ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 111
ಗ್ರಂಥ ರಚನೆ - ಚರಣದಾಸ
ಅನಂತ ಪ್ರೇಮ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸದ್ಗುರುವಿಗೆ ತನ್ನ ನಿಜ ಭಕ್ತರ ಕಣ್ಣೀರು ಒರೆಸಿ ಧೈರ್ಯ ತುಂಬಿ ಸಮಸ್ಯೆ ಪರಿಹರಿಸುವುದರಲ್ಲಿ ಮಹದಾನಂದವಿರುತ್ತದೆ. ನಮ್ಮ ಗುರುನಾಥರಂತೂ ತನ್ನ ಶಿಷ್ಯರಿಗಾಗಿ ತನ್ನ ಜೀವಿತವನ್ನೇ ಸವೆಸಿದರು ಎಂಬುದು ವಾಸ್ತವ.
ಖಾಸಗಿ ದೂರವಾಣಿ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಅನಿವಾರ್ಯ ಕಾರಣದಿಂದಾಗಿ ಆ ಕೆಲಸ ಬಿಡಬೇಕಾಗಿ ಬಂತು. ಕೆಲಸಕ್ಕೆ ಸೇರುವ ಮೊದಲು ಹಲವು ಸಾವಿರ ರೂಗಳನ್ನು ಆ ಕಂಪೆನಿಯಲ್ಲಿ ಠೇವಣಿ ಇಡುವುದು ನಿಯಮವಾಗಿತ್ತು.
ಆತ ಕಂಪೆನಿ ಬಿಟ್ಟ ನಂತರ ಆ ಹಣ ಹಿಂತಿರುಗಿ ಬಂದಿತ್ತು. ಅದಾಗಿ ಕೆಲ ತಿಂಗಳುಗಳ ನಂತರ ಅಷ್ಟೇ ಮೊತ್ತದ ಹಣ ಆ ಕಂಪೆನಿಯಿಂದ ಮತ್ತೆ ಇವನ ಕೈಗೆ ಬಂದಿತ್ತು. ಆಗ ತನಗೆ ವಿಪರೀತ ಆರ್ಥಿಕ ಮುಗ್ಗಟ್ಟು ಇದ್ದಾಗ್ಯೂ ಇನ್ನೊಬ್ಬರ ವಸ್ತುವನ್ನು ಬಳಸಬಾರದೆಂಬ ಗುರುವಾಕ್ಯದಂತೆ ಆ ಹಣವನ್ನು ಕೈಯಲ್ಲಿ ಹಿಡಿದು ನೇರವಾಗಿ ಗುರುನಿವಾಸಕ್ಕೆ ಬಂದನು.
ಆ ಹಣವನ್ನು ತೋರಿಸಿ ಕಂಪೆನಿಯಿಂದ ತನಗೆ ಎರಡನೇ ಬಾರಿ ತಪ್ಪಾಗಿ ಹಣ ಕಳಿಸಿದ್ದಾರೆಂದೂ ತಾನು ಅದನ್ನು ಕಂಪೆನಿಗೆ ಹಿಂತಿರುಗಿಸುವುದಾಗಿಯೂ ತಿಳಿಸಿದನು.
ಆಗ ಗುರುನಾಥರು ಹೀಗೆ ಹೇಳಿದರು. "ಅಯ್ಯಾ ಆ ಹಣ ಎರಡನೇ ಬಾರಿ ಬಂದಿದೆ ಎಂದರೆ ನಿನ್ನ ಸಂಕಷ್ಟ ಪರಿಹಾರಕ್ಕಾಗಿಯೇ ಎನಿಸುತ್ತದೆ. ಆದ್ದರಿಂದ ಆ ಹಣವನ್ನು ಬಳಸು" ಎನ್ನಲು ಆ ವ್ಯಕ್ತಿ ನಿರಾಕರಿಸಿದನು. ಆದರೆ ನಂತರ ಗುರುನಾಥರ ಒತ್ತಾಯಕ್ಕೆ ಮಣಿದು ಆ ಹಣವನ್ನು ತನ್ನ ಹೆಸರಿನಲ್ಲಿ ಠೇವಣಿಯಾಗಿಟ್ಟನು.
ಆ ವ್ಯಕ್ತಿಯ ಗುರುಭಕ್ತಿ ಎಂಥ ಮಟ್ಟದ್ದೆಂದರೆ ತಾನು ಮಾಡುವ ಪ್ರತಿಯೊಂದು ಕಾರ್ಯವನ್ನೂ (ಒಳ್ಳೆಯದಿರಲಿ, ಕೆಟ್ಟದ್ದಿರಲಿ) ಗುರುನಾಥರಿಗೆ ತಿಳಿಸಿಯೇ ಮುಂದೆ ಹೋಗುತ್ತಿದ್ದರು.
ಒಮ್ಮೆ ಆತನ ತಂದೆ ಗುರುನಾಥರ ದರ್ಶನಕ್ಕಾಗಿ ಗುರುನಿವಾಸಕ್ಕೆ ಬಂದರು. ಕುಶಲೋಪರಿಯ ನಂತರ ಆತನ ತಂದೆ ಸಲುಗೆಯಿಂದ ಗುರುನಾಥರಲ್ಲಿ ಹೀಗೆ ಹೇಳಿದರು.
"ಗುರುಗಳೇ ಎಲ್ಲರೂ ಹೇಳ್ತಾರೆ, ನಮ್ಮ ಮನೆಯಲ್ಲಿ ಭೂತ ಪ್ರೇತದ ಬಾಧೆಯಿದೆಯಂತೆ ಹೌದಾ?"
ಇದನ್ನು ಕೇಳಿದ ಗುರುನಾಥರು ಸಂಜೆಯವರೆಗೂ ಅವರಿಗೆ ನಿರಂತರವಾಗಿ ಬಯ್ಯುತ್ತಿದ್ದರು. ತಾನು ಕೇಳಿದ ಪ್ರಶ್ನೆ ತಪ್ಪೋ ಸರಿಯೋ ಒಂದೂ ತಿಳಿಯದ ಅವರ ತಂದೆ ತಬ್ಬಿಬ್ಬಾದರು.
ಆ ನಂತರ ಆ ವ್ಯಕ್ತಿ ಒಬ್ಬನೇ ಸಿಕ್ಕಾಗ ಗುರುನಾಥರು ತಾನು ಅವರ ತಂದೆಯ ಮೇಲೆ ರೇಗಾಡಿದ ಘಟನೆಯನ್ನು ತಿಳಿಸುತ್ತಾ ಹೀಗೆ ಹೇಳಿದರು.
"ಅಯ್ಯಾ ನಿಮ್ಮ ತಂದೆ ಅಂದು ಕೇಳಿದ ಪ್ರಶ್ನೆ ಸರಿಯೇ ಆಗಿತ್ತು ಕಣಯ್ಯಾ. ಆದರೆ ನಿಮ್ಮನ್ನು ಈ ದಾರಿಗೆ ತರಲು ನಾನು ಎಷ್ಟು ಕಷ್ಟಪಟ್ಟಿದ್ದೇನೆ ಗೊತ್ತಾ?. ನಾನು ನಿಮ್ಮಪ್ಪನ ಪ್ರಶ್ನೆಗೆ ಹೌದು ಅಂದಿದ್ರೆ ನೀವೆಲ್ಲ ಮತ್ತೆ ಗುರುವನ್ನು ಬಿಟ್ಟು ಜ್ಯೋತಿಷ್ಯ, ಪರಿಹಾರ, ಶಾಸ್ತ್ರ ಎಂದು ಅಲೆಯುತ್ತಿದ್ರಿ. ಅದರಿಂದ ಹಣ, ಸಮಯ ವ್ಯರ್ಥ. ಆ ಕಾರಣಕ್ಕಾಗಿ ನಿಮ್ಮ ತಂದೆಗೆ ಬೈದೆ ಕಣಯ್ಯಾ" ಎಂದರು.
ಇಲ್ಲಿ ಗುರುನಾಥರು ಬೈದರು ಎನ್ನುವುದಕ್ಕಿಂತ ಆ ಬೈಗುಳದ ಹಿನ್ನೆಲೆಯಲ್ಲಿ ಅವರಿಗೆ ತನ್ನ ಶಿಷ್ಯರ ಮೇಲಿದ್ದ ಅಪಾರ ಕರುಣೆ, ಪ್ರೀತಿ, ವಾತ್ಸಲ್ಯದ ಅನಾವರಣವಾಗಿದೆ. ಗುರು ಕರುಣೆಯ ಇಂತಹ ಹಲವು ನಿದರ್ಶನಗಳನ್ನು ನೆನೆದಾಗ ಚರಣದಾಸನಾದ ನಾನು ಗುರುನಾಥರೊಂದಿಗೆ ಎಷ್ಟು ಸಣ್ಣದಾಗಿ ನಡೆದುಕೊಂಡಿದ್ದರೂ ಅವರು ತೋರುತ್ತಿದ್ದ ಪ್ರೀತಿಯ ನೆನಪಾಗಿ ಕಣ್ಣುಗಳು ತೇವವಾಗುತ್ತದೆ.....,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Sakaraayapurada Dore venkatachala Avara Divya charanamruta galige nanna poojya namanagalu. Sarvarannu uddarisi asheervadisi Guruvarya. Hari om tatsat.
ReplyDelete