ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 139
ಗ್ರಂಥ ರಚನೆ - ಚರಣದಾಸ
ಗುರುದರ್ಶನ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ನಂತರ ಕ್ಷಣಕಾಲ ಕಣ್ಣುಮುಚ್ಚಿ ಮೌನವಾದ ಆ ಮಹಾತಾಯಿ ಗತದಿನಗಳನ್ನು ನೆನಪಿಸಿಕೊಂಡು ಮತ್ತಷ್ಟು ಉತ್ಸಾಹದಿಂದ ಹೇಳು ಅನುವಾದರು. ಮತ್ತೆ 1995ರಲ್ಲಿ ಗುರುನಿವಾಸಕ್ಕೆ ಬಂದಾಗಲೂ ನನ್ನನ್ನು ಅನುಗ್ರಹಿಸಿದರು. 1997ರ ನಂತರ ನಾನು ಪದೇ ಪದೇ ಗುರುನಿವಾಸಕ್ಕೆ ಬರತೊಡಗಿದೆ.
ಒಮ್ಮೆ ನನ್ನನ್ನು ಕರೆದು "ಜಗತ್ತನ್ನೇ ಗುರುವೆಂದು ಸ್ವೀಕರಿಸು. ಆಗ ಎಲ್ಲಾ ತಿಳಿಯುತ್ತೆ" ಅಂದರು. ಆದರೆ ಗುರು ಪದದ ಅರಿವಿರದ ನಾನು ಅವರೊಂದಿಗೆ ಪದೇ ಪದೇ ಸ್ನೇಹಿತನಂತೆ ಜಗಳವಾಡುತ್ತಿದ್ದೆ. ಇಂದು ಆ ಮಹಾತ್ಮನ ಹತ್ತಿರ ಎಷ್ಟು ಹಗುರವಾಗಿ ನಡೆದುಕೊಂಡೆ ಎಂದು ದುಃಖವಾಗುತ್ತದೆ ಎಂದು ನಿಟ್ಟುಸಿರಿಟ್ಟರು.
ಚರಣದಾಸನಾದ ನಾನು ಅವರನ್ನು "ನೀವು ನಿಮ್ಮ ಲೌಕಿಕದ ವಿಷಯಗಳನ್ನು ಏನೂ ಕೇಳಲಿಲ್ಲವೇ?" ಎಂದೆ.
ಅದಕ್ಕವರು "ಇಲ್ಲ.... ಎಂದೂ ಕೇಳಲಿಲ್ಲ.. ಹಾಗೂ ಗುರುಗಳೂ ಎಂದೂ ವಿಚಾರಿಸಲಿಲ್ಲ. ಆದರೆ ಒಮ್ಮೆ 2005 ರಲ್ಲಿ ನಮ್ಮೆಜಮಾನರನ್ನು ಕರೆದು "ಏನಯ್ಯಾ 10/1 ಕಾಣಿಸುತ್ತಾ ಇದೆ. ಆ ಜಾಗದ ದಾಖಲೆ ಸರಿ ಇಲ್ವಲ್ಲಾ?. ಸರಿಪಡ್ಕೊಳ್ಳಿ. ಇಲ್ಲಾಂದ್ರೆ ಮುಂದೆ ತೊಂದರೆ ಆಗುತ್ತದೆ" ಅಂದಿದ್ರು. ಆದ್ರೆ ಅಂದು ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದರ ಫಲವಾಗಿ ಇಂದು ನಾವು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ" ಎಂದು ವ್ಯಥೆಪಟ್ಟರು.
ಒಮ್ಮೆ ಗುರುನಿವಾಸಕ್ಕೆ ಬಂದಾಗ ನಮ್ಮೆಜಮಾನರನ್ನು ಕರೆದು "ಏನಯ್ಯಾ ಹತ್ತು ದಿವಸ ಹೆಂಡತಿ ಬಿಟ್ಟು ಇರ್ತೀಯಾ?" ಎಂದು ಕೇಳಲು ನಮ್ಮ ಯಜಮಾನರು "ಹೂಂ" ಅಂದ್ರು.
ನಂತರ ಗುರುಗಳು "ಆಯಿತು. ನಿನ್ನ ಮನೆ ಕಡೆ ನಾನು ನೋಡ್ಕೋತೀನಿ. ಹೋಗಿ ಬಾ" ಅಂದ್ರು. ನಂತರ ನಾನು ಗುರುನಿವಾಸದಲ್ಲೇ ಉಳಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಇದ್ದು ಇರದಂತಿರಬೇಕು ಎಂದು ಕಲಿಸುತ್ತಿದ್ದ ಗುರುನಾಥರ ವಿಧಾನ ತುಂಬಾ ವಿಶಿಷ್ಟವಾದುದು.
ಆ ನಂತರ ನಮಗೆ ನಮ್ಮ ಕರ್ತವ್ಯವೇ ಗುರುವೆನಿಸತೊಡಗಿತು. ಆ ನಂತರ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಬರತೊಡಗಿದೆ ಎಂದರು. ಮತ್ತೊಮ್ಮೆ ಚಿಕ್ಕಮಗಳೂರಿನಲ್ಲಿ ಭೇಟಿಯಾಗಿದ್ದರು. ಆಗ "ನಾನು ನಿಮ್ಮನೆಗೆ ಬಂದೇ ಬರ್ತೀನಿ ಕಣಮ್ಮಾ...." ಎಂದು ರಾತ್ರಿ ಹತ್ತು ಗಂಟೆಯವರೆಗೂ ಜೊತೆಗೆ ಇರಿಸಿಕೊಂಡರು. ನಂತರ ಅನಾರೋಗ್ಯ ಕಾರಣದಿಂದಾಗಿ ಬರಲಾಗಲಿಲ್ಲ. ನಮ್ಮನ್ನು ಕಾರಿನವರೆಗೂ ಬಂದು ಕಳಿಸಿಕೊಟ್ಟಿದ್ದರು.
ಅವರು ಕಾಲವಾದ ಮೂರನೇ ದಿನ ಬೆಳಿಗ್ಗೆ 11-45ರ ಸಮಯವಿರಬಹುದು. ನಮ್ಮ ಯಜಮಾನರು "ಬಾ ನೋಡು, ಗುರುನಾಥರು ಬಂದಿದ್ದಾರೆ" ಎಂದು ಕೂಗಿ ಕರೆಯತೊಡಗಿದರು. ನಾನು ಹೋದೆ. ನಮ್ಮ ಕಛೇರಿಯ ಕುರ್ಚಿಯಲ್ಲಿ ಕರುಣಾಳು ಗುರುನಾಥರು ಸಜೀವವಾಗಿ ಕುಳಿತಿದ್ದು ಕಾಣಿಸಿತು. ನಾವಿಬ್ಬರೂ ನಮಸ್ಕರಿಸಲು, ಕೈ ಎತ್ತಿ ಮುಗುಳ್ನಗುತ್ತಾ ಆಶೀರ್ವದಿಸಿದ ಗುರುನಾಥರು ಅದೃಶ್ಯರಾದರು.
"ನಿಮ್ಮನೆಗೆ ಬಂದೆ ಬರ್ತೀನಿ" ಎಂಬ ವಾಕ್ಯವನ್ನು ಉಳಿಸಿಕೊಂಡ ಗುರುಕರುಣೆಯನ್ನು ಕಂಡು ನಮಗೆ ಕಣ್ಣೀರು ಬಂತು, ಎಂದು ಕ್ಷಣಕಾಲ ಮೌನಕ್ಕೆ ಶರಣಾದರು.
ಮತ್ತೆ ಮುಂದುವರೆದು "ಹೀಗಿರಲು ಆ ನನ್ನೊಡೆಯ ನನ್ನೊಂದಿಗೆ ಇಲ್ಲ ಎಂದು ಹೇಗೆ ಹೇಳಲಿ" ಎಂದು ಪ್ರಶ್ನಿಸಿ, ಇಂದು ನಾನು ಈ ಮನೆಯ ನಾಲ್ಕು ಗೋಡೆಯನ್ನು ಬಿಟ್ಟು ಎಲ್ಲಿಗೂ ಬರಲಿಚ್ಛಿಸುತ್ತಿರಲಿಲ್ಲ. ಕಾರಣ ಆ ನನ್ನೊಡೆಯನ ಅನಂತ ಕರುಣೆ, ಪ್ರೀತಿ ಎಲ್ಲವೂ ಇಲ್ಲೇ ಇದೆಎಂದೆನಿಸುತ್ತಿದೆ. ಇಷ್ಟು ಹೇಳಿ ಗುರುಗಳು ದರ್ಶನ ಕೊಟ್ಟ ಕುರ್ಚಿಯನ್ನು ದಿಟ್ಟಿಸಿ ಮನಸಾರೆ ವಂದಿಸಿ "ಇಷ್ಟೇ ಕಣಪ್ಪಾ ನಂಗೆ ನನ್ನ ಗುರು ನೀಡಿದ ಭಿಕ್ಷೆ. ನಾ ಹೇಳಿದ್ದೆಲ್ಲವೂ ಅವನ ಪಾದಕ್ಕೆ ಸಮರ್ಪಣೆ" ಎಂದು ಹೇಳಿ ಕಣ್ತುಂಬಿಕೊಂಡರು.
ಆ ದಂಪತಿಗಳ ಅತಿಶಯವಿರದ ಮಾತು, ನಡವಳಿಕೆ ಹಾಗೂ ಸಮರ್ಪಣಾ ಮನೋಭಾವ ನನ್ನಂತಹ ಹಠಮಾರಿಗೆ ಒಂದು ಪಾಠವೆನಿಸಿತು. ಆ ದಂಪತಿಗಳಿಗೆ ಮನದಲ್ಲೇ ವಂದಿಸಿದೆ.
"ನಿನಗೆಲ್ಲವೂ ಆಗಿ ಹೋಗಿದೆ. ಸಾಧ್ಯವಾದಾಗ ವೇದಿಕೆ ಮತ್ತು ಪಾದುಕಾಪೂಜೆ ಮಾಡು ಸಾಕು. ಬೇರೇನೂ ಬೇಡ ಅಂತ ಗುರುನಾಥರು ನನಗೆ ಹೇಳಿದರು. ಆಮೇಲೆ ನಾನು ಪೂಜಿಸುತ್ತಿದ್ದ ಎಷ್ಟೋ ವಿಗ್ರಹಗಳನ್ನು ಕೊಟ್ಟು ಬಿಟ್ಟೆ. ನನ್ನ ದೇಹಾಲಯದಲ್ಲೇ ಅವನ ಪ್ರತಿಷ್ಠೆ ಮಾಡಿದ ಮೇಲೆ ಬೇರೆಲ್ಲಾ ಏಕೆ ಎಂಬುದೇ ನನ್ನ ನಂಬಿಕೆ".
"ಗುರುವೆಂಬ ದೇಹವನ್ನು ಎಷ್ಟು ಬಾರಿ ನೋಡಿದರೂ ನಮ್ಮೊಳಗಿನ ನಾವು ಬದಲಾಗದ ಮೇಲೆ ಏನು ಉಪಯೋಗ?. ಆ ಸ್ಥಳದ ಬಗ್ಗೆ ಮನಸ್ಸಿಗೆ ಬಂದರೆ ಸಾಕು. ಅದುವೇ ಭಾಗ್ಯ. ಅದೇ ಜ್ಞಾನ ಸ್ನಾನ. ನಾನು ಸದಾ ಗುರುನಾಥರು ನನಗೆ ಅನುಗ್ರಹಿಸಿದ ಅನುಭವಗಳನ್ನು ಮೆಲುಕು ಹಾಕುತ್ತಾ ಇರುತ್ತೇನೆ. ಹಾಗಾಗಿ ಎಲ್ಲಿದ್ದರೂ ಅವನ ಕೃಪಾದೃಷ್ಟಿ ನಮ್ಮ ಮೇಲೆ ಇರುವುದೆಂಬ ದೃಢನಂಬಿಕೆಯಲ್ಲಿ ನಾನಿರುವೆ" ಎಂಬ ಆ ಮಹಾತಾಯಿಯ ಮಾತನ್ನು ಮನನ ಮಾಡುತ್ತಾ ಆ ದಂಪತಿಗಳಿಗೆ ನಮಸ್ಕರಿಸಿ ಚರಣದಾಸನಾದ ನಾನು ಅಲ್ಲಿಂದ ಹೊರಟುಬಂದೆ.....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala swamy Avara Divya charanamruta galige nanna bhakti poorvaka namanagalu. Swamy Yellaranu Yella kaaladalli olleyadaaguvante asheervadisi Kaapadi Guruvarya. Hari om tatsat.
ReplyDelete