ಒಟ್ಟು ನೋಟಗಳು

Friday, January 6, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 94


    ಗ್ರಂಥ ರಚನೆ - ಚರಣದಾಸ 


ಗುರು ದೃಷ್ಟಿ





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುವೆಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ. ಅಜ್ಞಾನವೆಂಬ ಕತ್ತಲೆಯಿಂದ ನಮ್ಮನ್ನು ಜ್ಞಾನವೆಂಬ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. 

ಗುರುದೃಷ್ಟಿ ಬಿದ್ದಿತೆಂದರೆ ಬಡವ ಧನಿಕನಾಗಬಲ್ಲ. ಧನಿಕ ದರಿದ್ರನಾಗಬಲ್ಲ. 

ಶಿವಮೊಗ್ಗ ಮೂಲದವರಾದ ಓರ್ವ ಯುವಕ ತನ್ನ ನೆರೆ ಮನೆಗೆ ಬಂದು ಹೋಗುತ್ತಿದ್ದ ಗಡ್ಡದಾರಿಯನ್ನು ಆಗಾಗ್ಗೆ ಕುತೂಹಲದಿಂದ ನೋಡುತ್ತಿದ್ದ. ನೂರಾರು ಎಕರೆ ಆಸ್ತಿ ಒಡೆತನ ಹಾಗೂ ಅಂಗಡಿ ವ್ಯಾಪಾರ, ವಹಿವಾಟು ಮನೆಯಲ್ಲಿ ಕೆಲಸಕ್ಕೆ ಆಳುಗಳು ಇಷ್ಟೆಲ್ಲಾ ಇದ್ದರೂ ಅವರಿಗೆ ನೆಮ್ಮದಿ ಎಂಬುದು ಮರೀಚಿಕೆಯಾಗಿತ್ತು. 

ಹೀಗಿರಲು ವಿಪರೀತ ಆರ್ಥಿಕ ಬಾಧೆಯಿಂದಾಗಿ ಅವರು ತಮ್ಮ ಆಸ್ತಿಯನ್ನೆಲ್ಲ ಕಳೆದುಕೊಂಡರು. ಹಾಗೂ ಜನ್ಮ ಸ್ಥಳವನ್ನೇ ತೊರೆದು ಹೋಗಿ ಅಂಗಡಿ ವ್ಯಾಪಾರ ವಹಿವಾಟು ನಡೆಸಲಾರಂಭಿಸಿದರೂ ಮನೆಯ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತಿತ್ತೇ ವಿನಃ ಕಡಿಮೆಯಾಗಲಿಲ್ಲ. 

ಒಮ್ಮೆ ಏನಾದರಾಗಲಿ ಎಂದು ತೀರ್ಮಾನಿಸಿದ ಆ ವ್ಯಕ್ತಿ ನೇರವಾಗಿ ಗುರುನಾಥರಲ್ಲಿಗೆ ಬಂದು ನಮಸ್ಕರಿಸಿ, ಆಶೀರ್ವಾದ ಪಡೆದು ಹೋದರು. ಆ ನಂತರ ಪದೇ ಪದೇ ದರ್ಶನ ಮಾಡುವಂತೆನಿಸಿ ನೇರವಾಗಿ ಗುರುನಿವಾಸಕ್ಕೆ ಬರತೊಡಗಿದರು. 

ಮಾಡಲು ಕೈಯಲ್ಲಿ ಕೆಲಸವಿಲ್ಲ, ಜೊತೆಗೆ ಮೈತುಂಬಾ ಸಮಸ್ಯೆಗಳು. ಹೀಗಿರಲು ಗುರುಕೃಪೆಯಿಂದಾಗಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಆನಂತರ ಒಮ್ಮೆ ಗುರುನಿವಾಸಕ್ಕೆ ಬಂದ ಸಂದರ್ಭ. ಮೊದಲೇ ನನ್ನ ಪರಿಚಯವಿದ್ದ ಕಾರಣ ಆತ ತನ್ನ ಸಮಸ್ಯೆಯ ಗಂಭೀರತೆಯನ್ನು ಹೀಗೆ ಹೇಳತೊಡಗಿದರು. 

"ನಮ್ಮದು ಸುಮಾರು ಎಪ್ಪತ್ತು ಎಕರೆ ಆಸ್ತಿಯಿದ್ದು ಒಂದು ಕಾಲದಲ್ಲಿ ಆರ್ಥಿಕವಾಗಿ ಸಿರಿವಂತರಾಗಿದ್ದೆವು. ಮಾತ್ರವಲ್ಲ ಸಮಾಜದಲ್ಲೂ ನಮ್ಮದು ದೊಡ್ಡ ಹೆಸರು". 

ಹೀಗಿದ್ದೂ ನಾವು ಇದ್ದಕ್ಕಿದ್ದಂತೆ ಅದೇನಾಯಿತೋ ತಿಳಿಯಲಿಲ್ಲ. ವ್ಯವಹಾರ-ವಹಿವಾಟು ಏರುಪೇರಾಗತೊಡಗಿ ಕೊನೆಗೆ ನಮ್ಮ ಆಸ್ತಿ-ಪಾಸ್ತಿಯನ್ನೆಲ್ಲ ಮಾರಾಟ ಮಾಡಿ ಊರನ್ನೇ ಬಿಡುವ ಪರಿಸ್ಥಿತಿ ಬಂದಿತು. 

ಇದೀಗ ನಾವು ಪಟ್ಟಣಕ್ಕೆ ಬಂದು ಒಂದು ಬಂಗಾರದ ಅಂಗಡಿ ನಡೆಸುತ್ತಿದ್ದೇವೆಯಾದರೂ ಯಾವುದರಲ್ಲೂ ನೆಮ್ಮದಿ ಕಾಣುತ್ತಿಲ್ಲ. ನಾವು ಯಾವ ಕಾರಣಕ್ಕಾಗಿ ಎಲ್ಲವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂತೆಂಬುದನ್ನು ನಮ್ಮ ತಂದೆಯವರೂ ತಿಳಿಸುತ್ತಿಲ್ಲ. 

ಈಗಿನ ಆದಾಯವೂ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಈಗ ಗುರು ಕೃಪೆಯಿಂದ ನಾವು ಸ್ವಲ್ಪ ನೆಮ್ಮದಿ ಕಾಣುತ್ತಿದ್ದೇವೆ. 

ಆದರೂ ಜೀವನ ನಿರ್ವಹಣೆಗಾಗಿ ನಾನು ಬೇರೆಡೆಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯಿದ್ದು ಇದೀಗ ಗುರುಕೃಪೆಯಿಂದ ಪಟ್ಟಣದ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿದ್ದು ಅಲ್ಲಿಯೇ ಮನೆ ಮಾಡಿದ್ದೇವೆ. 

ಈ ಮಧ್ಯೆ ನಮ್ಮ ಮನೆಗೆ ಬಂದ ಗುರುನಾಥರು ನನ್ನ ತಂದೆಗೆ ದರುಶನ ನೀಡಿ "ರಾಮ ಮಂತ್ರ"ವನ್ನು ಉಪದೇಶಿಸಿದ್ದಾರೆ. ತೀರಾ ಇತ್ತೀಚೆಗೆ ನನ್ನ ತಂದೆಯವರೂ ದೈವಾಧೀನರಾದರು. 

ಇದ್ದ ಅಂಗಡಿ ವಹಿವಾಟನ್ನು ನಿಲ್ಲಿಸಿದ ನಾನು ನನ್ನ ತಾಯಿ ಹಾಗೂ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದು ಇಂದು ನಾವು ಗುರುಕೃಪೆಯಿಂದ ನೆಮ್ಮದಿಯಾಗಿದ್ದೇವೆ. ಒಮ್ಮೆ ಗುರುನಾಥರಲ್ಲಿಗೆ ಬಂದ ನಾನು ನನ್ನ ಕುಟುಂಬಕ್ಕೆ ಈ ದುರ್ಗತಿ ಬರಲು ಕಾರಣವೇನೆಂದು ಕೇಳಲು ಅವರು ಹೀಗೆ ಹೇಳತೊಡಗಿದರು, ಎಂದು ಮುಂದುವರೆಸಿದರು. 

ಗುರುನಾಥರು ನನ್ನನ್ನು "ಏನಯ್ಯಾ, ನಿಮ್ಮ ತಂದೆಯವರು ಓರ್ವ ಅಜ್ಜಿಗೆ ಸೇರಿದ್ದ ಅರ್ಧ ಎಕರೆ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದರಲ್ಲವೇ?"  ಎಂದು ಆ ಅಜ್ಜಿಯ ಹೆಸರು ಹಾಗೂ ಭೂಮಿಯ ವಿವರವನ್ನು ಹೇಳಿದರು. 

ಅದಕ್ಕೆ ನಾನು ಹೌದು ಎಂದೆ. 

"ಆ ಅಜ್ಜಿಯ ನೋವು ಹಾಗೂ ಅಸಮಾಧಾನವೇ ಕಾರಣವಾಗಿ ನೀವಿಂದು ಈ ಪರಿಸ್ಥಿತಿಗೆ ಬಂದಿದ್ದೀರಾ ತಿಳೀತಾ? ಇನ್ನ್ನು ಆ ಕುರಿತು ಏನೂ ಚಿಂತಿಸಬೇಡ. ಕೆಲವೇ ವರ್ಷಗಳಲ್ಲಿ ನಿನ್ನ ಕೈಗೆ ಒಂದು ದಾಖಲೆಯ ಪ್ರತಿ ದೊರಕುವುದು. ಆ ನಂತರ ನೀನು ಕಳೆದುಕೊಂಡಿದ್ದ ಸಮಸ್ತ ಆಸ್ತಿಯನ್ನು ಹಿಂತಿರುಗಿ ಪಡೆಯುವಿ" ಎಂದರು ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು......,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya gurugalaada venkatachala Avara Divya paadagalige nanna poojya namanagalu. Sarvarannu uddarisi ee kantaka dinda mukthi kottu Kaapadi swamy. Sarve jano sukinobavantu.

    ReplyDelete