ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 143
ಗ್ರಂಥ ರಚನೆ - ಚರಣದಾಸ
ಹಳದಿ ಬಟ್ಟೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ಬಾಣಾವರದಲ್ಲಿ ಶ್ರೀ ಕೃಷ್ಣ ಯೋಗೇಂದ್ರ ಯತೀಶ್ವರರ ಆರಾಧನೆಯೋ ಅಥವಾ ಜಯಂತಿ ಕಾರ್ಯಕ್ರಮವೋ ನಡೆದಿತ್ತು. ಎಂದಿನಂತೆ ಗುರುಬಾಂಧವರು ಭಕ್ತಾದಿಗಳೆಲ್ಲರೂ ಬಾಣಾವರದಲ್ಲಿ ಸೇರಿದ್ದರು. ನಾನು ಮಾಮೂಲಿನಂತೆ ಸಖರಾಯಪಟ್ಟಣದಿಂದ ಬಾಣಾವರಕ್ಕೆ ಕಳಿಸಬೇಕಾದ ಸಾಮಾನು ಸರಂಜಾಮುಗಳನ್ನು ಗುರುನಾಥರ ಅಣತಿಯಂತೆ ಅಣಿಗೊಳಿಸಿ ಕಳಿಸಿಕೊಟ್ಟು ಕಾರ್ಯ ಮುಗಿಸಿದ್ದೆ.
ಬಾಣಾವರದಲ್ಲಿ ಹೋಮ ಪೂಜೆ ಕಾರ್ಯಗಳು ಮುಗಿದು ಓಟವಾಗಿ ಹೊರಡುವ ಕಾಲಕ್ಕೆ ಸರಿಯಾಗಿ ಅದೆಲ್ಲಿದ್ದವೋ ಜೇನು ಹುಳುಗಳು ಇದ್ದಕ್ಕಿದ್ದಂತೆ ದಾಳಿ ಮಾಡಿ ಕಚ್ಚತೊಡಗಿದವು. ಕೆಲವರು ಆಸ್ಪತ್ರೆಗೂ ದಾಖಲಾದರು.
ಯಾರೋ ಒಬ್ಬರಿಂದ ವಿಷಯ ತಿಳಿದ ಗುರುನಾಥರು ಭಕ್ತರೊಬ್ಬರ ಕಾರಿನಲ್ಲಿ ನೇರವಾಗಿ ಬಾಣಾವರಕ್ಕೆ ಬಂದು ಕಾರಿನಿಂದ ಇಳಿದವರೇ ಒಂದು ಬಟ್ಟೆಯನ್ನು ಹಳದಿ ಬಣ್ಣ ಮಾಡಿ ಸುಮ್ಮನೆ ಗಗನದೆಡೆಗೆ ಚಿಮ್ಮಿಸಿದರಷ್ಟೇ ಅರೆ ಕ್ಷಣದಲ್ಲಿ ದಾಳಿ ಮಾಡುತ್ತಿದ್ದ ಜೇನು ಹುಳುಗಳು ಮಾಯವಾಗಿ ಬಿಟ್ಟಿದ್ದವು.
ಹರಿವ ನೀರಾಗಿ.......:
ಪರಮ ಲೌಕಿಕವಾಗಿ ಬದುಕಿ ಆಧ್ಯಾತ್ಮದ ತುತ್ತತುದಿಯನ್ನು ಹೇಗೆ ತಲುಪಬಹುದೆಂಬುದನ್ನು ತಮ್ಮ ಜೀವಮಾನದುದ್ದಕ್ಕೂ ಆಚರಿಸಿ ತೋರಿಸಿದ ಗುರುನಾಥರು ಲೌಕಿಕರಿಗೆ ಲೌಕಿಕ, ಪಾರಮಾರ್ಥಿಕರಿಗೆ ಪರಮ ಪಾರಮಾರ್ಥಿಕರಾಗಿದ್ದರು.
ಗುರುನಿವಾಸದಲ್ಲಿ ಭಕ್ತರೊಂದಿಗೆ ಕುಳಿತಿರುತ್ತಿದ್ದ ಗುರುನಾಥರು ಬದುಕು ಹೇಗಿರಬೇಕೆಂದು ಹೇಳುತ್ತಿದ್ದರು.
"ನೋಡ್ರಯ್ಯಾ, ಜೀವನದಲ್ಲಿ ಎಂದಿಗೂ ಯಾರಿಗೂ ನೋವು ಮಾಡಬೇಡಿ. ನಿಮಗೂ ನೋವಾಗದಂತೆ ಬದುಕಿ. ದಿನವೂ ಎದು ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿ ಫಲಾಫಲವನ್ನು ಈಶ್ವರನಿಗೆ ಬಿಡಿ. ಪ್ರಯಾಣ ಸುಲಭ ಅಷ್ಟೇ" ಅಂದ್ರು.
ಮತ್ತು ಮುಂದುವರೆದು "ನಿಮ್ಮ ತಂದೆ-ತಾಯಿ ಬಂಧು-ಬಳಗ,ಸ್ನೇಹಿತರು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಿ. ಆದರೆ ಎಂದೂ ಯಾವ ಮೋಹಕ್ಕೂ ಸಿಗಬೇಡಿ. ಅದುವೇ ಆಧ್ಯಾತ್ಮ" ಎಂದರು.
ಜೀವನದಲ್ಲಿ ನಾವುಗಳು ಎಲ್ಲಕ್ಕೂ ಸಾಕ್ಷಿ ರೂಪವಾಗಿರಬೇಕು. ಹೇಗಪ್ಪಾ ಅಂದ್ರೆ ಆಳದ ಮರದಂತಿರಬೇಕು. ಹೇಗೆ ಆಲದ ಮರ ತನ್ನಲ್ಲಿ ವಾಸ ಮಾಡುವ ಎಲ್ಲ ಜೀವಿಗಳಿಗೂ ಆಶ್ರಯ ನೀಡುವುದೋ ಹಾಗೆಯೇ ತನ್ನ ನೆರಳಿಗೆ ಬಂದ ಪ್ರತಿಯೊಬ್ಬರಲ್ಲೂ ಯಾವುದೇ ಬೇಧ ತೋರದೆ ಏಕರೂಪವಾಗಿ ನೆರಳು ನೀಡುವುದು ಅಲ್ಲವೇ? ಹಾಗೆ ಬದುಕಿ ಬಿಟ್ಟರೆ ಸಾಕು.
ಆಲದ ಮರ ತನ್ನ ನೆರಳಿಗೆ ಮೈಯೊಡ್ಡಿ ಬರುವ ಜೂಜುಗಾರ, ಸನ್ಯಾಸಿ, ಕಳ್ಳ, ಪ್ರಾಣಿ ಹೀಗೆ ಎಲ್ಲರಿಗೂ ಸಮಾನವಾಗಿ ಆಶ್ರಯ ನೀಡುವುದು. ಯಾವುದೇ ಪ್ರತಿಫಲಾಪೇಕ್ಷೆ ಪಡುವುದಿಲ್ಲ ಅಲ್ಲವೇ? ಅವರ ವೃತ್ತಿ, ನಡತೆಯ ಬಗ್ಗೆ ಎಂದೂ ಚಕಾರವೆತ್ತುವುದಿಲ್ಲ. ಕೇವಲ ಸಾಕ್ಷಿ ರೂಪವಾಗಿದ್ದು, ಯಾವುದಕ್ಕೂ ಅಂಟಿಕೊಳ್ಳದೆ ತನ್ನತನವನ್ನೂ ಬಿಟ್ಟು ಕೊಡದೆ ಕರ್ತವ್ಯ ನಿರತನಾಗಿರುವುದೋ ಅಂತೆಯೇ ನಾವೂ ಬದುಕಿದಲ್ಲಿ ಪ್ರತಿಯೊಬ್ಬರ ಬದುಕು ನಂದನವನವಾಗುವುದು ಎನ್ನುತ್ತಿದ್ದರು.
ಮತ್ತೊಮ್ಮೆ ಹೀಗೆ ಹೇಳತೊಡಗಿದರು. ನಿಂತ ನೀರಲ್ಲಿ ಹುಳುವಾಗುವುದು. ಅದು ಯಾರಿಗೂ ಉಪಯುಕ್ತವಲ್ಲ ಅಲ್ಲವೇ? ಆದರೆ ಹರಿವ ನೀರು? ಅದು ನಿಜಕ್ಕೂ ಶುದ್ಧ, ಸ್ವಚ್ಛ ಹಾಗೂ ಬಳಸಲು ಯೋಗ್ಯ. ನಾವುಗಳೂ ಕೂಡಾ ನಿಂತ ನೀರಾಗದೇ ಹರಿವ ನೀರಾಗಬೇಕು. ಸಮುದ್ರವಾಗಬೇಕು. ಹೇಗೆ ಸಮುದ್ರ ತನ್ನೊಡಲಲ್ಲಿ ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನೂ ದಡಕ್ಕೆಸೆವುದೋ ಹಾಗೆಯೇ ನೀವೂ ಕೂಡಾ ಏನನ್ನೂ ಕೂಡಿಟ್ಟುಕೊಳ್ಳಬಾರದು, ಕೂಡಿಟ್ಟಷ್ಟೂ ಭಾರ, ಕಳೆದಷ್ಟು ಹಗುರ, ಎನ್ನುತ್ತಿದ್ದರು.
ಇನ್ನೊಂದು ಘಳಿಗೆಯಲ್ಲಿ ಏನೂ ಆಗಬಹುದು ಅಲ್ಲವೇ? ಹಾಗಿರುವಾಗ ನಾಳೆಗೆ ಅಂತ ಹಣ ಕೂಡಿಡಬೇಕೆ? ಇಂದಿನ ಈ ಕ್ಷಣವನ್ನು ಪ್ರಾಮಾಣಿಕವಾಗಿ ಶಿವಾರ್ಪಣ ಮಾಡಿ ಬದುಕಿಬಿಡಿ ಸಾಕು ಎಂದು ಹೇಳುತ್ತಿದ್ದರು.
ಫೋಟೋ ತೆಗೆಯುವುದನ್ನು ವಿರೋಧಿಸುತ್ತಿದ್ದ ಗುರುನಾಥರು ಫೋಟೋ ತೆಗೆಯಬೇಡಿ, ಫೋಟೋ ಆಗಿ ಬಿಡಿ, ಎನ್ನುತ್ತಿದ್ದರು. ವಿಪರೀತ ಫೋಟೋ ತೆಗೆಯುವುದರಿಂದ ಸ್ವರೂಪನಾಶ ಅಂದರೆ ಆಯುಷ್ಯ ಕ್ಷೀಣವಾಗುವುದು ಎನ್ನುತ್ತಿದ್ದರು. ಒಮ್ಮೆ ಗುರುನಾಥರು ಬಂಧುಗಳ ಮನೆಗೆ ಹೋಗಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ಇದ್ದ ಗುರುನಾಥರನ್ನು ನೋಡಿದ ಬಂಧುಗಳೆಲ್ಲರೂ ಅಲ್ಲಿ ಸೇರಿದ್ದರು. ಕುಟುಂಬದವರೆಲ್ಲರೂ ಸೇರಿದ ಕಾರಣ ಎಲ್ಲರೂ ಸೇರಿ ಫೋಟೋ ತೆಗೆಸಿಕೊಳ್ಳೋಣವೆಂದು ಯೋಚಿಸಿದ ಬಂಧುಗಳೆಲ್ಲರೂ ಒಟ್ಟಾಗಿ ತಮ್ಮ ಮನದಾಸೆಯನ್ನು ಗುರುನಾಥರ ಮುಂದಿಟ್ಟರು. ಬಂಧುಗಳ ಒತ್ತಾಸೆಗೆ ತಲೆಬಾಗಿದ ಗುರುನಾಥರು ಆಗಲಿ ಎಂದರು. ಸಮ್ಮತಿ ಸಿಕ್ಕಿದ್ದಕ್ಕೆ ಖುಷಿಯಾದ ಬಂಧುಗಳು ಹಲವಾರು ಫೋಟೋ ಹೊಡೆಸಿಕೊಂಡರು. ಗುರುನಾಥರು ನಗುತ್ತಾ ಕುಳಿತಿದ್ದರು. ನಂತರ ಫೋಟೋ ನೆಗೆಟಿವ್ ತೊಳೆದು ನೋಡಿದರೆ ಅಲ್ಲಿ ಒಂದು ಫೋಟೋ ಕೂಡ ಬಂದಿರಲಿಲ್ಲವೆಂದು ತಿಳಿದು ಬಂತು. ಗುರುವನ್ನು ಬಲಾತ್ಕರಿಸಲಾಗದು. ಗುರುವಿಗೆ ಸನ್ನಡತೆಯೇ ಬಂಧುತ್ವವೆಂದು ತಿಳಿದ ಬಂಧುಗಳು ತಮ್ಮ ತಪ್ಪಿನ ಅರಿವಾಗಿ ಸುಮ್ಮನಾಗಿಬಿಟ್ಟರು.......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Venkatachala swamy Avara paadagalige nanna bhakti poorvaka namanagalu. Nimma aashirvaada haagu rakshe sadaa yellara mele erali Guruvarya. Sarve jano sukinobavantu.
ReplyDelete