ಒಟ್ಟು ನೋಟಗಳು

Sunday, February 5, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 124


    ಗ್ರಂಥ ರಚನೆ - ಚರಣದಾಸ 


ನಿರ್ಮೋಹ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರಿಗಾಗಿಯೇ ಕೆಲವು ಭಕ್ತರು ಕಾರನ್ನು ಖರೀದಿಸಿ ಕೀಲಿಯನ್ನು ತಂದು ಕೊಡ ಬಂದರು. ಆಗ ಗುರುನಾಥರು ಅದನ್ನು ಮುಟ್ಟಿ "ಆಯ್ತಪ್ಪಾ..... ಇನ್ನು ಈ ಕಾರು ನನ್ನದೇ. ಆದ್ರೆ ನೀನೆ ಇಟ್ಕೋ. ನಾ ಬೇಕಾದಾಗ ತೆಗೆದುಕೊಳ್ಳುವೆ" ಎಂದು ಹಿಂತಿರುಗಿಸಿ ಬಿಟ್ಟಿದ್ದರು. ಇದು ಗುರುನಾಥರ ನಿರ್ಮೋಹವನ್ನು ಸಾರಿ ಸಾರಿ ಹೇಳುತ್ತದೆ. 

ಅವರು ಎಂದೂ ಬೇರೆಯವರ ವಸ್ತುಗಳನ್ನು ಬಯಸುತ್ತಿರಲಿಲ್ಲ. ಒಮ್ಮೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಾವು ತೋಟದಿಂದ ಅಡಿಕೆ ಕಾಯಿ ಕೀಳಿಸಿ ಮನೆಗೆ ತಂದೆವು. 

ಆಗ ಅಲ್ಲಿಯೇ ಇದ್ದ ಗುರುನಾಥರು, "ನೋಡಯ್ಯಾ ಈ ಅಡಿಕೆಯಲ್ಲಿ ಇಪ್ಪತ್ತಮೂರು ಅಡಿಕೆಕಾಯಿ ನಮ್ಮ ತೋಟದ್ದಲ್ಲ. ಕಣ್ಣು ತಪ್ಪಿನಿಂದಾಗಿ ನಮ್ಮ ಅಡಿಕೆ ಜೊತೆ ಸೇರಿಕೊಂಡಿವೆ. ಈ ಇಪ್ಪತ್ತಮೂರು ಅಡಿಕೆಕಾಯಿಯನ್ನು ತೆಗೆದುಕೊಂಡು ಹೋಗಿ ಪಕ್ಕದ ತೋಟದಲ್ಲಿ ಹಾಕು" ಎಂದು ಹೇಳಿ ಚರಣದಾಸನಾದ ನನ್ನ ಕೈಯಲ್ಲಿಯೇ ಕೊಟ್ಟು ಕಳಿಸಿದರು. 

ಮತ್ತೊಮ್ಮೆ ಭಕ್ತರಾಗಿದ್ದ ಓರ್ವ ರಾಜಕಾರಣಿ ತನ್ನ ಅಭಿಮಾನ ತೋರ್ಪಡಿಸಲು ಬೆಂಗಳೂರಿನಿಂದ ಹತ್ತಿಪ್ಪತ್ತು ಕುರ್ಚಿಗಳನ್ನು ಕಳಿಸಿಕೊಟ್ಟಿದ್ದರು. ಅದನ್ನು ತಂದ ಗಾಡಿಯ ಚಾಲಕನನ್ನು ಕರೆಸಿ ಊಟೋಪಚಾರಗಳನ್ನು ನೀಡಿ ಕೈಗೆ ಸಾಕಷ್ಟು ಹಣ ನೀಡಿ ಹೀಗೆ ಹೇಳಿದರು. "ಅಯ್ಯಾ, ಈ ಕುರ್ಚಿಗಳೆಲ್ಲವೂ ನಿನ್ನದೇ.... ಆದರೆ ಅವನ್ನು ಇಟ್ಟುಕೊಳ್ಳಲು ಸ್ಥಳದ ಅಭಾವವಿರುವುದರಿಂದ ನಿಮ್ಮ ಮನೆಯಲ್ಲಿಯೇ ಇಟ್ಟಿರಲು ಹೇಳು. ನನಗೆ ಬೇಕಾದಾಗ ಬಂದು ತೆಗೆದುಕೊಳ್ಳುವೆನೆಂದು ನಿಮ್ಮ ಮಂತ್ರಿಗಳಿಗೆ ಹೇಳು" ಎಂದು ನುಡಿದು ಮೌನವಾದರು. 

ಗುರುನಾಥರು ಎಷ್ಟು ಪಕ್ಕ ವ್ಯವಹಾರಿಗಳೆಂದರೆ ಹಣಕಾಸಿನ, ಪದಾರ್ಥ ವಿಚಾರ ಮಾತ್ರವಲ್ಲ. ಇತರರ ಶುದ್ಧವಲ್ಲದ ಭಾವನೆಯನ್ನು ಸ್ವೀಕರಿಸುತ್ತಿರಲಿಲ್ಲ. 

ಗುರುನಾಥರ ಈಶ್ವರ ಪ್ರೀತಿ ಎಷ್ಟು ದೃಢವಾದುದೆಂದು ನಾನಾಗಲೇ ಹೇಳಿದಂತೆ ಸಖರಾಯಪಟ್ಟಣ ಅರೆಬಯಲು ಸೀಮೆಯಾಗಿತ್ತು. ಆಗಾಗ್ಗೆ ಮಳೆರಾಯ ಕಣ್ಣುಮುಚ್ಚಾಲೆ ಆಡುತ್ತಲೇ ಇರುತ್ತಿದ್ದನು. 

ಸುಡು ಬಿಸಿಲಿನಿಂದಾಗಿ ಗುರುನಾಥರ ಅಡಿಕೆ ತೋಟ ಹಾಳಾಗಬಾರದೆಂಬ ಉದ್ದೇಶದಿಂದ ಅವರ ಸಂಬಂಧಿಯೊಬ್ಬರು ಬಂದು "ಗುರುಗಳೇ, ಅಡಿಕೆ ತೋಟ ಉಳಿಸಿಕೊಳ್ಳಲು ನಿಮ್ಮ ತೋಟಕ್ಕೆ ಹನಿ ನೀರಾವರಿ ಯೋಜನೆಯನ್ನು ಮಾಡೋಣ" ಎಂದು ಹಠ ಮಾಡತೊಡಗಿದರು. 

ಗುರುನಾಥರು ಪ್ರಕೃತಿಯನ್ನು ಅದರ ಸ್ವಾಭಾವಿಕತೆಯನ್ನು ಎಂದೂ ಬದಲಾಗದಂತೆ ಇರಲು ಬಯಸುತ್ತಿದ್ದರು. ಬಾವಿ ತೋಡಿಸುವುದನ್ನು ಒಪ್ಪುತ್ತಿರಲಿಲ್ಲ. ಆ ವ್ಯಕ್ತಿಯ ಮಾತಿಗೆ ಗುರುನಾಥರು "ತೋಟ ಮಾಡಿಕೊಟ್ಟ ಶಿವ, ಉಳಿಸೋ ವಿದ್ಯೆ ಅವನಿಗೆ ಗೊತ್ತಿಲ್ವೇನಯ್ಯಾ" ಎಂದು ನುಡಿದು ಸುಮ್ಮನಾದರು. 

ಅದಾಗಿ ಒಂದೆರಡು ದಿನಕ್ಕೆ ಧಾರಾಕಾರ ಮಳೆ ಬಂದು ತೋಟ ತಂಪಾಯ್ತು. ಆಗ ಗುರುನಾಥರು "ಈ ನೀರನ್ನು ನೀನು ಕೊಟ್ಟೆಯೋ ಅಥವಾ ನಿನ್ನ ಹನಿ ನೀರಾವರಿ ನೀಡಿತೋ?" ಎಂದು ಆ ವ್ಯಕ್ತಿಯನ್ನು ಪ್ರಶ್ನಿಸಲು ಆತ ಉತ್ತರವಿರದೇ ಮೌನಕ್ಕೆ ಶರಣಾದನು......,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Parama poojya venkatachala avadootarige nanna saashtaanga pranaamagalu. Guruvarya nimma aashirvaada haagu rakshe sadaa yellara mele erali haagu rakshe sahaa. Sarve jano sukinobavantu.

    ReplyDelete