ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 147
ಗ್ರಂಥ ರಚನೆ - ಚರಣದಾಸ
ಬೆಳ್ಳಿ ಲೋಟ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ರೇಷ್ಮೆ ವ್ಯಾಪಾರ ನಡೆಸುತ್ತಿದ್ದ ಆತ ಮೂಲತಃ ಮಲೆನಾಡು ಮೂಲದವರು. ನನಗೆ ಹಳೆಯ ಪರಿಚದವರಾಗಿದ್ದರೂ ಅವರ ಅನುಭವ ಕೇಳುವ ಅವಕಾಶ ಸಿಕ್ಕಿರಲಿಲ್ಲ. ಇತ್ತೀಚೆಗೆ ಭೇಟಿ ಆದ ಆತ ತಮ್ಮ ಅನುಭವವನ್ನು ಈ ರೀತಿ ಹೇಳತೊಡಗಿದರು. ನೋಡಿ, ನನಗೆ ಮೊತ್ತ ಮೊದಲು ಗುರುನಾಥರ ದರ್ಶನವಾದದ್ದು ಬಹುಶಃ 1997 ರಲ್ಲಿ ಅನಿಸುತ್ತೆ. ಅಂದು ನನ್ನ ಸಂಬಂಧಿಯೊಂದಿಗೆ ಹೋದಾಗ ನನಗೆ ಗುರುಗಳ ಮೇಲೆ ನಂಬಿಕೆ ಇರಲಿಲ್ಲ. ಆದರೆ ಆ ನಂತರ ನಡೆದ ಘಟನಾವಳಿಗಳು ನನ್ನನ್ನು ಪರಿಪೂರ್ಣವಾಗಿ ಗುರುವಿಗೆ ಶರಣಾಗುವಂತೆ ಮಾಡಿತು.
ನನ್ನ ನೋಡಿದಾಕ್ಷಣ ಗುರುನಾಥರು "ಏನು ಕಾಲು ನೋವಲ್ಲವೇ?" ಎಂದು ಕೇಳಿ ಎರಡು ಬಾಳೆಹಣ್ಣು ನೀಡಿದರು. ಅದೇ ಕೊನೆ, ಮತ್ತೆಂದೂ ನನಗೆ ಕಾಲು ನೋವು ಬಾಧಿಸಲಿಲ್ಲ. ಅದಕ್ಕೂ ಮೊದಲು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ನನಗೆ ಕೆಳಗೆ ಕೂರಲಾಗುತ್ತಿರಲಿಲ್ಲ. ಹೀಗೆ ಒಂದು ಘಟನೆಯಿಂದ ನನ್ನ ಬಾಳಗತಿಯನ್ನೇ ಬದಲಿಸಿದ ಆ ಗುರುವನ್ನು ಅರಿಯಲು ಇಂದಿಗೂ ಪ್ರಯತ್ನಿಸುತ್ತಿದ್ದೇನೆ.
ಮತ್ತೊಮ್ಮೆ ನಮ್ಮೂರಿಗೆ ಬಂದು ನನ್ನ ಹೆಂಡತಿಯ ಊರಿಗೆ ಹೊರಟ ನನ್ನನ್ನು ಗುರುಗಳು "ನೀ ಅಲ್ಲಿಗೆ ಹೋಗಬೇಡ" ಎಂದು ಹೇಳಿದರೂ ನಾನು ಕೇಳದೆ ಹೆಂಡತಿಯೊಂದಿಗೆ ಹೋಗಿ ಕಾರನ್ನು ಅಲ್ಲೇ ಬಿಟ್ಟು ಗುರುನಿವಾಸಕ್ಕೆ ಬಂದೆ. ನನ್ನನ್ನು ಗುರುನಾಥರು ನಾಲ್ಕು ದಿನ ಜೊತೆಯಲ್ಲಿಯೇ ಇರಿಸಿಕೊಂಡು ನಂತರ ಕಳಿಸಿಕೊಟ್ಟರು. ನಾನು ಹೆಂಡತಿಯ ತವರಿಗೆ ಹೋಗಿ ಕುಟುಂಬದೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಟೆ. ತುಸು ಹೊತ್ತು ನನ್ನ ತೊಡೆ ಮೇಲೆ ಕುಳಿತಿದ್ದ ನನ್ನ ಮಗು ನಂತರ ಹಿಂದಿನ ಸೀಟಿಗೆ ತೆರಳಿತು. ಅದಾಗಿ ಕೆಲವೇ ಕ್ಷಣದಲ್ಲಿ ಎದುರಿನಿಂದ ಬಂದ ಲಾರಿಯೊಂದು ನನ್ನ ಕಾರಿಗೆ ಢಿಕ್ಕಿ ಹೊಡೆದು ನಮ್ಮ ಕಾರು ನುಜ್ಜು-ಗುಜ್ಜಾಯಿತು. ಮಗು ಹಾಗೂ ನಮ್ಮೆಲ್ಲರ ಪ್ರಾಣ ಉಳಿಯಿತು. ಆ ನಂತರ ಕಾರನ್ನು ಚಿಕ್ಕಮಗಳೂರಿನಲ್ಲಿ ರಿಪೇರಿಗೆ ಬಿಟ್ಟು ಗುರುನಿವಾಸಕ್ಕೆ ಬಂದೆ.
ಅಪಘಾತದ ವಿಷಯ ತಿಳಿದ ಗುರುನಾಥರು "ಅಯ್ಯಾ, ನಿನ್ನ ಕಾರಿನಲ್ಲಿ ರಕ್ತ ಕಾಣುತ್ತಿತ್ತು ಕಣಯ್ಯಾ... ಅದಕ್ಕೆ ಕಾರು ತಗೊಂಡು ಹೋಗಬೇಡ ಅಂದಿದ್ದು. ನೀ ಬರೋ ತನಕ ನನಗೆ ಯೋಚನೆ ಆಗಿತ್ತು" ಅಂದ್ರು. ನಮ್ಮೆಲ್ಲರ ಜೀವ ಉಳಿಸಿದ ಆ ಗುರುವಿನ ಮೇಲೆ ನನ್ನ ನಂಬುಗೆ ಮತ್ತಷ್ಟು ದೃಢವಾಯಿತು.
ಮತ್ತೊಮ್ಮೆ ನಮ್ಮ ಮನೆಗೆ ಬಂದಿದ್ರು. ಎಂಟನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳನ್ನು ವಾತ್ಸಲ್ಯದಿಂದ ತೊಡೆಯ ಮೇಲೆ ಕೂರಿಸಿಕೊಂಡು ಹಾಲು ಕುಡಿಸಿದ ಗುರುಗಳು ಅವಳಿಗೆ "ನೀ ಹತ್ತನೇ ತರಗತಿಯಲ್ಲಿ 98% ಪಿಯುಸಿಯಲ್ಲಿ 97% ಅಂಕ ಪಡೀತೀಯ. ಡಾಕ್ಟರ್ ಆಗ್ತೀಯ" ಎಂದು ಆಶೀರ್ವದಿಸಿದರು. ಇಂದು ಆಕೆ ಗುರುಕೃಪೆಯಿಂದ ಎಂ.ಬಿ.ಬಿ.ಎಸ್ ಓದುತ್ತಿರುವಳು. ನಮ್ಮ ಮನೆಗೆ ಬಂದ ಗುರುವಿಗೆ ಏನು ನೀಡಬೇಕೆಂದು ತೋಚದೆ ಮನೆಯಲ್ಲಿದ್ದ ಒಂದು ಬೆಳ್ಳಿ ಲೋಟವನ್ನು ಗುರುವಿಗೆ ಸಮರ್ಪಿಸಿದೆ.
ಕೂಡಲೇ ಗುರುಗಳು "ಈ ಲೋಟ ನಿನಗೆ ನಿನ್ನ ಅಕ್ಕ ಕೊಟ್ಟಿದ್ದು ಅಲ್ಲವೇ? ಅಕ್ಕನ ಅನುಮತಿ ಪಡೆದು ಈ ಲೋಟವನ್ನು ಅದ್ವೈತ ಪೀಠದ ಯತಿವರೇಣ್ಯರಿಗೆ ಸಮರ್ಪಿಸು. ಇದರಲ್ಲೇ ಹಾಲು ಕುಡಿಯುವಂತೆ ವಿನಂತಿಸು" ಅಂದ್ರು. ಆದರೆ ನನಗೆ ಕಾರಣಾಂತರದಿಂದ ಅದ್ವೈತ ಪೀಠಕ್ಕೆ ಹೋಗೋಕಾಗಲಿಲ್ಲ. ಆಗ ಗುರುನಾಥರೇ ಒಮ್ಮೆ ನನ್ನ ಕರೆಸಿಕೊಂಡು ಅದ್ವೈತ ಪೀಠಕ್ಕೆ ಬೆಳ್ಳಿ ಲೋಟವನ್ನು ಸಮರ್ಪಿಸುವ ಅವಕಾಶ ಮಾಡಿಕೊಟ್ಟರು. "ಹೀಗೆ ಶಿಷ್ಯರಿಗೆ ಮಾಡೆಂದು ಅವರೇ ಹೇಳಿದ ಮಾತನ್ನು ನಾವು ಮರೆತರೂ ನಮ್ಮ ಉದ್ಧಾರಕ್ಕಾಗಿ ತಾನೇ ಮುಂದೆ ನಿಂತು ನಡೆಸುತ್ತಿದ್ದ ಇಂತಹ ಶ್ರೇಷ್ಠ ಸದ್ಗುರು ಅತಿ ವಿರಳ" . ನಾನು ಯಾವ ದೇವರನ್ನು ನಂಬುತ್ತೀನೋ ಇಲ್ಲವೋ..... ಆದರೆ ಆತನ ಸಂಗವಿರದೇ ನನ್ನ ಜೀವನ ಇಲ್ಲ. ಅದೆಂತಹ ಕಷ್ಟವಿದ್ದರೂ ಅವನೇ ನಮ್ಮುಸಿರು.... ಎಂದು ಹೇಳಿ ಮೌನಕ್ಕೆ ಶರಣಾದರು....,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/