ಒಟ್ಟು ನೋಟಗಳು

Sunday, February 12, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 131



    ಗ್ರಂಥ ರಚನೆ - ಚರಣದಾಸ 


ಗುಲಾಬಿಯ ದಾರಿ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇತ್ತೀಚೆಗೆ ಭೇಟಿಯಾಗಿದ್ದ ಮೂಡಿಗೆರೆ ಸಮೀಪದ ಮಿತ್ರರೊಬ್ಬರು ಸದ್ಗುರು ಚರಿತಾಮೃತ ನನ್ನ ಕೈಯಿಂದ ಬರೆಸಲ್ಪಡುತ್ತಿದೆ ಎಂದು ತಿಳಿದು ತಮ್ಮ ಜೀವನದಲ್ಲಿ ನಡೆದ ಗುರುಗಳ ಲೀಲೆಯನ್ನು ಈ ಕೆಳಗಿನಂತೆ ವಿವರಿಸತೊಡಗಿದರು. 

ಸ್ವಾಮಿ ನಾವು ಮಲೆನಾಡು ಮೂಲದವರು. ಈ ಘಟನೆ ನಡೆದಿದ್ದು ಸುಮಾರು ಒಂಬತ್ತು ವರ್ಷಗಳ ಹಿಂದೆ. ಅಂದು ನಾವು ಮನೆ ಕಟ್ಟುತ್ತಿದ್ದೆವು. ನಾನು ಸುಮಾರು ಒಂಬತ್ತು ಅಡಿ ಎತ್ತರದಲ್ಲಿ ನಿಂತು ಗೋಡೆ ಏರಿಸುತ್ತಿದ್ದೆ. ಆಗ ನಮ್ಮ ಕೆಲಸದಲ್ಲಿ ಸಹಕರಿಸುತ್ತಿದ್ದ ನನ್ನ ಅತ್ತಿಗೆ ದಢೀರನೆ ಕೂಗಿಕೊಂಡರು. ಕೂಡಲೇ ನಾನು ಏನೆಂದು ವಿಚಾರಿಸಲು ಅವರಿಗೆ ಮಂಡಲ ಹಾವು ಕಚ್ಚಿದ ವಿಷಯ ತಿಳಿಯಿತು. 

ಗಾಬರಿಯಿಂದ ಅರೆಪ್ರಜ್ಞಾವಸ್ಥೆಗೆ ಜಾರುತಿದ್ದ ಅತ್ತಿಗೆಯ ಮುಖಕ್ಕೆ ನೀರೆರೆಚಿ ಧೈರ್ಯ ತುಂಬುತ್ತಾ ಕೂಡಲೇ ಮಿತ್ರರ ಕಾರಿನಲ್ಲಿ ಚಿಕ್ಕಮಗಳೂರಿನ ಆಸ್ಪತ್ರೆಗೆ ದೌಡಾಯಿಸಿದೆ. ಅಂದು ನನ್ನ ದುರಾದೃಷ್ಟಕ್ಕೆ ಅಣ್ಣ ಹಾಗೂ ಬಂಧುಗಳಾರೂ ಮನೆಯಲ್ಲಿ ಇರಲಿಲ್ಲ. ಅತ್ತಿಗೆಗೆ ಗುರುವಿದ್ದಾನೆಂದು ಧೈರ್ಯ ತುಂಬುತ್ತಾ ಗುರುವನ್ನು ಪ್ರಾರ್ಥಿಸುತ್ತಾ ಮುನ್ನೆಡೆದೆ. ದಾರಿಯಲ್ಲಿ ಚಿಕ್ಕಮಗಳೂರಿನ ನನ್ನ ಬಂಧುವಿಗೆ ಕರೆ ಮಾಡಿ ಆಸ್ಪತ್ರೆ ವ್ಯವಸ್ಥೆ ಮಾಡಲು ಸೂಚಿಸಿದೆ. 

ಎರಡು ಗಂಟೆ ಪ್ರಯಾಣ ನಂತರ ಅತ್ತಿಗೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಪರೀಕ್ಷಿಸಿದ ವೈದ್ಯರು ಎಂಟು ದಿನಗಳ ಕಾಲ ಅವರ ಉಳಿವಿನ ಬಗ್ಗೆ ಯಾವುದೇ ನಿರ್ಧಾರ ಹೇಳಲಾಗದು ಎಂದರು. ಮತ್ತಷ್ಟು ಆತಂಕಗೊಂಡ ನಾನು ಗುರುನಾಥರನ್ನು ಭೇಟಿ ಮಾಡಲು ಬಯಸಿ ನನ್ನ ಬಂಧುವಿಗೆ ಕರೆ ಮಾಡಿದೆ. 

ಅದೃಷ್ಟವೆಂದರೆ ಗುರುನಾಥರು ಚಿಕ್ಕಮಗಳೂರಿನಲ್ಲೇ ನನಗೆ ದರ್ಶನ ನೀಡಿದರು. ಅತ್ತಿಗೆಗೆ ಹಾವು ಕಡಿದ ವಿಚಾರ ತಿಳಿದ ಅವರು ಒಂದು ವಿಳ್ಳೇದೆಲೆ ನೀಡಿ ಏನೋ ಮಾಡಲು ಹೇಳಿದರು ಹಾಗೂ ಆಕೆಯ ಜೀವಕ್ಕೆ ಯಾವುದೇ ಅಪಾಯವಾಗದು ಎಂದು ಭರವಸೆ ನೀಡಿದರು. ಇದರಿಂದ ನಮಗಿದ್ದ ಭಯ ದೂರವಾಯಿತು. ಗುರುಕೃಪೆಯಿಂದ ಅತ್ತಿಗೆ ಹದಿನೈದು ದಿನದಲ್ಲಿ ಸಂಪೂರ್ಣ ಗುಣಮುಖರಾದರು. 

ಸಾಮಾನ್ಯವಾಗಿ ಯೋಚಿಸಿದಾಗ ನಾವು ಗುರುವಿಗೆ ಬಂಧುಗಳಲ್ಲ, ಯಾವುದೂ ಅಲ್ಲ, ಅವನಿಗೆ ನೀಡಲು ನಮ್ಮಲ್ಲಿ ಏನೂ ಇಲ್ಲ. ಆದರೂ ನಮ್ಮ ಕಷ್ಟಗಳಲ್ಲೆಲ್ಲ ನಮ್ಮೊಂದಿಗೆ ನಿಂತು ಪರಿಹರಿಸಿ ಕಡೆ ಹಾಯಿಸುತ್ತಿರುವ ಗುರುವಿನ ಕರುಣೆಯನ್ನು ನೆನೆದಾಗಲೆಲ್ಲಾ ಕಣ್ಣೀರು ತುಂಬಿ ಬರುತ್ತದೆ ಎಂದು ನುಡಿದು ಮೌನವಾದರು. 

ಕೆಲಕ್ಷಣಗಳ ನಂತರ ಸಾವರಿಸಿಕೊಂಡ ಅವರು, ನನ್ನ ಗುರುವಿನ ಕರುಣೆಯನ್ನು ನೆನೆದಾಗಲೆಲ್ಲಾ ನಾನು ಗದ್ಗದಿತನಾಗುತ್ತೇನೆ. ತಪ್ಪು ತಿಳಿಯಬೇಡಿ ಎಂದರು. ನಾನು ಮೌನವಾಗಿ ತಲೆಯಾಡಿಸಿದೆ. 

ನಂತರ ಮುಂದುವರೆದು ನಿಮಗೆ ನಿರಂತರವಾಗಿ ಗುರುಸಾನ್ನಿಧ್ಯ ದೊರಕಿತ್ತು. ನೀವು ನಿಜಕ್ಕೂ ಅದೃಷ್ಟವಂತರು. ನಿಮ್ಮ ಅನುಭವವನ್ನು ಹೇಳಿ ನನ್ನನ್ನು ಧನ್ಯನನ್ನಾಗಿಸಿ ಎಂದರು. 

ಚರಣದಾಸನಾದ ನಾನು ಒಂದು ಸಣ್ಣ ಘಟನೆಯನ್ನು ಹೇಳತೊಡಗಿದೆ. ಅದು ಗುರುನಾಥರು ದೇಹ ಬಿಡುವ ವರ್ಷ. ನನ್ನ ಕಾಲಿನ ಬೆರಳೊಂದು ಮುರಿದು ಹೋಗಿತ್ತು. ಆದರೆ ಗುರುಕೃಪೆ ಹಾಗೂ ಕೊನೆಯವರೆಗೂ ಗುರುಸೇವೆಯಲ್ಲಿ ಎರಡೆಣಿಸಬಾರದೆಂಬ ನನ್ನ ಛಲ (ಅಹಂಕಾರವೂ ಹೌದು) ದಿಂದಾಗಿ ಆ ಕಾಲು ನೋವಿನಲ್ಲೂ ಯಾರ ಸಹಾಯವನ್ನೂ ಅಪೇಕ್ಷಿಸದೇ ಗುರುಗಳ ತೋಟದ ಹಲಸಿನ ಕಾಯಿಯನ್ನು ಮರವೇರಿ ಕಿತ್ತು ಹೊತ್ತು ತರುತ್ತಿದ್ದೆ. 

ಕಾಲು ನೋವು ವಿಪರೀತವಾಗಿದ್ದನ್ನು ಗಮನಿಸಿದ ಗುರುನಾಥರು ವೈದ್ಯರಿಗೆ ತೋರಿಸಲು ಹೇಳಿದರು. ನಾನು ಆಯಿತೆಂದೆ. ಚಿಕ್ಕಮಗಳೂರಿನ ಗುರುಭಕ್ತರೊಬ್ಬರಿಗೆ ಕರೆ ಮಾಡಿಸಿ ನನ್ನನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಲು ಗುರುನಾಥರು ತಿಳಿಸಿದರು. 

ನಾನು ಹೊರಟು ನಿಂತಾಗ ನನ್ನ ಕೈಗೊಂದು ಗುಲಾಬಿ ಹೂವು ನೀಡಿದ ಗುರುನಾಥರು "ಕೆಲಸ ಬೇಗ ಆಗುವುದು. ಹೋಗಿ ಬಾ, ಅವನಿಗೆ ಕರೆ ಮಾಡು" ಎಂದರು. ಸಖರಾಯಪಟ್ಟಣದ ಬಸ್ ನಿಲ್ದಾಣಕ್ಕೆ ಬಂದ  ನಾನು ಆ ಗುರುಭಕ್ತರಿಗೆ ಕರೆ ಮಾಡಿದೆ. ಆಶ್ಚರ್ಯವೆಂದರೆ ಆತ ಕಡೂರು ಕಡೆಯಿಂದ ಚಿಕ್ಕಮಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ವಾಸ್ತವವಾಗಿ ಬಸ್ಸಿನಲ್ಲಿ ಬಂದಿದ್ದರೆ ಜನಜಂಗುಳಿಯಲ್ಲಿ ನನ್ನ ಕಾಲು ಬೆರಳು ಮತ್ತಷ್ಟು ನೋವಾಗುವ ಸಂಭವವಿತ್ತು. ಗುರುಕೃಪೆಯಿಂದಾಗಿ ಆ ಪರಿಸ್ಥಿತಿ ತಪ್ಪಿತು. 

ನನ್ನನ್ನು ಕರೆದುಕೊಂಡು ಹೋದ ಆತ ಎಕ್ಸ್-ರೇ ಮಾಡಿಸಿ ಚಿಕಿತ್ಸೆ ನೀಡಿ ಅವರ ಕಾರಿನಲ್ಲೇ ನನ್ನನ್ನು ಗುರುನಿವಾಸಕ್ಕೆ ಕರೆತಂದು ಬಿಟ್ಟರು. ಆ ನಂತರವೂ ಆ ನೋವಿನಲ್ಲೂ ಕೂಡ ಆನಂದದಿಂದ ಗುರುನಾಥರು ದೇಹ ಬಿಡುವವರೆಗೂ ಹಾಗೂ ನಂತರವೂ ಈ ಜೀವಕ್ಕೆ ಗುರು ಸೇವೆ ಮಾಡುವ ಅನನ್ಯ ಅವಕಾಶ ಹಾಗೂ ಶಕ್ತಿಯನ್ನು ನೀಡಿದ ಆ ನನ್ನ ಗುರುಕರುಣೆಗೆ ಸರಿಸಾಟಿ ಈ ಜಗತ್ತಿನಲ್ಲಿ ಇನ್ಯಾವುದೂ ಇಲ್ಲ ಎಂಬುದು ನನ್ನ ಅಚಲ ನಂಬಿಕೆ ಎಂದು ನನ್ನ ಮಾತು ಮುಗಿಸಿದೆ....,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Sakaraayapurada Dore venkatachala avadootarige nanna poojya namanagalu. Swamy Yellaranu sadaa kaala nimma krupe haagu asheervadadinda Kaapadi. Hari om tatsat.

    ReplyDelete