ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 146
ಗ್ರಂಥ ರಚನೆ - ಚರಣದಾಸ
ನೀನು ನೀನಾಗಿರು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ವ್ಯಕ್ತಿಯನ್ನು ಯಾವಾಗಲೋ ಒಮ್ಮೆ ಗುರುನಿವಾಸದಲ್ಲಿ ನೋಡಿದ ನೆನಪು. ಸರಳ ಹಾಗೂ ಮಿತ ಭಾಷಿಯಂತೆ ಕಂಡಿದ್ದರು. ಇವರ ಸೋದರಿಯ ಮೂಲಕ ಇತ್ತೀಚೆಗೆ ಇವರ ಸಂಪರ್ಕ ಸಾಧ್ಯವಾಯಿತು. ಇವರು ಗುರುನಾಥರ ಬಾಲ್ಯದ ಸಹಪಾಠಿಯಾಗಿದ್ದು "ನಿಮ್ಮ ಬಾಲ್ಯದ ಅನುಭವ ಹೇಳುತ್ತೀರಾ?" ಎಂಬ ನನ್ನ ಪ್ರಶ್ನೆಗೆ ಆತ "ನಾನು ಅಂತಹ ಯೋಗಿ ಪುರುಷನ ಸ್ನೇಹಿತ ಎಂಬುದಷ್ಟೇ ಸಾಕು ನಂಗೆ... ನನ್ನ ಜನ್ಮ ಸಾರ್ಥಕ" ಎಂದು ನುಡಿದು ಮೌನವಾದರು. ಮತ್ತೆ ಬಾಲ್ಯವನ್ನು ನೆನೆದು ಹೀಗೆ ಹೇಳತೊಡಗಿದರು. ಕಡೂರು ನನ್ನ ಹುಟ್ಟೂರಾಗಿದ್ದು ನಾನು, ಗುರುನಾಥರ ಬಾಲ್ಯದ ಒಡನಾಡಿಯಾಗಿದ್ದೆ. ನನ್ನ ತಾಯಿ ಹುಟ್ಟೂರು ಸಖರಾಯಪಟ್ಟಣವಾದದ್ದರಿಂದ ರಜಾ ದಿನಗಳಲ್ಲಿ ನಾನು "ಅವರು" ಒಟ್ಟಾಗುತ್ತಿದ್ದೆವು.
ಆಟ-ಪಾಠಗಳಲ್ಲಿ ತುಂಟುತನವಿತ್ತಾದರೂ "ಅವರಲ್ಲಿ" ಯಾವುದೇ ಆಕ್ರಮಣಕಾರಿ ಭಾವ ಇರಲಿಲ್ಲ.
ನಾವೆಲ್ಲರೂ ಸೇರಿ ಆಡುತ್ತಿದ್ದ "ಲಗ್ಗೆ" ಎಂಬ ಚೆಂಡಾಟ ಸ್ಮರಣೀಯವಾದದ್ದು. ಸುಮಾರು ಮೂರು ದಶಕದ ನಂತರ ಭೇಟಿಯಾದಾಗ ಗುರುನಾಥರು ಈ ಎಲ್ಲಾ ಆಟಗಳನ್ನು ನೆನಪಿಸಿಕೊಂಡು ನಾನು ಬಿದ್ದು ಗಾಯಗೊಂಡು ಅಳುತ್ತಿದ್ದುದನ್ನು ನೆನೆದು ನಕ್ಕರು. ಒಮ್ಮೆ ಸ್ನೇಹಿತನ ಮಾವಿನ ತೋಪಿನಲ್ಲಿ ಬಹಳ ಹೊತ್ತು ಮರಕೋತಿ ಆಟ ಆಡಿದೆವು. ತಂಡ ತಿಂಡಿ ಎಲ್ಲ ಖಾಲಿಯಾಗಿ ಮರದಲ್ಲಿದ್ದ ಹಣ್ಣುಗಳನ್ನು ಕಿತ್ತು ತಿಂದೆವು. ಅವರು ಮಾತ್ರ ಹಣ್ಣು ತಿನ್ನಲಿಲ್ಲ. ಅವರ ಸೌಮ್ಯತೆ, ಚುರುಕು ಬುದ್ದಿ ಮತ್ತು ಗಣಿತದ ಲೆಕ್ಕವನ್ನು ಶೀಘ್ರವಾಗಿ ಪರಿಹರಿಸುತ್ತಿದ್ದ ರೀತಿ ಇತರರಲ್ಲಿ ಅಸೂಯೆ ಮೂಡುವಂತಿತ್ತು.
ಯಾವುದೇ ಸಾಮೂಹಿಕ ಕಾರ್ಯಕ್ರಮ ಹಾಗೂ ಯಾರದೇ ಮನೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದು ಎಲ್ಲರ ನೋವು ನಲಿವುಗಳಿಗೆ ಸ್ಪಂದಿಸುವ ಹಾಗೂ ಪರಸ್ಪರರಲ್ಲಿ ವಿಶ್ವಾಸ ನಮ್ಮ ನಡೆ ನುಡಿಗಳಲ್ಲಿ ಸೇರಿ ಹೋಗಿತ್ತು. ಒಮ್ಮೆ ಬೆಂಗಳೂರಿನಲ್ಲಿ ಇದ್ದಾಗ ನನ್ನನ್ನು ಕರೆಸಿಕೊಂಡು "ಅಯ್ಯಾ ನಿನ್ನ ನೋಡಿ ಹದಿನಾಲ್ಕು ವರ್ಷವಾಗಿತ್ತಲ್ಲವೇ? ಅದಕ್ಕೆ ಹೇಳಿ ಕಳುಹಿಸಿದೆ" ಅಂದ್ರು. ಬಾಲ್ಯದ ಗೆಳೆಯನಾಗಿದ್ದ ಆತ ವೇದ ಬ್ರಹ್ಮನಾಗಿ, ಅವಧೂತನಾಗಿ ಆವಿರ್ಭವಿಸಿದ ವಿಷಯ ನನ್ನ ಮಂದಬುದ್ಧಿಗೆ ಹೊಳೆಯಲಿಲ್ಲ.
ಮತ್ತೆ ಕೆಲ ವರ್ಷದ ನಂತರ ಅವರ ತಂಗಿಯ ಮನೆಯಲ್ಲಿ ಅವರ ದರ್ಶನವಾದರೂ ನನ್ನ ತಂಗಿ ಆ ಸಾಧು ಯಾರೆಂದು ಹೇಳುವವರೆಗೂ ನಂಗೆ ಗೊತ್ತಿರಲಿಲ್ಲ. ಆ ಸಾಧು ನನ್ನ ಬರಸೆಳೆದು ಅಪ್ಪಿಕೊಂಡು ಸಿಹಿ ತಿನಿಸಿದರು. ಆಗಲೇ ಗೊತ್ತಾಗಿದ್ದು ಅವರು ನನ್ನ ಬಾಲ್ಯ ಗೆಳೆಯನೆಂದು. ನಾನೆಂತ ಪುಣ್ಯವಂತನೆಂದು ತಿಳಿದು ಪುಳಕಿತನಾದೆ.
ನಂತರ ನನ್ನ ಮಗನ ವಿದ್ಯಾಭ್ಯಾಸದ ಕುರಿತು ಕೇಳಲು "ಅವನನ್ನ ಓದಿಸೋಕೆ ನೀನು ಯಾರು? ಓದಿಸೋನು ಮೇಲಿದ್ದಾನೆ. ಅವನ ಮನಸ್ಸಿಗೆ ಒಪ್ಪೋ ಕೆಲಸ ಸಿಗುತ್ತೆ. ಸಂಬಳನೂ ಜಾಸ್ತಿ ಆಗುತ್ತೆ" ಎಂದು ನುಡಿದು ತುಸು ತಡೆದು ಏನೋ ಯೋಚಿಸಿ "ಅವನು ಸಧ್ಯದಲ್ಲೇ ಘೋರಖ್ ಪುರಕ್ಕೆ ಹೋಗುತ್ತಾನೆ." ಅಂದರು. ಅದೆಲ್ಲವೂ ನಿಜವಾಯಿತು. ಅಂದಿನಿಂದ ನಾನು ನಾನಾಗಿರಲಿಲ್ಲ. ಅವರ ಭಕ್ತನಾಗಿಬಿಟ್ಟೆ.
ಮತ್ತೊಮ್ಮೆ ನನ್ನ ಮಗನ ಜೊತೆಗೆ ಬಂದಿದ್ದ ವಿಜ್ಞಾನಿಯೊಬ್ಬರನ್ನು ಕರೆದು "ಇಂತಹ ದಿನ ನೀವು ನಾಲ್ವರು ವಿಮಾನದಲ್ಲಿ ಇಂತಹ ಊರಿಗೆ ಹೋಗಬೇಕಾಗುತ್ತೆ. ಆದ್ರೆ ನೀನು ಅಂದು ವಿಮಾನ ಇರಬಾರದು.... ಎಚ್ಚರ" ಅಂದಿದ್ರು. ಅಂತೆಯೇ ಅದೇ ದಿನ ಆತ ಆ ವಿಮಾನ ಇರಲಿಲ್ಲ. ಅದು ತಮಿಳುನಾಡಿನ ಅರಕೋಣಂ ಎಂಬಲ್ಲಿ ಅಫಘಾತಕ್ಕೆ ಈಡಾಗಿ ಅದರಲ್ಲಿದ್ದವರೆಲ್ಲಾ ಅಸುನೀಗಿದರು. ಗುರುಕರುಣೆ ಈ ವ್ಯಕ್ತಿಯ ಜೀವ ಉಳಿಸಿತ್ತು.
ಸುತ್ತಲಿದ್ದವರೆಲ್ಲಾ ಗುರುಗಳನ್ನು ಬಹುವಚನದಲ್ಲಿ ಕರೀತಿದ್ರೆ ನಾನು ಮಾತ್ರ ಏಕವಚನ ಬಳಸುತ್ತಿದ್ದ ರೀತಿ ನನಗೆ ಮುಜುಗರ ಉಂಟುಮಾಡುತ್ತಿತ್ತು. ಗುರುಗಳನ್ನು ನಾ ಹಿಂಗೆ ಕರೀಬಹುದೇ? ಹಾಗಾದ್ರೆ ಗುರು ಮತ್ತು ಸ್ನೇಹಿತ ಅಂದ್ರೆ ಯಾರು ಎಂದು ಗುರುಗಳನ್ನು ಪ್ರಶ್ನಿಸಲು ಅವರು "ನೀ ಯಾರು.... ನನ್ನ ಸ್ನೇಹಿತ, ಗುರು ಎಂಬ ಶಬ್ದಕ್ಕೆ ಹೇಳಿಕೊಡುವವನು ಎಂದೂ ಅರ್ಥವಿದೆ. ಸ್ನೇಹಿತ ಎಂದೂ ಅರ್ಥವುಂಟು. ಈಗ ನೀನು ನನ್ನ ಗುರುವೆಂದು ಅರ್ಥ ಮಾಡಿಕೊಂಡೆ. ಆದ್ರಿಂದ ನೀನು ಎಂದೆಂದೂ ನೀನಾಗಿಯೇ ಇರು" ಅಂದಿದ್ರು. ಎಷ್ಟು ಅರ್ಥಪೂರ್ಣವೆಂದು ಅನಿಸಿತು. ಅವರ ದೇಹ ತ್ಯಾಗದ ನಂತರವೂ ಅವರ ನಗುಮುಖ ನಮ್ಮೆಲ್ಲರ ಮನದಲ್ಲಿ ಹಸಿರಾಗಿ ಉಳಿದಿದೆ. ಅವರು ಈಗಲೂ ನಮ್ಮೊಂದಿಗೆ ಇದ್ದಾರೆ. ನೆನಪಾದಾಗಲೆಲ್ಲಾ ಮಾರ್ಗದರ್ಶನ ಮಾಡುತ್ತಾರೆ ಎಂದು ನುಡಿದು ಕಣ್ಣೊರೆಸಿಕೊಂಡರು.
ಈ ಘಟನೆಯನ್ನು ಗಮನಿಸಿದಾಗ "ಅಯ್ಯಾ ಯಾರನ್ನೋ ಮೆಚ್ಚಿಸೋಕೆ, ಯಾರೋ ಮಾಡಿದ್ರೂಂತ ನೀ ಏನೂ ಮಾಡಬೇಡ ಕಣಯ್ಯಾ.... ಸ್ವ ಇಚ್ಛೆಯಿಂದ ಮಾಡುತ್ತೀ ನೋಡು... ಅದು ನಿಜವಾದದ್ದು ತಿಳೀತೇ?" ಎಂಬ ನನ್ನೊಡೆಯನ ಮಾತು ಮತ್ತೆ ಮತ್ತೆ ನೆನಪಾಗುತ್ತೆ.....,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Sakaraayapurada Dore venkatachala gurugalige nanna saashtaanga pranaamagalu. Poojyare yellarigu nimma krupe haagu rakshe sadaa doreyali haagu samadhaana talme inda baaluvante Harasi. Sarve jano sukinobavantu.
ReplyDelete