ಒಟ್ಟು ನೋಟಗಳು

Wednesday, February 1, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 120


    ಗ್ರಂಥ ರಚನೆ - ಚರಣದಾಸ 


ಹೋಳಿಗೆಯೇ ಮದ್ದು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಂದು ಕ್ಷಣ ಮೌನವಾದ ಆ ಮಹಾ ತಾಯಿ ತನ್ನ ನೆನಪಿನ ಆಳಕ್ಕಿಳಿದು ಒಂದೆರಡು ನಿಮಿಷದ ನಂತರ ಮತ್ತೆ ಹೊಸ ಉತ್ಸಾಹದೊಂದಿಗೆ ಗುರುನಾಥರ ಲೀಲಾಮೃತವನ್ನು ಹೇಳತೊಡಗಿದರು. 

ಮತ್ತೊಂದು ಸಂದರ್ಭ. ನಮ್ಮ ಮಗಳು ಹತ್ತನೇ ತರಗತಿ ಉತ್ತೀರ್ಣಳಾದ ನಂತರ ಆಕೆಯನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿಸಿಯಾಗಿತ್ತು. ಆಕೆಗೆ ಹೆಚ್ಚಿನ ತರಬೇತಿಗಾಗಿ ಮನೆ ಪಾಠಕ್ಕೆ ಸೇರಿಸಬೇಕೆಂದುಕೊಂಡೆವು. 

ಆಗ ಗುರುನಾಥರು "ಆ ಹುಡುಗ" ನಲ್ಲಿ "ಆ ಹುಡುಗಿಗೇಕೆ ಮನೆ ಪಾಠ? ಬೇಡವಾಗಿತ್ತು" ಎಂದು ಹೇಳಿ ಕಳುಹಿಸಿದರು. 

ಆದರೂ ನಾವು ಆಕೆಯನ್ನು ಮನೆಪಾಠಕ್ಕೆ ಸೇರಿಸಿದೆವು. ಆದರೆ ಗುರುವಾಕ್ಯವನ್ನು ಮೀರಿದ್ದಕ್ಕೋ ಏನೋ... ಕೇವಲ ಎರಡು ದಿನದಲ್ಲಿ ನಮ್ಮ ಮಗಳಿಗೆ ದಡಾರ ಹಾಗೂ ಜ್ವರ ಆರಂಭವಾಯಿತು. ಆದಾಗ್ಯೂ ನಾವು ಅವಳನ್ನು ಆಸ್ಪತ್ರೆಗೆ ಸೇರಿಸಲಿಲ್ಲ. 

ಈ ವಿಚಾರವನ್ನು ಆ ಹುಡುಗನಿಂದ ತಿಳಿದ ಗುರುನಾಥರು "ನಾಳೆ ಎರಡು ಗಂಟೆಯವರೆಗೆ ನೋಡಿ ಆ ನಂತರವೂ ಗುಣವಾಗದೆ ಇದ್ದಲ್ಲಿ ಆಮೇಲೆ ಬೇಕಿದ್ರೆ ಆಸ್ಪತ್ರೆಗೆ ಸೇರಿಸಿ" ಎಂದು ಹೇಳಿ ಕಳುಹಿಸಿದರು. ನಾವು ಒಪ್ಪಿದೆವು. 

ಮರುದಿನ ಮಧ್ಯಾನ್ಹ ಎರಡು ಗಂಟೆಯ ವೇಳೆಗೆ ನಮ್ಮ ಮಗಳ ಮೇಲಾಗಿದ್ದ ದಡಾರ ಹಾಗೂ ಜ್ವರ ಇದ್ದಕ್ಕಿದ್ದಂತೆಯೇ ಗುಣಮುಖವಾಗಿತ್ತು. ಗುರುನಾಥರ ಈ ಲೀಲೆ ನಮ್ಮೆಲ್ಲರನ್ನೂ ಚಕಿತಗೊಳಿಸಿತ್ತು ಎಂದರು. 

ಮತ್ತೊಮ್ಮೆ ನಾನು ಬೆಳಗಿನ ಜಾವ ವಾಯುವಿಹಾರಕ್ಕೆಂದು ಹೋಗಿದ್ದಾಗ ಆಯತಪ್ಪಿ ಬಿದ್ದು ಕಾಲಿಗೆ ಏಟಾಯಿತು. ಸ್ನೇಹಿತರ ಸಹಾಯದಿಂದ ನಾನು ಮನೆ ತಲುಪಿದೆ. ಅಲ್ಲಿಂದ ಆಸ್ಪತ್ರೆಗೆ ಹೋಗಿ ಎಕ್ಸ್ ರೇ ಹಾಗೂ ಇತರ ಪರೀಕ್ಷೆಗಳನ್ನು ಮುಗಿಸಿದ್ದಾಯಿತು. ಯಾವುದೇ ಸಮಸ್ಯೆಗಳಿಲ್ಲವೆಂದು ತಿಳಿಸಿದ ವೈದ್ಯರು ಕೆಲವು ಮಾತ್ರೆಗಳನ್ನು ನೀಡಿ ಕಳಿಸಿದರು. 

ನನಗೆ ಮನೆಯೊಳಗೆ ನಡೆಯಲೂ ಕಷ್ಟವಾಗಿತ್ತು. ಆದ್ರೆ ಔಷಧ ಖಾಲಿಯಾಯಿತೇ ವಿನಃ ಕಾಲುನೋವು ಮಾತ್ರ ಹಾಗೆಯೇ ಉಳಿಯಿತು. ನಾನು ನಡೆಯುವುದೇ ದುಸ್ತರವಾಗಿತ್ತು. 

ಆಗ ಗುರುನಾಥರು ಆ ಹುಡುಗನಲ್ಲಿ ಹೀಗೆ ಹೇಳಿ ಕಳುಹಿಸಿದರು. "ನಿಮ್ಮ ಮನೆಯಾಕೆಗೆ ಅಲ್ಲೇ ಸಮೀಪದಲ್ಲಿರುವ ಚನ್ನಕೇಶವ ದೇಗುಲಕ್ಕೆ ಪ್ರತಿದಿನವೂ ಹೋಗಿ ದರ್ಶನ ಮಾಡಲು ಹೇಳು. ಆಗಾಗ್ಗೆ ವಿಳ್ಳೇದೆಲೆ, ಖರ್ಜೂರ ತಿನ್ನಲು ಹೇಳಿ" ಎಂದರು. 

ಇದನ್ನು ತಿಳಿದ ನಾನು ಗುರುವಾಕ್ಯದಂತೆಯೇ ಪ್ರತಿನಿತ್ಯವೂ ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರವಿದ್ದ ಆ ದೇಗುಲಕ್ಕೆ ನಡೆದೇ ಬರಲಾರಂಭಿಸಿದೆ. 

ಮಾತ್ರವಲ್ಲ ಇದು ನನ್ನ ದಿನಚರಿಯ ಭಾಗವಾಯಿತು. ಆಶ್ಚರ್ಯವೆಂದರೆ, ಕೆಲವೇ ದಿನಗಳಲ್ಲಿ ನನ್ನ ಕಾಲು ನೋವು ತಾನಾಗಿಯೇ ಗುಣಮುಖವಾಯಿತು. ಇಂದು ಗುರು ಕರುಣೆಯಿಂದ ನಾನು ಆರೋಗ್ಯವಂತಳಾಗಿದ್ದೇನೆ ಎಂದು ನುಡಿದರು. 

ಈ ಮಾತಿನ ಮಧ್ಯೆ ಬಂದ ಪ್ರಾಂಶುಪಾಲರು ತನ್ನ ಜೀವನದ ಇನ್ನೊಂದು ಘಟನೆಯನ್ನು ಹೇಳತೊಡಗಿದರು. "ಇದು ಬಹುಶಃ ಬಹಳ ವಿಶೇಷವಾದ ಅನುಭವ. ನನ್ನ ಜೀವಮಾನ ಕಾಲದಲ್ಲಿ ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ" ಎಂದು ಮಾತು ಮುಂದುವರೆಸಿದರು....... 


ನಾನು ರಕ್ತ ಪರೀಕ್ಷೆ ಎಂದೂ ಮಾಡಿಸಿರಲಿಲ್ಲ. ಆಗ ನನಗೆ ಮಧುಮೇಹ ಖಾಯಿಲೆ ಆರಂಭಗೊಂಡಿತ್ತು. ಪರೀಕ್ಷೆ ಮಾಡಿಸಿದಾಗ ಈ ವಿಚಾರ ಧೃಡಪಟ್ಟಿತು. 

ಆಗ ಗುರುನಾಥರು ಆ ಹುಡುಗನಲ್ಲಿ ಹೀಗೆ ಹೇಳಿ ಕಳಿಸಿದರು. "ನಿಮ್ಮೆಜಮಾನರ ಮಧುಮೇಹ ಖಾಯಿಲೆಗೆ ಹೋಳಿಗೆ ಮಾಡಿಕೊಡು" ಎಂದು ಹೇಳಿ ಕಳುಹಿಸಿದರು. ಆದರೂ ಸಕ್ಕರೆ ಖಾಯಿಲೆಗೆ ಯಾರೂ ಹೋಳಿಗೆ ಮಾಡಿ ಕೊಡುವುದಿಲ್ಲ ಎಂಬ ಸಾಮಾನ್ಯ ತಿಳಿವಳಿಕೆಯಿಂದ ನನ್ನ ಮನೆಯಾಕೆ ಗುರುವಾಕ್ಯವನ್ನು ಕಡೆಗಣಿಸಿದರು. 

ಆಗ ಮತ್ತೊಮ್ಮೆ ಆ ಹುಡುಗನಲ್ಲಿ "ಅವರಿಗೆ ಹೇಳು. ಹೋಳಿಗೆ ತಿನ್ನೋದು ಒಳ್ಳೆಯದೋ? ಇಲ್ಲಾ ಮಾತ್ರೆನೋ?" ಎಂದು ಹೇಳಿ ಕಳುಹಿಸಿದರು. 

ಆ ಹುಡುಗನಿಂದ ಈ ವಿಚಾರ ತಿಳಿದ ನನ್ನ ಮನೆಯಾಕೆ ಯಾವುದೇ ತಡಮಾಡದೇ ಹೋಳಿಗೆ ತಯಾರಿಸಿದಳು. 

ನಮ್ಮ ಮನೆಗೆ ವಿದ್ಯಾರ್ಥಿಗಳು ಬರುವುದು ಸಾಮಾನ್ಯವಾಗಿತ್ತು. ಅವರೆಲ್ಲರಿಗೂ ವಿತರಿಸಿ ನಾನೂ ತಿಂದೆ. ನಮ್ಮ ಮನೆಯಲ್ಲಿ ಕಡಿಮೆ ಹೋಳಿಗೆ ಮಾಡಿ ಅಭ್ಯಾಸವಿರಲಿಲ್ಲ. ಆದರೆ ಈ ಬಾರಿ ಕಡಿಮೆ ತಯಾರಿಸಿದ್ದಳು. 

ಆ ಸಮಯಕ್ಕೆ ನಮ್ಮ ಮನೆಗೆ ಬಂದ ಆ ಹುಡುಗ ಹೀಗೆ ಹೇಳಿದ: "ಗುರುನಾಥರು ಹೇಳಿದ್ದು ಅಡುಗೆ ಮನೆಯ ಡಬ್ಬಿಯಲ್ಲಿಟ್ಟಿರುವ ಎರಡು ಹೋಳಿಗೆಯನ್ನು ಸಖರಾಯಪಟ್ಟಣಕ್ಕೆ ತರಬೇಕಂತೆ. ನಾನು ಈ ರಾತ್ರಿಯೇ ಅಲ್ಲಿಗೆ ಹೊರಡುವೆ" ಎಂದನು. ಒಳಹೋಗಿ ನೋಡಿದರೆ ನಮಗೆ ಆಶ್ಚರ್ಯವಾಗಿತ್ತು. 

ಗುರುನಾಥರು ಅಂದಂತೆಯೇ ಡಬ್ಬದಲ್ಲಿ ಕೇವಲ ಎರಡು ಹೋಳಿಗೆ ಉಳಿದಿತ್ತು. ನಾವು ಶ್ರದ್ಧೆಯಿಂದ ಅದನ್ನು ಗುರುನಾಥರಿಗೆ ಕಳಿಸಲು "ಆ ಹುಡುಗನ" ಹತ್ತಿರ ನೀಡಿದೆವು. 

ಸಖರಾಯಪಟ್ಟಣಕ್ಕೆ ಬಂಡ "ಆ ಹುಡುಗ" ತಾನು ತಂದಿದ್ದ ಹೋಳಿಗೆಯನ್ನು ಗುರುನಾಥರಿಗೆ ನೀಡಲು ಗುರುನಾಥರು ತನ್ನ ಸುತ್ತಲಿದ್ದ ಎಲ್ಲರನ್ನು ಕರೆದು "ಬನ್ನಿ ಪ್ರಸಾದ ಬಂದಿದೆ" ಎಂದು ಆ ಹೋಳಿಗೆಯನ್ನು ಎಲ್ಲರಿಗೂ ಹಂಚಿ ತಾನೂ ತಿಂದರಂತೆ.

ಆಶ್ಚರ್ಯವೆಂದರೆ ಅಂದಿನಿಂದ ಈ ದಿನದವರೆಗೂ ನನ್ನ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ವ್ಯತ್ಯಾಸವಾಗಿಲ್ಲ. ನಾನು ಆ ಗುರು ಕೃಪೆಯಿಂದ ಯಾವುದೇ ಮಾತ್ರೆಗಳನ್ನು ತಿನ್ನುತ್ತಿಲ್ಲ. ಇದೆಲ್ಲವೂ ಆ ನನ್ನ ಗುರುಕೃಪೆಯಿಂದ ಮಾತ್ರ ಸಾಧ್ಯವೆಂದು ಅಭಿಮಾನದಿಂದ ನೆನೆದರು.....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya gurugalaada venkatachala Avara Divya charanamruta galige nanna poojya namanagalu. Yellaranu sadaa kaala Kaapadi uddarisi asheervadisi Daari torisi Guruvarya. Sarve jano sukinobavantu.

    ReplyDelete