ಒಟ್ಟು ನೋಟಗಳು

Friday, January 27, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 115


    ಗ್ರಂಥ ರಚನೆ - ಚರಣದಾಸ 


ಕರ್ಮದಂತೆ ಫಲ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಾಮಾನ್ಯವಾಗಿ ಚುನಾವಣಾ ಕಾಲದಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರುಗಳು, ಗುರುನಾಥರ ಆಶೀರ್ವಾದ ಪಡೆಯಲು ಬರುವುದು ಮಾಮೂಲಿಯಾಗಿತ್ತು. 

ಹೀಗೆ ಒಮ್ಮೆ ರಾಷ್ಟ್ರೀಯ ಚುನಾವಣಾ ಸಂದರ್ಭ. ರಾಷ್ಟ್ರೀಯ ಪಕ್ಷದ ಸ್ಥಳೀಯ ಮುಖಂಡರುಗಳು ಒಟ್ಟಾಗಿ ರಾಜಕೀಯ ಭವಿಷ್ಯ ತಿಳಿಯಲು ಹಾಗೂ ಆಶೀರ್ವಾದ ಪಡೆಯಲು ಗುರುನಿವಾಸಕ್ಕೆ ಬಂದರು. 

ಸಾಮಾನ್ಯವಾಗಿ ಗುರುನಾಥರು ಭಾವ ಪರಿಶುದ್ಧತೆಗೆ ಪ್ರಾಮುಖ್ಯತೆ ನೀಡುತ್ತಿದ್ದರೇ ಹೊರತು ಬಾಹ್ಯ ಶುದ್ಧತೆ ಹಾಗೂ ಸ್ಥಾನಮಾನಗಳಿಗಲ್ಲ. 

ಅಂದು ಬಂದ ಜನರು ಗುರುನಾಥರಲ್ಲಿ ಹೀಗೆ ಕೇಳಿದರು: "ಗುರುಗಳೇ ನಮ್ಮ ಪಕ್ಷದ ಗೆಲುವು ನಿಶ್ಚಿತವೇ? ಹಾಗೂ ನಮ್ಮ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರಧಾನಿಯಾಗುವುದು ಖಂಡಿತವಲ್ಲವೇ? ನಾವು ವಿಜಯಯಾತ್ರೆಗೆ ಸಿದ್ಧ ಮಾಡಿಕೊಳ್ಳಬಹುದಲ್ಲವೇ?" . 

ಆಗ ಗುರುನಾಥರು "ನೋಡ್ರಯ್ಯಾ, ನೀವಂದಂತೆ ನಿಮ್ಮ ಪಕ್ಷವೇ ಗೆಲ್ಲುತ್ತದೆ. ನಿಮ್ಮ ನಿಯೋಜಿತ ಅಭ್ಯರ್ಥಿಯೇ ಪ್ರಧಾನಿಯಾಗಿ ಆಯ್ಕೆಯಾಗುವರು. ಆದರೆ ಆತ ಪಕ್ಷದ ಸಭೆಯೊಂದರಲ್ಲಿ ಮಾನವ ಬಾಂಬ್ ದಾಳಿಗೆ ಆಹುತಿಯಾಗುವರು. ನೀವು ಶೋಕಯಾತ್ರೆಗೆ ಸಿದ್ಧಮಾಡಿಕೊಳ್ಳುವುದು ಒಳಿತು" ಎಂದರು. 

ಗುರುನಾಥರ ನೇರ ನಡೆ ನುಡಿಯ ಅರಿವಿದ್ದ ಅವರು ಎದುರು ಮಾತಾಡಲು ಅಥವಾ ಪ್ರಶ್ನಿಸಲು ಧೈರ್ಯ ಸಾಲದೇ ಅಲ್ಲಿಂದ ಹೊರಟು ಹೋದರು. 

ಚುನಾವಣಾ ಫಲಿತಾಂಶ ಬಂತು. ಗುರುವಾಕ್ಯದಂತೆಯೇ ಆ ಪಕ್ಷವು ಬಹುಮತ ಪಡೆದು ನಿಯೋಜಿತ ಅಭ್ಯರ್ಥಿಯೇ ಪ್ರಧಾನಿಯೂ ಆದರು. ಆದರೆ ಕೆಲವು ತಿಂಗಳಲ್ಲಿ ಆ ಪ್ರಧಾನಿಗಳು ಭಾಗವಹಿಸಿದ್ದ ಸಭೆಯೊಂದರಲ್ಲಿ ಮಾನವ ಬಾಂಬ್ ಸ್ಫೋಟಗೊಂಡು ಆ ಪ್ರಧಾನಿಗಳ ದೇಹ ಗುರುತೇ ಸಿಗದಂತೆ ಛಿದ್ರ ಛಿದ್ರವಾಗಿ ಹೋಯಿತು. ಗುರುವಾಕ್ಯ ನಡೆದಿತ್ತು. 

ಗುರುನಾಥರು ಬೆಂಗಳೂರು ಸಮೀಪವಿರುವ ಒಂದು ಅದ್ವೈತ ಮಠಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು. 

ಒಮ್ಮೆ ಹೀಗೆ ಹೋಗಿದ್ದಾಗ ಆ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಬಂದು ಗುರುನಾಥರಿಗೆ ನಮಸ್ಕರಿಸಿ ಹೀಗೆ ಕೇಳಿದರು. "ಗುರುಗಳೇ ನಮ್ಮ ಮಠದಲ್ಲಿ ನಾಲ್ಕು ನಾಯಿಗಳಿವೆ. ಪೂಜೆಯಾಗಿ ಮಂಗಳಾರತಿಯ ಹೊತ್ತಿಗೆ ಸರಿಯಾಗಿ ಆ ನಾಲ್ಕು ನಾಯಿಗಳು ಜೋರಾಗಿ ಊಳಿಡುತ್ತವೆ. ಏನು ಮಾಡಿದರೂ ಅವನ್ನು ತಡೆಯಲಾಗುತ್ತಿಲ್ಲ" ಎಂದರು. 

ಆಗ ಗುರುನಾಥರು ನಗುತ್ತಾ: "ನಾವು ಮಾಡಿದ ಕರ್ಮಕ್ಕೆ ಅನುಸಾರವಾಗಿ ನಮ್ಮ ಜನನವಾಗುತ್ತದೆ. ಹೇಗೆ ನನ್ನ ಹಿಂದೆ ನನ್ನ ನೆರಳು ಬರುತ್ತದೆಯೇ ವಿನಃ ಇನ್ನೊಬ್ಬರ ನೆರಳಲ್ಲ. ಹಾಗೆಯೇ ಕರ್ಮವೂ ಕೂಡ. ಅಂತೆಯೇ ಆ ನಾಯಿಗಳು ಬೇರಾರೂ ಅಲ್ಲ. ಹಿಂದೆ ಇದೆ ಮಠದಲ್ಲಿ ಸೇವೆಯಲ್ಲಿದ್ದವರು (ಅವರ ಹೆಸರನ್ನು ಹಾಗೂ ಮಾಡಿದ ತಪ್ಪನ್ನು ವಿವರಿಸಿದರು). 

"ಅಂದು ಮಾಡಿದ ತಪ್ಪಿಗಾಗಿ ಇಂದು ಈ ಜನ್ಮ ಬಂದಿದೆ. ಅದರಲ್ಲೊಬ್ಬರು ಈ ಮಠದ ಹಂಡೆ ಕದ್ದವರು. ಮತ್ತೊಬ್ಬರು ಬೆಳ್ಳಿ ಚೊಂಬು ಕದ್ದವರು. ಮತ್ತೊಬ್ಬರು ತಟ್ಟೆ ಕದ್ದವರು. ಮತ್ತೊಬ್ಬರು ಆಭರಣ ಕದ್ದವರು. ಅದಕ್ಕೆ ಇಂದು ಈ ಗತಿ ಬಂದಿದೆ" ಎಂದು ನುಡಿದು ಮಾತು ಮುಗಿಸಿದರು. ಕರ್ಮದ ಸೂಕ್ಷ್ಮತೆಯ ಈ ಗಂಭೀರತೆಯನ್ನು ತಿಳಿದ ನಾವು ನಮ್ಮ ನಡವಳಿಕೆಯನ್ನು ಅವಲೋಕಿಸತೊಡಗಿದೆವು....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Guru venkatachala Avara Divya charanamruta galige nanna poojya namanagalu. Yellarigu Daari torisi olleyadaaguvante asheervadisi Kaapadi swamy. Hari om tatsat.

    ReplyDelete