ಒಟ್ಟು ನೋಟಗಳು

Saturday, January 28, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 116


    ಗ್ರಂಥ ರಚನೆ - ಚರಣದಾಸ 


ಶ್ರೀರಕ್ಷೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಇತ್ತೀಚೆಗೆ ದಕ್ಷಿಣ ಕನ್ನಡದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯೊಂದರಲ್ಲಿ ಪ್ರಾಂಶುಪಾಲರಾಗಿದ್ದ ಓರ್ವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 

ಬಹಳ ಹಿಂದಿನಿಂದ ಗುರುನಾಥರ ಸಂಪರ್ಕದಲ್ಲಿದ್ದ ವಿಷಯ ತಿಳಿದಿದ್ದ ಚರಣದಾಸನಾದ ನಾನು ಸಂತೋಷದಿಂದ ಅವರಲ್ಲಿ ನನಗೆ ಗುರುನಾಥರ ಬಗ್ಗೆ ಏನಾದರೂ ಅನುಭವವನ್ನು ತಿಳಿಸಬೇಕೆಂದು ವಿನಂತಿಸಿದೆ. 

ಅವರು ಸಂತೋಷದಿಂದ ಹೀಗೆ ಹೇಳತೊಡಗಿದರು. ನೋಡಿ ನಮಗೆ ಮೊದಲ ಬಾರಿ ಗುರುನಾಥರ ದರುಶನವಾಗಿದ್ದು 1990ರಲ್ಲಿ. ಆ ಸಮಯ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾ ಸಂಸ್ಥೆಯ ಉಪನ್ಯಾಸಕನಾಗಿ ಆಯ್ಕೆಯಾಗಿದ್ದೆ. 

ಆದರೆ ಆ ಊರು ನನಗೆ ಹೊಸತಾಗಿದ್ದರಿಂದ ಅಲ್ಲಿ ಹೇಗೋ ಏನೋ ಎಂಬ ಆತಂಕವಿತ್ತು. ಗುರುನಿವಾಸಕ್ಕೆ ಬಂಡ ನಮ್ಮನ್ನು ಆಶೀರ್ವದಿಸಿದ  ಗುರುನಾಥರು "ನೀವು ಅಲ್ಲಿಗೆ ಹೋಗಿ ಎಲ್ಲವೂ ಒಳ್ಳೆಯದಾಗುತ್ತದೆ" ಎಂದರು. 

ಆ ಸಮಯದಲ್ಲಿ ನಾವು ಆರ್ಥಿಕ ಸಂಕಷ್ಟದಲ್ಲಿದ್ದೆವು. ಮಾತ್ರವಲ್ಲ ಓರ್ವ ವ್ಯಕ್ತಿ ನಮ್ಮಿಂದ ಹಣ ಸಾಲವಾಗಿ ತೆಗೆದುಕೊಂಡಿದ್ದು ಅದನ್ನು ಸಕಾಲದಲ್ಲಿ ಹಿಂತಿರುಗಿಸದೇ ಆಟವಾಡಿಸುತ್ತಿದ್ದ. 

ಈ ವಿಚಾರವನ್ನು ಗುರುಗಳಲ್ಲಿ ವಿಚಾರಿಸಲಾಗಿ ಗುರುನಾಥರು "ಹಣ ಹಿಂತಿರುಗಿ ಬರುವುದು. ಎಲ್ಲ ಚಿಂತೆಗಳೂ ದೂರವಾಗುವುದು" ಎಂದು ಅಭಯ ನೀಡಿ ಕಳಿಸಿದರು. 

ಗುರುವಾಕ್ಯದಂತೆಯೇ ದಕ್ಷಿಣ ಕನ್ನಡ ಜಿಲ್ಲೆಗೆ ಹೋದ ಮೇಲೆ ನಮಗೆ ಎಲ್ಲವೂ ಒಳ್ಳೆಯದಾಯಿತು. ಮಾತ್ರವಲ್ಲ ಅಲ್ಲಿಗೆ ಬಂದು ಐದಾರು ವರ್ಷಗಳಲ್ಲಿ ನಾನು ಪ್ರಾಂಶುಪಾಲನೂ ಆದೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದು ಅಲ್ಲಿಯೇ ವೃತ್ತಿ ಮುಂದುವರೆಸಿರುವೆ. 

ಮಾತ್ರವಲ್ಲ ನಾವು ದಕ್ಷಿಣ ಕನ್ನಡದಿಂದ ಬೆಂಗಳೂರಿನ ಕಡೆ ಹೊರಡುವಾಗಲೂ ನಾವು ಮೊದಲು ಸಖರಾಯಪಟ್ಟಣಕ್ಕೆ ಹೋದೆವು. 

ವಿಷಯ ತಿಳಿದ ಗುರುನಾಥರು ನಮಗೆ ಆಶೀರ್ವದಿಸಿ ಹೋಗಿ ಬನ್ನಿ ಎಂದು ಹರಸಿ ಕಳುಹಿಸಿಕೊಟ್ಟರು. ಆ ನಂತರವೇ ನಾವು ಬೆಂಗಳೂರಿಗೆ ಬಂದು ನೆಲೆಸಿದೆವು ಎಂದರು. 

ಗುರುನಾಥರು ನಮಗೆ ಹೇಳಿದಂತೆ ನಮ್ಮಿಂದ ಹಣವನ್ನು ಸಾಲ ಪಡೆದ ವ್ಯಕ್ತಿ ನಮಗೆ ಹಣ ಹಿಂತಿರುಗಿಸಲಿಲ್ಲ. ಆದರೆ ನಾವು ಆತನಿಗೆ ನೀಡಿದ್ದ ಹಣದ ದುಪ್ಪಟ್ಟು ಹಣ ನಮಗೆ ಒದಗಿ ಬಂತು. ಮತ್ತು ನಮಗೆ ಆರೋಗ್ಯ, ನೆಮ್ಮದಿ ಎಲ್ಲವೂ ಆ ಸದ್ಗುರುವಿನ ಕೃಪೆಯಿಂದ ಒದಗಿ ಬಂದಿದೆ. 

ಇಂದಿಗೂ ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಆ ಚೈತನ್ಯ ನಮ್ಮನ್ನು ಕಾಯುತ್ತಿರುವ ಅನುಭವ ನಮಗೆ ಆಗಿದೆ. ಆದರೆ ಆ ಗುರುವಿನ ಋಣ ತೀರಿಸಲು ಜನ್ಮ ಜನ್ಮಾಂತರಗಳು ಸಾಕಾಗುವುದಿಲ್ಲ ಎಂದು ಕಣ್ತುಂಬಿಕೊಂಡರು. 

ಮತ್ತೂ ಮುಂದುವರೆದು ಅಂದು ಗುರುನಾಥರು ನೀಡಿದ್ದ ಮಂತ್ರಾಕ್ಷತೆಯನ್ನು ಇಂದಿಗೂ ನಮ್ಮ ಬಳಿ ಇಟ್ಟುಕೊಂಡಿದ್ದೇವೆ. ಅದೇ ನಮಗೆ ಶ್ರೀರಕ್ಷೆ ಎಂದು ನುಡಿದರು.......,,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Sakaraayapurada Dore venkatachala Avara paadagalige nanna bhakti poorvaka namanagalu. Guruvarya nimma krupe haagu rakshe sadaa yellara mele erali haagu nimma aashirvaada sadaa kaala doreyali. Sarve jano sukinobavantu.

    ReplyDelete