ಒಟ್ಟು ನೋಟಗಳು

Monday, January 2, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 90


    ಗ್ರಂಥ ರಚನೆ - ಚರಣದಾಸ 


ಪಾಪ ನಿವಾರಕ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸದ್ಗುರುವಿನ ದರ್ಶನ ಮಾತ್ರದಿಂದ ಪಾಪವೆಲ್ಲವೂ ಕಳೆಯುವುದು. ಆತ ಜಗತ್ತಿನ ಸೃಷ್ಟಿಯ ಚರಾಚರಗಳೆಲ್ಲದರಲ್ಲೂ ತಾನೊಂದಾಗಿ ಮಾನಸ ಸಂಚಾರಿಯಾಗಿ, ಮೌನವಾಗಿ ಭಕ್ತರ ವೇದನೆಗಳಿಗೆ ಸ್ಪಂದಿಸುತ್ತಿರುವನು ಎನ್ನಲು ಈ ಘಟನೆ ನಿದರ್ಶನ. 

ಒಮ್ಮೆ ಗುರುನಾಥರು ಎಂದಿನಂತೆಯೇ ತನ್ನ ಬೆತ್ತದ ಕುರ್ಚಿಯಲ್ಲಿ ಆಸೀನರಾಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿರಲು ಓರ್ವ ದಂಪತಿಗಳು ಮದುವೆಯ ವಯಸ್ಸಿಗೆ ಬಂದ ಮಗಳೊಂದಿಗೆ ಬಂದು ಗುರುನಾಥರಿಗೆ ನಮಸ್ಕರಿಸಿ ಒಂದು ಬದಿಯಲ್ಲಿ ಕುಳಿತುಕೊಂಡರು. ಆಗ ಬೆಳಗಿನ ಸಮಯ. ಎಂದಿನಂತೆ ಎಲ್ಲರಿಗೂ ತಿಂಡಿ, ಕಾಫಿ, ಊಟದ ವ್ಯವಸ್ಥೆ ನಡೆದಿತ್ತು. ಸಂಜೆಯವರೆಗೂ ಗುರುನಾಥರು ಆ ದಂಪತಿಗಳ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. 

ಆ ದಂಪತಿಗಳೂ ಕೂಡ ಗುರು ತಮ್ಮನ್ನು ಎಂದು ಕರೆಯುವನೋ.... ಎಂದು ಕಾಯುತ್ತಾ ಕುಳಿತಿದ್ದರು. 

ಸಂಜೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಆ ದಂಪತಿಗಳ ಕಡೆ ತಿರುಗಿದ ಗುರುನಾಥರು "ಏನ್ ಸ್ವಾಮಿ ಮಗಳಿಗೆ ಮದುವೆ ಮಾಡೋದಿಲ್ವೇ?" ಎಂದು ಕೇಳಿದರು. 

ಆಗ ದಂಪತಿಗಳು ಈಡು ಬಂದು ಗುರುಚರಣಗಳಿಗೆ ನಮಸ್ಕರಿಸಿ ಅಳುತ್ತಾ ತಮ್ಮ ವ್ಯಥೆಯನ್ನು ಹೇಳತೊಡಗಿದರು. ತನಗೆ ನಮಸ್ಕರಿಸಿದ ಆ ದಂಪತಿಗಳ ಮಗಳನ್ನು ಒಮ್ಮೆ ಮುಟ್ಟಿದ ಗುರುನಾಥರು ಆ ದಂಪತಿಗಳ ಕಡೆ ತಿರುಗಿದರು. 

ಆ ದಂಪತಿಗಳು "ಸ್ವಾಮಿ ಮಗಳಿಗೆ ಮದುವೆ ನಿಶ್ಚಯವಾಗಿ ಮೂರು ತಿಂಗಳಾಗುತ್ತಾ ಬಂತು. ಬಂಧುಗಳನ್ನು ಕರೆದಾಗಿದ್ದು ಮದುವೆ ದಿನಾಂಕವೂ ನಿಗದಿಯಾಗಿದೆ. ಈ ಮಧ್ಯೆ ಮಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ವೈದ್ಯರಲ್ಲಿ ತೋರಿಸಲಾಗಿ ವೈದ್ಯರು ಆಕೆಗೆ 'ಧೈರಾಯಿಡ್" ಸಮಸ್ಯೆ ಇದ್ದು ಮದುವೆ ಮಾಡಿದಲ್ಲಿ ಜೀವಕ್ಕೆ ತೊಂದರೆ ಇದೆ ಎಂದೂ ಆ ಕಾರಣಕ್ಕಾಗಿ ಮದುವೆ ಮಾಡದಿರುವುದೇ ಒಳ್ಳೆಯದೆಂದೂ ತಿಳಿಸಿದ್ದಾರೆ. ಈ ವಿಚಾರವನ್ನು ವರನ ಕಡೆಯವರಿಗೆ ಹೇಗೆ ತಿಳಿಸುವುದು ಎಂದು ತಿಳಿಯದೇ, ಮಗಳ ಭವಿಷ್ಯವೇನೆಂದು ಅರಿಯದೇ ಕಂಗೆಟ್ಟಿದ್ದೇವೆ. ಈಗ ತಾವು ಕೃಪೆ ಮಾಡಬೇಕು" ಎಂದರು. 

ಆಗ ಗುರುನಾಥರು ಆ ತರುಣಿಯ ಕಡೆ ತಿರುಗಿ "ಏನಮ್ಮಾ ಮಾಡುವೆ ಮಾಡ್ಕೋತೀಯಾ?" ಎನ್ನಲು ಆಕೆ ಹೌದೆಂದಳು. 

ಆಗ ಗುರುನಾಥರು "ಈಗ ನಿಗದಿಯಾದ ವರನೊಂದಿಗೇ ನಿಗದಿಯಂತೆಯೇ ವಿವಾಹ ನಡೆಯುವುದು. ಆದರೆ ಮದುವೆ ಛತ್ರ ಯೋಗ್ಯವಾಗಿಲ್ಲ. ಅದು ರದ್ದಾಗಿ ಬೇರೆ ಛತ್ರದಲ್ಲಿ ನಡೆಯುವುದು. ಮದುವೆಗೆ ಇಷ್ಟು ಖರ್ಚಾಗುವುದು. ಎಲ್ಲವೂ ಸುಖವಾಗಿ ನಡೆಯುವುದು. ಈಕೆಗೆ ಅರವತ್ತೆರಡು ವರ್ಷದವರೆಗೆ ಯಾವುದೇ ಖಾಯಿಲೆ ಬಾಧಿಸುವುದಿಲ್ಲ. ಈಕೆಗೆ ಎರಡು ಮಕ್ಕಳಾಗುವುದು. ಸುಖ ಸಂಸಾರ ನಡೆಸುವಳು ಆಯ್ತಾ?" ಎಂದು ಹರಸಿ ಕಳಿಸಿದರು 

ಆ ದಂಪತಿಗಳು ನಮಸ್ಕರಿಸಿ ನೆಮ್ಮದಿಯಿಂದ ಹೊರಟುಹೋದರು. ಇದಾಗಿ ಒಂದು ವರ್ಷದ ಬಳಿಕ ಆ ತರುಣಿ ತನ್ನ ಗಂಡ ಹಾಗೂ ಗಂಡು ಮಗುವಿನೊಂದಿಗೆ ಗುರುನಿವಾಸಕ್ಕೆ ಬಂದು ಗುರುದರ್ಶನ ಮಾಡಿ, ಅಂದು ಗುರುಗಳು ಹೇಳಿದಂತೆಯೇ ಎಲ್ಲವೂ ನಡೆಯಿತು ಎಂದು ಕೃತಜ್ಞತೆಯಿಂದ ನುಡಿದಳು.....,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Sakaraayapurada Dore venkatachala avadootarige paadagalige naanu sharanu. Yellaranu sadaa kaala Kaapadi uddarisi asheervadisi Guruvarya. Hari om tatsat.

    ReplyDelete