ಒಟ್ಟು ನೋಟಗಳು

Friday, February 17, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 136


    ಗ್ರಂಥ ರಚನೆ - ಚರಣದಾಸ 

ಕಾರ್ಯಸಾಧನೆ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮೈಸೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿರುವ ಒಬ್ಬರು ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. ಗುರುನಾಥರೇ ಅವರಿಗೆ ಹೆಣ್ಣು ನೋಡಿ ಮದುವೆ ಮಾಡಿಸಿದ್ದರು. 

ಇದಕ್ಕೂ ಮುನ್ನ ಗಂಡು ಹೆಣ್ಣು ನೋಡುವ ಶಾಸ್ತ್ರ ಮುಗಿದು ನಿಶ್ಚಿತಾರ್ಥವೂ ನಡೆಯಿತು. ಬೆಂಗಳೂರಿನ ಛತ್ರವೊಂದರಲ್ಲಿ ವಿವಾಹವಾಗುವುದೆಂದೂ ನಿಗದಿಯಾಗಿತ್ತು. 

ಆಗ ಗುರುನಾಥರು ಅವರ ಪೋಷಕರನ್ನು ಕರೆದು, "ಅವರಿಬ್ಬರ ಮದುವೆಯನ್ನು ಬೆಳಿಗ್ಗೆ ಮಾಡಬಾರದು. ರಾತ್ರಿಯೇ ಮಾಡಬೇಕು ಕಣ್ರಯ್ಯಾ" ಅಂದರು. ಛತ್ರ ಹಾಗೂ ಮದುವೆಯ ದಿನವೂ ನಿಗದಿಯಾಗಿದೆ. ಈಗ ಬದಲಾವಣೆ ಹೇಗೆ ಸಾಧ್ಯ? ಎಂದು ಪೋಷಕರು ಯೋಚಿಸಿದರು. 

ಈ ಮಧ್ಯೆ ಹುಡುಗನ ಕಡೆಯವರು ಜವಳಿ ಶಾಸ್ತ್ರಕ್ಕಾಗಿ ಹಾಸನಕ್ಕೆ ಬಂದಿದ್ದರು. ಇತ್ತ ಹೆಣ್ಣಿನ ಕಡೆಯವರು ಗುರುದರ್ಶನಕ್ಕಾಗಿ ಗುರುನಿವಾಸಕ್ಕೆ ಬಂದರು. ಜವಳಿ ಶಾಸ್ತ್ರ ಮುಗಿಸಿದ ಹುಡುಗನ ಕಡೆಯವರು ನೇರವಾಗಿ ಗುರುನಿವಾಸಕ್ಕೆ ಬಂದರು. ಅಲ್ಲಿಗೆ ಕಾಕತಾಳೀಯವಾಗಿ ಎಲ್ಲರೂ ಒಂದೆಡೆ ಸೇರಿದಂತಾಗಿತ್ತು. 

ಗುರುನಾಥರು ಗುರು ಪತ್ನಿಯನ್ನು ಕರೆದು "ವಧು ವರರನ್ನು ದೇವರ ಮನೆಗೆ ಕರೆದುಕೊಂಡು ಹೋಗಿ ಕೂರಿಸಿ ಆರತಿ ಮಾಡಿ ಸಿಹಿ ತಿನ್ನಿಸಿ, ಕೈ ಹಿಡಿದು ನಡೆಯಲು ಹೇಳು" ಅಂದರು. 

ಅಮ್ಮ ಹಾಗೆಯೇ ಮಾಡಿದರು. 

ಆಗ ಗುರುನಾಥರು "ಇನ್ನು ಇವರ ಮದುವೆ ಎಲ್ಲಾದರೂ ಮಾಡಿಕೊಳ್ಳಿ. ನನ್ನ ಕೆಲಸ ಮುಗಿಸಿದ್ದೇನೆ" ಎಂದರು. 

ಈ ಮಧ್ಯೆ ಈ ಹುಡುಗನ ಅಕ್ಕ ಗರ್ಭಿಣಿಯಾಗಿದ್ದು ಹಿಂದೊಮ್ಮೆ ಹೆರಿಗೆಯಾದಲ್ಲಿ ಮದುವೆಯ ದಿನಾಂಕ ವ್ಯತ್ಯಾಸವಾಗಬಹುದು ಎಂಬ ಆತಂಕವಿತ್ತು. ಜೊತೆಗೆ ಆಕೆ ಮದುವೆಗೆ ಬರುವುದೂ ಅನುಮಾನವಿತ್ತು. 

ಆಗ ಕರೆ ಮಾಡಿಸಿದ ಗುರುನಾಥರು "ಒಂದು ಸಾರಿ ಅಕ್ಕನ ನೋಡಿ ಬಾ, ನಿನ್ನ ಭಾವಿಪತ್ನಿ ಒಪ್ಪಿದರೆ ಅವಳನ್ನು ಜೊತೆಗೆ ಕರೆದುಕೊಂಡು ಹೋಗು" ಎಂದು ತಿಳಿಸಿದರು. 

ಗುರುವಾಕ್ಯದಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಆತ ತಡಮಾಡದೇ ತನ್ನ ಭಾವಿ ಪತ್ನಿಯೊಂದಿಗೆ ತನ್ನ ಅಕ್ಕನನ್ನು ನೋಡಲು ಭಾವನವರ ಊರಿಗೆ ಹೊರಟರು. ಸಂಜೆ ಸುಮಾರು ಏಳೆಂಟು ಗಂಟೆ ಹೊತ್ತಿಗೆ ಭಾವನ ಮನೆಗೆ ತಲುಪಿದರು. ಅಂದು ದುರದೃಷ್ಟವಶಾತ್ ಭಾವ, ಅವರ ತಂದೆ ಹಾಗೂ ಸಹೋದರ ಕಾರ್ಯನಿಮಿತ್ತ ಪರ ಊರಿಗೆ ಹೋಗಿದ್ದರು. 

ರಾತ್ರಿ ಉಭಯಕುಶಲೋಪರಿಯ ನಂತರ ಅಲ್ಲಿಯೇ ಉಳಿದು ಮರುದಿನ ಬೆಳಿಗ್ಗೆ ಊರಿಗೆ ಹೊರಟರು. ಆಗ ಅವರ ಅಕ್ಕ ಅಳಲಾರಂಭಿಸಿದರು. 

ಇದ್ದಕ್ಕಿದ್ದಂತೆಯೇ ಅರೆ ಪ್ರಜ್ಞಾವಸ್ಥೆಗೆ ಜಾರಿದ ಆಕೆ ವಿಪರೀತ ರಕ್ತದೊತ್ತಡಕ್ಕೆ ಸಿಲುಕಿ ಒದ್ದಾಡತೊಡಗಿದರು. ಆಗಲೇ ಹೇಳಿದಂತೆ ಮನೆಯಲ್ಲಿ ಭಾವ ಹಾಗೂ ಹಿರಿಯರು ಯಾರೂ ಇರಲಿಲ್ಲ. 

ಏನು ಮಾಡಬೇಕೆಂದು ತಿಳಿಯದೆ ಆತ ಗುರುನಾಥರನ್ನು ಸಂಪರ್ಕಿಸಲು ಗುರುನಾಥರು, "ನನ್ನೇನು ಕೇಳುತ್ತೀಯಾ. ಅತ್ತೆ ಮಾವನ್ನ ಕೇಳು" ಎಂದು ಸುಮ್ಮನಾದರು. 

ಗಾಬರಿಗೊಂಡ ಆತ ಮತ್ತೆ ಕರೆ ಮಾಡಲು, ಗುರುನಾಥರು "ಆಸ್ಪತ್ರೆಗೆ ಸೇರಿಸು" ಎಂದರು. ಕೂಡಲೇ ಸ್ನೇಹಿತರ ಕಾರಿನಲ್ಲಿ ಅಕ್ಕನನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದರು. 

ಪರೀಕ್ಷಿಸಿದ ವೈದ್ಯರು ತಾಯಿ-ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯುವರು. ನಾವು ಚಿಕಿತ್ಸೆ ಆರಂಭಿಸುವ ಮೊದಲು ನಿರಾಕ್ಷೇಪಣಾ ಪತ್ರಕ್ಕೆ ಸಹಿ ಹಾಕಬೇಕು ಎಂದರು. ಅವರು ಕೂಡಲೇ ಭಾವನನ್ನು ಸಂಪರ್ಕಿಸಿ ಅನುಮತಿ ಪಡೆದು ಸಹಿ ಹಾಕಿದರು. ಈ ಎಲ್ಲಾ ಘಟನೆಗಳನ್ನು ಗುರುನಾಥರಿಗೂ ತಿಳಿಸಲಾಯಿತು. ಗುರುನಾಥರು ಊರಿನಲ್ಲಿ ಇದ್ದುಕೊಂಡೇ ಏನು ಮಾಡಬಹುದೋ ಅದೆಲ್ಲವನ್ನೂ ಮಾಡಿಸಿದರು. 

ಮಧ್ಯಾನ್ಹ ವೇಳೆಗೆ ಅಕ್ಕನಿಗೆ ಪ್ರಸವವಾಯಿತು. ಗುರುಕೃಪೆಯಿಂದ ತಾಯಿ ಮಗು ಇಬ್ಬರೂ ಬದುಕುಳಿದರು. 

ಮರುದಿನ ಸಂಜೆ ಹೊತ್ತಿಗೆ ಗುರುನಾಥರು ಆ ಹುಡುಗನ ಅಕ್ಕನ ಊರಿಗೆ ಬಂದರು. 

ಗುರುನಾಥರು ಭಕ್ತರೊಬ್ಬರ ಮನೆಯಲ್ಲಿರುವುದನ್ನು ತಿಳಿದ ಆ ಹುಡುಗ ತನ್ನ ಭಾವಿ ಪತ್ನಿಯೊಂದಿಗೆ ಗುರುದರ್ಶನಕ್ಕಾಗಿ ಹೋದರು. ಆಗ ರಾತ್ರಿಯಾಗಿತ್ತು. ಗುರುನಾಥರು ಅವರಿಬರನ್ನೂ ದೇವರ ಮುಂದೆ ಕೂರಿಸಿ ಹಾಲು ಕುಡಿಸಿ ಪರಸ್ಪರ ಹಾರ ಬದಲಾಯಿಸಲು ಹೇಳಿದರು. ಅವರು ಹಾಗೆಯೇ ಮಾಡಿದರು. 

ನಂತರ ಗುರುನಾಥರು "ಇವರ ಮದುವೆಯನ್ನ ರಾತ್ರಿ ಮಾಡಬೇಕು ಅಂತಿತ್ತು. ಹೇಗೆ ಮಾಡೋದು ಅಂತ ತಿಳಿದಿರಲಿಲ್ಲ. ಈಗ ಅವಕಾಶ ಕೂಡಿ ಬಂತು. ಇನ್ನು ನೀವು ಹೇಗಾದ್ರೂ ಮದುವೆ ಮಾಡಿಕೊಳ್ಳಿ" ಎಂದು ನುಡಿದು ಅಲ್ಲಿಂದ ಹೊರಟರು. 

ಅಕ್ಕನಿಗೆ ಹೀಗೇಕಾಯಿತೆಂದು ಕೇಳಲು ಗುರುನಾಥರು ಪ್ರೇತಬಾಧೆಯಿಂದ ಹೀಗಾಯಿತು ಎಂದು ತಿಳಿಸಿದರು. 

ಈ ವಿಚಾರವನ್ನು ಹೇಳಿದ ಆ ಉಪನ್ಯಾಸಕರು, ನೋಡಿ ಈ ಎಲ್ಲ ಘಟನೆಗಳೂ ನಾವು ಹೇಗೆ ಕಾರ್ಯ ಸಾಧನೆ ಮಾಡಬೇಕು ಎಂಬುದನ್ನು ಹಾಗೂ ಅದಕ್ಕೆ ಬೇಕಾದ ಸಹನೆ ಮತ್ತು ತಾಳ್ಮೆಯನ್ನು ನನಗೆ ತಿಳಿಸಿಕೊಟ್ಟವು ಎಂದು ನುಡಿದರು......,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Parama poojya venkatachala gurugalige nanna bhakti poorvaka namanagalu. Guruvarya Yellaranu sadaa kaala Harasi asheervadisi Kaapadi swamy. Sarve jano sukinobavantu.

    ReplyDelete