ಗುರುನಾಥ ಗಾನಾಮೃತ
ಎಂಥಾ ಭಕುತನು ಕಂಡ್ಯಾ ನಾನು ಗುರುವೇ
ರಚನೆ: ಅಂಬಾಸುತ
ಎಂಥಾ ಭಕುತನು ಕಂಡ್ಯಾ ನಾನು ಗುರುವೇ
ಸಂತೆ ವ್ಯಾಪಾರದ ನಡುವೆ ಒಮ್ಮೆ ನಿನ್ನನು ನೆನೆವೇ ||ಪ||
ತಡವಾಗಿ ಎದ್ದು ತಡಬಡಿಸಿ ಸ್ನಾನವ ಮಾಡಿ
ಕ್ಷಣಕಾಲ ನಿನ್ನೆದಿರು ನಿಂತು ನಾ ಹೊರಡುವೆ
ಅರ್ಥ ಗಳಿಸಲು ಮುದದಿ ಸ್ವಾರ್ಥ ಪರನಾಗುತಲಿ
ಆತ್ಮಸಖನೇ ನಿನ್ನ ಮರೆತಿರುವಂಥಾ ||೧||
ಕಷ್ಟವೆಂಬುದು ಬರಲು ನೀ ಕಾಯಲಿಲ್ಲವೆಂದು
ಜರಿಯುವೆ ಜನ್ಮವೆನಗೆ ಏಕಿತ್ತೆ ಎನುವೇ
ಸುಖದ ಕಾಲದಿ ಸತಿ ಸುತರ ಒಡಗೂಡುತಲಿ
ಹರುಷದಿ ನಿನ್ನನ್ನೇ ನೆನೆಯದಿರುವಂಥಾ ||೨||
ಉಂಬುವಾಗ ಉಡುವಾಗ ಉತ್ತಮಿಕೆ ಪಡೆವಾಗ
ಜಗದೊಳುತ್ತಮನೇ ನಿನ್ನ ಸ್ಮರಿಸಲಿಲ್ಲಾ
ಹೆಸರ ಪಡೆಯಲು ನಿನ್ನ ನಾಮವಾ ಜಪಿಸುವ
ಹೀನರೊಳಗತಿ ಹೀನ ಈತನು ||೩||
ಅಳಿಸೊ ನಾನೆಂಬುದಾ ಸಖರಾಯಪುರಾಧೀಶಾ
ಉಳಿಸೊ ನಿನ್ನಯತನವ ಎನ್ನೊಳಗೆ ಪ್ರಭುವೇ
ಅಂಬಾಸುತನ ಅರಿಕೆ ಇದುವೆ ಕೇಳೊ ಗುರುವೇ
ಉಸಿರುಸಿರಲು ನಿನ್ನ ನಾಮವೇ ಇರಲೈ ||೪||
No comments:
Post a Comment