ಒಟ್ಟು ನೋಟಗಳು

Sunday, January 8, 2017

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 96


    ಗ್ರಂಥ ರಚನೆ - ಚರಣದಾಸ 


ಇಹ - ಪರ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುವೆಂದು ಸುಮ್ಮನೆ ಎಂದಿಗೂ ಕರೆಯಬೇಡ. ಒಂದು ಬಾರಿ ಗುರುವೆಂದು ಕರೆದರೆ, ಕರೆದವನ ಇಹ-ಪರಗಳೆಲ್ಲವೂ ಗುರುವಿನ ಹೆಗಲಿಗೇರುತ್ತದೆ. ಗುರು ತೋರಿದ ದಾರಿಯಲ್ಲಿ ಕಣ್ಮುಚ್ಚಿ ನಡೆದರೆ ಸಾಕು ಅದುವೇ ನಿಜವಾದ ಶಿಷ್ಯನ ಲಕ್ಷಣ. 

ಗುರು ನಿವಾಸದಿಂದ ಸುಮಾರು ಐದು ಗಂಟೆ ಕ್ರಮಿಸುವಷ್ಟು ದೂರದಲ್ಲಿ ನೆಲೆಸಿದ್ದ ಕುಟುಂಬ. ಮನೆಯಲ್ಲಿ ಆಸ್ತಿ-ಪಾಸ್ತಿ ಅಂಗಡಿಯೂ ಇದ್ದು ಕೈಯಲ್ಲಿ ಕೆಲಸವೂ ಇದ್ದಿತಾದರೂ ಸದಾ ನಿಗರ್ವಿಗಳಾಗಿದ್ದು ಗುರುಭಕ್ತರಾಗಿ ಗುರುವಾಕ್ಯವೇ ಪ್ರಮಾಣ ಎಂಬುದನ್ನು ಅಕ್ಷರಶಃ ಪಾಲಿಸುತ್ತಿದ್ದರು. 

ಆಗಾಗ್ಗೆ ಗುರುನಿವಾಸಕ್ಕೆ ಬಂದು ಹೋಗುತ್ತಿದ್ದ ಅವರ ಮಗನಿಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಮೊದಮೊದಲು ಈ ಕುರಿತು ಗಂಭೀರವಾಗಿ ಯೋಚಿಸಲಿಲ್ಲವಾದರೂ, ನೋವು ಉಲ್ಬಣವಾಗುತ್ತಿದ್ದುದನ್ನು ಕಂಡ ಪೋಷಕರು ಆ ಬಾಲಕನನ್ನು ಊರಿನ ಆಸ್ಪತ್ರೆಗೆ ದಾಖಲಿಸಿದರು. 

ಬೆಳಗಿನಿಂದ ಸಂಜೆಯವರೆಗೆ ಹಲವು ಪರೀಕ್ಷೆ ನಡೆಯಿತು. ರಾತ್ರಿ ಆ ಬಾಲಕ ವಿಪರೀತ ವಾಂತಿ ಮಾಡತೊಡಗಿದ. ಹಾಗೂ ಮಲದಲ್ಲಿ ರಕ್ತವೂ ಹೊರ ಹೋಗತೊಡಗಿತು. ಇದನ್ನು ಕಂಡ ವೈದ್ಯರು ಪಟ್ಟಣದ ದೊಡ್ಡ ಆಸ್ಪತ್ರೆಗೆ ತೆರಳಲು ಸೂಚಿಸಿದರು. 

ಕೂಡಲೇ ತುರ್ತು ನಿಗಾ ಘಟಕಕ್ಕೆ ಬಾಲಕನನ್ನು ದಾಖಲಿಸಲಾಯಿತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ 'ಡೆಂಗ್ಯೂ' ಜ್ವರದಿಂದ ಬಳಲುತ್ತಿದ್ದು, ಬದುಕಿ ಉಳಿಯುವ ಸಾಧ್ಯತೆ ಶೇಕಡಾ 50-50 ರಷ್ಟು ಮಾತ್ರ. ಪೋಷಕರು ಒಪ್ಪಿ ಸಹಿ ಹಾಕಿದರೆ ಮಾತ್ರ ಚಿಕಿತ್ಸೆ ಆರಂಭಿಸುವುದಾಗಿ ಹೇಳಿದರು. 

ಹೇಗಾದರೂ ಆಗಲಿ, ಗುರುವಿನ ಇಚ್ಛೆಯಂತೆ ಆಗಲಿ ಎಂದು ಯೋಚಿಸಿದ ಪೋಷಕರು ತಮ್ಮ ಸಮ್ಮತಿ ಸೂಚಿಸಿದರು. 

ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ನೇರವಾಗಿ ಗುರುನಿವಾಸಕ್ಕೆ ಬಂದ ಆ ದಂಪತಿಗಳು ಗುರುನಾಥರಿಗೆ ನಮಸ್ಕರಿಸಿ ಅಳುತ್ತಾ ತನ್ನ ಮಗನಿಗಾದ ದುರ್ಗತಿಯನ್ನು ಪರಿಹರಿಸಬೇಕೆಂದು ಪ್ರಾರ್ಥಿಸಿದರು. 

ಇದನ್ನು ಕೇಳಿ ಕೆಲ ಕಾಲ ಸುಮ್ಮನಿದ್ದ ಗುರುನಾಥರು "ನೋಡಮ್ಮಾ ಭಯಪಡುವ ಅಗತ್ಯವಿಲ್ಲ. ಬಾಲಕನ ಜೀವಕ್ಕೇನೂ ಅಪಾಯವಿಲ್ಲ ತಿಳೀತಾ?" ಎಂದು ಧೈರ್ಯ ನೀಡಿ ಒಂದು ವಸ್ತುವನ್ನು ನೀಡಿ "ಇದನ್ನು ನಿನ್ನ ಮಗ ಮಲಗುತ್ತಿದ್ದ ಜಾಗದಲ್ಲಿಡು " ಎಂದರು. 

ಗುರುವಿಗೆ ನಮಸ್ಕರಿಸಿ ತಮ್ಮ ಮನೆಗೆ ಬಂಡ ಆ ದಂಪತಿಗಳು ಗುರುನಾಥರು ಹೇಳಿದಂತೆ ಮಾಡಿ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ತೆರಳಿದರು. 

ಸುಮಾರು ಒಂದು ವಾರ ಕಾಲ ಕೃತಕ ಉಸಿರಾಟದಲ್ಲಿದ್ದ ಆ ಬಾಲಕ ಕ್ರಮೇಣ ತನ್ನ ನೆನಪಿನ ಶಕ್ತಿ ಕಳೆದುಕೊಂಡನು. ಜೊತೆಗೆ ಸ್ಪರ್ಶ ಜ್ಞಾನವೂ ಇಲ್ಲವಾಯಿತು. ದೇಹದ ಅವಯವಗಳೆಲ್ಲವೂ ಚಾಲನೆ ನಿಲ್ಲಿಸಿದವು. ಕೊನೆಗೆ ಕಣ್ಣಾಲಿಗಳ ಚಲನೆಯೂ ನಿಂತಿತು. ಆದರೆ ಉಸಿರಾಟ ಮಾತ್ರ ಎಂದಿನಂತೆ ನಡೆಯುತ್ತಿತ್ತು. 

ಗುರು ನಮ್ಮನ್ನು ಕೈ ಬಿಡಲಾರ ಎಂಬ ದೃಢ ನಂಬಿಕೆಯಿಂದ ಆ ದಂಪತಿಗಳು ಮಗನ ಆರೈಕೆ ಮಾಡತೊಡಗಿದರು. 

ಹೀಗೆ ಇಪ್ಪತ್ತೊಂದು ದಿನಗಳ ಕಾಲ "ತುರ್ತು ನಿಗಾ" ಘಟಕದಲ್ಲಿದ್ದ ಬಾಲಕನನ್ನು ವೈದ್ಯರು ಮನೆಗೆ ಕರೆದೊಯ್ಯುವಂತೆ ಸೂಚಿಸಿದರು. 

ಆ ನಂತರ ಬಾಲಕನನ್ನು ಹೊತ್ತುಕೊಂಡು ಮನೆಗೆ ಕರೆತಂದು ಮಲಗಿಸಿದರು. 

ನಂತರ ಗುರುನಾಥರ ಆದೇಶದಂತೆ ಅಲ್ಲಿ ರುದ್ರಪಾರಾಯಣ, ಅರುಣಪ್ರಶ್ನೆ ಮತ್ತು ಸೂಕ್ತ ಪಠಣಗಳು, ಅನ್ನದಾನ, ಪಾದುಕಾಪೂಜೆ ಎಲ್ಲವೂ ನಡೆಯಿತು. 

ಆಗ ಗುರುನಾಥರು ಗುರುನಿವಾಸದಲ್ಲೇ ಇದ್ದು ಚರಣದಾಸನಾದ ನನಗೆ ಹೀಗೆ ಹೇಳಿದರು. "ಅವರ ಮನೆಯಲ್ಲಿ ಈ ಎಲ್ಲಾ ಪೂಜೆಯನ್ನು ಎಲ್ಲರೂ ಸೇರಿ ನಡೆಸಿದ್ದು ನಿಜ. ಆದರೆ ಆ ಪ್ರತೀ ಕಾರ್ಯದಲ್ಲೂ ನಾನೇ ಇದ್ದೆ ಕಣಯ್ಯಾ" ಅಂದ್ರು. 

ನಂಗೆ ಏನಂತ ಅರ್ಥವಾಗಲಿಲ್ಲ. ಸುಮ್ಮನೆ "ಹೂಂ" ಅಂದೆ. 

ಇದಾಗಿ ಕೆಲದಿನಗಳ ನಂತರ ಗುರುನಾಥರು ಆ ದಂಪತಿಗಳನ್ನು ಕರೆದು ಮಗನನ್ನು ಮನೆಗೆ ಕರೆತರುವಂತೆ ತಿಳಿಸಿದರು. 

ಅಂದು ಗುರುವಾರ. ಹೊತ್ತು ತಂದ  ಮಗನನ್ನು ಗುರುನಾಥರ ಸಮೀಪ ಹಾಸಿಗೆ ಹಾಕಿ ಮಲಗಿಸಲಾಯಿತು. 

ಇದಕ್ಕೂ ಮೊದಲು ಅವರ ಮನೆಯಲ್ಲಿ ಸೂಕ್ತ ಜಪಾದಿಗಳು ನಡೆದು ಹತ್ತು ದಿನದ ನಂತರ ಬಾಲಕನ ಕಣ್ಣಾಲಿಗಳು ಚಲಿಸಲಾರಂಭಿಸಿದವು. 

ನಂತರ ಹದಿನೈದು ದಿನ ಕಳೆದ ಮೇಲೆ ನಿಧಾನವಾಗಿ ಕಣ್ಣು ತೆರದ ಬಾಲಕ ಮನೆಯ ಇತರ ಸದಸ್ಯರನ್ನು ಗುರುತಿಸಲಾರಂಭಿಸಿದನು. ಆದರೆ ದೇಹಕ್ಕೆ ನಳಿಕೆಯ ಮೂಲಕ ದ್ರವಾಹಾರವನ್ನು ಪೂರೈಸಬೇಕಾಯಿತು. 

ಬಾಲಕನನ್ನು ಗುರುನಾಥರ ಆದೇಶದಂತೆ ಅವರ ಮುಂದೆ ಹಾಸಿಗೆಯಲ್ಲಿ ಮಲಗಿಸಲಾಯಿತು. ಬಾಲಕನ ತಾಯಿಯನ್ನು ಕರೆದ ಗುರುನಾಥರು ಆಕೆಯನ್ನು ಕುರಿತು ಹೀಗೆ ಹೇಳಿದರು. "ನೋಡಮ್ಮಾ, ವೈದ್ಯರುಗಳು ರೋಗಿಗೆ ಏನು ಚಿಕಿತ್ಸೆ ಕೊಡಬೇಕೆಂದು ಯೋಚಿಸುವರು. ನಾನಾದರೋ ಆ ಖಾಯಿಲೆಯ ಹಿನ್ನೆಲೆಯನ್ನು ಮೊದಲು ವಿಚಾರಿಸುತ್ತೇನೆ. ಆ ನಂತರ ಚಿಕಿತ್ಸೆ ಅಂದ್ರು. 

ಆ ತಾಯಿಯ ಹೆರಿಗೆ ಸಂದರ್ಭದಲ್ಲಿ ನಡೆದಿರಬಹುದಾದ ಘಟನೆಗಳ ಬಗ್ಗೆ ವಿವರ ಪಡೆದರು. 

ನಂತರ ಮುಂದಿನ ಮೂವತ್ತು ವರ್ಷಗಳ ಜೀವಿತಾವಧಿಯನ್ನು ಆ ಬಾಲಕನಿಗೆ ನೀಡಲಾಗಿದೆ ಅಂದ್ರು. 

ನಂತರ ಕೆಲಕಾಲ ಸುಮ್ಮನಿದ್ದು ತನ್ನ ಪತಿಯನ್ನು ಕರೆದು ಆ ಬಾಲಕನಿಗೆ ಊಟ ಮಾಡಿಸಲು ತಿಳಿಸಿದರು. ಆಗ ಅಲ್ಲೇ ಇದ್ದ ದಂಪತಿಗಳು ಇನ್ನೂ ನಳಿಕೆಯಲ್ಲಿ ಆಹಾರ ನೀಡುವ ಪ್ರಕ್ರಿಯೆ ಇದೆ. ಘನಾಹಾರ ಸೇವನೆ ಹೇಗೆ ಸಾಧ್ಯವೆಂದು ಯೋಚಿಸತೊಡಗಿದರು. 

ಆ ಬಾಲಕನನ್ನು ಕೆಲಕಾಲ ದಿಟ್ಟಿಸಿ ನೋಡಿದ ಗುರುನಾಥರು ತನ್ನ ಪತ್ನಿಯನ್ನು ಕರೆದು ಆ ಬಾಲಕ ಹಾಗೂ ಎಲ್ಲರಿಗೂ ಊಟ ಹಾಕಲು ತಿಳಿಸಿದರು. 

ಹಾಲನ್ನವನ್ನು ಕಲೆಸಿ ತಂದ ಅಮ್ಮ ಆ ಬಾಲಕನನ್ನು ಕರೆದು "ಬಾಯಿ ತೆರೆ" ಎನ್ನಲು ಅಲ್ಲಿಯವರೆಗೂ ಸ್ಪರ್ಶಜ್ಞಾನ ಹಾಗೂ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದ ಆ ಬಾಲಕ ಬಾಯಿ ತೆರೆದನು. 

ಕೆಲ ತಿಂಗಳ ನಂತರ ಆತ ಮೊದಲ ಬಾರಿಗೆ ಘನಾಹಾರ ಸೇವಿಸಿದ್ದನ್ನು ಕಂಡ ತಂದೆ ತಾಯಿಗಳು ಆನಂದಭರಿತರಾದರು. ಎಂಟು ತುತ್ತು ಅನ್ನವು ಆತನ ದೇಹ ಸೇರಿತ್ತು. 

ನಂತರ ಗುರುನಾಥರನ್ನು ಸಮೀಪಿಸಿದ ಆ ಬಾಲಕನ ತಾಯಿ "ನನ್ನನ್ನು ಮಾತ್ರ ನನ್ನ ಮಗ ಇನ್ನೂ ಗುರುತಿಸುತ್ತಿಲ್ಲ, ಅಮ್ಮ ಎಂದು ಕರೆಯುತ್ತಿಲ್ಲ" ಎಂದು ಕಣ್ಣೀರಿಡಲು, ಗುರುನಾಥರು "ಧೈರ್ಯವಾಗಿರು ತಾಯಿ. ಮುಂದೆ ನೀನು ಸಾಕೆನ್ನುವಷ್ಟು ಬಾರಿ ಕರೀತಾನೆ" ಎಂದು ಧೈರ್ಯ ಹೇಳಿ ಆಶೀರ್ವದಿಸಿ ಕಳಿಸಿದರು. 

ಇದೀಗ ಗುರುಕೃಪೆಯಿಂದ ಆ ಬಾಲಕ ಒಂದು ವರ್ಷದ ನಂತರ ಮೊದಲಿನಂತೆಯೇ ಚುರುಕಾಗಿದ್ದು ಗುರುನಾಥರೆಂದಂತೆಯೇ ಸದಾಕಾಲ "ಅಮ್ಮ-ಅಮ್ಮ" ಎನ್ನುತ್ತಿರುವನು, ಮಾತ್ರವಲ್ಲ ಇದೀಗ ಬಹುಶಃ 6-7 ನೇ ತರಗತಿಯಲ್ಲಿ ಓದುತ್ತಿರುವನು.....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Shri venkatachala avadootarige nanna saashtaanga pranaamagalu. Poojya Guruvarya Yellaranu Harasi asheervadisi Kaapadi swamy. Sarve jano sukinobavantu.

    ReplyDelete