ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 98
ಗ್ರಂಥ ರಚನೆ - ಚರಣದಾಸ
ಶರಣಾಗತ ರಕ್ಷಕ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುವೆಂದರೆ ಜಗತ್ತು. ಗುರುವೆಂದರೆ ಸರ್ವಸ್ವ. ನಾನೆಂಬ ಭಾವವನ್ನು ಬದಿಗೊತ್ತಿ ಒಮ್ಮೆ ಗುರುವಿಗೆ ಶರಣಾಗಿಬಿಟ್ಟರೆ ನಮ್ಮ ಕೆಲಸ ಮುಗಿದಂತೆ. ಆತ ಕೇವಲ ನಮ್ಮ ಲೌಕಿಕದ ಈತಿ-ಬಾಧೆಗಳನ್ನು ಪರಿಹರಿಸುವ ಸಾಧನವಲ್ಲ, ಜೊತೆಜೊತೆಗೆ ಸತ್ಯದ ಅರಿವು ಮೂಡಿಸುವ ಅದಮ್ಯ ಚೇತನ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಓರ್ವರು ಸುಮಾರು ಹದಿನೈದು ವರ್ಷಗಳಿಂದಲೂ ಗುರುನಾಥರ ಬಗ್ಗೆ ತಿಳಿದರಷ್ಟೇ ವಿನಃ ಗುರುವೆಂಬ ಬಗ್ಗೆ ಏನೂ ಗೊತ್ತಿರಲಿಲ್ಲ. ಹಾಗಿದೂ ಏನೋ ಒಂದು ಸೆಳೆತದಿಂದ ಆಗಾಗ್ಗೆ ಬಂದು ಗುರುನಾಥರ ದರ್ಶನ ಪಡೆದು ನಮಸ್ಕರಿಸಿ ಹೋಗುತ್ತಿದ್ದರು.
ಬಂದಾಗಲೆಲ್ಲಾ ಜ್ಯೋತಿಷಿಯ ಹತ್ತಿರ ಕೇಳುವಂತೆ ಲೌಕಿಕದ ಪ್ರಶ್ನೆ ಕೇಳಿ ಪರಿಹಾರ ಪಡೆದುಕೊಂಡು ಹೋಗುತ್ತಿದ್ದರು. ಸರ್ಕಾರಿ ವೈದ್ಯರಾಗಿದ್ದ ಅವರನ್ನು ಕುರಿತು ಗುರುನಾಥರು ಒಮ್ಮೆ ಕರೆದು ಹೀಗೆ ಹೇಳಿದರು. "ನೋಡಮ್ಮಾ ನಿನಗೆ ಇಂಗ್ಲೀಷ್ ಪದ 'ಊ' ನಿಂದ ಆರಂಭವಾಗುವ ಊರಿಗೆ ವರ್ಗವಾಗಬಹುದು" ಎಂದರು. "ಅಂತೆಯೇ ಹೈದರಾಬಾದ್ ಗೆ ಹೋಗಬೇಕಾಗಬಹುದು" ಎಂದಿದ್ದರು.
ಆಗ ಗಂಡ-ಮಕ್ಕಳನ್ನು ಬಿಟ್ಟು ಪರ ರಾಜ್ಯಕ್ಕೆ ಹೇಗಪ್ಪಾ ಹೋಗೋದು? ಎಂದು ಆ ವೈದ್ಯರು ಚಿಂತಿಸಿ, ಗುರುನಾಥರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದರು.
ಆ ನಂತರ ದೈವವಶಾತ್ ಹಾಸನ ಜಿಲ್ಲೆಗೆ ವರ್ಗವಾಯಿತು. ಈ ಘಟನೆಯಿಂದ ಗುರುವಿನ ಬಗ್ಗೆ ನಂಬಿಕೆ ಬೆಳೆಸಿಕೊಂಡ ಅವರು, ಗುರುನಾಥರು ಎಲ್ಲರನ್ನು ಮುಕ್ತವಾಗಿ ಇರಲು ಬಿಟ್ಟು ನಂತರ ತಪ್ಪಾದಲ್ಲಿ ತಿದ್ದುತ್ತಿದ್ದ ವಿಶಿಷ್ಠ ರೀತಿಯನ್ನು ಕಂಡು ಮನದಲ್ಲಿದ್ದ ಹಠವನ್ನು ಬಿಟ್ಟು ಸಂಪೂರ್ಣವಾಗಿ ಗುರುವಿಗೆ ಶರಣಾದರು.
ಮಾತ್ರವಲ್ಲ ಗುರುವೆಂದರೆ ಸಾಕ್ಷಾತ್ ಈಶ್ವರ. ಆತ ನಮ್ಮ ಲೌಕಿಕ ಸಮಸ್ಯೆ ಪರಿಹಾರಕ್ಕಾಗಿ ಮಾತ್ರವೇ ಅಲ್ಲ. ಸರ್ವಸ್ವವೂ ಅವನದೇ ಎಂಬ ತೀರ್ಮಾನಕ್ಕೆ ಬಂದರು.
ಈ ನಡುವೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಮಗಳ ಪರೀಕ್ಷಾ ಫಲಿತಾಂಶ ಏನಾಗುತ್ತದೆಂದು ತಿಳಿಯಲೋಸುಗ ಗುರುನಿವಾಸಕ್ಕೆ ಬಂದು, ಆ ಕುರಿತು ಕೇಳಲು, ಗುರುನಾಥರು ಶೇಕಡಾ 88% ಬರುವುದೆಂದರು. ಆಶ್ಚರ್ಯವೆಂದರೆ ಶೇಕಡಾ 99% ಅಂಕ ಪಡೆದ ಆ ಹುಡುಗಿ ರಾಜ್ಯಕ್ಕೆ ಎರಡನೆಯವಳಾಗಿ ಆಯ್ಕೆಯಾದಳು.
ಮತ್ತೊಮ್ಮೆ ಅದೇ ವೈದ್ಯರು ಚಿಕನ್ ಗುನ್ಯಾ ಎಂಬ ಖಾಯಿಲೆಗೆ ತುತ್ತಾಗಿ ಕಾಲಿನ ಹಿಮ್ಮಡಿ ಗಂಟಾಗಿ ಹಿಡಿದಂತಾಗಿತ್ತು.
ಗುರುನಿವಾಸಕ್ಕೆ ಬಂದ ಅವರು ಇಂತಹ ಸಾಮಾನ್ಯ ಪ್ರಶ್ನೆಗಳನ್ನು ಗುರುವಲ್ಲಿ ಕೇಳಬಹುದೇ? ಎಂಬ ಗೊಂದಲಕ್ಕೆ ಒಳಗಾಗಿದ್ದರು.
ಆಗ ಅವರನ್ನು ಕರೆದ ಗುರುನಾಥರು ತನ್ನ ಮುಂದೆ ಕುಳಿತುಕೊಳ್ಳಲು ಹೇಳಿದರು.
ಕುಳಿತುಕೊಂಡರೆ ಹೇಗೆ ಏಳುವುದೆಂದು ಯೋಚಿಸುತ್ತಾ ಕುಳಿತ ಅವರನ್ನು ಗುರುನಾಥರು "ಏನಮ್ಮಾ ಏಳೋಕೆ ಕಷ್ಟವಾಗುತ್ತೆ ಅಲ್ವೇ?" ಎನ್ನಲು ಆಕೆ ಹೌದೆಂದರು.
ಕೆಲ ಹೊತ್ತಿನ ನಂತರ ಅವರು ಗುರುವಿನ ಸಮ್ಮತಿ ಪಡೆದು ತನ್ನೂರಿಗೆ ವಾಪಸಾದರು. ಆಶ್ಚರ್ಯವೆಂದರೆ ಅದಾಗಿ ಎರಡು ದಿನದಿಂದ ಆ ನೋವು ಮತ್ತೆ ತಿರುಗಿ ಕಾಣಿಸಿಕೊಳ್ಳಲೇ ಇಲ್ಲ.
ಸದ್ಗುರುವನ್ನು ದೃಢವಾಗಿ ನಂಬಿದರೆ ಸಾಕು. ಗುರುವಿಗೆ ನಾವು ಮಾತಿನಿಂದ ಏನನ್ನು ಹೇಳಬೇಕಿಲ್ಲ. ಗುರು ಸರ್ವಾಂತರ್ಯಾಮಿ ಎಂಬ ಸತ್ಯವನ್ನು ಅವರು ತಿಳಿದುಕೊಂಡರು.
ಮತ್ತೊಮ್ಮೆ ಗುರುನಾಥರು ಪಂಚಭೂತಗಳಲ್ಲಿ ಲೀನವಾದ ನಂತರ ನಡೆದ ಘಟನೆಯನ್ನು ಇತ್ತೀಚೆಗೆ ಭೇಟಿಯಾದಾಗ ಹೀಗೆ ಹೇಳಿದರು.
"ಇದ್ದಕ್ಕಿದ್ದಂತೆ ಮೂಳೆ ಜಾರಿದಂತಾಗಿ ಸುಮಾರು ನಾಲ್ಕೈದು ತಿಂಗಳು ಕಾಲು ಮಡಿಸಿ ಕುಳಿತುಕೊಳ್ಳಲಾಗುತ್ತಿರಲಿಲ್ಲ. ಮಾತ್ರವಲ್ಲ ಕಾಲು ನೋವು ದಿನೇದಿನೇ ಜಾಸ್ತಿಯಾಗತೊಡಗಿತು.
ಆಗಾಗ್ಗೆ ಧ್ಯಾನ ಮಾಡುವ ಅಭ್ಯಾಸವಿದ್ದ ಅವರಿಗೆ ಇದ್ದಕ್ಕಿದಂತೆ ಎದ್ದು ಟಿ.ವಿ. ಹಾಕಬೇಕೆನಿಸಿ ಟಿ.ವಿ.ಯ ಗುಂಡಿ ಒತ್ತಲು, ಒಂದು ಚಾನೆಲ್ ನಲ್ಲಿ ಕಾಲು ನೋವು ನಿವಾರಣೆಗೆ ಒಂದು ಆಯುರ್ವೇದದ ಗಿಡದ ಬಗ್ಗೆ ತಿಳಿದು ಬಂತು. ಕೂಡಲೇ ಸ್ನೇಹಿತರಿಂದ ಆ ಗಿಡವನ್ನು ತರಿಸಿ ನೋವಿದ್ದ ಜಾಗಕ್ಕೆ ಲೇಪಿಸಲು ಕಾಲು ನೋವು ಸಂಪೂರ್ಣವಾಗಿ ಗುಣವಾಯಿತು" ಎಂದರು.
ಸೃಷ್ಠಿಸುವ ಶಕ್ತಿ ನಮಗೆ ಇಲ್ಲವೆಂದ ಮೇಲೆ ಸಾಯಿಸುವ ಅಧಿಕಾರ ನಮಗಿಲ್ಲ. ಜಗತ್ತಿನ ಚರಾಚರಗಳೆಲ್ಲವೂ ಸದ್ಗುರುವಿನ ಅಧೀನ.
ತುಮಕೂರು ಮೂಲದವರಾದ ಓರ್ವರು ಆಗಾಗ್ಗೆ ಗುರುದರ್ಶನಕ್ಕಾಗಿ ಬರುತ್ತಿದ್ದರು. ಬೆಂಗಳೂರಿನಲ್ಲಿ ಶಾಲೆಯೊಂದನ್ನು ತೆರೆದಿದ್ದ ಅವರು ಕೆಲಕಾಲದ ನಂತರ ಇದೀಗ ಮಂಗಳೂರಿನಲ್ಲಿ ಬಂದು ನೆಲೆಸಿದ್ದಾರೆ.
ಒಮ್ಮೆ ಸಂಜೆಯ ಹೊತ್ತು ಅವರ ಪತ್ನಿ ನನಗೆ ಕರೆಮಾಡಿ ಹೀಗೆ ಹೇಳಿದರು. ಚರಣದಾಸನಾದ ನಾನು ಗುರುನಾಥರ ಸಮೀಪದಲ್ಲೇ ನಿಂತಿದ್ದೆ.
ನನಗೆ ಗುರುನಾಥರು "ಏನು ಸಮಸ್ಯೆ" ಎಂದು ಕೇಳಲು ತಿಳಿಸಿದರು.
ನಾನು ಕೇಳಲು ಆಕೆ ಹೀಗೆ ಹೇಳಿದರು. "ನನ್ನ ಯಜಮಾನರಿಗೆ ಇದ್ದಕ್ಕಿದ್ದಂತೆ ದೃಷ್ಟಿ ಮಂಜಾಗಿ ಕಾಣದಂತಾಗಿದೆ. ಕಾಲುಗಳು ಬಿಗಿದಂತಾಗಿ ನಡೆಯಲು ಕಷ್ಟಪಡುತ್ತಿರುವರು. ವೈದ್ಯರಲ್ಲಿ ಪರೀಕ್ಷಿಸಿದೆವು. ಔಷಧವನ್ನೇನೋ ನೀಡಿರುವರು. ಆದರೆ ಹೀಗಾಗಲು ಕಾರಣವೇನೆಂದು ತಿಳಿದು ಬಂದಿಲ್ಲ. ಈಗ ಗುರುನಾಥರೇ ನಮಗೆ ದಿಕ್ಕು" ಎಂದು ದುಃಖದಿಂದ ನುಡಿದರು.
ಆಗ ಕೆಲಕಾಲ ಸುಮ್ಮನಿದ್ದ ಗುರುನಾಥರು ಮತ್ತೆ ಕರೆಮಾಡಿ "ನಿನ್ನ ಯಜಮಾನರು ಕೆಲ ವರ್ಷದ ಹಿಂದೆ ಸುಮಾರು ಇನ್ನೂರು ಜಿರಳೆಗಳನ್ನು ಸಾಯಿಸಿದ್ದರಲ್ಲವೇ? ಈಗ ಆ ಕಾರ್ಯಕ್ಕೆ ಈ ಗತಿ ಬಂದಿದೆ. ಚಿಂತಿಸಬೇಡಿ. ಇನ್ನು ಮುಂದೆ ಈ ರೀತಿ ಯಾವ ಜೀವಿಯನ್ನು ಹಿಂಸಿಸಬೇಡಿ" ಎಂದು ಹೇಳಿ ಅದಕ್ಕೆ ಬೇಕಾದ ಪರಿಹಾರ ಕಾರ್ಯವನ್ನು ತಿಳಿಸಿದರು. ಅಂತೆಯೇ ಮಾಡಲು ಅವರು ಇದೀಗ ಸಂಪೂರ್ಣ ಗುಣಮುಖರಾಗಿರುವರು. ಮಾತ್ರವಲ್ಲ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳಲು ಶಕ್ತರಾಗಿರುವರು.
ಒಮ್ಮೆ ಮಲೆನಾಡಿನ ಜಮೀನುದಾರರಾಗಿದ್ದ ಓರ್ವ ಯುವಕ ಗುರು ದರ್ಶನಕ್ಕಾಗಿ ಗುರುನಿವಾಸಕ್ಕೆ ಬಂದನು. ಗುರುವಿಗೆ ನಮಸ್ಕರಿಸಿ ತನ್ನ ವ್ಯಥೆಯನ್ನು ಹೀಗೆ ತಿಳಿಸಿದನು. "ಅತ್ಯಂತ ಸಿರಿವಂತನಾಗಿದ್ದ ನಾನು ಇಂದು ಲಕ್ಷಾಂತರ ರೂಪಾಯಿ ಸಾಲದಲ್ಲಿ ಮುಳುಗಿದ್ದೇನೆ. ಎಷ್ಟೇ ಆಡ್ಯಾ ಬಂದರೂ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಈ ಮಧ್ಯೆ ಅದೆಲ್ಲಿಂದ ಬಂದ್ವೋ ಗೊತ್ತಿಲ್ಲ. ನೂರು ಮಂಗಗಳ ಎರಡು ಗುಂಪು ನಿರಂತರವಾಗಿ ನಮ್ಮ ತೋಟವನ್ನು ಹಾಲು ಮಾಡಿ ಫಸಲು ಕೈಗೆ ಸಿಗದಂತೆ ಮಾಡುತ್ತಿವೆ. ಏನು ಮಾಡಲು ತೋಚದ ನಾನು ನಿಮ್ಮ ಬಳಿ ಬಂದಿರುವೆ. ದಯಮಾಡಿ ನನ್ನನ್ನು ಋಣಮುಕ್ತನಾಗಿಸಿ" ಎಂದು ಪ್ರಾರ್ಥಿಸಿದನು.
ಕೆಲ ಕಾಲ ಸುಮ್ಮನಿದ್ದ ಗುರುನಾಥರು ಅವನಿಗೆ "ನಿನ್ನ ಸಾಲವೆಲ್ಲ ತೀರುವುದು, ಚಿಂತಿಸಬೇಡ. ಸದಾ ಗುರುಸ್ಮರಣೆ ಮಾಡುತ್ತಿರು" ಎಂದು ಧೈರ್ಯ ತುಂಬಿ ಕಳಿಸಿದರು.
ಹೀಗೆ ಸುಮಾರು ಎಂಟು ವರ್ಷಗಳು ಕಳೆದ ನಂತರ ಮತ್ತೊಮ್ಮೆ ಅಲ್ಲಿಗೆ ಬಂದಿದ್ದ ಆ ವ್ಯಕ್ತಿಯನ್ನು ಕರೆದ ಗುರುನಾಥರು ಹೀಗೆ ಕೇಳಿದರು. "ಅಯ್ಯಾ ಬೇಜಾರಾಗಿಲ್ಲ ಅಂದ್ರೆ ಒಂದು ಪ್ರಶ್ನೆ ಕೇಳ್ತೀನಿ" ಎನ್ನಲು ಆತ ಕೇಳಿ ಎಂದನು.
ಗುರುನಾಥರು "ನೀನು ಎಂದಾದರೂ ನಿನ್ನ ಮನೆಯ ಮುಂದಿರುವ ಸೀಬೆಯ ಗಿಡಕ್ಕೆ ಒಂದು ಮಂಗವನ್ನು ಹೊಡೆದು ನೇತು ಹಾಕಿದ್ಯಾ?" ಎನ್ನಲು ಆತ ತಲೆ ತಗ್ಗಿಸಿಕೊಂಡು "ಹಾಗ್ ಮಾಡಿದ್ರೆ ಮಂಗಗಳು ತೋಟಕ್ಕೆ ಬರಲ್ಲ ಅಂತ ಯಾರೋ ಹೇಳಿದ್ರು. ಅದಕ್ಕೆ ಹಂಗೆ ಮಾಡಿದೆ" ಎಂದನು.
ಆತ ವಿನಮ್ರವಾಗಿ ಕೈಮುಗಿದ ಗುರುನಾಥರು "ಇನ್ನು ಮುಂದೆ ಇಂಥ ಕೆಲಸ ಮಾಡಬೇಡ ಕಣಯ್ಯಾ. ಇನ್ನು ನಿನ್ನ ಸಾಲವೆಲ್ಲ ಹಂತ ಹಂತವಾಗಿ ತೀರುವುದು. ಚಿಂತಿಸಬೇಡ" ಎಂದು ಹರಸಿ ಕಳಿಸಿದರು. ಇಂದು ಆ ವ್ಯಕ್ತಿ ನೆಮ್ಮದಿಯ ಬದುಕು ನಡೆಸುತ್ತಿರುವರು.......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Sakaraayapurada Dore poojya venkatachala avadootarige nanna bhakti poorvaka namanagalu. Swamy yellarigu manashanti haagu nemmadi honduvante asheervadisi Guruvarya. Hari om tatsat.
ReplyDelete