ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 144
ಗ್ರಂಥ ರಚನೆ - ಚರಣದಾಸ
ನಮ್ಮದಲ್ಲದ ಕೆಲಸ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸೃಷ್ಠಿಯ ಚರಾಚರಗಳೆಲ್ಲವೂ ಗುರುವಿನ ಅಧೀನ. ಅವೆಲ್ಲವೂ ಅವನ ಅಣತಿಯಂತೆಯೇ ನಡೆಯುತ್ತಿರುತ್ತವೆ. ಈ ಮಧ್ಯೆ ನಾವು ನಮ್ಮತನ ಅಹಂಕಾರ ತೋರಿಸಿ ಸದ್ಗುರುವಿನ ಇಚ್ಚೆಗೆ ವಿರುದ್ಧವಾಗಿ ನಡೆಯಹೋದರೆ ತೊಂದರೆ ಕಟ್ಟಿಟ್ಟಬುತ್ತಿ. ಉಪನ್ಯಾಸಕ ವೃತ್ತಿಯಲ್ಲಿರುವ ಒಬ್ಬ ವ್ಯಕ್ತಿ ಗುರುನಿವಾಸಕ್ಕೆ ಆಗಾಗ್ಗೆ ಬರುತ್ತಿದ್ದರು. ಗುರುನಾಥರ ಮನೆಯಲ್ಲಿ ಮುಕ್ತನಾಗಿರುತ್ತಿದ್ದ ಈತ ಗುರುನಾಥರೊಂದಿಗೆ ತುಂಬಾ ಸಲುಗೆಯಿಂದಿದ್ದರು. ಆತ ಆಗಾಗ್ಗೆ "ಗುರುಗಳೇ ನಾನು ನಿಮ್ಮ ಚರಿತ್ರೆ ಬರೆಯಬೇಕು. ಅನುಮತಿ ನೀಡಿ" ಎಂದು ಕೇಳುತ್ತಿದ್ದರು. ಒಮ್ಮೆ ಗುರುನಾಥರು "ಆಯ್ತಯ್ಯಾ ಬರೆಯುವಂತೆ" ಎಂದರು. ಇದರಿಂದ ಖುಷಿಯಾದ ಆತ ಕೂಡಲೇ ಪುಸ್ತಕದೊಂದಿಗೆ ಬಂದು ಗುರುಗಳ ಮುಂದೆ ಕುಳಿತರು. ಗುರುನಾಥರು ಹೇಳುವುದನ್ನೆಲ್ಲ ಬರೆಯತೊಡಗಿದರು. ಬಿಡುವಿದ್ದಾಗಲೆಲ್ಲ ಈ ಕೆಲಸ ನಡೆಯುತ್ತಿತ್ತು.
ಒಮ್ಮೆ ಗುರುನಾಥರು ಅವರನ್ನು ಕರೆದು ಹೀಗೆ ಹೇಳಿದರು. "ನೀನು ಏಳನೆಯ ಅಧ್ಯಾಯ ಬರೆಯುವ ಹೊತ್ತಿಗೆ ನನ್ನ ಮೇಲಿನ ಅಭಿಮಾನ ಕಳೆದುಕೊಂಡು ನನ್ನ ಮೇಲೆ ಆರೋಪ ಮಾಡುತ್ತೀಯಾ. ಅದೇ ಕೊನೆ. ಆ ಮೇಲೆ ನಿನಗೆ ಬರೆಯಲಾಗುವುದಿಲ್ಲ. ಅಲ್ಲಿಗೆ ನಮ್ಮ ಸ್ನೇಹವೂ ಮುರಿದು ಬೀಳುವುದು" ಎಂದಿದ್ದರು.
ಅವರೆಂದಂತೆಯೇ ಆತ ಗುರುಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಜಗಳವಾಡಿ ದೂರಾದನು. ಬೆಂಗಳೂರು ನಿವಾಸಿಯಾಗಿದ್ದ ಆತನ ಮನೆಗೆ ಕೊನೆಯದಾಗಿ ಗುರುನಾಥರು ಭೇಟಿ ನೀಡಿದ ಸಂದರ್ಭ ನಾನೂ ಕೂಡಾ ಜೊತೆಗಿದ್ದೆ. ಅಂದು ಎಲ್ಲರಿಗೂ ಕೈಮುಗಿದು ಆ ಮನೆಯಿಂದ ಹೊರಹೋದ ಗುರುನಾಥರು ಮತ್ತೆ ಆ ಕಡೆ ಸುಳಿಯಲಿಲ್ಲ.
ಘಟನೆ ನಡೆದು ಕೆಲ ವರ್ಷದ ನಂತರ ತನ್ನ ತಪ್ಪಿನ ಅರಿವಾದ ಆತ ಮತ್ತೆ ಗುರುನಾಥರಲ್ಲಿಗೆ ಬರಬೇಕೆಂದುಕೊಂಡನಾದರೂ ಅದು ಇಂದಿಗೂ ಸಾಧ್ಯವಾಗಲಿಲ್ಲ.
ಇದರಿಂದ ನನ್ನ ಜೀವನದಲ್ಲಿ ಎರಡು ಪಾಠವನ್ನು ಕಲಿತುಕೊಂಡೆ.
ಒಂದು, ಅಂತಹ ಮಹಾನ್ ಶಕ್ತಿಯಾಗಿದ್ದ ಗುರು ಮನಸ್ಸು ಮಾಡಿದ್ದಲ್ಲಿ ಈ ಆಪಾದನೆಗಳು ಬರದಂತೆ ತಡೆಯಬಹುದಾಗಿತ್ತು ಅಥವಾ ತನಗೆ ನೋವು ಮಾಡಿದ ಆತನನ್ನು ಶಪಿಸಬಹುದಾಗಿತ್ತು. ಆದರೆ ಅದಾವುದನ್ನೂ ಮಾಡದೇ ಈಶ್ವರನ ನಿಯಮಕ್ಕೆ ಬದ್ಧನಾಗಿ ಸಾಮಾನ್ಯರಂತೆ ತಾವೂ ಎಲ್ಲವನ್ನೂ ಅನುಭವಿಸಿದ ಗುರುನಾಥರ ಈ ನಡೆ ನಮಗೆಲ್ಲರಿಗೂ ಮಾದರಿ.
ಇನ್ನೊಂದು, ಇನ್ನೊಬ್ಬರು ತಪ್ಪು ಮಾಡಿದರೆ ಅವರಿಗೆ ಬೈಯಬೇಡಿ. ಅದರಲ್ಲೂ ಪಾಠವಿದೆ. ಅವರ ತಪ್ಪು, ಅದರ ಫಲಿತಾಂಶ ನಾವು ಈ ರೀತಿಯ ತಪ್ಪು ಮಾಡಬಾರದೆಂಬುದನ್ನು ತೋರಿಸುತ್ತದೆ. ನಮ್ಮನ್ನು ಎಚ್ಚರವಾಗಿ ನಡೆಯಲು ಪ್ರೇರೇಪಿಸುತ್ತದೆ. ಅಂದ ಮೇಲೆ ಅವನೂ ನಮಗೆ ಪಾಠ ಹೇಳಿಕೊಟ್ಟಂತೆ ಅಲ್ಲವೇ? ಹಾಗಿರುವಾಗ ನಾವು ಆತನನ್ನು ದೂಷಿಸುವುದು ಸರಿಯಲ್ಲ ಅಲ್ಲವೇ ಎಂಬ ಗುರುನಾಥರ ಮಾತು ಜಗತ್ತನ್ನು ಗುರುವೆಂದು ಒಪ್ಪಿ ನಡೆ ಎಂಬ ಪಾಠವನ್ನು ಇಂದಿಗೂ ಕಲಿಸಿ ಮುನ್ನಡೆಸುತ್ತಿದೆ.....,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Parama poojya venkatachala avadootarige nanna saashtaanga pranaamagalu. Poojyare yellarigu manashanti honduvante asheervadisi haagu e kantaka dinda mukthi kottu Kaapadi. Sarve jano sukinobavantu.
ReplyDelete