ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 105
ಗ್ರಂಥ ರಚನೆ - ಚರಣದಾಸ
ಕರ್ಮವೆಲ್ಲವೂ ನಿನ್ನುಪಾಸನಾ.....
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರು ನಿವಾಸದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯಿಂದ ಒಂದು ದಿನ ಒಬ್ಬ ಯುವಕ ಬಂದನು.
ಗುರುನಾಥರು ಆತ ಬಂದ ಕಾರಣ ಕೇಳಲು ಆತ ಹೀಗೆ ಹೇಳತೊಡಗಿದನು. "ಸ್ವಾಮಿ ನಮ್ಮ ತೋಟದಲ್ಲಿ ನೀರಿನ ಅಭಾವವಿದ್ದು ಬಾವಿ ತೋಡಿಸಬೇಕೆಂದಿದ್ದೇನೆ. ತಾವು ಕೃಪೆ ಮಾಡಿ ಯಾವ ದಿಕ್ಕಿನಲ್ಲಿ ಕೊರೆದರೆ ನೀರು ಬರಬಹುದು ಎಂದು ತಿಳಿಸಬೇಕು" ಎಂದು ಪ್ರಾರ್ಥಿಸಿದನು.
ಅದಾಗಲೇ ಗುರುನಾಥರೊಂದಿಗೆ ಸಲುಗೆಯಿಂದ ಇದ್ದ ಆ ಯುವಕನನ್ನು ಕುರಿತು ಗುರುನಾಥರು ಹೀಗೆ ಹೇಳಿದರು. "ನೋಡಯ್ಯಾ ಇಂಥ ದಿಕ್ಕಿನಲ್ಲಿ ಕೊರೆಸು. ಎಪ್ಪತ್ತೆಂಟು ಅಡಿ ಆಳದಲ್ಲಿ ನೀರು ಸಿಗುವುದು" ಎಂದರು. ಗುರುವಿನ ಅನುಗ್ರಹ ಪಡೆದು ಹೋದ ಆ ಯುವಕ ಬಾವಿ ತೋಡಿಸಲಾರಂಭಿಸಿದರು.
ಗುರುನಾಥರು ಹೇಳಿದಂತೆಯೇ ಎಪ್ಪತೆಂಟು ಅಡಿ ಆಳ ಕೊರೆದರು. ಆದರೆ ನೀರು ಬರಲಿಲ್ಲ. ಆಗ ಚಿಂತಾಕ್ರಾಂತನಾದ ಆತ ಮತ್ತಷ್ಟು ಆಳಕ್ಕೆ ಕೊರೆಸಿದನು. ಆದರೂ ನೀರಿನ ಸುಳಿವಿಲ್ಲ. ಇದರಿಂದ ದಿಗಿಲುಗೊಂಡ ಆತ ಗುರುನಾಥರಲ್ಲಿ ಬಂದು ಪರಿಸ್ಥಿತಿಯನ್ನು ವಿವರಿಸಿದನು.
ಯೋಚಿಸಿದ ಗುರುನಾಥರು "ಎರಡು ಸಣ್ಣ ಕಲ್ಲನ್ನು ಕಟ್ಟಿ ಬಾವಿ ಕೊರೆದ ಜಾಗದಲ್ಲಿಡು. ನೀರು ಬರುತ್ತೆ" ಎಂದರು. ಆತ ಹಾಗೇ ಮಾಡಿದರು. ಆದರೂ ನೀರಿನ ಸುಳಿವಿಲ್ಲ. ಇನ್ನೂರು, ಮುನ್ನೂರು, ಆರು ನೂರು ಅಡಿ ಆಳ ಇಳಿಸಿದರೂ ನೀರಿನ ಸುಳಿವಿಲ್ಲ. ಆತಂಕಗೊಂಡ ಆತ ನೇರವಾಗಿ ಗುರನಾಥರಲ್ಲಿಗೆ ಬಂದು ನಿಂತರು.
"ನೀರು ಬಂತೇನಯ್ಯಾ?" ಎಂಬ ಗುರುನಾಥರ ಪ್ರಶ್ನೆಗೆ ಆತ "ಇಲ್ಲ" ಎಂದಷ್ಟೇ ಉತ್ತರಿಸಿದನು. ಗುರುವನ್ನು ನಂಬಿ ಕಷ್ಟಪಟ್ಟು ಹಣ ಹೂಡಿದ್ದೆ ವ್ಯರ್ಥವಾಯಿತಲ್ಲ ಎಂದು ಆತ ಚಿಂತಿತನಾಗಿದ್ದನು. ಅದಕ್ಕೂ ಮಿಗಿಲಾಗಿ ಗುರುವಾಕ್ಯದ ಬಗ್ಗೆ ಜನರು ಹಗುರವಾಗಿ ಮಾತಾಡಿಬಿಟ್ಟರೆ? ಎಂಬ ಕಾಳಜಿ ಅವನಲ್ಲಿತ್ತು.
ಆತನ ಮನದ ಇಂಗಿತವನ್ನು ಅರಿತ ಗುರುನಾಥರು ಕೈ ಮುಗಿದು ಹೀಗೆ ಹೇಳಿದರು. "ಅಯ್ಯಾ, ಹಣ ಕಳಕೊಂಡೆ ಅಂತ ಬೇಜಾರ್ ಆಗಬೇಡ. ನನ್ನ ತೋಟದ ಅಡಿಕೆ ಫಸಲು ಕೈಗೆ ಬಂದ ನಂತರ ಅರ್ಧ ಹಣವನ್ನು ನಾನು ಕೊಡುತ್ತೇನೆ ಕಣಯ್ಯಾ, ನನ್ನಿಂದ ತಪ್ಪಾಗಿದೆ ನನ್ನ ಕ್ಷಮಿಸು" ಎಂದರು.
ಆತ ಸ್ವಲ್ಪ ಸಮಾಧಾನಗೊಂಡ ಆತ "ಇರಲಿ ಬಿಡಿ ಗುರುಗಳೇ" ಅಂದ.
ಆಗ ಮತ್ತೆ ಅವನನ್ನು ಕರೆದ ಗುರುಗಳು "ಅಯ್ಯಾ ಹಸಿವಾಗ್ತಿದೆ ಕಣಯ್ಯಾ. ನಂಗೆ ಇಡ್ಲಿ ತಂದು ಕೊಡ್ತೀಯಾ" ಅಂದ್ರು.
ಆತ ಹೊರಗೆ ಹೋಗಿ ಇಡ್ಲಿ ತಂದುಕೊಟ್ಟನು. ಎಲ್ಲರಿಗೂ ಹಂಚಿ, ಗುರುನಾಥರು ತಾನೂ ತಿನ್ನತೊಡಗಿದರು.
ಆಗ ಆ ಯುವಕನಿಗೆ ಕರೆ ಮಾಡಿದ ಒಬ್ಬ ವ್ಯಕ್ತಿ ಹೀಗೆ ಹೇಳಿದರು: "ಅಣ್ಣಾ ಪುಕ್ಕಟೆಯಾಗಿ ಎಷ್ಟು ಅಡಿ ಆಳದಲ್ಲಿ ನೀರಿದೆ ಅಂತ ನೋಡ್ತೀವಿ ಅಂತ ಯಾರೋ ಬಂದಿದ್ದಾರೆ. ತೋರಿಸಲೇನಣ್ಣಾ?" ಎಂದರು. ಅದಾಗಲೇ ನೀರು ಸಿಗದೇ ಬೇಸರದಿಂದ ಇದ್ದ ಆ ಯುವಕ "ಏನಾದ್ರೂ ಮಾಡಿಕೊ ಹೋಗು" ಎಂದು ಫೋನಿಟ್ಟರು. ಅದಾಗಿ ಕೆಲವೇ ಕ್ಷಣದಲ್ಲಿ ಮತ್ತೆ ಕರೆಮಾಡಿದ ಆ ವ್ಯಕ್ತಿ "ಅಣ್ಣಾ ಬಾವೀಲಿ ನೀರು ಸಿಕ್ತು" ಅಂದ.
ಸಂತೋಷಭರಿತನಾದ ಆ ಯುವಕ ಕೂಡಲೇ ಗುರುನಾಥರಿಗೆ ವಿಷಯ ತಿಳಿಸಲು, ಗುರುನಾಥರು ನಗುತ್ತಾ "ಎಷ್ಟು ಅಡೀಲಿ ಸಿಕ್ತಂತೆ"?" ಎಂದು ಪ್ರಶ್ನಿಸಿದರು.
ಅದಕ್ಕವರು ಎಪ್ಪತೆಂಟು ಅಡಿ ಗುರುಗಳೇ ಅಂದ. ಮತ್ತೂ ಮುಂದುವರೆದು ಇದು ಹೇಗೆ ಸಾಧ್ಯ ಗುರುಗಳೇ ಎಂದು ಕೇಳಿದನು.
ಆಗ ಗುರುನಾಥರು ನಗುತ್ತಾ "ಇದೆಲ್ಲಾ ಮುಂಚಿತವಾಗಿಯೇ ಬೆಳಕಿನಂತೆ ಕಾಣಿಸುತ್ತಾ ಇರುತ್ತದೆ ಕಣಯ್ಯಾ. ನಿನ್ನ ಮನಸ್ಸನ್ನು ಪರೀಕ್ಷಿಸಿದೆ ಅಷ್ಟೇ" ಅಂದ್ರು. "ಗುರುವಾಕ್ಯ ಪ್ರಮಾಣ" ಎಂಬುದರ ಅರ್ಥ ಅರಿತ ಆ ಯುವಕ ತನ್ನ ತಪ್ಪಿನ ಅರಿವಾಗಿ ಕಣ್ಣೀರಿಡುತ್ತಾ ಗುರುಪಾದಕ್ಕೆ ಎರಗಿದನು. ಆತ ಇಂದು ಗುರು ಕೃಪೆಯಿಂದ ಸಮಾಜದ ಪ್ರತಿಷ್ಠಿತ ವ್ಯಕ್ತಿಯಾಗಿ ಬೆಳೆದಿದ್ದರೂ "ಕರ್ಮವೆಲ್ಲವೂ ನಿನ್ನುಪಾಸನಾ, ಭೋಗವೆಲ್ಲವೂ ನಿನ್ನ ಭಾವನಾ" ಎಂಬಂತೆ ತನ್ನೆಲ್ಲವನ್ನೂ ಗುರುವಿಗೆ ಅರ್ಪಿಸಿ ಸರಳವಾಗಿ ಬದುಕುತ್ತಿರುವನು......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna poojya namanagalu. Sarvarigu arogya ayasu rakshe sahane samadhaana buddhi shreyasu santosha karunisi yendu beduva nimma obba bhakta. Hari om tatsat.
ReplyDelete