ಒಟ್ಟು ನೋಟಗಳು

Sunday, January 1, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 89


    ಗ್ರಂಥ ರಚನೆ - ಚರಣದಾಸ 


ಕಿವಿ ಮಾತು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಂದು ದಿನ ಗುರುನಾಥರು ತುಳಸಿ ಕಟ್ಟೆ ಹತ್ತಿರ ನಿಂತುಕೊಂಡು ಬದುಕಿನ ಹಲವು ಮಜಲುಗಳು ಸಮಸ್ಯೆ ಹಾಗೂ ಅದನ್ನೆದುರಿಸುವ ಕುರಿತು ನನಗೆ ಹೇಳಲಾರಂಭಿಸಿದರು. ಕೂಡಲೇ ಮಧ್ಯೆ ಮಾತನಾಡಿದ ನಾನು ಸಾರ್ ನಾನಿನ್ನೂ ಬದುಕೇ ಪ್ರಾರಂಭಿಸಿಲ್ಲ. ನನಗೇಕೆ ಸಾರ್ ಇದೆಲ್ಲಾ? ಅಷ್ಟಕ್ಕೂ ನೀವು ನಂಜೊತೆ ಇದ್ದೀರಲ್ಲಾ..... ಎಂದೆ. 

ಆಗ ಗುರುನಾಥರು "ನೋಡಯ್ಯಾ ಇಂದು ನಾನಾಡಿದ ಮಾತುಗಳೆಲ್ಲವೂ ಶಬ್ದ ಮಂಡಲದಲ್ಲಿ ಇರುತ್ತೆ. ನಾಳೆ ನೀನು ಪ್ರತಿ ಸಮಸ್ಯೆಗಳನ್ನು ಎದುರಿಸುವಾಗ ಈ ಮಾತುಗಳು ಶಬ್ದ ಮಂಡಲದಿಂದ ಬಂದು ನಿನ್ನನ್ನೆಚ್ಚರಿಸಿ ಮುನ್ನೆಡೆಸುತ್ತದೆ ತಿಳೀತಾ?" ಎಂದರು. 

ಮತ್ತೊಂದು ಸಂದರ್ಭ ಯಶಸ್ಸಿನ ಗುಟ್ಟನ್ನು ತಿಳಿಸುತ್ತಾ "ತಂದೆ ತಾಯಿಗಳ ಸೇವೆ ಮಾಡೋದ್ರಿಂದಲೇ ಮಕ್ಕಳು ಏನು ಬೇಕಾದ್ರೂ ಪಡೀಬಹುದು ಗೊತ್ತೇ... ಮಕ್ಕಳ ಏಳಿಗೆಗಾಗಿ ದುಡಿವ ತಂದೆ ತಾಯಿಗಳಿಗೆ ನೋವುಂಟು ಮಾಡಿದ್ರೆ ಯಾವ ಭಗವಂತನೂ ಆ ಶಾಪವನ್ನು ಸರಿ ಮಾಡೋಕಾಗಲ್ಲ. ಅದೇ ರೀತಿ ತಂದೆ-ತಾಯಿ ಸಂಸರ್ಗದಿಂದ ಜೀವಿಯೊಂದು ದೇಹರೂಪ ತಾಳಿ ಭೂಮಿಗೆ ಬರುತ್ತೆ..... ಅಂದ್ರೆ ಆ ಜೀವಿ ಭೂಮಿಗೆ ಬರಲು ಇವರು ಕಾರಣ ಅಷ್ಟೇ... ಅಂದ ಮಾತ್ರಕ್ಕೆ ಆ ಮಕ್ಕಳು ಎಲ್ಲವನ್ನೂ ತಾವು ಹೇಳಿದಂತೆಯೇ ಕೇಳಬೇಕೆಂದು ಅಧಿಕಾರ ಚಲಾಯಿಸುವುದು ಧರ್ಮವಲ್ಲ. ಬದಲಿಗೆ ತಂದೆ ತಾಯಿಗಳು ಮಕ್ಕಳನ್ನು ಗೆದ್ದು ಬರಬೇಕು" ಎಂದು ನಮ್ಮೆಲ್ಲರತ್ತ ದಿಟ್ಟಿಸುತ್ತಿದ್ದರು. 

ಅಂತಹ ತಂದೆ-ತಾಯಿಯ ಸೇವೇನ ನಿಷ್ಠೆಯಿಂದ ಮಾಡಿಬಿಟ್ಟರೆ ಸಾಕು... ನಿತ್ಯ ಕೆಲಹೊತ್ತು ಅವರ ಕೆಲಸದಲ್ಲಿ ಸಹಕರಿಸುವುದು, ಹಾಸಿಗೆ ಹಾಸಿ ಕೊಡುವುದು, ಮತ್ತು ಕೈ ಕಾಲು ಒತ್ತಿ ಶುದ್ಧ ಭಾವದಿಂದ ಆ ಜೀವಿಗಳನ್ನು ಗೌರವಿಸಿ. ಎಂದೂ ಅವರಿಗೆ ನೋವು ಮಾಡಬೇಡಿ ಸಾಕು" ಅನ್ನುತ್ತಿದ್ದರು. 

ಮತ್ತೆ ಮುಂದುವರೆದು "ಆದ್ರೆ ಈಗ ಕಾಲ ಹೆಂಗೆ ಆಗಿದ್ಯಪ್ಪಾ ಅಂದ್ರೆ ನಮಗಾಗಿ ಬದುಕುವ ತಾಯಿಗೆ ಇನ್ನೂರು ರೂಪಾಯಿಯ ಸೀರೆ, ಅದೇ ಕೈ ಹಿಡಿದ ಹೆಂಡತಿಗೆ ಎರಡು ಸಾವಿರ ರೂಪಾಯಿ ಸೀರೆ ಕೊಡಿಸುತ್ತೇವೆ ಅಲ್ಲವೇ? ಹೀಗೆ ನಾವೇ ತಪ್ಪು ಮಾಡಿಕೊಂಡು ಯಾವ ದೇವರಲ್ಲಿ ಬೇಡಿ ಏನು ಪ್ರಯೋಜನವಪ್ಪಾ?" ಎಂದು ಪ್ರಶ್ನಿಸುತ್ತಿದ್ದರು. 

ಅದರರ್ಥ ಹೆಂಡತೀನ ಚೆಂದಾಗಿ ನೋಡ್ಕೊಬೇಡಿ ಅಂತಲ್ಲ. ಆದ್ರೆ ನಮ್ಮನ್ನ ಕಣ್ಣಾಗಿ ಬೆಳೆಸಿದ ಆ ಹಿರಿಯ ಜೀವಿಗೆ ನಾವು ಕೊಡೊ ಬೆಲೆ ಇಷ್ಟೇನಾ?...... ಅನ್ನೋದೇ ಪ್ರಶ್ನೆ. 

ಇಂದು ನಾವು ನಮ್ಮ ತಂದೆ-ತಾಯಿನ ಹೇಗೆ ನೋಡ್ಕೋತೀವೋ..ಹಂಗೆ ನಾಳೆ ನಮ್ಮ ಮಕ್ಕಳು ನಮ್ಮನ್ನು ನೋಡ್ಕೋತಾರೆ ಅಲ್ಲವೇ... ಎಂದು ನಸುನಗುತ್ತಿದ್ದರು. 

ತಂದೆಯಾದವನು ಹೆಣ್ಣು ಮಕ್ಕಳನ್ನು ಇಷ್ಟು ದಿನ ನನ್ನನ್ನ ಅನುಸರಿಸಿದೆ... ಇನ್ನು ಮುಂದೆ ಗಂಡನನ್ನು ಅನುಸರಿಸು.... ಎಂದು ಒಪ್ಪಿಸಿಕೊಡುತ್ತಾನೆ. ಅಂತಹ ತಂದೆ ತಾಯಿಯ ಭಾವನೆಯನ್ನು ನಡೆಸೋದೇ ನಾವು ಅವರಿಗೆ ತೋರಿಸೋ ಗೌರವ ಅಲ್ಲವೇನ್ರಯ್ಯಾ ಎಂದು ಕಣ್ಣಲ್ಲೇ ನಮ್ಮನ್ನು ಪ್ರಶ್ನಿಸುತ್ತಿದ್ದರು. 

ಹಾಗೆ ಪತಿಯಾದವನು ತನ್ನನ್ನೇ ನಂಬಿ ಬಂದ ಪತ್ನಿಗೆ ಎಂದೂ ನೋಯಿಸಬಾರದು. ಜೊತೆಗೆ ತನ್ನ ಕರ್ತವ್ಯಕ್ಕೆ ಎಂದೂ ಚ್ಯುತಿ ಬಾರದಂತೆ ಧರ್ಮವಾಗಿ ನಡೆದುಕೊಳ್ಳಬೇಕು. ತನ್ನ ಇಂತಹ ನಡವಳಿಕೆಯಿಂದ  ಪತ್ನಿ ಮತ್ತು ಮಕ್ಕಳನ್ನೂ ಧರ್ಮ ಮಾರ್ಗದಲ್ಲಿ ನಡೆಸಬೇಕು. 

ಪತ್ನಿಯಾದವಳು ಪ್ರತಿ ದಿನ ಗಂಡನಿಗೆ ನಮಸ್ಕರಿಸಬೇಕು ಹಾಗೂ ಮಕ್ಕಳು ಕೂಡಾ ಪ್ರತಿ ದಿನ ತಂದೆ ತಾಯಿ ಹಾಗೂ ಹಿರಿಯರಿಗೆ ನಮಸ್ಕರಿಸಬೇಕು ಮತ್ತು ಆ ಭಾವವನ್ನು ಸದಾಕಾಲ  ಸ್ಥಿರವಾಗಿ ಇಟ್ಟುಕೊಳ್ಳಬೇಕಪ್ಪಾ.... 

ಆಗ ನೋಡು........ ಮನೆಯ ಎಲ್ಲರಿಗೂ ಶ್ರೇಯಸ್ಸಾಗುತ್ತೆ. ಪ್ರತಿ ಮನೆ ನಂದನವಾಗುತ್ತೆ ತಿಳೀತೇನ್ರಯ್ಯಾ ಎನ್ನುತ್ತಿದ್ದರು. 

ಈ ಎಲ್ಲವನ್ನೂ ಗಮನಿಸಿದಾಗ "ನಾಳೆ ಜೀವಿ ಮರೆಯಾದ ಮೇಲೆ ಏನಾಡಿದ್ರೂ ಉಪಯೋಗವಿಲ್ಲಪ್ಪಾ.. ಈ ಕಾಲ ಮತ್ತೆ ಸಿಗೋಲ್ಲ. ಸಿಕ್ಕಾಗ ಸರಿಯಾಗಿ ಬಳಸಿಕೊಳ್ರಯ್ಯಾ... " ಎಂಬ ನನ್ನೊಡೆಯನ ಮಾತು ಸದಾ ನೆನಪಾಗುತ್ತೆ.....,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


2 comments:

  1. Poojya Guruvarya venkatachala Avara Divya charanamruta galige nanna saashtaanga pranaamagalu. Sarvarannu uddarisi asheervadisi Daari torisi olleyadaaguvante asheervadisi Guruvarya. Sarve jano sukinobavantu.

    ReplyDelete
  2. Gurudeva nimage sashtanga pranamagalu.

    ReplyDelete