ಒಟ್ಟು ನೋಟಗಳು

Friday, January 26, 2018

ಗುರುನಾಥ ಗಾನಾಮೃತ 
ಯಾರು ಕಾಯ್ವರೋ ನಿನ್ನ ಹೊರತೆನ್ನ ಗುರುರಾಯಾ
ರಚನೆ: ಅಂಬಾಸುತ 

ಯಾರು ಕಾಯ್ವರೋ ನಿನ್ನ ಹೊರತೆನ್ನ ಗುರುರಾಯಾ
ಕರ ಪಿಡಿದು ನೆಡೆಸಲೂ ಓಡಿ ಬಾರೋ ಜೀಯಾ ||ಪ||

ಆರು ಅರಿಗಳು ಸೇರಿ ನಿನ್ನರಿವ ಮರೆಸುತಿವೇ
ಈ ಭವಸಾಗರದೀ ಎನ್ನ ಮುಳುಗಿಸಿವೇ
ಅಂತಃಕರಣದಿಂದಲೀ ನಿನ್ನ ಕರೆದಿಹೆ ಬಾರೋ
ಅರಿಗಳಾ ಮರ್ಧಿಸೀ ಈ ನರನ ಕಾಯೋ ||೧||

ಮಾನಾಭಿಮಾನವಾ ಬಿಟ್ಟು ನಿಲ್ಲುವೆನಯ್ಯಾ
ಧನಕನಕ ಸುಖ ಭೋಗ ನಿನ್ನ ನಾಮ ಎನಗಯ್ಯಾ
ಈ ಹೃದಯ ಮಂದಿರದೀ ನೀ ಬಂದೂ ನಿಲ್ಲಯ್ಯಾ
ಕುಟಿಲತೆಯ ಜಟಿಲತನವಾ ಬಿಡಿಸಿ ನೀ ಕಾಯಯ್ಯಾ ||೨||

ನಿನ್ನ ಪದದ ಪಾದಪೂಜೆಯಾ ಸ್ವೀಕರಿಸೋ
ಈ ಅಂಬಾಸುತನಾ ಕನಿಕರದಿ ಅನುಗ್ರಹಿಸೋ
ಸಖರಾಯಪುರಾಧೀಶಾ ಸದ್ಗುರುನಾಥಾ
ನಂಬಿಬಂದವರ ಕೈ ಬಿಡದೆ ಪೊರೆಯಯ್ಯಾ ||೩||

Sunday, January 21, 2018

ಗುರುನಾಥ ಗಾನಾಮೃತ 
ಬಿಡುವೆನೆಂದರೂ ಬಿಡನಾರೆನೂ ಚರಣವ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಬಿಡುವೆನೆಂದರೂ ಬಿಡನಾರೆನೂ ಚರಣವ 
ಬಿಡಲಾಗದೆಂದೂ ಗುರುಚರಣವ ||


ಭವದ ಬವಣೆಯಲಿ ಸಿಲುಕಿಹೆ ಗುರುವೇ
ಭಜಿಸುತಿಹೆ ನಿನ್ನ ನಾಮ ಪ್ರಭುವೇ |

ಕನಸಲೂ ಮರೆಯೆನು ‌ನಿನ್ನ ಜಪವ
ಮನಸಲೂ ನೆನೆವೆನು ನಿನ್ನ ತತ್ತ್ತ್ವವ || ೧ ||


ನಾಮಸ್ಮರಣೆಯೇ ಜೀವನಕೆ ಆಧಾರ
ನೀನಿಲ್ಲದೆ ಬದುಕೇ ನಿರಾಧಾರ |
ಅಣುರೇಣುತೃಣಕಾಷ್ಟವ್ಯಾಪಿ ನೀನು
ಎಲ್ಲರಲು ನಿನ್ನನೇ ನೋಡುವೆ ನಾನು || ೨ ||


ಉಸಿರುಸಿರಲಿ ವ್ಯಾಪಿಸಿಹೆ ನೀನು
ಕಣಕಣದಲಿ ತುಂಬಿಹೆ ನೀನು |
ನನ್ನ ಜೀವನದ ಅಮೂಲ್ಯ ರತ್ನವು ನೀನು
ದೂರ ಹೋಗೆನು ಎಂದಿಗೂ ನಾನು || ೩ ||
ಗುರುನಾಥ ಗಾನಾಮೃತ 
ಆನಂದ ಘನನಿವನು ಅಪ್ರಮೇಯನು
ರಚನೆ: ಅಂಬಾಸುತ 

ಆನಂದ ಘನನಿವನು ಅಪ್ರಮೇಯನು
ಅವಧೂತನಾಗಿಹ ಎಮ್ಮಾ ಗುರುವರ್ಯನೂ ||ಪ||

ಸುಖಪುರದ ಒಡೆಯನೂ
ಸಖನಾಗಿ ನಿಂತಿಹನೂ
ಸಾತ್ವಿಕತೆಯ ಭೋಧಿಸಿ
ಸಂತ ತಾನಾಗಿಹನೂ ||೧||

ಇದ್ದೂ ಇಲ್ಲದಂತೇ
ಇರುವವನು ಈಶ್ವರನೂ
ಭಕ್ತರನ್ನುದ್ಧರಿಸೇ 
ನರನಾಗಿ ಬಂದಿಹನೂ ||೨||

ಬಿಟ್ಟರೇ ಸುಖವಿಹುದೂ
ಹಿಡಿದಷ್ಟೂ ದುಖಃವೂ
ಎಲ್ಲಾವ ಬಿಟ್ಟು ಗುರು
ಪಾದವ ಹಿಡಿರೆಂದವನೂ ||೩||

ದೃಷ್ಟಿಯಿಂದಲೇ ದೋಷವಾ
ದಹಿಸುವ ಮಹಾನೀಯನು
ಭಕ್ತಾರ ಇಷ್ಟಾರ್ಥ 
ಸಲಿಸೋ ಮಹನೀಯನೂ ||೪||

ಮಾತೆಯ ಮಮತೆಗಿಂತಾ
ಹೆಚ್ಚಿವನ ಕಾಳಜಿ
ಗುರುಮನೆಯ ತವರು
ಮನೆಯನ್ನಾಗಿಸಿದವನೂ ||೫||

ವಿಕಾರ ಅಳಿಸುವಾ
ಸಾಕಾರ ರೂಪನೂ
ಬಣ್ಣಿಸಲು ಸಾಧ್ಯವೇ
ಇಲ್ಲಾದ ಭಾವ ಇವನೂ ||೬||

ಅರಿವಿನಾಲಯಕೆ
ಕರೆದೊಯ್ಯುವವನೂ
ಅಂಬಾಸುತನಾ
ಸದ್ಗುರುನಾಥನಿವನೂ ||೭||
ಗುರುನಾಥ ಗಾನಾಮೃತ 
ಎನಿತು  ವರ್ಣಿಸಲಿ ತಾಯೇ ಈ ನಿನ್ನ ರೂಪವಾ 
ರಚನೆ: ಅಂಬಾಸುತ 

ಎನಿತು  ವರ್ಣಿಸಲಿ ತಾಯೇ ಈ ನಿನ್ನ ರೂಪವಾ 
ರಾಗ ಭಾವವ ತುಂಬಿ ಪಾಡುವ ಆಸೆ ಎನಗೆ ||ಪ||

ಪಟ್ಟೆ ಪೀತಾಂಬರ ಉಟ್ಟು ಪುಟ್ಟ ಕಾಲುಂಗುರ ತೊಟ್ಟು 
ಶೋಢಶ ತಾಂಬೂಲ ಕುಟ್ಟಿ ಬಾಯೊಳಗಿಟ್ಟು 
ಉದಯಿಸುತಿಹಾ ಸೂರ್ಯನ ತಿಲಕ ಮಾಡಿಟ್ಟುಕೊಳುತಾ 
ತಂಪಾದ ಚಂದ್ರನ ಶಿರದೊಳು ಮುಡಿದಿರೇ ||೧||

ಕಪ್ಪು ಕಾಡಿಗೆಯಾ ಕಣ್ಣೆರಡರೊಳು ಪೂಸೀ
ಆ ಮದನನ ಬಿಲ್ಲಾ ಹುಬ್ಬಾಗೀ ಧರಿಸೀ 
ಚಿನ್ನದ ಗಿಳಿ ಜಪಸರ ಕರದೊಳಗಿರಿಸೀ 
ಎನ್ನಂಧಕಾರಾ ಕೀಳೇ ಚಿನ್ಮುದ್ರೆ ಧರಿಸಿಹಾ ||೨||

ಕರದೊಳು ಹಸಿರು ಬಳೆ ಘಲ ಘಲರೆನುತಿರೆ
ಪಾದದೀ ಗೆಜ್ಜೇ ಝಣ ಝಣ ಝಣರೆನುತೇ 
ವಜ್ರದ ಮೂಗುತಿ ಫಳ ಫಳ ಹೊಳೆದಿರೆ 
ಚಿನ್ನದ ಮೂಗುತಿ ನಿಘಿ ನಿಘಿ ಮಿನುಗುತಿಹಾ ||೩||

ರತ್ನದ ಜಢೆಬಿಲ್ಲೆ ಕೇಶರಾಶಿಯೊಳಗೆ 
ಮರಕತ ವೈಢೂರ್ಯದ ಮುಕುಟಾ ಶಿರದೊಳಿರೆ 
ನಡುವಿನಲಿ ನಾಗಾಭರಣ ಒಡ್ಯಾಣವಾಗಿರೆ 
ಪಚ್ಚೆ ನೀಲಗಳ ಸರ ಕಂಠದೀ ಮೆರೆಯುತಿರೇ ||೪||

ಕಂದನಂದದಿ ನಿನ್ನ ಹಾಲ್ಗಲ್ಲವ ಪಡಿದೂ 
ಗೋಗರೆದು ಬೇಡುವೆನೂ ಜ್ಞಾನಾ ನೀಡಿನ್ನೂ 
ಶೃಂಗೇರಿ ಪುರವಾಸೇ ಶಾರದಾಂಬೆಯೆ ನಿನ್ನ 
ನೋಡಲು ಕಣ್ಣೆರಡು ಸಾಲದು ಅಂಬಾಸುತನಿಗೆ||೪||  
ಗುರುನಾಥ ಗಾನಾಮೃತ 
ರಂಗ ಒಲಿವನೂ ಬೇಗ
ರಚನೆ: ಅಂಬಾಸುತ 

ರಂಗ ಒಲಿವನೂ ಬೇಗ
ಮನರಂಗೋಲಿಯ ಹಾಕೀರೇ 
ಚಿತ್ತದೊಳಗೇ ಚಿತ್ರಸುಚಿತ್ರದ
ರಂಗೋಲಿ ಹಾಕಿರೇ ||ಪ||

ಉದಯ ಕಾಲದಲೀ
ಲೋಕ ವಿಷಯದ ಕಸ ಗುಡಿಸೀ
ಮನ ನಿರ್ಮಲಗೊಳಿಸಲು 
ಗುರುನಾಮವೆಂಬಾ ಜಲವನು ಹಾಕುತಲೀ ||೧||

ಸಾತ್ವಿಕತೆಯೆಂಬಾ 
ಚುಕ್ಕಿ ಹಾಕುತಲೀ
ಸತ್ಸಂಗವೆಂಬಾ ಎಳೆಯಾ ಎಳೆದೂ
ಬಲು ಸಂಭ್ರಮದಿಂದಲೀ ||೨||

ಗುರುದೈವವ ನೆನೆದೂ
ಮನಭಾಸ್ಕರಗೆ ನಮಸ್ಕರಿಸೀ
ಸಿರಿಯೊಡನೆ ಬಾರಯ್ಯಾ 
ರಂಗಾ ಎಂದೂ ಬೇಡುತಲೀ ||೩||

Saturday, January 20, 2018

ಗುರುನಾಥ ಗಾನಾಮೃತ 
ಮನ್ನಿಸೆನ್ನ ಅಪರಾಧವ ಸದ್ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಮನ್ನಿಸೆನ್ನ ಅಪರಾಧವ  ಸದ್ಗುರುವೇ
ಮನ್ನಿಸೆನ್ನ ಅಪರಾಧವಾ ||

ಕಾರಣಪುರುಷನು ನೀನೆಂದರಿಯದೆ
ಲೋಕೋದ್ಧಾರಕನು ನೀನೆಂದು ತಿಳಿಯದೆ |
 ಭಕ್ತರುದ್ಧಾರಕೆ ಪಣ ತೊಟ್ಟಿಹೆನೆಂದರಿಯದೆ
ಮನುಷ್ಯಮಾತ್ರದಿಂ ಕಂಡೆನಲ್ಲಾ || ೧ ||

ಬಾಹ್ಯಾಲಂಕಾರಕೆ ಬೆಲೆಕೊಟ್ಟೆನಲ್ಲಾ
ನಿನ್ನ ಆಂತರ್ಯವನರಿಯದಾದೆನಲ್ಲಾ |
ನಿನ್ನ ಮಾತಿನ ಗೂಡಾರ್ಥಗಳ ತಿಳಿಯನಾದೆನಲ್ಲಾ 
‌ನಿನ್ನನೇ ಮೌಢ್ಯತೆಯಿಂ ನೋಡಿದೆನಲ್ಲಾ || ೨ ||

ಪುಣ್ಯಶಾಲಿಗಳಿಗೆ ಒಲಿವನು ನೀನೆಂದರಿಯಲಿಲ್ಲಾ
ನಿನ್ನೊಂದು ದೃಷ್ಟಿಯೇ ಅನುಗ್ರಹವೆಂದರಿಯಲಿಲ್ಲಾ |
ಸದಾ ಪೊರೆವ ಸದ್ಗುರುವೇ ನೀನೆಂದು  ತಿಳಿಯಲೇ ಇಲ್ಲ 
ನಿನ್ನ ಸರ್ವಜ್ಞ ಮಹಿಮೆಯ ತಿಳಿಯಲೇ ಇಲ್ಲ ... || ೩ ||
ಗುರುನಾಥ ಗಾನಾಮೃತ 
ತುಂಬಿಕೊಳಲೇ ನಿನ್ನ ಮೂರುತಿ ಎನ್ನ ಕಣ್ಣೊಳಗೇ
ರಚನೆ: ಅಂಬಾಸುತ 

ತುಂಬಿಕೊಳಲೇ ನಿನ್ನ ಮೂರುತಿ ಎನ್ನ ಕಣ್ಣೊಳಗೇ
ನೀ ತಾಯಿ ನಾ ಕಂದ ನಿಜಭಾವದೊಳಗೇ ||ಪ||

ಮಾಡಿದ ತಪ್ಪಿಗೇ ಶಿಕ್ಷೆಯಾ ನೀಡದೇ
ನಿನ್ನ ಮಡಿಲೊಳಗೆ ಇರಿಸೀ ಬುದ್ದಿಯಾ ಹೇಳಿದೇ
ಹಸಿವೆಂದು ಕೂಗುವಾ ಮೊದಲೆ ಅನ್ನವನಿತ್ತೇ
ಆಕಳಿಸೇ ಬಳಿ ಕರೆದೂ ಲಾಲಿ ನೀ ಹಾಡಿದೇ ||೧||

ಕೈಹಿಡಿದು ನೆಡೆಸಿದೇ ಕನಿಕರವ ತೋರಿಸುತಾ
ಒಳ್ಳೆ ಹೆಸರಿನಿತ್ತೆ ಬಾಳ ಹಸಿರು ಮಾಡುತಲೀ
ಬೇಡಿಸಿ ಕೊಳ್ಳದೇ ಬೇಡಿಕೆಗಳಾ ಪೂರೈಸಿದೆ
ಮೈದಡವಿದೇ ಮನದಾ ಒಳಗೆ ನೀ ನಿಂತೇ ||೨||

ಅಮ್ಮಾ ಎನಲೇ ನಿನ್ನಾ ಗುರುನಾಥ ಎನಲೇ
ಗತಿ ನೀನು ಎನಲೇ ಸನ್ಮತಿದಾಯಕನೂ ಎನಲೇ
ಅಂಬಾಸುತನಾ ಉಸಿರು ಉಸಿರೊಳಗೂ ನೀನೆನಲೇ
ನಿನ್ನ ಹೆಸರೇ ಎಮಗೆ ಅಮೃತವು ಎನಲೇ ||೩||
ಗುರುನಾಥ ಗಾನಾಮೃತ 
ಮೋಸ ಹೋದೆ ನಾನೂ
ರಚನೆ: ಅಂಬಾಸುತ 

ಮೋಸ ಹೋದೆ ನಾನೂ
ಸದ್ಗುರುವಿನ ದಾಸನಾಗದೇ||ಪ||
ಕಾಸು ಕಾಸೆನ್ನುತಾ ಕಾಲ ಕಳೆದೆನೋ
ಲೇಸಾಗಿ ಗುರುಸ್ಮರಣೇ ಮಾಡುವುದನೆ ಬಿಟ್ಟೂ ||ಅ ಪ||

ಗುರುಪಾದ ಪಿಡಿಯಲಿಲ್ಲಾ ಗುರುಪದ ಕೇಳಲಿಲ್ಲಾ
ಗುರುಮನೆ ಹೊಕ್ಕಲಿಲ್ಲಾ ಗುರುನಾಥ ಎನ್ನಲಿಲ್ಲಾ ||೧||

ಗುರುವೆಂದರೆ ಕಾವಿ ತೊಟ್ಟವನೆಂದುಕೊಂಡೇ
ಕಲ್ಲುಸಕ್ಕರೆ ಹಣ್ಣೂ ನೀಡುವವನೆಂದುಕೊಂಡೇ ||೨||

ಅರಿವಿನ ದೊರೆ ಗುರು ಎಂಬುದ ಅರಿಯಾಲಿಲ್ಲಾ
ಮೋಹ ದಾಹದ ಪಾಶದೊಳಗೆ ಸಿಲುಕಿದೆನಲ್ಲಾ ||೩||

ಗುರು ತಂದೆತಾಯಿಯೂ ಗುರು ಬಂಧುಬಳಗವೂ
ಗುರು ಸಖಸಖಿಯೂ ಎಂಬುದ ತಿಳಿಯದೇ ||೪||

ಶುದ್ಧಭಾವದಿಂದಾ ನಿನಗೆ ಬದ್ಧನಾಗದೇ
ಕ್ಷುದ್ರನಾದೆನಲ್ಲಾ ವಿರುದ್ದಭಾವ ತಳೆದೂ ||೫||

ಸಖರಾಯಪುರಾಧೀಶಾ ಸದ್ಗುರುನಾಥನೇ
ಈ ಅಂಬಾಸುತ ನಿನ್ನ ತತ್ವ ಅರಿಯದೆಲೇ ||೬||
ಗುರುನಾಥ ಗಾನಾಮೃತ 
ಬೇಗನೆ ಬಾರೋ ಗುರುನಾಥಾ ಅವಧೂತಾ
ರಚನೆ: ಅಂಬಾಸುತ 

ಬೇಗನೆ ಬಾರೋ ಗುರುನಾಥಾ ಅವಧೂತಾ
ಬಾಧಿಪುದೀ ಭವ ಬಹಳಾಂತ ||ಪ||

ಹುಟ್ಟು ಸಾವಿನ ನಡುವೇ ಕೆಟ್ಟ ರೋಗಾರುಜಿನಾ
ಕಟ್ಟಳೆ ಇಲ್ಲದ ಈ ಬದುಕೂ
ಬಟ್ಟೆ ಕಟ್ಟಿ ಕಣ್ಣಿಗೆ ಅಡವಿಗೆ ಬಿಟ್ಟಂತಾಗಿದೇ
ದುಷ್ಟತನವಾ ಕುಟ್ಟಿ ಕಣ್ತೆರೆಸಲೂ ಬಾರೋ ||೧||

ರಾಮನಾಮ ನೆನೆಯೋ ನಾಲಿಗೆ ರುಚಿ ಹುಡುಕೀ
ನಾನಾ ಕಡೆ ತಿರುಗಿಹುದಯ್ಯಾ
ಕಾಮಾದಿ ದಾನವರು ಪ್ರೇಮ ತೋರುತಾ ಮನವಾ
ಸೆರೆಹಿಡಿದಿಹರೂ ಬಿಡಿಸಲು ಬಾರೋ ||೨||

ಬಂಧುಬಾಂಧವರು ತಾವ್ ಬಂದ್ಹೋದರೂ
ಇದ್ದ ಸಾಧನೆಯಾ ಕದ್ದೊಯ್ದರೂ
ಆತ್ಮಬಂಧು ನಿನ್ನ ಹೊರೆತೂ ನಾ ಯಾರನು ಕಾಣೇ
ಎನ್ನನುದ್ಧರಿಸಲು ನೀ ಬೇಗ ಬಾರೋ ||೩||

ಸಖರಾಯಪುರದಿಂದ ಸದ್ಗುರುನಾಥನೇ
ಅಂಬಾಸುತನ ಈ ಮನಮನೆಗೇ
ಕರುವಾ ದನಿಯಾ ಕೇಳಿ ಬರುವಾ ಧೇನುವಂತೇ
ಕಲಿಯುಗದಾ ಕಾಮಧೇನು ನೀ ಬಾರೋ ||೪||
ಗುರುನಾಥ ಗಾನಾಮೃತ 
ನಿನ್ನ ಸೇವೆ ಇರಲೀ ನಿರಂತರಾ
ರಚನೆ: ಅಂಬಾಸುತ 

ನಿನ್ನ ಸೇವೆ ಇರಲೀ ನಿರಂತರಾ
ಕಾಪಿಟ್ಟು ಸಲಹೋ ದಯಾಕರಾ ||ಪ||

ಧನದಾಸೆಗೇ ದುರ್ಜನರಡಿಯಾಳಾಗೀ
ಇರಲಾರೆನಯ್ಯಾ ಗುರುವರಾ
ಕ್ಷಣಿಕಾದ ಸುಖಕೇ ಹಲವೂ ಕ್ಷಣಗಳನೂ
ನಿನ್ನ ಮರೆತಿರಲಾರೆ ಗುಣಾಕರಾ ||೧||

ಮಡದಿ ಮಕ್ಕಳೆಂಬಾ ಮೋಹಾವ ತುಂಬಿಕೊಂಡೂ
ನಿನ್ನ ಮರೆಯಲಾರೆನೋ ಜಗದಾಧಾರಾ
ರುಚಿಯಾ ಹುಡುಕುತಲಿ ವಿಚಾರ ಮಾಡದೇ
ನಿನ್ನ ಸಂಘ ತೊರೆಯೆನೋ ಹೇ ಸುಂದರಾ ||೨||

ಹೆಸರೂ ಉಸಿರಿಗಾಗೀ ಹಲವರ ಕಾಲ್ಪಿಡಿದೂ
ನಿನ್ನ ತೆಗಳಲಾರೆನೋ ಸುಖಸಾರಾ
ಪಾಪ ಕೋಪಗಳನು ಮೈಮೇಲೆ ಎಳೆದುಕೊಂಡೂ
ನಿನ್ನ ಪರಂಧಾಮಕೇ ಬಾರದಿರೆನೋ ಕರುಣಾಕರಾ ||೩||

ನಿತ್ಯ ಸತ್ಯ ಚಿತ್ತ ಆನಂದ ರೂಪಾ
ಅಂಬಾಸುತನ ಬಾಳ ಬೆಳಗೋ ಪ್ರದೀಪಾ
ಸಖರಾಯಪುರಾಧೀಶಾ ಸದ್ಗುರುನಾಥಾ
ನಿನ್ನ ಪಾದದಡಿಯೊಳು ಎನ್ನ ಇರಿಸೋ ಘನಸಾರಾ ||೪||
ಗುರುನಾಥ ಗಾನಾಮೃತ 
ಸಾಕು ಸಾಕು ಬಿಡೋ ನಾನೆಂಬಹಂಕಾರ
ರಚನೆ: ಅಂಬಾಸುತ 

ಸಾಕು ಸಾಕು ಬಿಡೋ ನಾನೆಂಬಹಂಕಾರ
ಭೂಷಣವಲ್ಲ ನಿನಗದುವೇ
ನಿತ್ಯ ದೈವ ಗುರು ಸ್ಮರಣೆಯ ಮಾಡುವೀ
ಅನಿತ್ಯದಾ ಈ ಮಾತೇಕೇ ||

ಹುಟ್ಟಿದೆ ಬರಿಗೈಲಿ ನೀ ನಾಳೇ
ಪೋಗುವೆ ಮತ್ತದೇ ಬರಿಗೈಯಲೀ
ಪುಟ್ಟಿಸಿದವರ್ಯಾರೋ ನಿನ್ನನು ನೆನ್ನೇ
ಪಟ್ಟದ ಮಾತೇಕೆ ನೀನಾಡುವೀ ||

ನೀ ತಿನ್ನೋ ಅನ್ನವ ಬೆಳೆದವರ್ಯಾರೋ
ನೀ ಉಟ್ಟ ವಸ್ತ್ರವ ನೇಯ್ದವರ್ಯಾರೋ
ನೀ ಇಟ್ಟ ವಿತ್ತವ ಕೊಟ್ಟವರ್ಯಾರೋ
ನಾಳೆ ಕಸಿದು ದೂರಿರಿಸುವರ್ಯಾರೋ ||

ನಿನ್ನದೆನುವ ತಂದೆ ತಾಯಿ ಸತಿ ಸುತರು
ಅಮರರೇ ಈ ಜಗದೊಳಗೇ
ನೀ ಕಟ್ಟಿದಾ ಸೌಧ ಬಿರುಕು ಬಿಡದೆಯೇ
ಉಳಿಯುವುದೇ ಕೆಲದಿನದೊಳಗೇ ||

ನೀನೇನ ಸೃಷ್ಠಿಸಿದೆ ನೀನೇನ ಪಾಲಿಸಿದೇ
ಕುಳಿತು ಚಿಂತಿಸು ಮನದೊಳಗೇ
ಲೋಕೋದ್ಧಾರಕ ಪರಮಾತ್ಮನೀ ಕಾರ್ಯಾ
ಮಾಡಿಹನೋ ನಿನಗೆಂದೇ ||

ನೀ ಸುಟ್ಟು ಬೂದಿಯಾಗೆ ಮರೆವರೆಲ್ಲ ನಿನ್ನ
ವೈದೀಕದ ಭಕ್ಷಗಳೊಡನೇ
ನಿನ್ನಿಚ್ಚೆ ಜಗವಿಹುದು ನೀನೆಡೆಸಿದಂತಿಹುದೂ
ಅಂಬೆ ನೀ ಸುತ ನಾ ಎನುತಿರು ಮನವೇ ||

Friday, January 19, 2018

ಗುರುನಾಥ ಗಾನಾಮೃತ 
ಬೃಂದಾವನದ ಒಳಗೆ ಏಕೆ ಪೋದೆ
ರಚನೆ: ಅಂಬಾಸುತ 

ಬೃಂದಾವನದ ಒಳಗೆ ಏಕೆ ಪೋದೆ
ಬಹು ವಿಧದಿ ಭಜಿಪ ಭಕುತ ಸಂಘವಾ ತ್ಯಜಿಸೀ ||ಪ||

ಸಗುಣ ನಿರ್ಗುಣವೆಂಬಾ ಸೂಕ್ಷ್ಮತೆಯ ನಾನರಿಯೇ
ನಿನ್ನ ಸನ್ನಿಧಾನವನ್ನೇ ಬಯಸಿ ನಾ ಬಂದಿಹೇ
ಹೀಗೆ ನೀ ಮರೆಯಾದರೇ ನಾ ಹೇಗೆ ಇರಲಯ್ಯಾ
ಎದ್ದು ಬಂದು ಬೇಗ ನಿನ್ನ ವದನ ತೋರಯ್ಯಾ ||೧||

ಏಕಾಂತ ಬಯಸಿದೆಯಾ ಶ್ರೀಕಾಂತನಾ ರೂಪಿ
ಸಾತ್ವಾಂತ ಪೇಳ್ವರಾ ನಾನಿಲ್ಲಿ ಕಾಣೆನೋ
ಒಂದು ಮಾತನೂ ಹೇಳದೇ ನೀ ಹೀಗೆ ಮರೆಯಾದರೇ
ನಾ ಹೇಗೆ ಸಹಿಸಲೋ ನಾ ಹೇಗೆ ಬಾಳಲೋ ||೨||

ಎನ್ನೊಡನೆ ನೀನಿರುವೆ ಎಂಬ ಭಾವ ಸುಲಭವಲ್ಲಾ
ಸಾಧಕನ ಮಾತದೂ ಎನಗೊಂದು ತಿಳಿಯದೂ
ಗುರುನಾಥ ಗುರುನಾಥಾ ಎನು ಹಂಬಲಿಸುತಲೀ
ಕರೆದಿಹನೋ ಅಂಬಾಸುತ ಬಾರೈ ಅವಧೂತಾ ||೩||
ಗುರುನಾಥ ಗಾನಾಮೃತ 
ಏಕೆ ಚಿಂತೆ ಮಾಡುತೀಯಾ ತಂಗಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಏಕೆ ಚಿಂತೆ ಮಾಡುತೀಯಾ ತಂಗಿ
ಗುರುನಾಥರು ಜೊತೆಗಿರುವಾಗ
ಚಿಂತೆ ಯಾಕೆ ಮಾಡುತೀಯಮ್ಮಾ ||

ಭವದ ಸುಳಿಗೆ ಬಿದ್ದ ಜನಕೆ
ಅದನು ದಾಟುವ ತೀರದ ಬಯಕೆ |
ಚಿಂತೆಯನ್ನು ದೂಡು ದೂರಕೆ  
ಅರ್ಪಿಸೆಲ್ಲವ ಅವನ ಪಾದಕೆ || ೧ ||

ಮಾಯೆಯಾ ಜಗವಿದಮ್ಮಾ 
ಭ್ರಮೆಯನು ದೂರವಿಡಮ್ಮಾ |
ಗುರುವೇ ನಮಗೆ ಈಶ್ವರ 
ಭೋಗವೆಲ್ಲ ಜಗದಿ ನಶ್ವರ || ೨ ||

ನಾಮವೊಂದೇ ಇಲ್ಲಿ ಶಾಶ್ವತ 
ಜಪಿಸು ಅದ ನೀ ಅನವರತ |
ನಾಮವೇ ನರಜನ್ಮತಾರಕ
ಆಗಲದು ಬಂಧಮೋಚಕ || ೩ ||

Thursday, January 18, 2018

ಗುರುನಾಥ ಗಾನಾಮೃತ 
ಬಂದ ಬಂದಾ ಗುರುನಾಥ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಬಂದ ಬಂದಾ ಗುರುನಾಥ 
ಸಂತಸದಿ ಅವಧೂತ 
ನಮ್ಮ ಮನೆಗೆ || 

ಆ‌ನಂದಾಶೃವಿನಲಿ ನಯನ ಕೂಡಿತ್ತು
ಮನವು ಗುರುನಾಥನ ನೆನೆದಿತ್ತು |
ಜೀವನದ ಅಮೂಲ್ಯರತುನ ಸಿಕ್ಕಿತ್ತು
ಎನ್ನೊಡೆಯ ನಗುತ ಬಂದ ನಮ್ಮನೆಗೆ || ೧ ||

ಇಷ್ಟುದಿನದ ಪ್ರತೀಕ್ಷೆಗೆ ಫಲವು ಸಿಕ್ಕಿತು
ಚಿತ್ತದೊಳಗಿನ ದೇವ ಮೂರುತಿ ಎದುರಿತ್ತು !
ಹೃದಯ ಮೌನದಲಿ ಧನ್ಯತೆ ಪಡೆದಿತ್ತು 
ನನ್ನೊಡೆಯ ನಗುತ ಬಂದ ನಮ್ಮ ಮನೆಗೆ || ೨ ||

ನಿನ್ನ ಸ್ಮರಣೆಯಿಲ್ಲದೆ ಜೀವನವಿಲ್ಲ ನನಗೆ
ನೀನಲ್ಲದೆ ಮತ್ಯಾರು ರಕ್ಷಕರು ನ‌ನಗೆ |
ಇಹಪರಕು ಗತಿನೀನೇ ಸದ್ಗುರುವೇ 
ನಿನ್ನಡಿಯ ಬಿಟ್ಟು ಹೋಗಲಾರೆ ನಾನೆಲ್ಲಿಗೂ || ೩ ।।

ಸುಲಭಕೆ ಬಾರರಂತೆ ಇವರು
ಮನಶುದ್ದಿಮಾಡುತಾ ಬರುವರಂತೆ ।
ಯಾವ ಹಿರಿಯರು ಮಾಡಿದ ಪುಣ್ಯವೋ 
ಸಂತಸದಿ ಗುರುನಾಥ ಬಂದ ಮನೆಗೆ ।। ೪ ।।