ಒಟ್ಟು ನೋಟಗಳು

Thursday, January 26, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 114


    ಗ್ರಂಥ ರಚನೆ - ಚರಣದಾಸ 


ಮಹಾಚೇತನ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರು ಕರುಣಾಮೂರ್ತಿ, ನಂಬಿದ ಭಕ್ತರ ಭಾವ ಬಂಧನದಿಂದ ಬಿಡಿಸಲು ಸದ್ಗುರು ಸದಾ ಕಾಯುತ್ತಿರುವನು. ಕರ್ಮ ಕ್ಷಯವಾಗದೇ ಗುರು ದರ್ಶನ ದುರ್ಲಭವು. 

ಒಮ್ಮೆ ಗುರುನಾಥರು ಇದ್ದಕ್ಕಿದ್ದಂತೆಯೇ ಮನೆಯಿಂದ ಹೊರಟು ಊರೊಳಗಿನ ಒಬ್ಬ ಭಕ್ತರ ಮನೆಗೆ ಹೋದರು. ಅಲ್ಲಿದ್ದ ವಯೋವೃದ್ಧ ಮಹಿಳೆಯನ್ನು ಕರೆದು ಹೀಗೆ ಹೇಳಿದರು. 

"ಅಮ್ಮಾ, ನಿನ್ನ ಕೈಯಿಂದ ಊಟ ಮಾಡುವ ಬಯಕೆಯಾಗಿದೆ. ನನಗೆ ಹಸಿವಾಗುತ್ತಿದೆ. ಊಟ ಹಾಕು" ಎಂದು ಹೇಳಿ ತಟ್ಟೆ ತೆಗೆದುಕೊಂಡು ಆ ಮಹಿಳೆಯ ಕೈಯಿಂದ ಊಟ ಹಾಕಿಸಿಕೊಂಡು ಊಟ ಮಾಡಿ ಕೈಮುಗಿದು ಅಲ್ಲಿಂದ ಹೊರಟು ಮನೆ ಸೇರಿದರು. 

ಅದಾಗಿ ಹತ್ತು ನಿಮಿಷಗಳಲ್ಲಿ ಆ ಮನೆಯಿಂದ ಆ ವಯೋವೃದ್ಧೆ ದೇಹ ಬಿಟ್ಟರು ಎಂಬ ವಿಷಯ ತಿಳಿದು ಬಂತು. 

ಆಗ ಜೊತೆಯಲ್ಲಿದ್ದ ಭಕ್ತರು ಹೀಗೆ ಕೇಳಿದರು. "ಗುರುನಾಥರೇ ಇದೇನಿದು? ಈ ವಿಚಾರ ನಿಮಗೆ ಮೊದಲೇ ತಿಳಿದಿತ್ತೇ?". 

ಗುರುನಾಥರು "ಹೌದಯ್ಯಾ ಗೊತ್ತಿತ್ತು. ಆಕೆಗೆ ಸದ್ಗತಿ ಕಾಣಿಸಬೇಕಿತ್ತು. ಅದಕ್ಕಾಗಿ ಆಕೆಯ ಕೈಯಿಂದ ಊಟ ಮಾಡಿ ಬಂದೆ" ಎಂದರು. 

ಮತ್ತೊಮ್ಮೆ ಇಬ್ಬರು ಸ್ನೇಹಿತರು ಬೆಂಗಳೂರಿನಿಂದ ಅದ್ವೈತ ಪೀಠದ ಯತಿಗಳ ದರ್ಶನಕ್ಕಾಗಿ ಹೊರಟಿದ್ದರು. ಬಸ್ಸಿನಲ್ಲಿ ಸ್ನೇಹಿತರಿಂದ ಗುರುನಾಥರ ಬಗ್ಗೆ ತಿಳಿದು ಮಾರ್ಗ ಮಧ್ಯದಲ್ಲಿ ಅಂದರೆ ಸಖರಾಯಪಟ್ಟಣದಲ್ಲಿ ಇಳಿದು ನೇರವಾಗಿ ಗುರುನಿವಾಸಕ್ಕೆ ಬಂದರು. 

ಅವರು ಮನೆ ಬಾಗಿಲು ಪ್ರವೇಶಿಸುವ ಮೊದಲೇ ಗುರುನಾಥರು ಅವರಿಗೆ ಹೀಗೆ ಹೇಳಿದರು. "ನೀವು ಅದ್ವೈತ ಪೀಠದ ದರ್ಶನಕ್ಕಾಗಿ ಹೊರಟವರು. ಅರ್ಧದಲ್ಲಿ ಇಳಿದು ಇಲ್ಲಿಗೆ ಬಂದಿರುವಿರಿ. ಅದು ಕೂಡದು. ಮೊದಲು ಆ ಯತಿಗಳ ದರ್ಶನವಾಗಬೇಕು. ಆ ನಂತರ ಇಲ್ಲಿಗೆ ಬನ್ನಿ. ನಾನು ಸಿಗುತ್ತೇನೆ" ಎಂದರು. 

ತನ್ನ ಪ್ರತೀ ನಡೆಯನ್ನು ನೋಡಿದಾಕ್ಷಣವೇ ಹೇಳಿದ ಗುರುನಾಥರನ್ನು ಕಂಡು ಆ ವ್ಯಕ್ತಿ ಆಶ್ಚರ್ಯಚಕಿತರಾದರು. ನಂತರ ಗುರುನಿವಾಸದಲ್ಲಿ ಆಹಾರ ಸೇವಿಸಿ, ಅಲ್ಲಿಂದ ಮೊದಲು ನಿಗದಿಯಾದಂತೆ ಅದ್ವೈತ ಪೀಠದ ಗುರುಗಳ ದರ್ಶನ ಮಾಡಿ ಮರುದಿನ ಸಖರಾಯಪಟ್ಟಣಕ್ಕೆ ಬಂದರು. 

ಆದರೆ ಅದೇನು ವಿಧಿಯೋ ಅವರಿಗೆ ಗುರುನಾಥರ ದರ್ಶನವಾಗಲೇ ಇಲ್ಲ. 

ಗುರುನಾಥರು ಯಾವುದೇ ಸಮಸ್ಯೆಯನ್ನು ತಾನು ಪರಿಹರಿಸಿದೆ ಎಂದು ಎಂದಿಗೂ ಹೇಳಿರಲಿಲ್ಲ. ಎಲ್ಲವನ್ನು ಗುರುವಿಗೆ ಸಮರ್ಪಿಸಿ ಬದುಕಿದ್ದರು. ಇಲ್ಲಿ ಆ ಮಹಾಚೇತನದ ವಿನಯ ಹಾಗೂ ಸರಳತೆ ಎಲ್ಲ ಕಾಲಕ್ಕೂ ಮಾದರಿಯಾಗಿ ನಿಲ್ಲುತ್ತದೆ....,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya venkatachala avadootarige nanna saashtaanga pranaamagalu. Swamy Yellaranu sadaa kaala Kaapadi uddarisi asheervadisi Guruvarya. Sarve jano sukinobavantu.

    ReplyDelete