ಗುರುನಾಥ ಲೀಲಾಮೃತ
ಸದ್ಗುರುವೇ ತಾಯಿ
ರಚನೆ: ಅಂಬಾಸುತ
ಆಕೆ ಅಖಂಡವಾಗಿ ಹಲವಾರು ವರ್ಷಗಳಿಂದ ಸದ್ಗುರು ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಳು. ಗುರುನಾಥನೇ ಸರ್ವಸ್ವ ಎಂದುಕೊಂಡವಳು. ಮದುವೆಯಾಗಿ ಹಲವಾರು ವರ್ಷಗಳೇ ಕಳೆದರೂ ಆಕೆಗೆ ಸಂತಾನ ಭಾಗ್ಯವಿರಲಿಲ್ಲ. ಈ ನೋವು ಆಗಾಗ ಕಾಡುತ್ತಿದ್ದರೂ ಸಹಾ ಆಕೆ ಗುರುಸೇವೆಯಲ್ಲಿ ಅದನ್ನು ಮರೆಯುತಿದ್ದಳು. ಒಮ್ಮೆ ಆಕೆಯ ಜೊತೆಗಾರರು " ನೀನು ಇಷ್ಟೊಂದು ಭಕ್ತಿಯಿಂದ ಗುರುಸೇವೆ ಮಾಡಿತ್ತಿದ್ದೀಯಲ್ಲಾ, ಆ ಗುರುನಾಥನನ್ನೇ ಕೇಳು, ನನ್ನನ್ನು ಅನುಗ್ರಹಿಸು ಎಂದು" ಎನ್ನುತ್ತಾರೆ. ಏನೇ ಆದರೂ ಹೆಣ್ಣಿಗೆ ತಾಯ್ತನದ ಬಯಕೆ ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ, ಹಾಗು ಹೋಗುವುದೂ ಇಲ್ಲ. ಈಕೆಯೂ ನಿಜ ನಾನ್ಯಾಕೆ ನನ್ನ ಗುರುನಾಥರಲ್ಲಿ ಇದನ್ನು ಬೇಡಬಾರದು ಎಂದು ಗುರುನಾಥರಿದ್ದಲ್ಲಿಗೆ ಹೋಗುತ್ತಾಳೆ.
ಈಕೆಯನ್ನು ಕಂಡೊಡನೆ ಆ ಗುರುನಾಥನು, " ಅಮ್ಮಾ ಬಾ , ನಾನೂ ನಿನ್ನ ಮಗನೇ ಅಲ್ವಾ" ಎಂದು ಮಗುವಿನಂತೆ ಮುದ್ದಾಗಿ ಮಾತಾಡುತ್ತಾರೆ. ಈಕೆಯ ಆನಂದಕ್ಕೆ ಪಾರವೇ ಇಲ್ಲದಂತಾಗುತ್ತದೆ. ಗುರುನಾಥನೇ ನನ್ನನ್ನು ತಾಯಿ ಅಂದ ಮೇಲೆ, ಇದಕಿಂತ ಸೌಭಾಗ್ಯ ನನಗೆಲ್ಲಿ, ನಾನೇ ಪುಣ್ಯವತಿ, ನಾನೇ ಪುಣ್ಯವತಿ ಎನ್ನುತ್ತಾ ಆನಂದಾಶ್ರುಗಳನ್ನು ಸುರಿಸುತ್ತಾ ಗುರುನಾಥನಿಗೆ ನಮಸ್ಕರಿಸುತ್ತಾಳೆ.
ಗುರುಶಿಷ್ಯರ ನಡುವೆ ಮಾತು ಇರಲೇ ಬೇಕೆಂದಿಲ್ಲ, ಭಾವ ಸಂವಹನ ಇಲ್ಲಿ ಸೇತುವೆಯಾಗಿರುತ್ತದೆ. ಮತ್ತು ಶಿಷ್ಯನ ಪ್ರಶ್ನೆಗಳಿಗೆ ಅವನ ಹೃದಯದೊಳಗೇ ಕುಳಿತು ಗುರು ಉತ್ತರಿಸುತ್ತಾನೆ. ಅಂತಃಶ್ರದ್ಧೆ ಇರಬೇಕಷ್ಟೇ....
ಸದ್ಗುರು ಚರಣಾರವಿಂದಾರ್ಪಣಮಸ್ತು
No comments:
Post a Comment