ಒಟ್ಟು ನೋಟಗಳು

Friday, February 3, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 122


    ಗ್ರಂಥ ರಚನೆ - ಚರಣದಾಸ 


ಗುರುಭಕ್ತಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇತ್ತೀಚೆಗೆ ಚಿಕ್ಕಮಗಳೂರಿಗೆ ಹೋಗಿದ್ದಾಗ ಗುರುನಾಥರ ಮನೆಗೆ ಸದಾ ಬರುತ್ತಿದ್ದ ಒಬ್ಬ ಹುಡುಗ ಸಿಕ್ಕಿದ್ದರು. ಆತನನ್ನು ತನ್ನ ಅನುಭವವನ್ನು ಹೇಳುವಂತೆ ವಿನಂತಿಸಿದೆ. ಆತ ಹೀಗೆ ಹೇಳತೊಡಗಿದರು. 

ನೋಡಿ, ನಾನು ಮದುವೆಯಾದದ್ದು 1998ರಲ್ಲಿ. ಆದರೆ ಬಹಳ ವರ್ಷಗಳಾದರೂ ನಮಗೆ ಮಕ್ಕಳಾಗಿರಲಿಲ್ಲ. ಈ ಮಧ್ಯೆ ಗುರುನಾಥರಿಗೆ ಯಾವುದೋ ಕಾರಣಕ್ಕಾಗಿ ಕಾಲು ಪಾದಗಳು ಸುಟ್ಟು ಹೋಗಿತ್ತು. ಈ ಜನರ ಜಂಗುಳಿಯಿಂದ ದೂರವಿರಲು ಇಚ್ಚಿಸಿದ್ದ ಗುರುನಾಥರು ನಮ್ಮ ಮನೆಗೆ ಬಂದು ನೆಲೆಸಿದರು. ಗುರುನಾಥರು ಬಂದು ಹೋದ ಹತ್ತು ದಿನಕ್ಕೆ ನನ್ನ ಹೆಂಡತಿ ಗರ್ಭ ಧರಿಸಿದಳು. 

ಆಕೆಯು ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಸಮಯ.  ಆಕೆಗೆ ಹೆರಿಗೆಯಾಗುವ ಹಿಂದಿನ ದಿನ ಮತ್ತೆ ನಮ್ಮ ಮನೆಗೆ ಬಂದು ಗುರುನಾಥರು ನಮ್ಮ ಮನೆಯಲ್ಲಿಯೇ ಮಲಗಿದ್ದರು. 

ಮರುದಿನ ಬೆಳಿಗ್ಗೆ ಹೊಟ್ಟೆ ನೋವಿನಿಂದಾಗಿ ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ ಸುಮಾರಿಗೆ ಗುರುನಾಥರು ಬೇರೊಬ್ಬರ ಮನೆಗೆ ಹೋಗಿಬಿಟ್ಟರು. ಬೆಳಿಗ್ಗೆ 9-45 ಸುಮಾರಿಗೆ ನನ್ನ ಹೆಂಡತಿ ಗಂಡು ಮಗುವಿಗೆ ಜನ್ಮವಿತ್ತಳು. 

ಈ ವಿಚಾರವನ್ನು ತಿಳಿಸೋಣವೆಂದು ಆ ಹುಡುಗ ನೇರವಾಗಿ ಗುರುನಾಥರು ಮಲಗಿದ್ದ ಮನೆಗೆ ಬಂದರು. ಆದರೆ ಆ ಸಮಯದಲ್ಲಿ ನಿದ್ರಿಸುತ್ತಿದ್ದ ಗುರುನಾಥರು ಕೆಲಕಾಲದ ನಂತರ ಎಚ್ಚರಗೊಂಡರು. ಆ ಹುಡುಗನಿಂದ ವಿಷಯ ತಿಳಿಸಿದಾಕ್ಷಣ ಗುರುನಾಥರು "ಒಳ್ಳೆಯದು ಕಣಯ್ಯಾ. ಆದರೆ ಸ್ವಲ್ಪ ಅವಸರ ಮಾಡಿದರೆನಿಸುತ್ತದೆ. ಇಲ್ಲದಿದ್ರೆ ಆಕೆಗೆ (Normal) ಸಹಜ ಹೆರಿಗೆಯೇ ಆಗುತ್ತಿತ್ತೆನಿಸುತ್ತದೆ. ಹೋಗ್ಲಿ ಬಿಡು" ಎಂದರು. 

ಈ ನಿದ್ರೆಯ ವಿಚಾರವಾಗಿ ಆತ ತನ್ನ ನಂಬಿಕೆಯನ್ನು ಹೀಗೆ ಹೇಳಿದರು. "ನೋಡಿ ಗುರುನಾಥರು ನಿದ್ರೆ ಮಾಡುತ್ತಿದ್ದರೂ ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಎಲ್ಲ ವಿವರವನ್ನು ಹೇಳಿದರು. ಇದರ ಅರ್ಥ "ಗುರುಗಳಿಗೆ ನಿದ್ರೆ ಎಂದರೆ ಅವರು ಬೇರೆಲ್ಲೋ ಸಂಚಾರ ಹೋಗಿರುವರು ಎಂದರ್ಥ. ಸದ್ಗುರು ನಿದ್ರಿಸಿದರೆಂದರೆ ಜಗದ ಕಾಲ ಚಕ್ರವೇ ನಿಂತು ಹೋಗುವುದು ಎನಿಸುತ್ತದೆ" ಎಂದು ಹೇಳಿ ಮೌನವಾದರು. 

ಆತನ ನಂಬಿಕೆ ಎಷ್ಟು ದೃಢವಾದದ್ದೆಂದರೆ ಇಂದಿಗೂ ಅವರ ಮನೆಯಲ್ಲಿ ಗುರುನಾಥರು ನೀಡಿದ್ದ ಅವರೇ ಬಳಸಿದ ಪಾದುಕೆ (ಹವಾಯಿ ಚಪ್ಪಲಿಗಳು) ಗಳಿವೆ. ಅವೆಲ್ಲವನ್ನೂ ದೇವರ ಕೋಣೆಯಲ್ಲಿ ಒಪ್ಪವಾಗಿರಿಸಿ ಪ್ರತಿನಿತ್ಯವೂ ಅದಕ್ಕೆ ಪೂಜೆ ಸಲ್ಲಿಸುವರು. ಮಾತ್ರವಲ್ಲ ತನ್ನ ಪ್ರತೀ ಹೆಜ್ಜೆ ಇಡುವಾಗಲೂ ಆ ಪಾದುಕೆಗೆ ನಮಸ್ಕರಿಸಿಯೇ ಮುಂದಡಿ ಇಡುತ್ತಿರುವನು. 

ಚರಣದಾಸನಾದ ನಾನು ಆತನನ್ನು ಈ ಪಾದುಕೆಗಳ ವಿಚಾರವಾಗಿ ಪ್ರಶ್ನಿಸಿದಾಗ ಆತ "ನೋಡಿ ಇವು ನನ್ನ ಜೀವ. ಇದು ನನಗೆಲ್ಲವನ್ನೂ ನೀಡಿದೆ. ಬೇರೆಲ್ಲೂ ನಾನು ಹೋಗುವ ಅವಶ್ಯಕತೆ ಕಂಡುಬರುತ್ತಿಲ್ಲ. ದಯಮಾಡಿ ಈ ಪಾದುಕೆಗಳನ್ನು ಬಿಟ್ಟು ಬೇರೇನಾದ್ರೂ ಕೇಳಿ" ಎಂದು ಕಣ್ತುಂಬಿಕೊಂಡರು. ಆಗ ಭಕ್ತಿ ಎಂದರೇನೆಂಬುದನ್ನು ಇವನಿಂದ (ಈ ವ್ಯಕ್ತಿ) ಕಲೀಬೇಕು ಕಣಯ್ಯಾ" ಎಂದು ನನ್ನ ಹತ್ತಿರ ಈ ವ್ಯಕ್ತಿಯ ಬಗ್ಗೆ ಆಗಾಗ್ಗೆ ಗುರುನಾಥರು ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದಿತು.....,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Swamy venkatachala Avara paadagalige nanna poojya namanagalu. Yellaranu sadaa kaala Harasi asheervadisi Kaapadi uddarisi swamy. Hari om tatsat.

    ReplyDelete