ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 138
ಗ್ರಂಥ ರಚನೆ - ಚರಣದಾಸ
ಅಭಿಷೇಕ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಚರಣದಾಸನಾದ ನಾನು, ನನ್ನ ಗುರುನಾಥರು ಕರುಣಾ ಸಮುದ್ರ ಎಂದು ಈ ಹಿಂದೆಯೂ ಹೇಳಿದ್ದೆ. ಕಾರಣ ಪ್ರತೀ ಹಂತದಲ್ಲೂ ನನಗೆ ತಮ್ಮ ಪವಾಡಗಳ ಮೂಲಕ ವಿಶಿಷ್ಠವಾದ ಜೀವನಾನುಭವವನ್ನು ನೀಡಿದ್ದಾರೆ. ಹಾಗೆಯೇ ಈಗ ಹೇಳ ಹೊರಟಿರುವ ಘಟನೆ ತುಂಬಾ ವಿಶಿಷ್ಠವಾದುದು ಎಂಬುದು ನನ್ನ ಅನಿಸಿಕೆ.
ಚರಣದಾಸನಾದ ನಾನು ಮಂಗಳೂರು ಮೂಲದ ಆ ದಂಪತಿಗಳನ್ನು ಅಪರೂಪಕ್ಕೊಮ್ಮೆ ಗುರುನಿವಾಸದಲ್ಲಿ ನೋಡಿದ ನೆನಪಿತ್ತು ಅಷ್ಟೆ. ಇತ್ತೀಚೆಗೆ ನನ್ನ ಬಂಧು ಒಬ್ಬರು ಕರೆಮಾಡಿ ಹೀಗೆಂದರು:- "ನೋಡು, ಮಂಗಳೂರು ಸಮೀಪ ಓರ್ವ ದಂಪತಿಗಳಿದ್ದು ಅವರು 1970 ರಿಂದಲೂ ಗುರುನಾಥರ ಪ್ರಭಾವಕ್ಕೆ ಒಳಗಾದವರಂತೆ. ನಿನ್ನ ಮೂಲಕ ಗುರುಚರಿತ್ರೆ ಬರೆಸಲ್ಪಡುತ್ತಿರುವುದರಿಂದ ಉಪಯೋಗವಾದೀತೆಂದು ಅವರ ವಿಳಾಸ ತೆಗೆದುಕೊಂಡಿರುವೆ. ತಗೋ" ಎಂದು ನುಡಿದು ದೂರವಾಣಿ ಸಂಖ್ಯೆ ನೀಡಿದರು.
ಚರಣದಾಸನಾದ ನಾನು ಆ ಸಂಖ್ಯೆಗೆ ಕರೆಮಾಡಿ ನನ್ನ ಪರಿಚಯ ತಿಳಿಸಿದೆ. ಆ ಕೂಡಲೇ ಅತ್ತ ಕಡೆಯಿಂದ ಬಂದ ಉತ್ತರದಿಂದ ನಾನು ಕ್ಷಣಕಾಲ ಭಾವಪರವಶನಾದೆ. ಕಾರಣ ಗುರುಕಾರುಣ್ಯದಿಂದ ಅವರು ನನ್ನ ಮೇಲೆ ಇಟ್ಟ ಅಭಿಮಾನ ಅಂತಹದಿತ್ತು.
ಒಂದು ಭಾನುವಾರ ಅವರ ಮನೆಗೆ ಬರಲು ತಿಳಿಸಿದರು. ಅಂತೆಯೇ ಅಲ್ಲಿದ ಹೋದ ನನ್ನನ್ನು "ಗುರುನಾಥರ ಶಿಷ್ಯ" ನೆಂಬ ಕಾರಣಕ್ಕಾಗಿ ಪಾದಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ನಾನು ಅವರಿಗೆ ನಮಸ್ಕರಿಸಿ ವಿನಮ್ರವಾಗಿ ಪಾದಪೂಜೆಯನ್ನು ನಿರಾಕರಿಸಿದೆ. ನಂತರ ಮಾತಿಗಿಳಿದ ನಾನು ಗುರುನಾಥರೊಂದಿಗಿನ ನಿಮ್ಮ ಅನುಭವವನ್ನು ತಿಳಿಸಬೇಕೆಂದು ವಿನಂತಿಸಿದೆ.
ಆ ಮಹಾತಾಯಿ ಮುಗುಳ್ನಗುತ್ತಾ "ನೋಡಪ್ಪಾ ನಿಂಗೆ ಗೊತ್ತಿರುವಂತೆ ನಾನು ಗುರುನಿವಾಸಕ್ಕೆ ಬಂದಿದ್ದು ಬಹಳ ಕಡಿಮೆ. ಆದರೂ ಆ ಅವಧಿಯಲ್ಲಿ ಆ ನನ್ನೊಡೆಯ ನನಗೆ ನೀಡಿದ ಅನುಭವ ಅನನ್ಯವಾದುದು. ಅದರಲ್ಲಿ ಕೆಲವೊಂದನ್ನು ತಿಳಿಸುವೆ" ಎಂದು ಗುರುವೆಂಬ ರಸಾನುಭವವನ್ನು ಬಡಿಸಲು ಅನುವಾದರು.
ನಮಗೆ ಮೊಟ್ಟಮೊದಲು ಗುರುನಾಥರ ದರ್ಶನವಾದದ್ದು 1970ರಲ್ಲಿ. ಅದಕ್ಕೂ ಕೆಲ ವರ್ಷಗಳಿಂದ ನಮ್ಮಲ್ಲಿ ಮಳೆಯಾಗದೆ ತೋಟಗದ್ದೆಗಳೆಲ್ಲವೂ ಒಣಗಿ ಹೋಗಲಾರಂಭಿಸಿತ್ತು. ಕೆಲವರ ಸಲಹೆಯಂತೆ ಕಿಗ್ಗದ ಋಷ್ಯಶೃಂಗರಿಗೆ ಅಭಿಷೇಕ ಮಾಡಿಸುವುದೆಂದು ಯೋಚಿಸಿದ್ದೆವು. ಆ ಸಮಯ ನಮ್ಮಲ್ಲಿ ಹಲವು ವರ್ಷಗಳಿಂದ ಪೂಜೆ ಮಾಡಿಕೊಂಡಿದ್ದು ನಂತರದಲ್ಲಿ ಸಖರಾಯಪಟ್ಟಣದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರ ಸಲಹೆಯಂತೆ ಬಲ್ಲಾಳೇಶ್ವರನಿಗೆ ಅಭಿಷೇಕ ಮಾಡಿಸುವುದೆಂದು ತೀರ್ಮಾನಿಸಿದೆವು.
ನಮ್ಮ ಮೂರು ಕಾರುಗಳು ಹಾಗೂ ಆಳು-ಕಾಳು ಸಕಲ ಸಾಮಗ್ರಿಗಳೊಂದಿಗೆ ಬಲ್ಲಾಳೇಶ್ವರ ದೇಗುಲಕ್ಕೆ ತಲುಪಿದೆವು. ಹನ್ನೊಂದು ಜನ ಪುರೋಹಿತರು ಸೇರಿ ಏಕಾದಶ ರುದ್ರಾಭಿಷೇಕ ಅದ್ದೂರಿಯಾಗಿ ನಡೆಯಿತು. ಮಂಗಳಾರತಿ ಆದ ನಂತರ ಪೂಜೆ ಮಾಡುತ್ತಿದ್ದ ವ್ಯಕ್ತಿ ಕ್ಷಣಕಾಲ ಧ್ಯಾನಾಸಕ್ತರಾದರು. ನಂತರ ಆ ವ್ಯಕ್ತಿ ನಮ್ಮನ್ನು ಬಲವಂತವಾಗಿ ಅವರ ಮನೆಗೆ ಕರೆದೊಯ್ದು ಆದರಿಸಿ ನಂತರ ಬಸ್ ನಿಲ್ದಾಣದವರೆಗೂ ಕಳಿಸಿ ವಾಪಸಾದರು. ಆ ವ್ಯಕ್ತಿ ದೇಗುಲದ ಆಡಳಿತಾಧಿಕಾರಿಯೂ ಹೌದೆಂದು ನಂತರ ತಿಳಿದು ಬಂತು.
ನಾವು ಐದು ಗಂಟೆ ಪ್ರಯಾಣಿಸಿ ನಮ್ಮ ಮನೆ ತಲುಪಿದಾಗ ಆಶ್ಚರ್ಯ ಕಾದಿತ್ತು. ನಮ್ಮ ಜಮೀನಿನ ಒಂದೂವರೆ ಕಿಲೋಮೀಟರ್ ಸುತ್ತುಮುತ್ತಲಿನಲ್ಲಿ ಧಾರಾಕಾರ ಮಳೆಯಾಗಿ ಕೆರೆ ಕೋಡಿ ಬಿದ್ದಿತ್ತು. ಹಾಗೂ ದೇಗುಲದಲ್ಲಿ ಪೂಜೆ ಮಾಡಿದ ಆ ವ್ಯಕ್ತಿ ಧ್ಯಾನಸ್ತರಾದ ಸಮಯದಲ್ಲೇ ಇಲ್ಲಿ ಮಳೆ ಆರಂಭವಾಗಿ ಮೂರುವರೆ ಇಂಚು ಮಳೆಯಾಗಿತ್ತು. ತದ ನಂತರ ಒಂದೆರಡು ವರುಷ ನಿರಂತರವಾಗಿ ಬಲ್ಲಾಳೇಶ್ವರನ ಸೇವೆ ಮಾಡಿಸುತ್ತಿದ್ದೆವು. ಆ ನಂತರ ನನ್ನ ವೈಯಕ್ತಿಕ ಕೆಲಸಗಳಿಂದಾಗಿ ಸಖರಾಯಪಟ್ಟಣಕ್ಕೆ ಹೋಗಲಾಗಲಿಲ್ಲ. ನನ್ನ ಬಂಧುಗಳು ಮಾತ್ರ 1982 ರವರೆಗೂ ಪ್ರತಿ ವರ್ಷ ಸಖರಾಯಪಟ್ಟಣಕ್ಕೆ ಹೋಗಿ ಬರುತ್ತಿದ್ದರು. ಆ ನಂತರ ನಾವು ಮನಿಆರ್ಡರ್ ಮೂಲಕ ಹಣ ಕಳಿಸಲಾರಂಭಿಸಿದೆವು.
ಆ ನಂತರ ನಾವು ಸಖರಾಯಪಟ್ಟಣಕ್ಕೆ ಬಂದದ್ದು ಬಹುಶಃ 1994 ರಲ್ಲಿ ಎನಿಸುತ್ತದೆ.
1994 ರಲ್ಲಿ ಅದ್ವೈತ ಪೀಠದ ಶ್ರೀ ಶ್ರೀ ಶ್ರೀಯವರು ಗುರುನಿವಾಸಕ್ಕೆ ಬಂದಿದ್ದರು. ಅಲ್ಲಿಗೆ ಹೋಗಿದ್ದ ನಮ್ಮಲ್ಲಿ ಅಡುಗೆ ಮಾಡಿಕೊಂಡಿದ್ದ ಕೆಲ ಹುಡುಗರು ಕರೆಮಾಡಿ "ಸಖರಾಯಪಟ್ಟಣದಲ್ಲಿ ಒಬ್ಬರು ಗುರುಗಳಿದ್ದಾರೆ. ಭೂತ-ಭವಿಷ್ಯಗಳನ್ನು ಇದ್ದಂತೆಯೇ ಹೇಳ್ತಾರೆ. ನೀವೊಮ್ಮೆ ನೋಡಬೇಕು ಅವರನ್ನ" ಎಂದು ಒತ್ತಾಯಿಸುತ್ತಿದ್ದರು. ನಾನು ಎಂದಿನಂತೆ ಒಮ್ಮೆ ಧ್ಯಾನಕ್ಕೆ ಕುಳಿತೆ. ಆದರೆ ನನ್ನ ಮನಸ್ಸು ಸ್ಥಿರವಾಗಲಿಲ್ಲ. ಪದೇ ಪದೇ ಸಖರಾಯಪಟ್ಟಣಕ್ಕೆ ಹೋಗಲೇಬೇಕೆಂದು ಅನಿಸತೊಡಗಿತು. ನನ್ನ ಪತಿಗೆ ವಿನಂತಿಸಿ ಪತಿಯೊಂದಿಗೆ ಸಖರಾಯಪಟ್ಟಣಕ್ಕೆ ಬಂದೆ. ಬಲ್ಲಾಳೇಶ್ವರ ದೇಗುಲದ ಆಡಳಿತಾಧಿಕಾರಿಯಾಗಿದ್ದ ವ್ಯಕ್ತಿಯ ಮನೆಗೆ ಬಂದು "ಇಲ್ಲಿ ಯಾರಪ್ಪಾ ಗುರುಗಳು" ಎಂದು ಯೋಚಿಸುತ್ತಾ ಒಳಬಂದೆ.
ಕೆಲಕ್ಷಣದಲ್ಲಿ ಒಳಗೆ ಮಲಗಿದ್ದ ವ್ಯಕ್ತಿಯೊಬ್ಬರು ಎದ್ದು ಬಂದು "ಯಾರು ನೀವು" ಎಂದು ಕೇಳಿ, "ಹೋ... ನೀವು ಮಂಗಳೂರಿನವರಲ್ವೇ? ಇಷ್ಟು ವರ್ಷದ ನಂತರ ಈಗ ದಾರಿ ಸಿಕ್ತಾ... ?" ಎಂದು ನುಡಿದು ಅಲ್ಲೇ ಮೇಲಿದ್ದ ಒಂದು ಚೀಟಿಯನ್ನು ತೆಗೆದು "ನೀವು ಕಳಿಸಿದ್ದ ಮುನ್ನೂರು ರೂಪಾಯಿ ಇಲ್ಲಿದೆ. ಹೆಂಗಪ್ಪಾ ಕಳಿಸೋದು ಅಂತಿದ್ದೆ. ಈಗ ನೀವೇ ಬಂದ್ರಿ, ಒಳ್ಳೆಯದು" ಎಂದು ನುಡಿದು ಆ ಹಣವನ್ನು ನಮ್ಮ ಕೈಗಿತ್ತರು.
ಅಷ್ಟು ವರ್ಷದ ನಂತರವೂ ಅವರು ನಮ್ಮನ್ನು ನೆನಪಿಟ್ಟುಕೊಂಡಿದ್ದನ್ನು ನೋಡಿ ನಮಗೆ ಆಶ್ಚರ್ಯವಾಯಿತು.
ಮತ್ತು ಮುಂದುವರೆದು "ನೋಡಮ್ಮಾ, ಊರಿನೋರೆಲ್ಲಾ ಸೇರಿ ನನಗೆ ಲಫಂಗ, ಮನೆಹಾಳ ಎಂದು ಹೀಯಾಳಿಸಿ ದೇಗುಲದಿಂದ ಹೊರಹಾಕಿದ್ರು.. ಅಲ್ಲೇ ಒಂದು ಕೊಡ ನೀರು ತಂದು ಅರ್ಧ ಆ ಶಿವನ ತಲೆಗೆ ಹಾಕಿ ಉಳಿದರ್ಧ ನಂಗೆ ಹಾಕಿಕೊಂಡು ಇಂದಿಗೆ ನನ್ನ ನಿನ್ನ ಋಣ ಹರೀತು ಎಂದು ಶಿವನಿಗೆ ಕೈಮುಗಿದು ಹೊರಬಂದೆ" ಎಂದು ಮಾತು ನಿಲ್ಲಿಸಿದರು.
ನಾನು ನನ್ನ ಮೂಢ ಮನಸ್ಸು ಇಂತಹ ಮಹಾತ್ಮನನ್ನು ಗುರುತಿಸಲಿಲ್ಲವಲ್ಲ ಎಂದು ನನ್ನನ್ನೇ ಹಳಿದುಕೊಂಡೆ. ನನ್ನ ಕೈಹಿಡಿದು ದೇವರ ಮನೆಗೆ ಕರೆದೊಯ್ದು ಪಾದುಕೆಗೆ ಆರತಿ ಮಾಡಿಸಿ ನಂತರ ನಾವು ದಂಪತಿಗಳಿಗೆ ಆದರದಿಂದ ಉಣಬಡಿಸಿದರು. ನಾನು ಗುರುನಾಥರಲ್ಲಿ ಪಾದಪೂಜೆ ಮಾಡಬಹುದೇ ಎಂದು ಕೇಳಲು ಮರುಮಾತನಾಡದೇ ಒಪ್ಪಿಕೊಂಡರು.
ಅದುವರೆಗೂ ಯಾರ ಹತ್ತಿರಾನೂ ಪಾದಪೂಜೆ ಮಾಡಿಸಿಕೊಳ್ಳದವರು ನಮಗೆ ಅನುಮತಿ ಕೊಟ್ಟರು. ಇದು ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವೆನಿಸಿತ್ತು. ನಂತರ ನಮ್ಮನ್ನು ಹರಸಿ ಕಳಿಸಿಕೊಟ್ಟರು. ಆ ನಂತರ ನಾನು ಆ ಹದಿನೈದು ವರ್ಷಗಳಲ್ಲಿ ಗುರುನಿವಾಸಕ್ಕೆ ಬಂದಿದ್ದು ಕೇವಲ ಐದಾರು ಬಾರಿ ಮಾತ್ರ ಎಂದು ಕ್ಷಣಕಾಲ ಮೌನಕ್ಕೆ ಜಾರಿದರು.
ಚರಣದಾಸನಾದ ನಾನು ಈ ವಿಚಾರ ಗೊತ್ತಿದ್ದರೂ ಏಕೆ ಹಾಗೆಂದು ಅವರತ್ತ ದಿಟ್ಟಿಸಿದೆ.
ಆಕೆ, "ಗುರುವನ್ನು ಎಷ್ಟು ಬಾರಿ ನೋಡಿದರೂ ನಮ್ಮೊಳಗಿನ ದೋಷಗಳನ್ನು ಬದಲಿಸಿಕೊಳ್ಳದಿದ್ದರೆ ಆ ದರ್ಶನಕ್ಕೆ ಯಾವುದೇ ಅರ್ಥವಿಲ್ಲ. ಅವರ ಒಂದು ದೃಷ್ಟಿಯಲ್ಲೇ ನನ್ನ ದೋಷಗಳನ್ನು ತಿದ್ದಲು ಬೇಕಾದ ಎಲ್ಲವೂ ಸಿಕ್ಕಿತು. ಅಂದಮೇಲೆ ಆ ಭಾವದಲ್ಲಿ ನಿರಂತರವಾಗಿ ನಿಲ್ಲಬಯಸಿದೆ. ಭಾವಗುರು ಸಿಕ್ಕಮೇಲೆ ಅಲ್ಲಿಗೆ ಬರಬೇಕಾದ ಅವಶ್ಯಕತೆ ನನಗೆ ಕಂಡುಬರಲಿಲ್ಲ ಎಂದು ಸುಮ್ಮನಾದರು.
ನಾವು ಹೊರಡುವಾಗ ನಮ್ಮನ್ನು ಕರೆದು "ಸಧ್ಯದಲ್ಲೇ ಚಂದ್ರಶೇಖರ ಭಾರತಿಗಳ ಆರಾಧನೆ ಇದೆ. ಬರಬೇಕು ಅಂದ್ರು ಮತ್ತು ಆಗಾಗ್ಗೆ ಬರ್ತಾ ಇರಿ" ಅಂದ್ರು.
ಗುರುವಿನ ದೃಷ್ಟಿ ಬಿದ್ದರೆ ಸಾಕು ಕಣಯ್ಯಾ.. ಏನು ಬೇಕಾದ್ರೂ ಸಿಕ್ಕಿ ಬಿಡುತ್ತೆ ಎಂದು ಗುರುನಾಥರು ಆಗಾಗ್ಗೆ ನಮಗೆ ಹೇಳುತ್ತಿದ್ದ ಮಾತು ಈ ಘಟನೆಯನ್ನು ನೋಡಿದಾಗ ಚರಣದಾಸನಾದ ನನಗೆ ನೆನಪಿಗೆ ಬಂತು.
ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ನನಗೆ ಹೆಚ್ಚಿನ ಜವಾಬ್ದಾರಿ ಇತ್ತು. ಜೊತೆಗೆ ಗುರುವೆಂಬ ಪದದ ಅರ್ಥವನ್ನೂ ಅರಿಯದಿದ್ದ ನಾನು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಹೊರಟುಬಿಟ್ಟೆ. ಆಮೇಲೆ ನೋಡಿ, ಅದ್ಯಾಕೋ ತಿಳೀತಿರಲಿಲ್ಲ. ಪದೇ ಪದೇ ಗುರುದರ್ಶನ ಮಾಡಲೇಬೇಕೆಂಬ ಹಂಬಲ ಶುರುವಾಯಿತು ಎಂದು ನುಡಿದು ಕ್ಷಣಕಾಲ ಮೌನವಾದರು.....,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Sri Guru Swarooparaada Nimage nanna ananta vandanegalu. Please let me know where to buy this book-SRI SADGURU MAHIME. My email ID is drganeshke@gmail.com.
ReplyDeleteThanking you
Ganesh
Poojya gurugalaada venkatachala Avara Divya paadagalige nanna bhakti poorvaka namanagalu. Guruvarya Yellaranu sadaa kaala Harasi Kaapadi asheervadisi uddarisi swamy. Sarve jano sukinobavantu.
ReplyDelete