ಗುರುನಾಥ ಗಾನಾಮೃತ
ತಡಮಾಡದೆ ನಡಿ ಗುರುಮನೆಗೆ
ರಚನೆ: ಅಂಬಾಸುತ
ಹೆಕ್ಕಬೇಡ ಹುಳವ ಅಕ್ಕ ಪಕ್ಕದವರ ತಟ್ಟೆಯಲ್ಲಿ
ಪುಕ್ಕಭರಿತ ಕೆಟ್ಟ ಹುಳ ನಿನ್ನ ತಟ್ಟೆಯೊಳಗೆ ಇಹುದು ||ಪ||
ದಾಸರಂತೆ ಬೀದಿ ಬೀದಿ ತಿರುಗಿ ಬಂದೆಯಲ್ಲವೇ
ದಾಸತನದಿ ದೈವ ನಾಮ ನೀ ಪಾಡಿದೆ ಏನೂ
ದೋಸೆ ತೂತು ದದ್ದು ಮಡಿಕೆ ಎನುತ ದೊಡ್ಡಮನೆಯ ಮಾತ
ಚಿಕ್ಕತನದಿ ಆಡಿ ಚೊಕ್ಕತನವ ಕಳೆದುಕೊಂಡೆಯಲ್ಲೇ ||೧||
ಗರತಿಯಂತೆ ಅಲಂಕಾರಗೊಂಡು ತುಳಸಿ ಮುಂದೆ ನಿಂತು
ಆಲಾಪದಿ ಹಾಡುತಾ ಆರತಿ ಮಾಡಿದೆಯಲ್ಲೇ
ಹಸಿದು ನಿಂತ ಸುತನ ಪತಿಯ ಗತಿಯ ಕೇಳದಿರುವ ನೀನು
ಗೊಲ್ಲನರಸಿಯನ್ನು ಸುತ್ತಿ ಗೂಢಾಚಾರ ಮಾಡಿದೆಯಲ್ಲೇ ||೨||
ಎಂಟಾಣೆಯ ಕಣಕೆ ಆಸೆ ಪಟ್ಟು ಕುಣಿದು ಹೋದೆಯಲ್ಲೇ
ಕುಂಕುಮವಿತ್ತವರ ಮನೆಗೆ ಕನ್ನ ಹಾಕಿ ಬಂದೆಯಲ್ಲೇ
ಕೋಡಂಗಿಯ ಮಗನೆ ಎಂದು ಬೀದಿ ಮಕ್ಕಳ ಹೀಯಾಳಿಸಿ
ಬೊಗಳೆಯಾಡೊ ನಿನ್ನ ಮಗನ ಭಾಗ್ಯವಂತನೆಂದೆಯಲ್ಲೇ ||೩||
ಪತಿಯು ಗತಿಸಿ ಹೋದ ಮೇಲೆ ಅನ್ಯ ಸುಮತಿಯರನು ಕಂಡು
ನಾಕಾಣೆ ಕುಂಕುಮ ನಿನಗಿಹುದು ಎಂದೆಯಲ್ಲೇ
ಪತಿತ ಪಾವನ ಎಮ್ಮ ಗುರುನಾಥನನ್ನು ದೂಷಿಸುತಲಿ
ಅಂಬಾಸುತನಾ ಪದಕೆ ಆಹಾರ ಆದೆಯಲ್ಲೇ ||೪||
No comments:
Post a Comment