ಒಟ್ಟು ನೋಟಗಳು

Wednesday, May 2, 2018

ಗುರುನಾಥ ಗಾನಾಮೃತ 
ಹಾಲ ಹಿತವಾಗಿ ಕಾಯಿಸಬೇಕಮ್ಮ
ರಚನೆ: ಅಂಬಾಸುತ 


ಹಾಲ ಹಿತವಾಗಿ ಕಾಯಿಸಬೇಕಮ್ಮ
ಹಿರಿದಾದರೆ ಉರಿ ಹಾಲುಕ್ಕಿ 
ಒಲೆಯ ಪಾಲಾಗುವುದಮ್ಮ ||ಪ||

ಗುಣಪೂರ್ಣ ಪಾತ್ರೆಯೊಳು ಗರತಿ ನೀ ಹಾಲನ್ಹಾಕಿ
ಗಮನವಿಟ್ಟು ಒಲೆಯ ಹಚ್ಚಬೇಕಮ್ಮ
ಹುಳ ಧೂಳುಗಳು ಹಾಲೊಳು ಬೀಳದಂತೆ
ಎಚ್ಚರವಾಗಿರಬೇಕಮ್ಮಾ ನೀ ಎಚ್ಚರವಾಗಿರಬೇಕಮ್ಮಾ ||೧||

ತಳಹಿಡಿಯದಂತೆ ತೊಳಸುತಲಿರಬೇಕು
ಆಗಾಗ ಉರಿಯಾ ಗಮನಿಸುತಿರಬೇಕು
ಶಬ್ಧ ಬಂದರೆ ಹಾಲು ಒಡೆದೂ ಹೋಗುವುದಮ್ಮ
ನಿಶಬ್ಧವಾಗಿರೆ ನೀ ನಿಶ್ಚಿಂತಳಾಗಮ್ಮಾ ||೨||

ಹಾಲುಕ್ಕಿ ಬಂದಾಗ ಮೈಮರೆತು ಕೂಡಬಾರದು
ಅರಿವಿಲ್ಲದೆ ಪಾತ್ರೆ ಕೆಳಗಿಳಿಸಬಾರದು
ಕೈಸುಡುವುದಮ್ಮಾ ಕೆಲಸ ಕೆಡುವುದಮ್ಮ
ಕಾದ ಕಂದನಿಗೆ ಹಾಲಿಲ್ಲವಾಗುವುದಮ್ಮಾ ||೩||

ಬೆಕ್ಕು ಬರದಾ ಹಾಗೆ ಮುಚ್ಚಿಡಬೇಕಮ್ಮ
ಚೊಕ್ಕ ಗುರುನಾಥನ ಮುಂದಿಡಬೇಕಮ್ಮ
ಅಂಬಾಸುತನಾ ಈ ಪದದಿ ಅರ್ಥ ಹುಡುಕಮ್ಮ
ಹಾಲೆಂದರಾತ್ಮವಮ್ಮ ದೇಹ ಪಾತ್ರೆಯಮ್ಮಾ ||೪||

No comments:

Post a Comment