ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 141
ಗ್ರಂಥ ರಚನೆ - ಚರಣದಾಸ
ಭಿನ್ನತೆ ಏಕೆ?
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸದ್ಗುರುವು ಶುದ್ಧಾಶುದ್ಧ ರಹಿತನು. ಅವನಿಗೆ ನಡವಳಿಕೆಯೇ ಜಾತಿ, ಉತ್ತಮ ಸಂಸ್ಕಾರವೇ ಧರ್ಮ.
ಇಸ್ಲಾಂ ಧರ್ಮಕ್ಕೆ ಸೇರಿದ ಒಬ್ಬ ವ್ಯಕ್ತಿ ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. ಅವರು ನಮ್ಮೂರಿನ ಸಮೀಪದವರೇ ಆಗಿದ್ದರಿಂದ ನನ್ನೊಂದಿಗೆ ಸಲುಗೆಯಿಂದಿದ್ದರು. ಅವರು ಗುರುನಿವಾಸಕ್ಕೆ ಬಂದಾಗ ಗುರುನಿವಾಸದಲ್ಲೇ ಇದ್ದ ನಾನು ಅಂದು ಗುರುನಾಥರೊಂದಿಗೆ ನಡೆದ ಮಾತುಕತೆಯ ವಿವರ ಕೇಳಲು ಅವರು ಹೀಗೆ ಹೇಳತೊಡಗಿದರು.
ಸ್ವಾಮಿ ನಾವುಗಳೆಲ್ಲರೂ ಮೂಲತಃ ಆಂಧ್ರದವರಾಗಿದ್ದು ಇಲ್ಲಿಗೆ ಬಂದು ಹಲವು ವರ್ಷಗಳೇ ಕಳೆದಿದೆ. ನಾವಿಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ. ಚಿಕ್ಕಮಗಳೂರಿನ ನಮ್ಮ ಬಂಧುಗಳಿಂದ ನಮಗೆ ಗುರುನಾಥರ ಬಗ್ಗೆ ತಿಳಿದುಬಂತು. ಆ ನಂತರ ಗುರುನಾಥರು ನಮ್ಮೂರಿಗೂ ಬರುತ್ತಿರುವರೆಂಬುದನ್ನು ತಿಳಿದು ನಮ್ಮೂರಿನ ಒಂದು ದೇಗುಲಕ್ಕೆ ಗುರುನಾಥರು ಬಂದ ಸಂದರ್ಭ. ನಾನು ಅಲ್ಲಿಯೇ ಹೋಗಿ ಅವರ ದರ್ಶನ ಪಡೆದೆ. "ನಾವೆಲ್ಲರೂ ಇಲ್ಲಿಗೆ ಆಗಾಗ್ಗೆ ಬರುತ್ತಿರುತ್ತೇವೆ" ಎನ್ನಲು ನಾನು ಸ್ವಾಮಿ, ತಾವು ತಪ್ಪು ತಿಳಿಯಲಾರರೆಂದಲ್ಲಿ ಒಂದು ಪ್ರಶ್ನೆ ಎಂದು ಕೇಳಲು, ಅವರು ತಲೆಯಾಡಿಸಿದರು.
ಆಗ ನಾನು ಸ್ವಾಮಿ ತಾವು ಅನ್ಯ ಧರ್ಮೀಯರಾಗಿದ್ದೂ ಇಲ್ಲಿಗೆ ಬಂದಿರುವಿರಲ್ಲಾ ಇದರಿಂದ ನಿಮ್ಮ ಸ್ನೇಹಿತರೂ ಹಾಗೂ ಇತರರಿಂದ ಏನಾದರೂ ತೊಂದರೆ ಆಗದೇ? ಎಂದೆ.
ಅದಕ್ಕವರು, ನೋಡಿ, ಭಕ್ತಿ ಎಂಬುದು ನಮ್ಮ ವೈಯಕ್ತಿಕ ವಿಚಾರ. ನೆರೆಯ ಆಂಧ್ರದಲ್ಲಿ ಓರ್ವ ಯತಿಗಳ ಸಮಾಧಿ ಇದೆ. ನಮ್ಮ ತಂದೆ, ಅಜ್ಜ, ಎಲ್ಲರೂ ಅವರಿಗೆ ತುಂಬಾ ನಡೆದುಕೊಳ್ಳುತ್ತಿದ್ದರು. ಈಗ ನಾವುಗಳೂ ಕೂಡಾ ಅಲ್ಲಿಗೆ ನಡೆದುಕೊಳ್ಳುತ್ತಿದ್ದೇವೆ.
ಪೂಜೆ ಯಾರು ಮಾಡಿದರೇನು, ಸಲ್ಲುವುದು ಆ ಭಗವಂತನಿಗೇ ಅಲ್ಲವೇ?. ಹೀಗಿರಲು ನಮ್ಮ ನಡುವೆ ಭಿನ್ನತೆ ಏಕೆ? ನಾನಂತೂ ಯಾರಲ್ಲೂ ಬೇಧವೆಣಿಸುವುದಿಲ್ಲ, ಎಂಬ ಅವರ ಉತ್ತರ ಕೇಳಿ ನಾನು ಆಶ್ಚರ್ಯಚಕಿತನಾದರೂ ತೋರಿಸಿಕೊಳ್ಳದೇ ಸುಮ್ಮನೆ ತಲೆಯಾಡಿಸಿದೆ.
ನಂತರ ಅವರು ತಮ್ಮ ಕತೆ ಹೇಳತೊಡಗಿದರು.
ನಾವು ಮೊದಲ ಬಾರಿ ಗುರುದರ್ಶನ ಮಾಡಿದಾಗ ಅವರು ಯಾರಿಂದಲೂ ಯಾವುದೇ ವಸ್ತುವನ್ನು ಸ್ವೀಕರಿಸುತ್ತಿರಲಿಲ್ಲ ಎಂಬುದನ್ನು ಕಣ್ಣಾರೆ ಕಂಡೆವು. ನಮಗಾದರೋ, ಗುರುಗಳಿಗೆ ಮಲಗಲು ಹಾಸಿಗೆ ತಂದುಕೊಡಬೇಕೆಂಬ ಮಹದಾಸೆ. ಅದನ್ನು ನಾನೇ ತಯಾರಿಸಿ ಕೊಡಬೇಕು, ಎಂದಿತ್ತಾದರೂ ಅವರು ಸ್ವೀಕರಿಸದಿದ್ದರೇನು ಮಾಡಲೀ ಎಂಬ ಭಯವಿತ್ತು.
ಮನೆಗೆ ಬಂದ ನಾನು ಒಂದು ದಿನ ರಾತ್ರಿ ಮಲಗುವ ಮೊದಲು "ಗುರುಗಳೇ ನೀವು, ನಾವು ಸಿದ್ಧ ಮಾಡಿದ ಹಾಸಿಗೆಯನ್ನು ಸ್ವೀಕರಿಸುವಿರಾದಲ್ಲಿ ಅದನ್ನು ಸ್ವಪ್ನರೂಪದಲ್ಲಿ ತಿಳಿಸಿ, ನಾನು ಸಿದ್ಧ ಮಾಡಿ ತರುವೆ ಎಂದು ವಿನಮ್ರ ಭಕ್ತಿಯಿಂದ ಪಾರ್ಥಿಸಿ ಮಲಗಿದೆ.
ಮರುದಿನ ಬೆಳಗಿನ ಜಾವ ನಾನು ಗುರುನಿವಾಸಕ್ಕೆ ಹೋದಂತೆ, ಅಲ್ಲಿ ಗುರುನಾಥರ ಜೊತೆಗಿದ್ದ ವ್ಯಕ್ತಿ ಗುರುನಾಥರಿಂದ ಸಮ್ಮತಿ ಪಡೆದು ನಾವು ತಂದ ಹಾಸಿಗೆಯನ್ನು ಸ್ವೀಕರಿಸಿದಂತೆ ಸ್ವಪ್ನವಾಯಿತು. ಬೆಳಿಗ್ಗೆ ಐದು ಗಂಟೆಗೆ ಎದ್ದವನೇ ಸ್ನಾನಾದಿ ಕಾರ್ಯ ಮುಗಿಸಿ ಗುರುಗಳನ್ನು ಪ್ರಾರ್ಥಿಸಿ ಹಾಸಿಗೆ ಸಿದ್ಧ ಪಡಿಸಿ ಅಂದು ಸಂಜೆ ಹಾಸಿಗೆಯೊಂದಿಗೆ ನೇರವಾಗಿ ಗುರುನಿವಾಸಕ್ಕೆ ತೆರಳಿದೆ. ಅಂದು ನೀವೂ ಅಲ್ಲಿ ಇದ್ದಿರಾದರೂ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ರಿ. ಹೆದರುತ್ತಾ ಒಳಬಂದು ನಿಂತ ನಮ್ಮನ್ನು ಅಲ್ಲಿಂದಲೇ ಗಮನಿಸಿದ ಗುರುನಾಥರು "ನೀವು ತಂದ ವಸ್ತುವನ್ನು ನಾನು ಸ್ವೀಕರಿಸುವೆ. ಅಲ್ಲೇ ಇಟ್ಟು ಬನ್ನಿ" ಎಂದು ಕರೆದರು.
ನಂತರ ನೀವು (ಅಂದರೆ ನಾನು) ಬಂದು ಗುರುಗಳ ಅಣತಿಯಂತೆ ಆ ಹಾಸಿಗೆಯನ್ನು ಎತ್ತಿಕೊಂಡು ಮಂಚದ ಮೇಲಿಟ್ಟು ಆರತಿ ಬೆಳಗಿದಿರಿ. ಅದಾಗಲೇ ಅಲ್ಲಿ ಒಂದು ಅದ್ವೈತ ಪೀಠಕ್ಕೆ ಕಳಿಸಲೆಂದು ಸಕಲ ಭಿಕ್ಷಾ ಸಾಮಗ್ರಿಗಳನ್ನು ತಂದಿರಿಸಲಾಗಿತ್ತು. ಆ ನಂತರ ನಾವು ಅವರಿಗೆಂದು ತಂಡ ವಸ್ತುವನ್ನು ಬೇರೆಲ್ಲಿಗೋ ಕಳಿಸುವಿರೆಂದು ತಿಳಿದು ಮನಸ್ಸಿನಲ್ಲಿಯೇ ಬೇಸರಗೊಂಡಿದ್ದೇನು. ಆಗ ನನ್ನತ್ತ ಬಂದ ಗುರುನಾಥರು ಹೀಗೆ ಹೇಳಿದರು. "ನಂಗೆ ಅಂತ ಕೊಟ್ಟ ಮೇಲೆ ಅದು ಎಲ್ಲಿಗೆ ಹೋದ್ರೂ ನಂಗೇ ಸೇರಿದಂತೆ" ಎಂದು ಹೇಳಿ ನಸುನಗುತ್ತಾ ನನ್ನ ಕೆನ್ನೆಯನ್ನು ಸವರಿದರು.
ಮತ್ತೊಂದು ಸಂದರ್ಭದಲ್ಲಿ ಅದೇ ವ್ಯಕ್ತಿಯ ಮೇಲೆ ವಾಮಾಚಾರ ಪ್ರಯೋಗವಾಗಿತ್ತು. ಕಾಲಿನಲ್ಲಿ ವಿಪರೀತ ವ್ರಣವಾಗಿ ಯಾವುದೇ ವೈದ್ಯ ಉಪಚಾರಕ್ಕೂ ಗುಣವಾಗಿರಲಿಲ್ಲ. ಆಗ ಕೊನೆಯ ಪ್ರಯತ್ನವಾಗಿ ಗುರುವನ್ನು ನೆನೆಯುತ್ತಾ ಗುರುನಿವಾಸಕ್ಕೆ ಬಂದಾಗ ಯಾರನ್ನೂ ಮನೆಯೊಳಗೆ ಬಿಟ್ಟಿರಲಿಲ್ಲ. ಆಗ ಬೇಸರಗೊಂಡ ಇವರು ಗುರುವನ್ನು ನೆನೆಯುತ್ತಾ ಊರಿಗೆ ವಾಪಸಾದರು. ಅಂದು ರಾತ್ರಿ ಸ್ವಪ್ನದಲ್ಲಿ ದರ್ಶನ ನೀಡಿದ ಗುರುನಾಥರು ಇವರ ಕಾಲಿಗಾದ ಗಾಯವನ್ನು ಒತ್ತಿ ಸರಿಪಡಿಸಿ "ನೋಡಯ್ಯಾ, ಸ್ವಚ್ಛಗೊಳಿಸಿ ತೆಗೆದಿದ್ದೇನೆ" ಎಂದು ಹೇಳಿದಂತಾಯಿತು.
ಅದಾಗಿ ಎರಡು ದಿನದಲ್ಲಿ ಭೀಕರವಾಗಿದ್ದ ಕಾಲಿನ ಗಾಯ ಒಣಗಲಾರಂಭಿಸಿತು.
ಕೆಲ ದಿನಗಳ ನಂತರ ಗುರುನಾಥರನ್ನು ಭೇಟಿಯಾದಾಗ ಗುರುನಾಥರು "ನೀನು ಮನೆ ತಗೋಳ್ತೀಯಾ" ಅಂದ್ರು. ಆದರೆ ಅಂದು ವಾಸ್ತವವಾಗಿ ಅವರ ಆರ್ಥಿಕ ಸ್ಥಿತಿ ತುಂಬಾ ದುಸ್ತರವಾಗಿತ್ತು. ಆದ್ದರಿಂದ ಅವರು ಗುರುನಾಥರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಮನೆ ಸಿಕ್ಕಿತು. ಆಗ ಮತ್ತೆ ಭೇಟಿಯಾದ ಗುರುನಾಥರು "ಹಣ ಹೇಗೋ ಹೊಂದುತ್ತೆ. ಕಣಯ್ಯಾ.." ಎಂದಿದ್ದರು. ಅಂತೆಯೇ ಗುರುಕೃಪೆಯಿಂದಾಗಿ ತಿಂಗಳ ನಂತರ ಬ್ಯಾಂಕ್ ಸಾಲ ದೊರೆತು ಮನೆ ಖರೀದಿಸಿದರು. ಗುರುನಾಥರು ಆಗಲೇ ಅವರಿಗೆ ಮನೆಯ ಬೆಲೆ ನಾಲ್ಕು ಕಾಲು ಲಕ್ಷ ಎಂದಿದ್ರು. ಅದು ಹಾಗೆಯೇ ಆಯಿತು.
ಮನೆ ಖರೀದಿಸಿದ ಆ ವ್ಯಕ್ತಿಗೆ ಗಂಡು ಸಂತಾನವಿರಲಿಲ್ಲ. ಒಂದು ಮಗುವಾಗಿ ಸತ್ತಿತ್ತು. ಆಗ ಗುರುನಾಥರು ಒಂದು ಗಂಡು ಮಗುವಾಗುತ್ತೆ ಎಂದಿದ್ರು. ಅಂತೆಯೇ ನಡೆಯಿತು. ಆದರೆ ಆ ಮಗು ಸದಾ ಅನಾರೋಗ್ಯದಿಂದ ಬಳಲುತ್ತಿತ್ತು. ಇದು ಅವರ ಚಿಂತೆಗೂ ಕಾರಣವಾಗಿತ್ತು. ಆಗ ಮಗುವಿನ ಸಮಸ್ಯೆಯೊಂದಿಗೆ ಗುರುನಿವಾಸಕ್ಕೆ ಬಂದ ಇವರಿಗೆ ಗುರುನಾಥರು ಆ ಮಗುವಿನ ಫೋಟೋ ತೆಗೆಸಬೇಡ, ಎಲ್ಲವೂ ಸರಿಯಾಗುವುದು ಅಂದಿದ್ರು. ಆದರೆ ಯಾರೋ ಒಮ್ಮೆ ಆ ಮಗುವಿನ ಫೋಟೋ ತೆಗೆದಿದ್ರು. ಆನಂತರ ಮಗುವಿನ ಖಾಯಿಲೆ ಉಲ್ಬಣಗೊಂಡಿತ್ತು. ಈ ವಿಚಾರವಾಗಿ ಮತ್ತೊಮ್ಮೆ ಗುರುದರ್ಶನಕ್ಕೆ ಹೋದಾಗ ಗುರುಗಳು "ನಿಮಗೆ ಇನ್ನೊಂದು ಗಂಡು ಮಗುವಾಗುವುದು" ಎಂದಿದ್ರು. ಮೊದಲ ಮಗುವಿನ ಖಾಯಿಕ್ಲೆ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ಸಂದರ್ಭದಲ್ಲಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನಾಥ ಗಂಡು ಮಗುವಿಗೆ ತಾಯಿ ಆಗುವ ಭಾಗ್ಯ ಇವರಿಗೆ ಸಿಕ್ಕಿತು. ಖಾಯಿಲೆ ಇದ್ದ ಮಗು ತೀರಿಕೊಂಡು ದುಃಖದ ಮಡಿಲಿನಲ್ಲಿದ್ದ ದಂಪತಿಗಳಿಗೆ ಸಿಕ್ಕೇ ಈ ಅನಾಥ ಮಗು ಗುರುನಾಥರೇ ಕಳುಹಿಸಿದರೇನೋ ಎಂಬಂತಾಗಿತ್ತು. ಇಂದು ಆ ಮಗು ಇವರ ಮಡಿಲಿನಲ್ಲಿ ಬೆಳೆಯುತ್ತಿದ್ದು ಈ ದಂಪತಿಗಳು ಅನುಭವಿಸಿದ ನೋವನ್ನೆಲ್ಲ ಮರೆಸಿಬಿಟ್ಟಿದೆ.
ಈ ಎಲ್ಲ ಘಟನೆಗಳನ್ನು ವಿವರಿಸಿದ ಆ ವ್ಯಕ್ತಿ ತನ್ನ ಕೈ ಎತ್ತಿ ಮೇಲೆ ತೋರಿಸುತ್ತಾ ಎಲ್ಲವೂ ಆ ಗುರುವಿನ ಇಚ್ಛೆ ಎಂದು ನುಡಿದು ಕ್ಷಣಕಾಲ ಮೌನಕ್ಕೆ ಜಾರಿದರು....,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Parama poojya sakaraayapurada Dore venkatachala avadootarige nanna bhakti poorvaka namanagalu. Sarvarannu uddarisi asheervadisi Kaapadi Guruvarya. Yellaranu ee kantaka dinda mukthi kottu manashanti honduvante asheervadisi. Sarve jano sukinobavantu.
ReplyDelete