ಒಟ್ಟು ನೋಟಗಳು

Saturday, February 11, 2017

ಶ್ರೀ ಸದ್ಗುರು ಮಹಿಮೆ   



ಅಧ್ಯಾಯ - 130



    ಗ್ರಂಥ ರಚನೆ - ಚರಣದಾಸ 


ಪಾದಪೂಜೆ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಿವಾಸಕ್ಕೆ ಬರುತ್ತಿದ್ದ ಸ್ನೇಹಿತರೊಬ್ಬರು ಈ ದಿನ ಕರೆ ಮಾಡಿ ತನ್ನ ಅನುಭವವನ್ನು ಈ ರೀತಿ ಹೇಳಿದರು. ನಾನು ನನ್ನ ಮಗನ ಮದುವೆಯ ವಿಚಾರವಾಗಿ ಕೇಳಲು ಗುರುನಿವಾಸಕ್ಕೆ ಬಂದಿದ್ದೆ. 

ಆಗ ಗುರುನಾಥರು "ಯೋಚಿಸಬೇಡಿ. ಫೆಬ್ರವರಿ ಆರಕ್ಕೆ ಮದುವೆ ಆಗುತ್ತದೆ" ಎಂದು ನುಡಿದಿದ್ದರು. 

ಆದರೆ ಯಾವ ವರ್ಷವೆಂದು ಹೇಳಿರಲಿಲ್ಲ. ಅವರು ನುಡಿದಂತೆಯೇ ಎರಡು ವರ್ಷದ ನಂತರ ಫೆಬ್ರವರಿ ಆರರಂದೇ ಮಗನ ಮದುವೆ ಆಯಿತು. ಇಂದು ಗುರುಕೃಪೆಯಿಂದ ಅವರುಗಳು ಸುಖವಾಗಿದ್ದಾರೆ ಎಂದರು. 

ಮಧ್ಯೆ ಮಾತನಾಡಿದ ಚರಣದಾಸನಾದ ನಾನು ಇನ್ನೇನಾದರೂ ಅನುಭವ ಇದ್ರೆ ಹೇಳಿ ಅಂತ ಕೆದಕಿದೆ. ಆಗ ತುಸು ಮೌನವಾದ ಅವರು ಮಧ್ಯೆ ಹೇಳಲು ಆರಂಭಿಸಿದರು. 

ಮತ್ತೊಂದು ಬಾರಿ ನಾನು ಗುರುನಿವಾಸಕ್ಕೆ ಹೋಗಿದ್ದಾಗ ಗುರುನಾಥರು ಅಲ್ಲೇ ಈಶ್ವರ ದೇಗುಲದ ಹಿಂದಿದ್ದ ಸಮಾಧಿಯ ಬಳಿ ಕುಳಿತಿದ್ದರು. ಎಂದಿನಂತೆಯೇ  ಅವರ ಶಿಷ್ಯ ಬಳಗ, ಭಕ್ತರು, ಪರಿಹಾರ ಕೇಳಿ ಬಂದವರು ಹಾಗೂ ನಿತ್ಯವೂ ಅವರೊಂದಿಗೆ ಇರುವ ನಾಲ್ಕು ನಾಯಿಗಳು ಗುರುನಾಥರನ್ನು ಸುತ್ತುವರೆದಿದ್ದವು. 

ಗುರುನಾಥರು ಇದಾವುದರ ಪರಿವೆಯೂ ಇಲ್ಲದೇ ಸುತ್ತಲಿದ್ದ ಎಲ್ಲರಿಗೂ ಹಣ್ಣನ್ನು ಹಂಚುತ್ತಿದ್ದರು. ತಾನು ಒಂದೇ ಒಂದು ಹಣ್ಣನ್ನು ತಿನ್ನುತ್ತಿರಲಿಲ್ಲ. 

ಇದೆಲ್ಲವನ್ನೂ ದೂರದಲ್ಲೇ ಕುಳಿತು ಗಮನಿಸುತ್ತಿದ್ದ ನಾನು ಮನಸ್ಸಿನಲ್ಲೇ "ಗುರುಗಳು ಮಾತ್ರ ಏನನ್ನೂ ತಿನ್ನುತ್ತಿಲ್ಲ. ಎಲ್ಲವನ್ನೂ ನಮಗೇ  ನೀಡುತ್ತಿದ್ದಾರೆ. ನನ್ನ ಕೈಯಿಂದ ಏನಾದರೂ ಸ್ವೀಕರಿಸಿದರೆ ಎಷ್ಟು ಚಂದವಿರುತ್ತಿತ್ತು" ಎಂದು ಮನದಲ್ಲೇ ಅಂದುಕೊಂಡೆ. ಇದಾಗಿ ಕೆಲವೇ ಕ್ಷಣದಲ್ಲಿ ನನ್ನ ಬಳಿ ಬಂದ ಗುರುನಾಥರು ನನ್ನ ಕೈಯಿಂದ ಒಂದು ಹಣ್ಣನ್ನು ತಮ್ಮ ಬಾಯಿಗೆ ಹಾಕಿಸಿಕೊಂಡು ನಗುತ್ತಾ ಮುನ್ನಡೆದರು. 

ಆಗ ನಾನು ಸರ್ವಾಂತರ್ಯಾಮಿಯಾದ ಗುರುವಿಗೆ ಮನಸ್ಸಿನಲ್ಲೇ ನನ್ನ ಸಾಷ್ಟಾಂಗ ನಮಸ್ಕಾರವನ್ನು ಅರ್ಪಿಸಿದೆ. ಹಾಗೂ ಗುರು ಭಾವರೂಪಿಯೇ ವಿನಃ ಬಾಹ್ಯ ರೂಪಿಯಲ್ಲ ಎಂದು ತಿಳಿದುಕೊಂಡೆ, ಎಂದು ನುಡಿದು ಮುಂದಿನ ಅನುಭವವನ್ನು ವಿವರಿಸಲು ಉತ್ಸಾಹದಿಂದ ಸಿದ್ಧರಾದರು. 

ಈ ಘಟನೆ ನಡೆದಿದ್ದು ನಾನು ಸಖರಾಯಪಟ್ಟಣಕ್ಕೆ ಪ್ರಥಮ ಬಾರಿಗೆ ಬಂದಾಗ. ಅಂದು ನಾನು ಶಿವಮೊಗ್ಗದ ನನ್ನ ಮಿತ್ರ ಹಾಗೂ ಇಂದು ವಿಶ್ವ ಪ್ರಸಿದ್ಧಿಯಾಗಿರುವ ಒಂದು ಆಶ್ರಮದ ಪ್ರಮುಖ ಪ್ರತಿನಿಧಿಯೊಂದಿಗೆ ಗುರುನಿವಾಸಕ್ಕೆ ಬಂದೆವು. ಗುರುನಾಥರು ನಮ್ಮನ್ನು ಆದರದಿಂದ ಸ್ವಾಗತಿಸಿ ಆಶ್ರಮದ ಪ್ರತಿನಿಧಿಗೆ ಪಾದ ಪೂಜೆ ಸಲ್ಲಿಸಿದರು. ಆಗ ಆ ಪ್ರತಿನಿಧಿಯೂ ಕೂಡ ಗುರುನಾಥರಿಗೆ ಪಾದಪೂಜೆಗೈದರು. 

ನಂತರ ಮಾತನಾಡುತ್ತಾ ಗುರುನಾಥರು "ಭಗವಂತ ಎಲ್ಲರಲ್ಲೂ ಇದ್ದಾನಪ್ಪಾ. ಸೃಷ್ಟಿಯ ಸಕಲ ಜೀವಿಗಳಲ್ಲೂ 'ಅವನೇ' ಇರುವನು. ಈ ಪೂಜೆ ಗೌರವ ನಿಮ್ಮ ಶರೀರಕ್ಕಲ್ಲ. ಅದರೊಳಗೆ ಇರುವ ಭಗವಂತನಿಗೆ. ಹೀಗೆ ಎಲ್ಲರನ್ನೂ ಭಿನ್ನವೆಣಿಸದಂತೆ ಏಕವಾಗಿ ಕಾಣಬೇಕು. ಅದುವೇ ಅದ್ವೈತ" ಎಂದು ನುಡಿದು ಮಾತು ಮುಗಿಸಿದರು. 

ಮತ್ತೊಂದು ಸಂದರ್ಭ ನಾನು ನನ್ನ ಸ್ನೇಹಿತರೊಂದಿಗೆ ಶೃಂಗೇರಿಯಲ್ಲಿ ಗುರುನಾಥರನ್ನು ದರ್ಶನಗೈವ ಅದೃಷ್ಟ ಬಂದಿತ್ತು. ಈ ಕಾಲದಲ್ಲೂ ಅಂತರ್ಜಾತಿಯ ವಿವಾಹಕ್ಕೆ ಸಂಪ್ರದಾಯಸ್ಥ ಸಮಾಜ ವಿರೋಧ ವ್ಯಕ್ತಪಡಿಸುತ್ತಿದೆ. 

ಅಂತಹದೇ ಒಂದು ಸಮಸ್ಯೆಯಲ್ಲಿ ಸಿಲುಕಿದ್ದ ನಮ್ಮ ಭಾವನೆಯೂ ಕೂಡ ಇಂತಹ ಕಟ್ಟುಪಾಡುಗಳಿಂದ ಹೊರತಾಗಿರಲಿಲ್ಲ. ಇದನ್ನರಿತ ಗುರುನಾಥರು ನಸುನಕ್ಕು "ಈಗ ಅವರವರೇ ನೋಡಿಕೊಂಡಿರುವಂತೆಯೇ ಆ ಭಾಂಧವ್ಯವನ್ನೇ ಗಟ್ಟಿಗೊಳಿಸಿ. ಈ ಮದುವೆಯಿಂದ ಅವರಿಬ್ಬರೂ ಸುಖವಾಗಿರುವರು. ಇಂಥ ದಿನ ಇಷ್ಟು ಸಮಯಕ್ಕೆ ಹುಡುಗನ ಕಡೆಯವರು ನಿಮ್ಮನ್ನು ಸಂಪರ್ಕಿಸಿದರೆ ಸರಿಯಲ್ಲವೇ? ಒಳ್ಳೆಯದಾಗಲಿ" ಎಂದು ನಮ್ಮನ್ನು ಹರಸಿ ಕಳಿಸಿಕೊಟ್ಟರು.

ಗುರುನಾಥರು ಅಂದಂತೆಯೇ ಅದೇ ಸಮಯ, ಅದೇ ದಿನ ಹುಡುಗನ ಕಡೆಯವರು ನಮ್ಮನ್ನು ಸಂಪರ್ಕಿಸಿದರು. ಗುರುಗಳು ಹೇಳಿದಂತೆಯೇ ಅವರಿಬ್ಬರ ಮದುವೆ ನಡೆಸಿದೆವು. ಇಂದು ಅವರು ಸುಖವಾಗಿ ಇರುವರು. 

ಹೀಗೆ ನಾನು ಗುರು ನಿವಾಸಕ್ಕೆ ಭೇಟಿ ನೀಡಿದಾಗಲೆಲ್ಲ ನನ್ನೊಳಗಿನ ಮೌಢ್ಯ ಹಾಗೂ ಕಟ್ಟುಪಾಡುಗಳನ್ನು ಬಿಡಿಸಿ, ನನ್ನನ್ನು ನಿಜ ಅರ್ಥದಲ್ಲಿ ಮನುಷ್ಯನಾಗಿಸಿದವರು ನನ್ನ ಸದ್ಗುರುನಾಥರು ಎಂದು ನುಡಿದು ಗದ್ಗದಿತರಾದರು.....,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Swamy venkatachala Avara Divya charanamruta galige nanna bhakti poorvaka namanagalu. Sadaa kaala nimma aashirvaada haagu rakshe yellara mele erali. Hari om tatsat.

    ReplyDelete