ಒಟ್ಟು ನೋಟಗಳು

Sunday, January 15, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 103


    ಗ್ರಂಥ ರಚನೆ - ಚರಣದಾಸ 


ಬೇರಿನಂತೆ ಮರ, ನೂಲಿನಂತೆ ಸೀರೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುವಿಗೆ ಜಾತಿ ಎಂಬುದಿಲ್ಲ. ಉತ್ತಮ ನಡವಳಿಕೆ ಹಾಗೂ ಸಂಸ್ಕಾರಗಳೇ ಗುರುವಿನ ಜಾತಿ. ಈ ಗುಣಗಳೇ ಅವನ ಬಂಧು-ಬಳಗ ಎಲ್ಲವೂ. ಇಂತಹ ಗುಣಗಳಿರುವ ಯಾವುದೇ ವ್ಯಕ್ತಿಗಳಿಗೆ ತೊಂದರೆ ಆದರೂ ಅವರನ್ನು ಕಾಯಲೋಸುಗ ಸದ್ಗುರು ಸದಾ ಧಾವಿಸಿ ಬರುವನು. 

ಗುರುನಿವಾಸದಿಂದ ಸುಮಾರು ಮೂರು ಗಂಟೆ ಪ್ರಯಾಣದಷ್ಟು ದೂರದ ಊರಿನಿಂದ ದಂಪತಿಗಳು ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. ಪತಿಯು ಸರ್ಕಾರಿ ಕೆಲಸದಲ್ಲಿದ್ದರು. ಗುರುನಾಥರು ಸಾಮಾನ್ಯವಾಗಿ ಪ್ರಕಟವಾಗುವಂತಹ ಪವಾಡಗಳನ್ನು ಆ ವ್ಯಕ್ತಿಯ ಮೂಲಕವೇ ಜಗತ್ತಿಗೆ ತೋರಿಸುತ್ತಿದ್ದರು. ಒಮ್ಮೆ ವ್ಯಕ್ತಿಯೊಬ್ಬರು ಗುರುನಾಥರನ್ನು ಹೀಗೆ ಕೇಳಿದರು. 

"ಗುರುಗಳೇ ಪವಾಡಗಳನ್ನು ನೀವು ಆ ವ್ಯಕ್ತಿಯ ಮೂಲಕವೇ ಏಕೆ ಪ್ರಕಟಗೊಳಿಸುತ್ತಿದ್ದೀರಿ? ನಮ್ಮ ಮೂಲಕವೂ ತೋರಿಸಬಹುದಲ್ಲವೇ?" 

ಆಗ ಗುರುಗಳು ನಗುತ್ತಾ: - "ಆ ವ್ಯಕ್ತಿಯ ಮೂಲಕವೇ ಕೆಲವು ಪವಾಡಗಳು ತೋರಿಸಬೇಕೆಂಬುದು ನನಗೆ ಮೇಲಿನಿಂದ ಬಂದ  ಆದೇಶ. ಅದನ್ನು ನಾನು ಪಾಲಿಸುತ್ತಿದ್ದೇನೆ ಅಷ್ಟೇ ವಿನಃ ಅದರರ್ಥ ಅವರು ನನಗೆ ಅಂತರಂಗದ ಭಕ್ತನೆಂದರ್ಥವಲ್ಲ". 

ಸರ್ಕಾರಿ ಕೆಲಸದಲ್ಲಿದ್ದ ಆ ವ್ಯಕ್ತಿ ಪ್ರತಿ ದಿನ ಸುಮಾರು ಐದು ಕಿಲೋಮೀಟರ್ ದೂರ ಕೆಲಸಕ್ಕಾಗಿ ಕ್ರಮಿಸಬೇಕಾಗಿತ್ತು. 

ಬೆಳಿಗ್ಗೆ ಹೊರಡುವಾಗ ಸಾಮಾನ್ಯವಾಗಿ ಕರೆ ಮಾಡಿಸುತ್ತಿದ್ದ ಗುರುನಾಥರು ಆ ದಿನ ಆ ವ್ಯಕ್ತಿ ಎಂತಹ ಪರಿಸ್ಥಿತಿ ಎದುರಿಸಬೇಕಾಗಬಹುದೆಂದು ತಿಳಿಸಿ ಪರಿಹಾರವನ್ನು ತಿಳಿಸುತ್ತಿದ್ದರು. 

ಒಮ್ಮೆ ಬೆಳಿಗ್ಗೆ ಕರೆ ಮಾಡಿದ ಗುರುನಾಥರು ಹೀಗೆ ಹೇಳಿದರು. "ಅಯ್ಯಾ, ಇಂದು ಕಛೇರಿಗೆ ಹೋಗುವಾಗ ಒಂದು ಪೊಟ್ಟಣ ಸಿಗರೇಟು, ಬೆಂಕಿಪೊಟ್ಟಣ ಹಾಗೂ ಸೀರೆ, ಬಟ್ಟೆಯನ್ನು ತೆಗೆದುಕೊಂಡು ಹೋಗಿ" ಎಂದು ತಿಳಿಸಿದರು. 

ಆ ವ್ಯಕ್ತಿಯು ಹಾಗೆಯೇ ತೆಗೆದುಕೊಂಡು ಕಛೇರಿಯತ್ತ ತನ್ನ ವಾಹನದಲ್ಲಿ ಹೊರಟರು. ಕಛೇರಿ ಸಮೀಪಿಸುತ್ತಿರುವಾಗ ದಾರಿಯಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ ಮನಬಂದಂತೆ ಹೊಡೆಯುತ್ತಿದ್ದನು. ಇದನ್ನು ಕಂಡ ಆ ವ್ಯಕ್ತಿಯು ಕೂಡಲೇ ತನ್ನ ವಾಹನವನ್ನು ನಿಲ್ಲಿಸಿ ಹೆಂಡತಿಯನ್ನು ಹೊಡೆಯುತ್ತಿದ್ದ ಆ ವ್ಯಕ್ತಿಯನ್ನು ಸಮೀಪಿಸಿ ಹೀಗೆ ಕೇಳಿದರು. 

"ಯಾಕಪ್ಪಾ, ಅವರನ್ನು ಹೊಡೆಯುತ್ತಿದ್ದೀಯಾ?" 

ಆ ವ್ಯಕ್ತಿ: "ನೋಡಿ ಸ್ವಾಮಿ, ನನ್ನ ಹೆಂಡತಿ ನಂಗೆ ಸಿಗರೇಟು ಸೇದೋಕೆ ದುಡ್ಡು ಕೊಡ್ತಾ ಇಲ್ಲ. ನಂಗೆ ಸಿಗರೇಟ್ ಬೇಕೀಗ, ಅದಕ್ಕೆ ಹೊಡೆದೆ" ಎಂದನು. 

ಆಗ ಪ್ರತಿಯಾಗಿ ಇವರು: "ಅಪ್ಪಾ ಸಿಗರೇಟ್ ಕೊಟ್ರೆ ಹೊಡೆಯೋದು ನಿಲ್ಲಿಸ್ತೀಯಾ?" 

ಆತ: "ಹೂಂ.... " 

ಆಗ ಆ ವ್ಯಕ್ತಿ ಗುರುನಾಥರು ಇದೇ ಕಾರಣಕ್ಕಾಗಿ ಸಿಗರೇಟು ಒಯ್ಯಲು ಹೇಳಿರುವರೆಂದು ಯೋಚಿಸಿ ತಾನು ತಂದಿದ್ದ ಸಿಗರೇಟು ಪೊಟ್ಟಣವನ್ನು ಆತನ ಕೈಗಿಟ್ಟರು. ಕೂಡಲೇ ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ ಆತ ತನ್ನಷ್ಟಕ್ಕೆ ತಾನು ಅಲ್ಲಿಂದ ಹೊರಟನು. 

ಈವರೆಗೂ ಗಂಡ-ಹೆಂಡತಿ ಜಗಳವನ್ನು ನೋಡುತ್ತಾ ನಿಂತಿದ್ದ ಜನ ಈಗ ಹೆಂಡತಿ ಮೇಲೆ ಕೈ ಮಾಡಿದ್ದಕ್ಕಾಗಿ ಆತನಿಗೆ ಹೊಡೆಯಲು ಮುಂದಾದರು. 

ಅದಾಗಲೇ ತನ್ನ ಗಂಡನ ಏಟಿನಿಂದ ಸೀರೆ ಹರಿದು ಮೈಮೇಲೆ ಬಾಸುಂಡೆಗಳು ಬಂದಿದ್ದರೂ ಆಕೆ ಕೂಡಲೇ ಓಡಿಬಂದು ತನ್ನ ಗಂಡನ ಮೇಲೆ ಯಾರೂ ಕೈ ಮಾಡಬಾರದೆಂದು ಬೇಡುತ್ತಾ ಗಂಡನಿಗೆ ರಕ್ಷಣೆಯಾಗಿ ನಿಂತು ಆ ಜನಗಳಿಗೆ ಕೈ ಮುಗಿದಳು. ಆಗ ಆ ಜನರು ಅಲ್ಲಿಂದ ಹೊರಟರು. 

ಆಗ ಸಿಗರೇಟು ಕೊಟ್ಟ ಆ ವ್ಯಕ್ತಿ ಹೀಗೆ ಯೋಚಿಸಿದರು. "ತನ್ನ ಗಂಡನಿಂದ ಈ ಪರಿಯಾಗಿ ಹೊಡೆತ ತಿಂದಿದ್ದರೂ ತನ್ನ ಗಂಡನಿಗೆ ಆಪತ್ತು ಬಂದಾಗ ಎಲ್ಲವನ್ನು ಮರೆತು ಪತಿಯ ರಕ್ಷಣೆಗೆ ಧಾವಿಸಿದರಲ್ಲಾ... ! ಇದುವೇ ಭಾರತೀಯ ಸಂಸ್ಕೃತಿಯ ಲಕ್ಷಣ". 

ಹೀಗೆ ಯೋಚಿಸುತ್ತಾ ಗುರುನಾಥರು ತಿಳಿಸಿದಂತೆಯೇ ತನ್ನೊಡನೆ ತಂದಿದ್ದ ಸೀರೆಯನ್ನು ಆ ಮಹಿಳಿಗೆ ನೀಡಿ ಕೈ ಮುಗಿದು ಇದನ್ನು ಬಳಸು ತಾಯಿ ಎಂದು ಹೇಳಿ, ಆ ಮಹಿಳೆಯನ್ನು ಹೀಗೆ ಕೇಳಿದರು. 

"ಅಲ್ಲಮ್ಮಾ, ನಿನ್ನ ಪತಿ ಆ ಪರಿ ಹೊಡೆದಿದ್ದರೂ ಅವನ ರಕ್ಷಣೆಗೆ ಹೋದ್ಯಲ್ಲಾ? ಎಂದು ಪರೀಕ್ಷಿಸಲೋಸುಗ ಕೇಳಿದರು. 

ಅದಕ್ಕೆ ಆ ಮಹಿಳೆ: - "ಏನ್ ಮಾಡೋಕೆ ಆಗುತ್ತೆ ಸ್ವಾಮಿ? ಕೈ ಹಿಡಿದ ಮೇಲೆ ಮುಗೀತು ಆತ ನನ್ನ ಪತಿ ಅಷ್ಟೇ.... ಅವನನ್ನು ಕಾಪಾಡುವ ಭಾರವೂ ನನ್ನದೇ" ಎಂದು ಕಣ್ಣೀರಿಡುತ್ತಾ ಅಲ್ಲಿಂದ ಮನೆ ಕಡೆಗೆ ನಡೆದಳು. 

ಇದನ್ನು ತಿಳಿದ ಗುರುನಾಥರು ಹೀಗೆ ಹೇಳಿದರು. "ಅದೇ ಅಲ್ಲವೆನಯ್ಯಾ ನಿಜವಾದ ಹೆಣ್ಣಿಗಿರಬೇಕಾದ ಕ್ಷಮೆ ಎಂಬ ಅಲಂಕಾರ. ಇಂತಹ ಸನ್ನಡತೆಗಳು ಜಾತಿಯಿಂದ ಬರುವುದಲ್ಲ ನಡವಳಿಕೆಯಿಂದ, ಉತ್ತಮ ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯ" ಎಂದರು......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya venkatachala gurugalige nanna saashtaanga pranaamagalu. Yellaranu sadaa kaala Harasi Kaapadi asheervadisi uddarisi swamy. Hari om tatsat.

    ReplyDelete