ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 109
ಗ್ರಂಥ ರಚನೆ - ಚರಣದಾಸ
ಕಾಳಜಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸಾಮಾನ್ಯವಾಗಿ ಗುರುನಾಥರು ರಾಜ್ಯದ ಪ್ರಮುಖ ಮಠಗಳ ಸನ್ಯಾಸಿಗಳಿಗೆ ತುಂಬಾ ಗೌರವ ನೀಡುತ್ತಿದ್ದರು. ಹಾಗೂ ಆ ಮಠಗಳ ಸನ್ಯಾಸಿಗಳು ಕೂಡಾ ಗುರುನಾಥರನ್ನು ಅಷ್ಟೇ ಗೌರವ ಹಾಗೂ ಅಭಿಮಾನದಿಂದ ಕಾಣುತ್ತಿದ್ದರು. ಅದಲ್ಲದೇ ಸನ್ಯಾಸ ಮಾರ್ಗದಲ್ಲಿರುವ ಇತರರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಆ ಎಲ್ಲ ಸನ್ಯಾಸಿಗಳ ಬೇಕು ಬೇಡಗಳನ್ನು ಸೂಕ್ಷ್ಮ ರೀತಿಯಲ್ಲಿ ತಿಳಿದು ಅವರು ಕೇಳುವ ಮೊದಲೇ ಅವರಿಗೆ ಆ ವಸ್ತುಗಳನ್ನು ತಮ್ಮ ಶಿಷ್ಯರ ಮೂಲಕ ಕಳಿಸಿಕೊಡುತ್ತಿದ್ದರು.
ಒಮ್ಮೆ ಗುರುನಾಥರಲ್ಲಿಗೆ ಆಗಾಗ್ಗೆ ಬರುತ್ತಿದ್ದ ಒಬ್ಬ ವ್ಯಕ್ತಿಯ ಸಂಗೀತ ಕಛೇರಿ ಕಾರ್ಯಕ್ರಮವು ಒಂದು ಜಗದ್ವಿಖ್ಯಾತ ದೇಗುಲದಲ್ಲಿ ಏರ್ಪಾಟಾಗಿತ್ತು. ಅದು ದುರ್ಗಾಷ್ಟಮಿಯ ದಿನ. ಎಂದೂ ಯಾವ ಕಛೇರಿಗೂ ಬರದಿದ್ದ ದೇಗುಲದ ಮಠದ ಯತಿವರೇಣ್ಯರು ಅಂದು ಆ ವ್ಯಕ್ತಿಯ ಕಛೇರಿಯನ್ನು ತನ್ಮಯರಾಗಿ ಆಲಿಸಿದರು.
ಕಛೇರಿ ಮುಗಿದ ನಂತರ ಗುರುನಿವಾಸಕ್ಕೆ ತೆರಳಿದ ಆ ವ್ಯಕ್ತಿಯನ್ನು ಕರೆದು ಗುರುನಾಥರು ಹೀಗೆ ಹೇಳಿದರು. "ನೋಡಯ್ಯಾ ನೀನು ಇನ್ನೊಮ್ಮೆ ಅಲ್ಲಿಗೆ ಹೋಗಿ ಆ ಯತಿವರೇಣ್ಯರಿಗೆ ಹತ್ತು ಪೆನ್ಸಿಲ್, ಹತ್ತು ಪೆನ್ನು ಹಾಗೂ ಒಂದು ಮೃದುವಾದ ಕರವಸ್ತ್ರವನ್ನು ಹಾಗೂ ಒಂದು ಪೆಟ್ಟಿಗೆ ಜಾಮೂನು ಸಿದ್ಧಮಾಡಿ ಸಮರ್ಪಿಸಿ ಬರಬೇಕು" ಎಂದರು.
ಗುರುನಾಥರ ಆದೇಶದಂತೆ ಈ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿಕೊಂಡ ಆ ವ್ಯಕ್ತಿ ನೇರವಾಗಿ ಆ ದೇಗುಲಕ್ಕೆ ಹೋಗಿ ಅಲ್ಲಿದ್ದ ಯತಿವರೇಣ್ಯರ ದರ್ಶನ ಮಾಡಿ ತಾನು ತಂದಿದ್ದ ಎಲ್ಲ ವಸ್ತುಗಳನ್ನು ಸಮರ್ಪಿಸಿದರು. ಆ ಎಲ್ಲ ವಸ್ತುಗಳನ್ನು ನೋಡಿದ ಯತಿವರೇಣ್ಯರು ಆಶ್ಚರ್ಯದಿಂದ ತನ್ನ ಶಿಷ್ಯರನ್ನು ಕೂಗಿ ಕರೆದು ಹೀಗೆ ಹೇಳಿದರು:
"ಭಟ್ಟರೇ ನನಗೆ ಹತ್ತು ಪೆನ್ನು, ಹತ್ತು ಪೆನ್ಸಿಲ್ ಹಾಗೂ ಒಂದು ಕರವಸ್ತ್ರವನ್ನು ತಂದು ಕೊಡಿ ಎಂದು ಹೇಳಿ ಇಂದಿಗೆ ಹದಿನೈದು ದಿನವಾಯಿತು. ಆದರೆ ತಂದು ಕೊಡಲು ನಿಮಗೆ ಸಮಯ ಸಿಕ್ಕಿಲ್ಲ. ಆದರೆ ಇಲ್ಲಿ ನೋಡಿ, ಅವಧೂತರು ನಾನು ಏನನ್ನೂ ಕೇಳದೇ ಆ ಎಲ್ಲ ವಸ್ತುಗಳನ್ನು ಕಳಿಸಿಕೊಟ್ಟಿದ್ದಾರೆ" ಎಂದರು.
ಇದನ್ನು ಸಮರ್ಪಿಸಿದ ಆ ವ್ಯಕ್ತಿಯು ಗುರುನಾಥರು ಎಲ್ಲಿಯೇ ಇದ್ದರೂ ಪ್ರತಿಯೊಬ್ಬರ ಬೇಕು ಬೇಡಗಳನ್ನು ಅಂತಃಚಕ್ಷುಗಳಿಂದ ಗಮನಿಸಿ ಈಡೇರಿಸುತ್ತಿದ್ದ ರೀತಿಯನ್ನು ನೋಡಿ ಗುರು ಕರುಣಾ ಸಮುದ್ರವೆನ್ನುವುದು ನಿಜ ಎಂದು ಮನಸ್ಸಿನಲ್ಲಿಯೇ ಅಂದುಕೊಂಡರು.
ಹಾಗೆಯೇ ಗುರುನಾಥರ ಈ ಕಾಳಜಿ ಸನ್ಯಾಸಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದು ತನ್ನ ಸುತ್ತಲಿದ್ದ ಎಲ್ಲ ಚರಾಚರ ವಸ್ತುಗಳಿಗೂ ಅನ್ವಯಿಸುತ್ತಿತ್ತು.
ಒಮ್ಮೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಹುಡುಗನೊಬ್ಬ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಪ್ರವಾಸ ಹೊರಟರು. ಉಳಿದ ಮೂವರು ಜೊತೆಗಾರರು ಮರುದಿನ ರಾತ್ರಿಯೇ ತಮ್ಮ ತಮ್ಮ ಮನೆಗಳಿಗೆ ವಾಪಸಾದರು. ಆದರೆ ಆ ಹುಡುಗ ಮಾತ್ರ ಮನೆ ಸೇರಲಿಲ್ಲ. ಎಂದೂ ಈ ರೀತಿ ಆಗಿರದಿದ್ದ ಆ ಮನೆಯವರು ಬಹಳ ಗಾಬರಿಗೊಂಡರು. ಉಳಿದ ಸ್ನೇಹಿತರನ್ನು ವಿಚಾರಿಸಲು ಅವರು ತಮಗೇನೂ ತಿಳಿದಿಲ್ಲವೆಂದರು. ಆಗ ಆ ಮನೆಯವರು ನೇರವಾಗಿ ಗುರುನಾಥರನ್ನು ಸಂಪರ್ಕಿಸಿದರು.
ಆಗ ವಿಷಯ ತಿಳಿದ ಗುರುನಾಥರು ಹೀಗೆ ಹೇಳಿದರು: "ನೋಡಿ ಏನೂ ಚಿಂತೆ ಮಾಡಬೇಡಿ. ನಾಳೆ ರಾತ್ರಿ ಒಂಬತ್ತು ಗಂಟೆಯೊಳಗೆ ಆತ ಎಲ್ಲಿದ್ದರೂ ಮನೆಗೆ ಬರುವನು. ನೀವು ಮಾತ್ರ ಅವನನ್ನು ಎಲ್ಲಿ ಹೋಗಿದ್ದ ಏನು ಎತ್ತ ಎಂದು ಕೇಳಕೂಡದು" ಎನ್ನಲು ಆ ಮನೆಯವರು ಆಯಿತೆಂದರು.
ಗುರುನಾಥರು ಹೇಳಿದಂತೆಯೇ ಆ ಮನೆಯವರೆಲ್ಲರೂ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀವರ್ಯರ ನಾಮಸ್ಮರಣೆಯಲ್ಲಿದ್ದರು. ಗುರುವಾಕ್ಯದಂತೆಯೇ ಆ ಹುಡುಗನು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮನೆಗೆ ಬಂದನು. ಗುರುನಾಥರು ಹೇಳಿದಂತೆಯೇ ಅವರು ಯಾರೂ ಅವನನ್ನು ಪ್ರಶ್ನಿಸಲಿಲ್ಲ. ಇಂದು ಆ ಹುಡುಗ ಸಂಸಾರಿಯಾಗಿ ಒಳ್ಳೆಯ ವೃತ್ತಿಯಲ್ಲಿದ್ದು ಸನ್ಮಾರ್ಗದಲ್ಲಿ ನಡೆಯುತ್ತಿರುವನು.....,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna bhakti poorvaka namanagalu. Swamy yellarigu e maha kantaka dinda mukthi kottu Kaapadi. Yellarigu manashanti honduvante asheervadisi. Sarve jano sukinobavantu.
ReplyDelete