ಗುರುನಾಥ ಗಾನಾಮೃತ
ಅರಸು ಅರಿವ ಅರಸು ಅರಿವ
ರಚನೆ: ಅಂಬಾಸುತ
ಅರಸು ಅರಿವ ಅರಸು ಅರಿವ
ಅರಿತು ಅರಸನಾಗೊವರೆಗು ||ಪ||
ಮರೆತು ಬೆರೆತು ಕಲಿತು ಕುಳಿತು
ಕೇಳಿ ಹೇಳುವಾವರೆಗು ||ಅ.ಪ||
ನಿದಿರೆ ಬಿಟ್ಟು ಮದಿರೆ ಬಿಟ್ಟು
ಹೆದರಿ ಹೆದರಿಸುವುದಾ ಬಿಟ್ಟು
ಬೆರಗ ಮನಸಿನೊಳಗಿಟ್ಟು
ಸೊರಗಿ ಮರುಗಿ ಮೂಖನಾಗಿ ||೧||
ಸುಟ್ಟು ಆರು ಕಟ್ಟಿ ನೂರು
ಮೆಟ್ಟಿ ಮಟ್ಟ ಮಾಡಿ ಸೂರು
ಜಗಜ್ಜಟ್ಟಿ ಪಾದ ಗಟ್ಟಿ
ಪಿಡಿದು ಪಾವನನಾಗಿ ||೨||
ವಕ್ರತೆಗೆ ವಿರಾಮ ಹಾಕಿ
ಚಕ್ರದೊಡನೆ ತಿರುಗು ನೂಕಿ
ಸಕ್ರಮದಿ ಹಸಿವ ನೂಕಿ
ಏಕತಾನದಿ ಐಕ್ಯನಾಗಲು ||೩||
ಪದಕೆ ಪದ ಪೋಣಿಸುತಾ
ಗುರುಪದವ ಧ್ಯಾನಿಸುತಾ
ಅಂಬಾಸುತನ ಈ ಮಾತ ನೆನೆಯುತಾ
ಅಂಬಿಕೆಯೊಡಲಾಳ ಸೇರಲು ||೪||
No comments:
Post a Comment