ಒಟ್ಟು ನೋಟಗಳು

Saturday, January 7, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 95


    ಗ್ರಂಥ ರಚನೆ - ಚರಣದಾಸ 


ಮಂತ್ರಾಕ್ಷತೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಬೆಂಗಳೂರು ಸಮೀಪದ ಅದ್ವೈತ ಪೀಠವೊಂದರ ಯತಿಗಳು ಗುರುನಿವಾಸಕ್ಕೆ ಬಂದರು. ಎಂದಿನಂತೆ ಗುರುನಾಥರೇ ಪತ್ನಿಯೊಂದಿಗೆ ಬಂದು ಪಾದ ತೊಳೆದು ಒಳಗೆ ಕರೆದೊಯ್ದರು. ಆಸೀನರಾದ ಯತಿಗಳು ಪೀಠದ ಮೇಲೆ ಕುಳಿತು ಇಲ್ಲ ಸಲ್ಲದ ವಿಚಾರವನ್ನು ಮಾತನಾಡತೊಡಗಿದರು. ಗುರುನಾಥರು ಎಂದೂ ಯಾರೂ ತನ್ನ ಸ್ಥಾನ ಗೌರವವನ್ನು ಮರೆತು ವ್ಯವಹರಿಸುವುದನ್ನು ಒಪ್ಪುತ್ತಿರಲಿಲ್ಲ. 

ಈ ಮಾತುಗಳಿಂದ ಸಿಡಿಮಿಡಿಗೊಂಡ ಗುರುನಾಥರು "ತಾವು ಸನ್ಯಾಸಿಯಾಗಿ ಈ ಪೀಠದಲ್ಲಿ ಕುಳಿತಿದ್ದು ಬೇರೆ ವಿಚಾರ ಮಾತನಾಡಲಿಕ್ಕಾ ಸ್ವಾಮಿ?" ಎಂದು ಪ್ರಶ್ನಿಸಿ ಮತ್ತೆ ಮುಂದುವರೆದು "ಸನ್ಯಾಸಿಯಾದವರು ನಿರಂತರ ಸಾಧನೆ ಮಾಡಿ ಆ ಸಾಧನೆಯನ್ನು ಮಂತ್ರಾಕ್ಷತೆ ರೂಪದಲ್ಲಿ ಭಕ್ತ ಜನರಿಗೆ ನೀಡಬೇಕು. ಈಗ ನೀವು ನೀಡುವ ಮಂತ್ರಾಕ್ಷತೆಯಲ್ಲಿ ಏನು ಫಲವಿದೆ ಎಂದು ಯೋಚಿಸಿ?" ಎಂದು ನೇರವಾಗಿ ಹೇಳಿದ ಕೂಡಲೇ ಆ ಯತಿಗಳು ತಮ್ಮ ತಪ್ಪನ್ನು ತಿದ್ದಿಕೊಂಡರು. 

ಬೆಂಗಳೂರು ವಾಸಿಯಾದ ಭಕ್ತರೊಬ್ಬರು ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. 

ಆ ವ್ಯಕ್ತಿಗೆ ಗುರುನಾಥರು "ಅಯ್ಯಾ, ನೀನು ಇನ್ನು ಕೆಲವು ತಿಂಗಳು ನನ್ನ ಅನುಮತಿ ಇರದೇ ಈ ಕಡೆ ಬರಬೇಡವಯ್ಯಾ" ಎಂದು ತಿಳಿಸಿದರೂ ಆತ ಗುರುವಾಕ್ಯವನ್ನು ಮೀರಿ ಬರತೊಡಗಿದರು. ಗುರುನಾಥರು ಅವರ ಕಾರನ್ನು ಬಳಸುತ್ತಿರಲಿಲ್ಲ. 

ಮತ್ತೊಮ್ಮೆ ವಿಶ್ವವಿಖ್ಯಾತ ಅದ್ವೈತ ಪೀಠದ ಯತಿವರೇಣ್ಯರು ಹಾಸನಕ್ಕೆ ಬಂದಿದ್ದರು. ಅದರ ಹಿಂದಿನ ದಿನ ಬೆಂಗಳೂರಿನ ಆ ಭಕ್ತರು ಗುರುನಿವಾಸಕ್ಕೆ ಬಂದರು. ಗುರುನಾಥರು ಅವರಿಗೆ ಸಖರಾಯಪಟ್ಟಣದ ಇಬ್ಬರು ಭಕ್ತರೊಂದಿಗೆ ಹಾಸನಕ್ಕೆ ಬರುವಂತೆ ತಿಳಿಸಿ ಬೇರೊಬ್ಬ ಭಕ್ತರ ಕಾರಿನಲ್ಲಿ ಹಾಸನಕ್ಕೆ ಹೊರಟರು. 

ಹಾಸನದಲ್ಲಿ ಶ್ರೀ ಶ್ರೀಗಳ ದರ್ಶನವಾದ ನಂತರ ಬೆಂಗಳೂರಿನ ಭಕ್ತರನ್ನು ಕರೆದು "ಸಖರಾಯಪಟ್ಟಣ ತಲುಪಿ ಆಮೇಲೆ ಬೆಂಗಳೂರು ಕಡೆ ಪ್ರಯಾಣ ತಿಳೀತೇನ್ರಯ್ಯಾ" ಎಂದು ಹೇಳಿ ಕಾರಿನಲ್ಲಿದ್ದ ಎಲ್ಲರಿಗೂ ಎರಡೆರಡು ಬಾರಿ ಶ್ರೀ ಶ್ರೀಗಳು ನೀಡಿದ್ದ ಮಂತ್ರಾಕ್ಷತೆ ನೀಡಿ (ಬೊಗಸೆ ತುಂಬಾ) ಕಳಿಸಿಕೊಟ್ಟರು. ಜೊತೆಗೆ ಶಿವಮೊಗ್ಗ ಸಮೀಪದ ಇಬ್ಬರು ಭಕ್ತರನ್ನು ಕರೆದು "ಅಯ್ಯಾ ನೀವೂ ಎಷ್ಟೇ ತಡವಾದ್ರೂ ಪರವಾಗಿಲ್ಲ. ಸಖರಾಯಪಟ್ಟಣ ತಲುಪಿಯೇ ಹೋಗಬೇಕು ಕಣ್ರಯ್ಯ" ಎಂದು ತಿಳಿಸಿದರು. ಬೆಂಗಳೂರಿನಿಂದ ಬಂದಿದ್ದ ಆ ಭಕ್ತರ ಕಾರು ಚಿಕ್ಕಮಗಳೂರಿನ ಸಖರಾಯಪಟ್ಟಣಕ್ಕೆ ಬರುವ ಮಾರ್ಗದಲ್ಲಿ ನಿಯಂತ್ರಣ ತಪ್ಪಿ ಒಂದು ಮರಕ್ಕೆ ಢಿಕ್ಕಿ ಹೊಡೆದಿತ್ತು. ಹೊಡೆದ ರಭಸ ಹೆಂಗಿತ್ತಪ್ಪಾ ಅಂದರೆ ಅದರಲ್ಲಿದ್ದ ಯಾರೊಬ್ಬರೂ ಉಳಿಯುವಂತಿರಲಿಲ್ಲ. ಆದರೆ ಗುರುಕೃಪೆ ಅವರನ್ನುಳಿಸಿತ್ತು. ಕಾರು ಪುಡಿ ಪುಡಿಯಾಗಿತ್ತು. 

ಆ ಕಾರಿನಲ್ಲಿದ್ದ ಸಖರಾಯಪಟ್ಟಣ ನಿವಾಸಿಯಾಗಿದ್ದ ಓರ್ವ ಮಹಿಳೆ ಕಾರು ಢಿಕ್ಕಿಯಾದ ರಭಸಕ್ಕೆ ಹಿಂದಿನ ಸೀಟಿನಿಂದ ಅನಾಮತ್ತಾಗಿ ಮುಂದಿನ ಸೀಟಿಗೆ ಬಂದು ಬಿದ್ದಿದ್ದರು. ಆದರೆ ಗುರುನಾಥರು ನೀಡಿದ್ದ ಅಕ್ಷತೆಯನ್ನು ಆ ತಾಯಿ ತನ್ನ ತೊಡೆಯ ಮೇಲಿಟ್ಟುಕೊಂಡಿದ್ದು ಅದರ ಒಂದು ಕಾಳು ಸಹ ಕೆಳಗೆ ಬಿದ್ದಿರಲಿಲ್ಲ. 

ಅಂತಹ ಭೀಕರ ಅಪಘಾತವಾಗಿದ್ದರೂ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಇದನ್ನು ಗಮನಿಸಿದಾಗ ನಾವುಗಳು ಎಲ್ಲಿಗೆ ಹೊರಟಾಗಲೂ ಆ ನನ್ನೊಡೆಯ ನೀಡುತ್ತಿದ್ದ ಮಂತ್ರಾಕ್ಷತೆಯ ಮಹತ್ವ ಅರಿವಿಗೆ ಬಂತು......,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


2 comments:

  1. Guru venkatachala Avara Divya paadagalige nanna bhakti poorvaka namanagalu. Poojya Guruvarya Yellaranu sadaa kaala Harasi asheervadisi Kaapadi yendu beduva nimma obba bhakta. Hari om tatsat.

    ReplyDelete
  2. Help me Gurudeva. Tumba kashtadalli iddene. Nimmalle nambike ide iga.

    ReplyDelete