ಒಟ್ಟು ನೋಟಗಳು

Tuesday, February 7, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 126


    ಗ್ರಂಥ ರಚನೆ - ಚರಣದಾಸ 


ಭವರೋಗ ನಿವಾರಕ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


"ಆಡು ಮುಟ್ಟದ ಸೊಪ್ಪಿಲ್ಲ" ಎಂಬಂತೆ ನಮ್ಮ ಗುರುನಾಥರಿಗೆ ತಿಳಿಯದ ವಿದ್ಯೆಗಳಿರಲಿಲ್ಲ. ಮಾತ್ರವಲ್ಲ ಪ್ರತೀ ಸಮಸ್ಯೆಗೂ ಅವರು ನೀಡುತ್ತಿದ್ದ ಪರಿಹಾರ ಜನ ಸಾಮಾನ್ಯರಿಗೂ ಎಟುಕುವಂತಿರುತ್ತಿತ್ತು.

ಒಮ್ಮೆ ಸಖರಾಯಪಟ್ಟಣಕ್ಕೆ ಸಮೀಪದಲ್ಲಿ ವಾಸಿಸುತ್ತಿದ್ದ ಹೆಣ್ಣು ಮಗಳೊಬ್ಬರು ಗುರುನಾಥರಲ್ಲಿಗೆ ಬಂದು ತನ್ನ ಸಮಸ್ಯೆಯನ್ನು ಈ ರೀತಿಯಾಗಿ ಹೇಳಿಕೊಂಡರು. "ಗುರುಗಳೇ, ನಾನು ಎಲ್ಲಿಗೆ ಹೋದರೂ ಕಾಗೆಗಳು ಬಂದು ನನ್ನ ತಲೆಯನ್ನು ಕುಕ್ಕುತ್ತವೆ. ಮನೆಯಿಂದ ಹೊರ ಹೋಗುವುದೇ ಕಷ್ಟವಾಗಿದೆ. ತಾವು ಕೃಪೆ ಮಾಡಬೇಕು" ಎಂದು ಕಣ್ಣೀರಿಟ್ಟರು.

ಆ ಕೂಡಲೇ ಗುರುನಾಥರು ಹೂವುಗಳನ್ನು ತರಿಸಿ ಆ ಮಹಿಳೆಯ ಕೈಯಿಂದಲೇ ಅಲ್ಲಿ ಓಡಾಡುವ ಮಹಿಳೆಯರಿಗೆ ಕೊಡಿಸಿದರು.

ನಂತರ ಆ ಮಹಿಳೆ ಏಕೆ ಹೀಗೆ ಎಂದು ಕೇಳಲು ಗುರುನಾಥರು "ಏನಿಲ್ಲಮ್ಮಾ ಪ್ರೇತಬಾಧೆಯಿಂದಾಗಿ ಹೀಗಾಗಿದೆ. ಇನ್ನು ಮುಂದೆ ಹೀಗಾಗೋದಿಲ್ಲ" ಎಂದು ಅಭಯ ನೀಡಿದರು. ಅಂತೆಯೇ ಆ ಮಹಿಳೆಗೆ ಮತ್ತೆಂದೂ ಆ ರೀತಿ ಆಗಲಿಲ್ಲ.

ಗುರುನಾಥರು ಒಮ್ಮೆ ಚಿಕ್ಕಮಗಳೂರಿನಲ್ಲಿ ಭಕ್ತರೊಬ್ಬರ ಮನೆಗೆ ಹೋಗಿದ್ದಾಗ ಆ ಮನೆಯವರು ಸರ್ಪ ಸುತ್ತಿನಿಂದ ಬಳಲುತ್ತಿದ್ದ ಒಬ್ಬ ಯುವಕನನ್ನು ಕರೆದುಕೊಂಡು ಬಂದರು. ವಿಪರೀತ ಉರಿಯಿಂದ ಆತ ಆಗಾಗ ಕೂಗಿಕೊಳ್ಳುತ್ತಿದ್ದ.

ಕೊಡಲೇ ಗುರುನಾಥರು ಒಂದು ಜನಿವಾರವನ್ನು ತರಿಸಿ ದೀಪದೆಣ್ಣೆಯಲ್ಲಿ ನೆನೆಸಿ ಅದನ್ನು ಆ ಯುವಕನ ಸೊಂಟಕ್ಕೆ ಕಟ್ಟಲು ಹೇಳಿದರು. ಆಗ ಸಂಜೆಯ ಸಮಯ. ಆಶ್ಚರ್ಯವೆಂದರೆ ಮರುದಿನ ಬೆಳಿಗ್ಗೆ ಹೊತ್ತಿಗೆ ಆ ಯುವಕನ ಸರ್ಪಸುತ್ತು ಸಂಪೂರ್ಣ ಗುಣಮುಖವಾಗಿತ್ತು.

ಮತ್ತೊಮ್ಮೆ ಗುರುನಾಥರು ಚಿಕ್ಕಮಗಳೂರಿನ ಓರ್ವ ಭಕ್ತರ ಕಾರಿನಲ್ಲಿ ಮಲೆನಾಡಿನ ಒಂದು ಶಿವನ ದೇಗುಲ ದರ್ಶನ ಮಾಡಿ ವಾಪಸಾಗುತ್ತಿದ್ದರು. ಚಿಕ್ಕಮಗಳೂರಿಗೆ ಬಂದು ಆ ಯುವಕನ ಮನೆಗೆ ಹೋದರು. ಆ ಯುವಕನ ಪತ್ನಿ ವಿಪರೀತ ಜ್ವರದಿಂದ ನರಳುತ್ತಿದ್ದರು.

ಆಗ ಗುರುನಾಥರು "ಅಮ್ಮಾ ಏನಿಲ್ಲ. ಮನೆ ಬಿಟ್ಟು ಎರಡು ಮೂರು ದಿನವಾಗಿದೆ. ಒಮ್ಮೆ ಮನೆ ಮುಟ್ಟಿ, ತಿರುಗಿ ಬಂದು ನಿನ್ನನ್ನು ಮಾತನಾಡಿಸುವೆ" ಎಂದು ಹೇಳಿ ನೇರವಾಗಿ ಸಖರಾಯಪಟ್ಟಣಕ್ಕೆ ಬಂದು ಮನೆಗೆ ಹೋಗಿ ಅಲ್ಲಿಂದ ಕೂಡಲೇ ತಿರುಗಿ ಚಿಕ್ಕಮಗಳೂರಿಗೆ ಬಂದು ಆ ಯುವಕನ ಪತ್ನಿಯ ಖಾಯಿಲೆ ಬಗ್ಗೆ ವಿಚಾರಿಸಿ, ಆಕೆಗೆ ತಮ್ಮ ಕೈಯಿಂದ ಕೆಲವು ತುತ್ತು ಹಾಲನ್ನವನ್ನು ತಿನ್ನಿಸಿ ಅಲ್ಲಿಂದ ಹೊರಟರು. ವಿಶೇಷವೆಂದರೆ ಕೆಲವೇ ಗಂಟೆಗಳಲ್ಲಿ ಆಕೆ ಸಂಪೂರ್ಣ ಗುಣಮುಖಳಾದರು........,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Parama poojya gurugalaada venkatachala Avara Divya charanamruta galige nanna bhakti poorvaka namanagalu. Swamy Yellaranu sadaa kaala Harasi asheervadisi. Sarve jano sukinobavantu.

    ReplyDelete