಿನ್ನ ಕರುಣೆಗೂ ಮಿಗಿಲುಂಟೇ
ಘನ್ನ ಮಹಿಮನೆ ಗುರುದೇವನೇ
ಸಖರಾಯಪುರಾಧೀಶನೇ ||ಪ||
ದಾರಿ ಹೋಕನು ನೀನೆಂದೆ
ದರಿದ್ರ ಎನಗಿಲ್ಲವೆಂದೆ
ದೂರ ತಳ್ಳಿದೆ ಗುರುದೇವನೆ
ನಿನ್ನ ಚರಣವ ನಂಬದೆ ||೧||
ನಾಲ್ವರೊಳು ನೀನೊಬ್ಬನೆಂದೆ
ನಿನ್ನ ಮುಖ ಕಾಣೆನು ಎಂದೆ
ನೀನಾಗೇ ಕರೆದರೂ
ನಾ ಬರಲೊಲ್ಲೆ ಎಂದೆ ||೨||
ಅರಿವಿನಾ ಕಣ್ತೆರೆಸಿದೆ
ಅರಸು ಬಾ ಎನ್ನನು ಎಂದೆ
ಚೈತನ್ಯ ರೂಪನಾದೇ ಗುರುವೆ
ಎನ್ನ ಚಿತ್ತದಲೇ ನೀ ಬಂದು ನೆಲೆಸಿದೆ ||೩||
ಮೂಢತನದಲಿ ನಾನಾಡಿದ
ಮಾತನೆಲ್ಲವ ಮನ್ನಿಸಿದೆ
ಮಾತೆಯಾಗಿ ನಿನ್ನ ಮಡಿಲೊಳು
ಎನ್ನ ನೀ ಇರಿಸಿದೆ ||೪||
ಭಾವವಾದೆ ಪದವಾದೆ
ಎನ್ನ ಕರದಲಿ ನಲಿದಾಡಿದೆ
ಅಂಬಾಸುತ ನೀನೆನ್ನುತಾ
ಹರಸಿದೆ ನೀ ಎನ್ನ ಬೆಳೆಸಿದೆ ||೫||
No comments:
Post a Comment