ಒಟ್ಟು ನೋಟಗಳು

Wednesday, January 11, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 99


    ಗ್ರಂಥ ರಚನೆ - ಚರಣದಾಸ 


ನನ್ನ ಜಗಳ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಈ ಮೊದಲೇ ಹೇಳಿದಂತೆ ಗುರುನಾಥರೊಂದಿಗೆ ನನ್ನ ಹುಸಿಮುನಿಸು ಜಗಳ ನನ್ನ ಜೀವನದ ಒಂದು ಭಾಗವಾಗಿತ್ತು. ಆದರೆ ಆ ಜಗಳ ನನ್ನಲ್ಲಿ ಅವರ ಮೇಲಿದ್ದ ಪ್ರೀತಿ ಅಭಿಮಾನಕ್ಕೆ ಎಂದೂ ಧಕ್ಕೆಯಾಗಿರಲಿಲ್ಲ. ನನ್ನೆಲ್ಲಾ ಕೀಟಲೆಗಳನ್ನು ಸಹಿಸಿಕೊಂಡು ನಮ್ಮ ವಯೋಮಾನಕ್ಕಿಳಿದು ಅವರು ತೋರುತ್ತಿದ್ದ ಪ್ರೀತಿ ಸಹನೆ ನಿಜಕ್ಕೂ ಅನನ್ಯವಾದದ್ದು.

ಒಮ್ಮೆ ಯಾರೋ ಒಬ್ಬರು ತಮ್ಮ ಮಗನ ಕಾಲೇಜಿನ ಅಂತಿಮ ಪರೀಕ್ಷೆಗೆ ಆಶೀರ್ವಾದ ಪಡೆಯಲು ಗುರು ನಿವಾಸಕ್ಕೆ ಬಂದಿದ್ದರು... ಆ ಹುಡುಗನಿಗೆ ಆಶೀರ್ವದಿಸಿ ಇಷ್ಟೇ ಶೇಕಡಾ ಅಂಕ ಬರುತ್ತೆ ಎಂದು ಹೇಳಿ ಕಳಿಸಿದ್ದರು. ಆ ನಂತರ ಫಲಿತಾಂಶವೂ ಬಂದು ಗುರುಗಳೆಂದಷ್ಟೇ ಅಂಕ ಬಂದಿತ್ತು. ಇದನ್ನೆಲ್ಲಾ ಗಮನಿಸಿದ ನಾನು "ನನ್ನ ಪರೀಕ್ಷೆ ಫಲಿತಾಂಶ ನೀವೇ ತಡೆ ಹಿಡಿದಿದ್ದೀರಾ.... ನಂಗ್ಯಾಕೆ ಕೆಲ್ಸ ಮಾಡ್ಕೊಡ್ತಿಲ್ಲ" ಎಂದು ಜಗಳ ಆಡತೊಡಗಿದೆ. ಗುರುನಾಥರು "ಅಯ್ಯಾ ಯಾಕಯ್ಯಾ ಹಿಂಗೆ ಗೋಳು ಹುಯ್ಕೋತೀಯಾ, ಆ ಗುರು ನಿನ್ನ ಕೈ ಬಿಡಲ್ಲಾ ಕಣಯ್ಯಾ" ಎಂದು ಸಮಾಧಾನ ಹೇಳಿದರು. ಆದರೆ ಆತುರ ಗುಣದ ನಾನು ಒಂದು ದಿನ ರಾತ್ರಿ ಗುರುನಾಥರು ಮನೆ ಹಿಂದಿನ ಅಂಗಳದ ಕೊನೆಯಲ್ಲಿ ಕುಳಿತಿದ್ದಾಗ ಗಮನ ಸೆಳೆಯಲು ಮನೆ ಹಿಂದಿನ ಬಾಗಿಲ ಬಳಿ ನಿಂತೆ.

ನನ್ನ ನೋಡಿದ ಗುರುಗಳು "ಬಾರಯ್ಯಾ" ಅಂದ್ರು. ನಾನು ಸಿಟ್ಟಿನಿಂದ "ಬರಲ್ಲಾ" ಅಂದೆ. ತುಸು ಹೊತ್ತಿನ ನಂತರ ಮಲಗುವ ಸಮಯಕ್ಕೆ ಮನೆಯಿಂದ ಹೊರಬಂದು ಮನೆ ಮುಂದೆ ನಿಂತಿದ್ದ ಭಕ್ತರ ಕಾರಿನಲ್ಲಿ ಮಲಗಿಬಿಟ್ಟೆ. ಗುರುನಾಥರು ಮನೆ ಮುಂದೆ ನಿಂತು ನನ್ನ ಹುಡುಕುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಈ ಎಲ್ಲಾ ತರಲೆ ಮಾಡುವ ಮೊದಲು ಗುರು ಸೇವೆಗೆ ಯಾವುದೇ ಅಡಚಣೆ ಬರದಂತೆ ಎಚ್ಚರ ವಹಿಸಿರುತ್ತಿದ್ದೆ. ಮರುದಿನ ಬೆಳಿಗ್ಗೆ ಎಂದಿನಂತೆ ನನ್ನ ಕೆಲಸದಲ್ಲಿ ಮಗ್ನನಾದೆ. ಗುರುನಾಥರು ಯಾತಕ್ಕೋ ಸ್ವಲ್ಪ ಹಣ ನೀಡಿದ್ದು ಚಿಲ್ಲರೆ ಉಳಿದಿತ್ತು. ಅದನ್ನು ಹಿಂತಿರುಗಿಸಲು ಗುರುಗಳು "ಇಟ್ಕೋ" ಅಂದ್ರು.

ಅಂದು ಒಬ್ಬ ಗುರು ಭಕ್ತರು ಬಂದಿದ್ದು ಎರಡು ಮೂರು ದಿನ ಅಲ್ಲೇ ಉಳಿಯುವರೆಂದು ಗೊತ್ತಾಯಿತು. ಕೂಡಲೇ ನಾನು ಗುರುಗಳಿಗೆ ತಿಳಿಸದೇ ಬಾಣಾವರದ ವೇದಿಕೆಯಲ್ಲಿ ಮೂರು ದಿನ ಇದ್ದೆ. ಇತ್ತ ಗುರುನಾಥರು ನನ್ನ ಹುಡುಕುತ್ತಿರುವ ವಿಚಾರ ತಿಳಿದು ಒಳಗೊಳಗೆ ಖುಷಿಪಟ್ಟೆ. ನಂತರ ಸೀದಾ ಗುರುನಿವಾಸಕ್ಕೆ ಬಂದೆ. ನನ್ನ ನೋಡಿ ಗುರುಗಳು ಅಲ್ಲಿದ್ದೊಬ್ಬರನ್ನು ಕರೆದು "ಮಹಾತ್ಮರಿಗೆ ಊಟ ಕೊಡಯ್ಯಾ" ಅಂದ್ರು. ನಾನು ತಲೆ ತಗ್ಗಿಸಿ ಊಟ ಮಾಡಿ ಸೀದಾ ಮನೆ ಹಿಂದೆ ಬಂದೆ. ತುಸು ಹೊತ್ತು ಬಿಟ್ಟು ನನ್ನ ಕರೆದ ಗುರುನಾಥರು ಹುಸಿಮುನಿಸು ತೋರಿಸುತ್ತಾ "ಅಯ್ಯಾ, ಎಲ್ಲೆಲ್ಲಿ ಹುಡುಕಿದೆ ಗೊತ್ತಾ ನಿನ್ನ.......... ಹಿಂಗೆ ಸತಾಯಿಸೋದೇ ನನ್ನ...." ಅಂದ್ರು ಅಕ್ಕರೆಯಿಂದ. ನಾನು ನೀರಾಗಿ ನನ್ನೊಡೆಯನ ಕಾಲಿಗೆರಗಿದೆ.

ಇತ್ತೀಚೆಗೆ ಭೇಟಿಯಾದ ಭಕ್ತರೊಬ್ಬರು ಆ ದಿನಗಳನ್ನು ನೆನೆಸಿಕೊಳ್ಳುತ್ತಾ: " ಆ ಜೀವಿನ ಹಿಡ್ಕೊಂಡು ಬರೋಕೆ ನಾನು ಎಷ್ಟು ಕಷ್ಟ ಪಟ್ಟಿದ್ದೀನಿ ಗೊತ್ತೇ....? ಮತ್ತೆಲ್ಲಿ ಹೋಗಿ ಕರ್ಮ ಬಂಧನಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೋ ಅಂತ ಯೋಚನೆ ಕಣಮ್ಮಾ ನಂಗೆ..." ಎಂದು ಗುರುನಾಥರು ಈ ಜೀವದ ಬಗ್ಗೆ ಅವರಲ್ಲಿ ಹೇಳಿದ ಮಾತನ್ನು ನನಗೆ ತಿಳಿಸಿದರು.

ಆದರೂ ನನ್ನ ವರಸೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಚಾಚೂ ತಪ್ಪದೆ ನಡೆಸುತ್ತಿದ್ದೆ. ಮತ್ತೊಮ್ಮೆ ನನ್ನ ಹುಟ್ಟೂರಿನಿಂದ ಹೊರಡುವ ಮುನ್ನ "ಇನ್ನು ನಾನು ಅವರ ಕೈಗೆ ಸಿಕ್ಕಬಾರದು" ಅಂತ ಯೋಚಿಸಿ ಗುರುನಿವಾಸಕ್ಕೆ ಬಂದೆ. ನನ್ನ ನೋಡಿ ಗುರುಗಳು ಯಾವುದೋ ಒಂದೆರಡು ಜವಾಬ್ದಾರಿಯಲ್ಲಿ ಸಿಕ್ಕಿ ಹಾಕಿಸಿ "ಏನು... ತಪ್ಪಿಸಿಕೊಂಡು ಹೋಗ್ತೀಯಾ? ನನ್ನಿಂದ ದೂರ ಹೋಗ್ತೀಯಾ.....? ಅದು ಹೆಂಗೆ ಹೋಗುತ್ತೀಯಾ ಹೋಗು ನೋಡೋಣ....." ಎಂದರು ಕಣ್ಣು ಮಿಟುಕಿಸುತ್ತಾ.

ಹೌದು, ಇಂದು ಅವರ ಪ್ರೀತಿ, ಮಮತೆಯ ಆಳವೇ ನನ್ನನ್ನು ನನ್ನೊಡೆಯನ ಮಾರ್ಗದಿಂದ ತಪ್ಪಿ ಹೋಗದಂತೆ ಅನುಕ್ಷಣವೂ ಮುನ್ನಡೆಸುತ್ತಿದೆ. ಒಮ್ಮೆ ರಾತ್ರಿ ಗುರುನಾಥರನ್ನು ಸಾಕಷ್ಟು ರೇಗಿಸಿ ಹೊರಬಂದು "ಇಷ್ಟೆಲ್ಲಾ ಮಾಡಿದ್ನಲ್ಲಾ.. ಅವನಿರದೇ ನಾ ಇರುತ್ತೀನಾ?" ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡೆ. ಬಹಳ ಹೊತ್ತು ಏಕಾಂಗಿಯಾಗಿ ಕುಳಿತು ಕಣ್ಣೀರು ಹಾಕಿದೆ. ಅದೇ ಉತ್ತರ...... ಎಂದಿಗೂ ಅವನಿರದ ಭಾವ ಬರದಿರಲಿ ನನಗೆ ಗುರುವೇ......"""""""""""

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya venkatachala avadootarige nanna bhakti poorvaka namanagalu. Sarvarannu uddarisi ee kantaka dinda mukthi kottu yellarigu manashanti kodi gurugale. Sarve jano sukinobavantu.

    ReplyDelete