ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 113
ಗ್ರಂಥ ರಚನೆ - ಚರಣದಾಸ
ಶಬ್ಧ ಬ್ರಹ್ಮ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ದೇಹ ಬಿಡುವ ಸುಮಾರು ಒಂದೆರಡು ತಿಂಗಳಿನಿಂದ ಆಗಾಗ್ಗೆ ಹೀಗೆ ಹೇಳುತ್ತಿದ್ದರು. "ಇನ್ನೊಂದು ತಿಂಗಳು ಕಣಯ್ಯಾ.. ಆಮೇಲೆ ನಾನು ಇರೋದಿಲ್ಲ. ಇನ್ನು ಈ ದೇಹ ಇಟ್ಕೊಂಡು ಕೆಲಸ ಮಾಡಕ್ಕಾಗೋಲ್ಲ" ಅಂತಿದ್ರು. ಜೊತೆಗೆ ಮನೆಯಿಂದ ಹೆಚ್ಚು ದೂರ ಪ್ರಯಾಣ ಹೋಗುತ್ತಿರಲಿಲ್ಲ. ಎಲ್ಲೇ ಹೋದರೂ ರಾತ್ರಿ 10:30 ರ ಒಳಗೆ ಮನೆ ಸೇರಿಕೊಳ್ಳುತ್ತಿದ್ದರು.
ಇದಕ್ಕೂ ಮೊದಲು ಎಂದರೆ ಸರಿಯಾಗಿ ಒಂದು ವಾರ ಮೊದಲು ಗುರುನಾಥರು ಊರ ಮಹಿಳೆಯರನ್ನು ಕರೆಸಿ "ಸೌಂದರ್ಯಲಹರಿ" ಹೇಳಿಸಿ ಮುತ್ತೈದೆಯರಿಗೆ ಹೂವು, ಹಣ್ಣು, ಬಟ್ಟೆ ನೀಡಿ ಗೌರವಿಸಿದರು. ನಂತರ ಅಲ್ಲಿದ್ದ ಅದೇ ಊರಿನ ಓರ್ವ ಮಹಿಳೆಗೆ ಹೀಗೆ ಹೇಳಿದರು. "ನೋಡು ಇಂದಿಗೆ ಸರಿಯಾಗಿ ಒಂದು ವಾರ. ನಾನಿರೋದಿಲ್ಲ. ಬೆಳಗಿನ ಜಾವ ಎರಡು ಗಂಟೆಗೆ (ನನ್ನ ಹೆಸರನ್ನು ಹೇಳಿ) ಚರಣದಾಸನನ್ನು ಇಂಥ ವ್ಯಕ್ತಿ ಬಂದು, ಅಮ್ಮನನ್ನು ಸಮಾಧಾನ ಮಾಡುವ ಗಟ್ಟಿ ಜನ ಯಾರಿರುವರು? ಎಂದು ಚರಣದಾಸನನ್ನು (ನನ್ನನ್ನು) ಕೇಳುವರು. ಆಗ ಇವನು (ನಾನು) ನಿಮ್ಮ ಹೆಸರನ್ನು ಹೇಳುವನು. ಹಾಗೂ ಇವನೇ (ನಾನು) ನಿಮ್ಮನ್ನು ಕರೆಯಲು ಬರುವನು. ಸಿದ್ಧವಾಗಿರಿ" ಎಂದು ಹೇಳಿದರು. ಈ ಮಾತು ನನಗೆ ವಿಚಿತ್ರವೆನಿಸಿತು.
ಈ ಮಧ್ಯೆ ಚಿಕ್ಕಮಗಳೂರಿನ ಒಬ್ಬರ ಮನೆಯಲ್ಲಿ ಪಾದುಕಾಪೂಜೆ ಮಾಡಿದ್ದ ಗುರುನಾಥರು ಆ ಮನೆಯಾಕೆಯನ್ನು "ಪ್ರಸಾದ ತಂದು ಕೊಡು" ಎಂದು ವಿನಂತಿಸಿದ್ದರೂ ಆಕೆ ಬಂದಿರಲಿಲ್ಲ.
ಕೊನೆಗೆ ದೇಹ ಬಿಡುವ ನಲವತ್ತೆಂಟು ಗಂಟೆ ಮೊದಲು ನನ್ನ ಕೈಯಿಂದ ಆಕೆಗೆ ಕರೆ ಮಾಡಿಸಿದ ಗುರುನಾಥರು ಹೀಗೆ ವಿನಂತಿಸಿದರು. "ಅಮ್ಮ, ನೀ ಬರಲು ಕಾರನ್ನು ಕಳಿಸುತ್ತೇನೆ. ನಿನ್ನ ಬಲದ ಮೇಲೆ ನಾನು ಇನ್ನೂ ಒಂದು ವರ್ಷ ಬದುಕಬಹುದು. ನನಗಿನ್ನೂ ಕೆಲಸ ಮಾಡುವುದಿದೆ. ಎಂಟು ಮದುವೆ ಮಾಡಿಸುವುದಿದೆ. ದಯಮಾಡಿ ಬಂದು ಹೋಗು" ಎಂದರು.
ಆದರೆ ಆಕೆ ಸರಿಯಾಗಿ ಉತ್ತರಿಸಲಿಲ್ಲ. ಆಗ ಗುರುನಾಥರು "ನೋಡು. ಈಗ ಬರದಿದ್ದಲ್ಲಿ ಇನ್ನು ನಲವತ್ತೆಂಟು ಗಂಟೆ ನಂತರ ನಾನು ನಿನಗೆ ಜೀವಂತವಾಗಿ ಸಿಗೋಲ್ಲ" ಎಂದು ನುಡಿದು ಫೋನಿಟ್ಟರು.
ಈ ಮಾತನ್ನು ಕೇಳಿ ವಿಚಿತ್ರವೆನಿಸಿದ ಚರಣದಾಸನಾದ ನಾನು ಗುರುನಾಥರ ಕಡೆ ಏನದು? ಎಂಬಂತೆ ನೋಡಲು, ಗುರುನಾಥರು "ಏನಿಲ್ಲ ಹೆದರಿಸಬೇಕು ಕಣಯ್ಯಾ" ಅಂದ್ರು. ಆದರೆ ಆ ಮುಖದಲ್ಲಿ ನಿರ್ವಿಕಾರ ಭಾವ ಎದ್ದು ಕಾಣುತ್ತಿತ್ತು. ಎಂದಿನ ತಮಾಷೆ ಇರಲಿಲ್ಲ.
ನಾನು ಆಗಲೇ ಹೇಳಿದಂತೆ ಗುರುನಾಥರು ದೇಹ ತ್ಯಾಗ ಮಾಡಿದ್ದು 31ನೇ ಜುಲೈ 2010. ಅದಕ್ಕೂ ಸುಮಾರು 2-3 ತಿಂಗಳ ಮುಂಚಿನಿಂದ ಆಗಾಗ್ಗೆ "ಇಲ್ಲಪ್ಪಾ, ಇನ್ನು ಈ ದೇಹ ಇಟ್ಟುಕೊಂಡು ಕೆಲಸ ಮಾಡಕ್ಕಾಗಲ್ಲ. ಭಾರ ಜಾಸ್ತಿ ಆಯಿತು" ಅಂತ ಹೇಳ್ತಾ ಇದ್ರು. ಜೊತೆಗೆ "ನಾ ಇನ್ನೆಷ್ಟು ಹಗಲು ಇರ್ತೀನಪ್ಪಾ?" ಎಂದು ಪ್ರಶ್ನಿಸುತ್ತಿದ್ದರು.
ಒಮ್ಮೆ ನಾನು ಅವರ ತೋಟದ ತೆಂಗಿನ ಮಡಿಲನ್ನು (ಹೆಡೆ) ಅವರ ಮೂರು ತೋಟದಿಂದ ಆಯ್ದು ಗಾಡಿಗೆ ತುಂಬಿ ತಂದು ಅದನ್ನು ಮನೆಯ ಹಿಂದೆ ಜೋಡಿಸುತ್ತಿದ್ದೆ. ಎಂದಿಗಿಂತ ಆ ವರ್ಷ ಅತಿ ಹೆಚ್ಚು ತಂದಿದ್ದೆ.
ಅದನ್ನು ನೋಡಿದ ಗುರುನಾಥರು "ಜೋಡಿಸು ಮುಂದೆ ಬೇಕಾಗುತ್ತೆ" ಅಂದಿದ್ರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಆ ನಂತರ ದೇಹ ಬಿಟ್ಟಾಗ ಉರುವಲಿಗೆ ಇದನ್ನು ಬಳಸಿದ್ರು. ಆಗ ನನಗೆ ಅವರ ಮಾತಿನ ಅರ್ಥವಾಗಿತ್ತು.
ಆ ಎರಡು ತಿಂಗಳಿಂದ ಈಚೆಗೆ ಗುರುನಾಥರು ಬೇರೆ ಯಾರ ಮನೆಯಲ್ಲಿಯೂ ರಾತ್ರಿ ಉಳಿದುಕೊಳ್ಳುತ್ತಿರಲಿಲ್ಲ.
ಇದಕ್ಕೂ ಮೊದಲು ಒಮ್ಮೆ ನನ್ನನ್ನು ಹಠಾತ್ತಾಗಿ ಗುರುನಿವಾಸದಿಂದ ಮೂರು ಗಂಟೆ ಕ್ರಮಿಸುವಷ್ಟು ದೂರದಲ್ಲಿದ್ದ ಅದ್ವೈತ ಪೀಠಕ್ಕೆ ಹೋಗಿ ಬಾ ಅಂದ್ರು.
ಅಂದು ನನಗೆ ವಿಪರೀತ ಸಿಟ್ಟು ಬಂತು. ನಾನು ಸಿಟ್ಟಿನಿಂದ "ಗುರುಗಳೇ ಇಲ್ಲಿ ವಿಪರೀತ ಕೆಲಸವಿದೆ. ನೀವು ಹೀಗೆ ಕಳಿಸುತ್ತಾ ಇದ್ದೀರಾ. ಈ ಥರ ಮಾಡುವ ಬದಲು ನನ್ನ ಕೆಲಸ ಮಾಡಿ ಕೊಟ್ಟು ಕಳಿಸಿ ಬಿಡಿ" ಅಂದೆ ಬೇಸರದಿಂದ.
ಆಗ ಗುರುನಾಥರು ಹೀಗೆ ಹೇಳಿದರು. "ಅಯ್ಯಾ, ಯಾರು ಯಾರ ಜೊತೆಗೂ ಇರೋಕ್ಕಾಗಲ್ಲ. ಇನ್ನು ನೀ ನನ್ನ ಜೊತೆ ಇರ್ತೀಯಾ?"
ನಾನು ನನ್ನ ದುಡುಕಿನ ಅರಿವಾಗಿ, "ಸಾರ್, ನಾ ಹಾಗೆ ಹೇಳಿದ್ದಲ್ಲ. ವಿಪರೀತ ಕೆಲಸ ಇರೋವಾಗ ನಾ ಹೇಗೆ ಹೋಗಲಿ" ಎಂದು ಅಳತೊಡಗಿದೆ. ಆಗ ಗುರುನಾಥರು "ಸರಿ ಬಿಡು" ಅಂದ್ರು.
ಈ ಎಲ್ಲ ಘಟನೆಗಳನ್ನು ಪರಿಶೀಲಿಸಿದಾಗ ಅವರು ದೇಹ ಬಿಡಲು ತೀರ್ಮಾನಿಸಿ ಬಿಟ್ಟಿದ್ದರು ಎಂಬುದು ತಿಳಿದು ಬರುವುದು. ಆ ಕಾರಣಕ್ಕಾಗಿ ಇದನ್ನು ಇಲ್ಲಿ ದಾಖಲಿಸಿದ್ದೇನೆ.
ಅದಕ್ಕೂ ಮೊದಲು ಅಂದ್ರೆ ಕೆಲ ವರ್ಷಗಳ ಹಿಂದೆಯೇ ಓರ್ವ ಗುರುಭಕ್ತರನ್ನು ಕರೆದು ಗುರುನಾಥರು ಹೀಗೆ ಹೇಳಿದ್ದರು. "ನಾನು ಇಚ್ಛಾ ಮರಣಿ. ಅಂದ್ರೆ ನನಗೆ ಬೇಕೆನಿಸಿದಾಗ ದೇಹತ್ಯಾಗ ಮಾಡುತ್ತೇನೆ. ಯಾವತ್ತು ನನ್ನ ಬಗ್ಗೆ ದಿನ ಪತ್ರಿಕೆಯಲ್ಲಿ ಬರೆಯುವರೋ ಅದಾಗಿ ಎಂಟು ದಿನಕ್ಕೆ ನಾನು ದೇಹ ಬಿಡುವೆ" ಎಂದಿದ್ದರು.
ಅಂತೆಯೇ ಒಂದು ಭಾನುವಾರದಂದು ಪತ್ರಿಕೆಯಲ್ಲಿ "ಗುರುವೆಂದರೆ ಹೇಗಿರಬೇಕು" ಎಂಬ ಶೀರ್ಷಿಕೆ ಹಾಗೂ ಗುರುನಾಥರ ಫೋಟೋದೊಂದಿಗೆ ಸಂಪಾದಕೀಯದಲ್ಲಿ ಗುರುನಾಥರ ಬಗ್ಗೆ ಬರೆಯಲ್ಪಟ್ಟಿತ್ತು. ಅದಾಗಿ ಎಂಟನೇ ದಿನಕ್ಕೆ ಗುರುನಾಥರು ದೇಹತ್ಯಾಗ ಮಾಡಿದ್ದರು.
ಬಹುಶಃ ಆ ಒಂದು ವಾರದ ಮೊದಲು ಗಣಪತಿ ಉಪಾಸಕರಾದ ದಂಪತಿಗಳು ಗುರುದರ್ಶನಕ್ಕಾಗಿ ಬಂದಿದ್ದರು. ಅವರನ್ನು ಮನೆಯೊಳಗೆ ಕರೆದು ನಮಸ್ಕರಿಸಿ ಗೌರವಿಸಿದ ಗುರುನಾಥರು ಹೀಗೆ ಕೇಳಿದರು.
"ಗಣಪತಿಯೇ ಬಂದಿರುವನು ಎಂಬುದು ನನಗೆ ತಿಳಿದಿದೆ. ನನ್ನ ಬಗ್ಗೆ ಏನಾದರೂ ಹೇಳಿ" ಎಂದರು.
ಆ ದಂಪತಿಗಳು "ನೀವಿನ್ನು ಬದುಕಿರುವುದು ಕೇವಲ ಒಂದು ವಾರ ಮಾತ್ರ" ಎಂದರು.
ಅದು ಹಾಗೆಯೇ ಆಯಿತು..... ....,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Swamy venkatachala. Yellaranu ee mahaa kantaka dinda mukthi kottu Kaapadi haagu manashanti honduvante asheervadisi. Hari om tatsat.
ReplyDelete