ಗುರುನಾಥ ಗಾನಾಮೃತ
ಎನಿತು ವರ್ಣಿಸಲಿ ತಾಯೇ ಈ ನಿನ್ನ ರೂಪವಾ
ರಚನೆ: ಅಂಬಾಸುತ
ಎನಿತು ವರ್ಣಿಸಲಿ ತಾಯೇ ಈ ನಿನ್ನ ರೂಪವಾ
ರಾಗ ಭಾವವ ತುಂಬಿ ಪಾಡುವ ಆಸೆ ಎನಗೆ ||ಪ||
ಪಟ್ಟೆ ಪೀತಾಂಬರ ಉಟ್ಟು ಪುಟ್ಟ ಕಾಲುಂಗುರ ತೊಟ್ಟು
ಶೋಢಶ ತಾಂಬೂಲ ಕುಟ್ಟಿ ಬಾಯೊಳಗಿಟ್ಟು
ಉದಯಿಸುತಿಹಾ ಸೂರ್ಯನ ತಿಲಕ ಮಾಡಿಟ್ಟುಕೊಳುತಾ
ತಂಪಾದ ಚಂದ್ರನ ಶಿರದೊಳು ಮುಡಿದಿರೇ ||೧||
ಕಪ್ಪು ಕಾಡಿಗೆಯಾ ಕಣ್ಣೆರಡರೊಳು ಪೂಸೀ
ಆ ಮದನನ ಬಿಲ್ಲಾ ಹುಬ್ಬಾಗೀ ಧರಿಸೀ
ಚಿನ್ನದ ಗಿಳಿ ಜಪಸರ ಕರದೊಳಗಿರಿಸೀ
ಎನ್ನಂಧಕಾರಾ ಕೀಳೇ ಚಿನ್ಮುದ್ರೆ ಧರಿಸಿಹಾ ||೨||
ಕರದೊಳು ಹಸಿರು ಬಳೆ ಘಲ ಘಲರೆನುತಿರೆ
ಪಾದದೀ ಗೆಜ್ಜೇ ಝಣ ಝಣ ಝಣರೆನುತೇ
ವಜ್ರದ ಮೂಗುತಿ ಫಳ ಫಳ ಹೊಳೆದಿರೆ
ಚಿನ್ನದ ಮೂಗುತಿ ನಿಘಿ ನಿಘಿ ಮಿನುಗುತಿಹಾ ||೩||
ರತ್ನದ ಜಢೆಬಿಲ್ಲೆ ಕೇಶರಾಶಿಯೊಳಗೆ
ಮರಕತ ವೈಢೂರ್ಯದ ಮುಕುಟಾ ಶಿರದೊಳಿರೆ
ನಡುವಿನಲಿ ನಾಗಾಭರಣ ಒಡ್ಯಾಣವಾಗಿರೆ
ಪಚ್ಚೆ ನೀಲಗಳ ಸರ ಕಂಠದೀ ಮೆರೆಯುತಿರೇ ||೪||
ಕಂದನಂದದಿ ನಿನ್ನ ಹಾಲ್ಗಲ್ಲವ ಪಡಿದೂ
ಗೋಗರೆದು ಬೇಡುವೆನೂ ಜ್ಞಾನಾ ನೀಡಿನ್ನೂ
ಶೃಂಗೇರಿ ಪುರವಾಸೇ ಶಾರದಾಂಬೆಯೆ ನಿನ್ನ
ನೋಡಲು ಕಣ್ಣೆರಡು ಸಾಲದು ಅಂಬಾಸುತನಿಗೆ||೪||
No comments:
Post a Comment