ಒಟ್ಟು ನೋಟಗಳು

Tuesday, February 21, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 140


    ಗ್ರಂಥ ರಚನೆ - ಚರಣದಾಸ 

ಕೂಡಿದಷ್ಟೂ ಹಿಂಸೆ.... ಕಳೆದಷ್ಟೂ..... 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಶಿವಮೊಗ್ಗ ಜಿಲ್ಲೆಯವರಾದ ಓರ್ವ ಮಹಿಳೆ ತನ್ನ ಮಗನೊಂದಿಗೆ ಗುರುನಿವಾಸಕ್ಕೆ ಬಂದರು. ಅದಾಗಲೇ ವಯೋವೃದ್ಧೆಯಾಗಿದ್ದ ಆಕೆಯು ಬಂದ ಕಾರಣವೇನೆಂದು ಗುರುನಾಥರು ವಿಚಾರಿಸಲು ಆಕೆ ಹೀಗೆ ಹೇಳತೊಡಗಿದರು. 

"ಸ್ವಾಮೀ, ನಮ್ಮ ಯಜಮಾನರು ಸ್ವಲ್ಪ ಆಸ್ತಿ ಹೊಂದಿದ್ದು ಜೊತೆಗೇ ಪೌರೋಹಿತ್ಯವನ್ನು ಮಾಡುತ್ತಿರುವರು. ನಮಗೆ ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿರುವರು. ನಮ್ಮ ಯಜಮಾನರು ಶೃಂಗೇರಿಯ ಯತೀಶ್ವರರಾದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀತೀರ್ಥರ ಕಾಲದಲ್ಲಿ ಶ್ರೀ ಮಠದಲ್ಲಿ ಸೇವೆಯಲ್ಲಿದವರು. ನನಗಾದರೋ ವರದಹಳ್ಳಿಯ ಶ್ರೀ ಶ್ರೀ ಶ್ರೀ ಶ್ರೀಧರ ಸ್ವಾಮಿಗಳಿಂದ ರಾಮನಾಮ ಉಪದೇಶವೂ ಆಗಿದೆ. ಹೀಗಿದ್ದೂ ನನಗೆ ಜೀವನದಲ್ಲಿ ನೆಮ್ಮದಿ ಇಲ್ಲವಾಗಿದೆ. ಕಾರಣ ನನ್ನ ಎರಡನೇಯ ಮಗನು ಮನೋರೋಗಿಯಾಗಿರುವನು. ಆತ ಹೇಳಿದಂತೆ ಕೇಳುವುದಿಲ್ಲ. ವಿಪರೀತ ಸಿಟ್ಟು, ಸ್ನಾನ ಮಾಡಲು ಆರಂಭಿಸಿದನೆಂದರೆ  ಇಡೀ ದಿನ ಅದನ್ನೇ ಮಾಡುತ್ತಾನೆ. ಅವನ ನಡವಳಿಕೆ ಎಲ್ಲವೂ ವಿಪರೀತವಾದುದು. ಅವನಿಗಾಗಲೇ ವಯಸ್ಸು ದಾಟುತ್ತಿದ್ದು ಮದುವೆ ಆಗುತ್ತಾನೋ, ಇಲ್ಲವೋ ತಿಳಿಯುತ್ತಿಲ್ಲ. ತಾವು ಕೃಪೆ ಮಾಡಿ ಅವನ ಖಾಯಿಲೆ ಗುಣಪಡಿಸಬೇಕು" ಎಂದು ಪ್ರಾರ್ಥಿಸಿದರು. ಜೊತೆಗೆ ಅವನ ನಡವಳಿಕೆಗಳು ನನಗೆ ಹಿಂಸೆಯಾಗುತ್ತಿದೆ ಎಂದೂ ತಿಳಿಸಿದರು. 

ಕೂಡಲೇ ಗುರುನಾಥರು ಆಕೆಯನ್ನು ಕುರಿತು ಹೀಗೆ ಕೇಳಿದರು: "ನೋಡಮ್ಮಾ, ಈಗ ತಪ್ಪುಗಳಿಗೆಲ್ಲ ನಿನ್ನ ಮಗನೇ ಕಾರಣ ಎಂಬಂತೆ ಹೇಳುತ್ತಿದ್ದೀಯಲ್ಲ. ನೀನು ಜೀವನದಲ್ಲಿ ಏನೂ ತಪ್ಪು ಮಾಡಿಲ್ಲವೇ?" ಎನ್ನಲು ಆಕೆ ಇಲ್ಲವೆಂದು ಹೇಳಿದರು. ಆಗ ಇದ್ದಕ್ಕಿದ್ದಂತೆ ಸಿಟ್ಟಾದ ಗುರುನಾಥರು "ಏನಮ್ಮಾ, ಈ ನಿನ್ನ ಮಗ ನಿನ್ನ ಗರ್ಭದಲ್ಲಿದ್ದಾಗ ಆ ಮಗು ಬೇಡವೆಂದು ಮಾತ್ರೆ ತಿಂದಿದ್ದು ನೀನಲ್ಲವೇ?" ಎನ್ನಲು ಆಕೆ ಹೌದೆಂದು ಉತ್ತರಿಸಿದಳು. 

ಆಗ ಗುರುನಾಥರು ಸಿಟ್ಟಿನಿಂದ "ಸೃಷ್ಟಿಸುವ ಅಧಿಕಾರ ನಿನಗೆ ಇಲ್ಲವೆಂದ ಮೇಲೆ ಸಾಯಿಸುವ ಅಧಿಕಾರ ನಿನಗೆ ಕೊಟ್ಟವರು ಯಾರು?. ಗುರುವಿನ ಇಚ್ಛೆಗೆ ವಿರುದ್ಧವಾಗಿ ನಿಂತ ನೀನು ಈಗ ಅದರ ಫಲ ಬೇಡವೆಂದರೆ ಹೇಗೆ?" ಎಂದು ಪ್ರಶ್ನಿಸಿದರು. 

ಆಗ ಆ ವಯೋವೃದ್ಧೆ ತನ್ನ ತಪ್ಪಿನ ಅರಿವಾಗಿ, "ಈಗ ಮುಂದೇನು ಮಾಡಲಿ ಗುರುಗಳೇ?" ಎಂದು ಕೇಳಿದರು. ಅದಕ್ಕೆ ಗುರುಗಳು ಕೆಲವು ಪರಿಹಾರ ಮಾರ್ಗಗಳನ್ನು ತಿಳಿಸಿದರು. ಜೊತೆಗೆ "ಮುಂದೆ ಒಬ್ಬ ಗುರು ಬರುವನು. ಆಗ ಎಲ್ಲವೂ ಸರಿಯಾಗುವುದು" ಎಂದರು. ಇಂದು ಆ ಮಾತು ನಿಜವಾಗಿದೆ. 

ಮತ್ತೂ ಮುಂದುವರೆದ ಗುರುಗಳು "ಮನೇಲಿ ಬೀರುವಿನಲ್ಲಿ ತುಂಬಿಟ್ಟಿರುವ ಪಾತ್ರೆ ಬಿಳೀ ಪಂಚೆಗಳನ್ನು ಕೊಟ್ಟು ಖಾಲಿ ಮಾಡು, ಕೂಡಿದಷ್ಟೂ ಹಿಂಸೆ ಜಾಸ್ತಿ" ಎಂದು ಹೇಳಿದರು. ಆಕೆ ಅಲ್ಲಿಂದ ಊರಿಗೆ ಬಂದು ಹಾಗೆಯೇ ನಡೆದುಕೊಂಡರು....,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Shukruvaarada shubadinada bhakti poorvaka namanagalu venkatachala gurugalige. Yellaranu sadaa kaala nimma krupe haagu rakshe kottu manashanti honduvante asheervadisi. Sarve jano sukinobavantu.

    ReplyDelete